ರಾಯಚೂರು ಜಿಲ್ಲೆಗೆ ಏಮ್ಸ್ ಮಂಜೂರು ಮಾಡಬೇಕೆಂದು ಒತ್ತಾಯಿಸಿ ಇಂದು ಬೃಹತ್ ಪ್ರತಿಭಟನೆ ನಡೆಯಿತು. ನಗರದ ಅಂಬೇಡ್ಕರ್ ವೃತ್ತದಲ್ಲಿ ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್
ರಾಯಚೂರು (ಜ.17): ರಾಯಚೂರು ಜಿಲ್ಲೆಗೆ ಏಮ್ಸ್ ಮಂಜೂರು ಮಾಡಬೇಕೆಂದು ಒತ್ತಾಯಿಸಿ ರಾಯಚೂರಿನಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಯಿತು. ರಾಯಚೂರು ನಗರದ ಅಂಬೇಡ್ಕರ್ ವೃತ್ತದಲ್ಲಿ ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಆ ಬಳಿಕ ಏಮ್ಸ್ ಹೋರಾಟ ಸಮಿತಿ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಮತ್ತು ಹತ್ತಾರು ಸಂಘಟನೆಗಳ ಮುಖಂಡರು ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಮೆರವಣಿಗೆ ನಡೆಸಿ ರಾಯಚೂರು ಜಿಲ್ಲಾಧಿಕಾರಿ ಕಚೇರಿ ಮುಂದೆ ಕೆಲಕಾಲ ರಸ್ತೆ ತಡೆ ನಡೆಸಿ ಜಿಲ್ಲಾಧಿಕಾರಿ ಎಲ್. ಚಂದ್ರಶೇಖರ್ ನಾಯಕ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಆ ಬಳಿಕ ಹೋರಾಟವನ್ನು ಉದ್ದೇಶಿಸಿ ಮಾತನಾಡಿದ ಹೋರಾಟಗಾರರು ಸರ್ಕಾರದ ವಿರುದ್ಧ ಕಿಡಿಕಾರಿದ್ರು. ಅಷ್ಟೇ ಅಲ್ಲದೇ ರಾಯಚೂರು ಜಿಲ್ಲೆಗೆ ಏಮ್ಸ್ ನೀಡುವಂತೆ ಆಗ್ರಹಿಸಿದರು.
ಏಮ್ಸ್ ಗಾಗಿ 250 ದಿನಗಳಿಂದ ಧರಣಿ ಸತ್ಯಾಗ್ರಹ:
ರಾಯಚೂರು ಜಿಲ್ಲೆಗೆ ಏಮ್ಸ್ ಸಂಸ್ಥೆ ನೀಡಬೇಕೆಂದು ಆಗ್ರಹಿಸಿ ಏಮ್ಸ್ ಹೋರಾಟ ಸಮಿತಿ ಕಳೆದ 250ದಿನಗಳಿಂದ ನಗರದ ಮಹಾತ್ಮ ಗಾಂಧಿ ಪ್ರತಿಮೆ ಎದುರು ಹೋರಾಟ ನಡೆಸಿದೆ. ಹೋರಾಟದ ಬಗ್ಗೆ ನೋಡುವುದಾದ್ರೆ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(AIIMS)ಯನ್ನು ರಾಯಚೂರಿನಲ್ಲಿಯೇ ಸ್ಥಾಪಿಸುವಂತೆ ಒತ್ತಾಯಿಸಿ ನಡೆಸುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹ 250ನೇ ದಿನಗಳನ್ನು ಪೂರೈಸಿದ್ದು, ಆರಂಭದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಹೋರಾಟ ಶುರು ಮಾಡಲಾಗಿತ್ತು.
ಆ ಬಳಿಕ ನಿಯೋಗವೊಂದು ರಾಯಚೂರು ಜಿಲ್ಲೆಗೆ ಏಮ್ಸ್ ನೀಡಬೇಕೆಂದು ಒತ್ತಾಯಿಸಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ರು. ಆದ್ರೂ ರಾಯಚೂರು ಜಿಲ್ಲೆಗೆ ಐಐಟಿ ಕೈತಪ್ಪಿದಂತೆ ಏಮ್ಸ್ ಕೈ ಬಿಟ್ಟು ಹೋಗಬಾರದು ಎಂದು ಮಹಾತ್ಮ ಗಾಂಧಿ ಪ್ರತಿಮೆ ಎದುರು. ಮೇ13ರಿಂದ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ಆರಂಭಿಸಲಾಗಿದೆ. 75ನೇ ದಿನದ್ದು 10,521 ವಿದ್ಯಾರ್ಥಿ ಯುವಕರ ರಕ್ತ ಸಹಿ ಮಾಡಿಸಿ ಸರ್ಕಾರಕ್ಕೆ ರವಾನಿಸಲಾಗಿತ್ತು. 100ನೇ ದಿನದ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ, ಏಮ್ಸ್ ಸ್ಥಾಪಿಸಿ ಇಲ್ಲವೇ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಮಠಾಧೀಶ್ವರರಿಂದ ಹೋರಾಟ ನಡೆಯಿತು. ಆ. 27ರಂದು ಸಿಎಂ ಬಸವರಾಜ್ ಬೊಮ್ಮಾಯಿ ರಾಯಚೂರು ಜಿಲ್ಲೆಗೆ ಭೇಟಿ ನೀಡಿದ ವೇಳೆ ಏಮ್ಸ್ ಹೋರಾಟ ಸಮಿತಿಯ ನಿಯೋಗ ಸಿಎಂ ಅವರನ್ನು ಭೇಟಿ ಮಾಡಿ ರಾಯಚೂರಿಗೆ ಏಮ್ಸ್ ನೀಡುವಂತೆ ಮನವಿ ಸಲ್ಲಿಸಲಾಗಿತ್ತು.
125ನೇ ದಿನದ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ಏಮ್ಸ್ ಸ್ಥಾಪಿಸುವಂತೆ ಒತ್ತಾಯಿಸಿ 333 ಚರ್ಚಪಾದ್ರಿಗಳ ಸಮಾವೇಶ ನಡೆಸಿದರು. ಇನ್ನೂ ಸಿಎಂ ಬಸವರಾಜ್ ಬೊಮ್ಮಾಯಿಗೆ ಅಕ್ಟೋಬರ್ 11ರಂದು ಗಿಲ್ಲೇಸೂಗೂರು ಗ್ರಾಮದಲ್ಲಿ ನಡೆದ ಬಿಜೆಪಿ ಜನ ಸಂಕಲ್ಪ ಯಾತ್ರೆ ವೇಳೆ ಸಿಎಂ ರಾಯಚೂರಿನಲ್ಲಿಯೇ ಏಮ್ಸ್ ಸ್ಥಾಪಿಸುವುದಾಗಿ ನೀಡಿರುವ ಭರವಸೆ ನೀಡಿದರು. 200ನೇ ದಿನದ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ; ಏಮ್ಸ್ ಸ್ಥಾಪಿಸುವಂತೆ ಒತ್ತಾಯಿಸಿ ಬೃಹತ್ ಪ್ರತಿಭಟನಾ ಮೆರವಣಿಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಅಷ್ಟೇ ಅಲ್ಲದೇ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ನಮ್ಮ ಜಿಲ್ಲೆಯ ಶಾಸಕರು ಏಮ್ಸ್ ಕುರಿತಾಗಿ ಕೇಳಿದ ವಿವರಣೆಗೆ ಕಾನೂನು ಸಚಿವರ ಉತ್ತರ. ವಿಷಯಕ್ಕೆ ಸಂಬಂಧಿಸಿದಂತೆ, ಇಡೀ ಕರ್ನಾಟಕ ರಾಜ್ಯದಲ್ಲಿಯೇ ಕಲ್ಯಾಣ ಕರ್ನಾಟಕ ಪ್ರದೇಶ ಅದರಲ್ಲೂ ರಾಯಚೂರು ಜಿಲ್ಲೆ ಎಲ್ಲಾ ರಂಗಗಳಲ್ಲೂ ಬಹಳಷ್ಟು ಹಿಂದುಳಿದಿದೆ.
ಇದಕ್ಕೆಲ್ಲಾ ನಮ್ಮ ಜಿಲ್ಲೆಯ ರಾಜಕೀಯ ಇಚ್ಛಾಶಕ್ತಿಯ ಕೊರತೆ ಎಂದರೆ ತಪ್ಪಾಗಲಾರದು. ಈ ಹಿನ್ನಲೆಯಲ್ಲಿಯೇ ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ಡಾ.ಡಿ.ಎಂ. ನಂಜುಂಡಪ್ಪ ವರದಿಯಲ್ಲಿ ರಾಯಚೂರಿನಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆ (IIT) ಸ್ಥಾಪಿಸಬೇಕೆಂಬ ಮಹತ್ವದ ಶಿಫಾರಸ್ಸು ಕೂಡ ಮಾಡಲಾಗಿದೆ. ಆದ್ರೂ ಸಹ ಸರಕಾರದ ವಿಳಂಬ ನೀತಿಯನ್ನು ಖಂಡಿಸಿ ಇಂದು ಬೃಹತ್ ಹೋರಾಟ ನಡೆಯಿತು.
ರಾಯಚೂರು ಜಿಲ್ಲೆಗೆ ಏಕೆ ಏಮ್ಸ್ ನೀಡಬೇಕು:
ರಾಯಚೂರು ಜಿಲ್ಲೆ ಹಿಂದುಳಿದ ಜಿಲ್ಲೆಗಳಲ್ಲಿ ಒಂದು. ಅತೀ ಹೆಚ್ಚು ಅಪೌಷ್ಟಿಕತೆ ಮಕ್ಕಳು ಜನನ ಆಗುವ ಜಿಲ್ಲೆ. ಈ ಜಿಲ್ಲೆಯಲ್ಲಿ ಚಿನ್ನ ಸಿಕ್ಕರೂ ಬಡ ಜನರಿಗೆ ಉತ್ತಮ ವೈದ್ಯಕೀಯ ಸೌಕರ್ಯಗಳು ಸಿಗದೇ ಜನರು ನಾನಾ ಸಮಸ್ಯೆ ಗಳಿಂದ ನರಳಾಟ ನಡೆಸಿದ್ದಾರೆ. ಎರಡು ದೊಡ್ಡ ನದಿಗಳು ಇದ್ರೂ ಸಹ ಜನರು ಶುದ್ಧ ಕುಡಿಯುವ ನೀರು ಸಿಗದೇ ಕಲುಷಿತ ನೀರು ಸೇವಿಸಿ ಪ್ರಾಣಬಿಟ್ಟ ಘಟನೆಗಳು ರಾಯಚೂರು ಜಿಲ್ಲೆಯಲ್ಲಿ ಇದೆ. ಹೀಗಾಗಿ ಈ ಬಡ ಜನರ ಆರೋಗ್ಯ ಕಾಪಾಡಲು ಮತ್ತು ವೈದ್ಯಕೀಯ ಗುಣಮಟ್ಟದ ಚಿಕಿತ್ಸೆ ಜನರಿಗೆ ನೀಡಲು ರಾಯಚೂರು ಜಿಲ್ಲೆಗೆ ಏಮ್ಸ್ ಅವಶ್ಯಕತೆ ಇದೆ.
ಇನ್ನೂ ಡಾ.ಡಿ.ಎಂ. ನಂಜುಂಡಪ್ಪ ವರದಿಯಲ್ಲಿ ಸ್ಪಷ್ಟವಾಗಿ ಹೇಳಿರುವಂತೆ, ರಾಯಚೂರು ಜಿಲ್ಲೆ ಹಿಂದುಳಿವಿಕೆಗೆ ಪ್ರಾದೇಶಿಕ ಅಸಮತೋಲನಕ್ಕೆ ಶೈಕ್ಷಣಿಕ ಮತ್ತು ಔದ್ಯೋಗಿಕರಣದ ಕೊರತೆಯೇ ಪ್ರಮುಖ ಕಾರಣವಾಗಿದೆ. ಪ್ರಸ್ತುತ ರಾಯಚೂರು ಜಿಲ್ಲೆಗೆ ಐ.ಐ.ಟಿ. ಸ್ಥಾಪಿಸುವಲ್ಲಿ ಆದ ಚಾರಿತ್ರಿಕ ಅನ್ಯಾಯವನ್ನು ಏಮ್ಸ್ ಸ್ಥಾಪಿಸುವ ಮೂಲಕ ಸರಿಪಡಿಸುವ, ಪ್ರಾದೇಶಿಕ ಅಸಮತೋಲನ ನಿವಾರಿಸುವ ಸುಸಂದರ್ಭ ತಮ್ಮ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಒದಗಿ ಬಂದಿದೆ. ಏಮ್ಸ್ ಸ್ಥಾಪನೆ ಮಾಡುವುದಕ್ಕೆ ರಾಯಚೂರು ಜಿಲ್ಲೆ ಅತ್ಯಂತ ಸೂಕ್ತ ಪ್ರದೇಶವಾಗಿದೆ.
ಕೃಷ್ಣ, ತುಂಗಭದ್ರಾ ನದಿಗಳ ಸಮೃದ್ಧ ನೀರು, ವಿಶಾಲವಾದ ಫಲವತ್ತಾದ ಭೂ ಪ್ರದೇಶ, ಇಡೀ ರಾಜ್ಯಕ್ಕೆ ಬೆಳಕು ನೀಡುವ RTPS ಮತ್ತು YTPS ಥರ್ಮಲ್ ವಿದ್ಯುತ್ ಸ್ಥಾವರಗಳು, ದೇಶದ ಏಕೈಕ ಹಟ್ಟಿ ಚಿನ್ನದ ಗಣಿ, ಬೃಹತ್ ಹತ್ತಿ ಮಾರುಕಟ್ಟೆ, ಎರಡು - ಎರಡು ವಿಶ್ವ ವಿದ್ಯಾಲಯಗಳು, ಎರಡು ವೈದ್ಯಕೀಯ ಕಾಲೇಜುಗಳು, ಎರಡು ದಂತ ವೈದ್ಯ ಕಾಲೇಜುಗಳು, ಐ.ಐ.ಐ.ಟಿ. ಮೂರು ಇಂಜಿನೀಯರಿಂಗ್ ಕಾಲೇಜುಗಳು ಇತರೆ ಸರ್ಕಾರಿ ಮತ್ತು ಖಾಸಗಿ ಉನ್ನತ ಮಟ್ಟದ ವಿದ್ಯಾ ಸಂಸ್ಥೆಗಳು ಹೀಗೆ ಹಲವಾರು ಸೌಲಭ್ಯಗಳು ರಾಯಚೂರು ಜಿಲ್ಲೆಯಲ್ಲಿ ಇವೆ.
ಕೆಲವೇ ದಿನಗಳಲ್ಲಿ ರಾಯಚೂರಿನಲ್ಲಿ ವಿಮಾನ ನಿಲ್ದಾಣವೂ ಆಗಲಿದೆ. ಕೇವಲ 180 ಕಿ.ಮೀ.ಅಂತರಲ್ಲಿ ಹೈದರಾಬಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ದೇಶದ ಪ್ರಮುಖ ನಗರಗಳಿಗೆ ಸಂಪರ್ಕಿಸುವ ಬೃಹತ್ ರೈಲ್ವೆ ಮಾರ್ಗಗಳಿವೆ. ಎಲ್ಲಾ ಇದ್ದೂ ಇಲ್ಲದಂತಿರುವ ರಾಯಚೂರು ಜಿಲ್ಲೆ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದಾಗಿ ಎಲ್ಲಾ ರಂಗಗಳಲ್ಲೂ ಇಡೀ ದೇಶದಲ್ಲಿಯೇ ಹಿಂದುಳಿದಿರುವುದು ವಿಪರ್ಯಾಸ. ಅದರಲ್ಲೂ ರಾಯಚೂರು ಜಿಲ್ಲೆ ಉನ್ನತ ವೈದ್ಯಕೀಯ ತಂತ್ರಜ್ಞಾನಗಳ ಕೊರತೆಯಿಂದಾಗಿ ನೂರಾರು ರೋಗಗಳ ಆಗರವಾಗಿದೆ.
ಇಲ್ಲಿಯ ಬಡ ಜನತೆ, ದೀನ ದಲಿತರು, ಹಿಂದುಳಿದ ವರ್ಗಗಳಿಗೆ ಉನ್ನತ ವೈದ್ಯಕೀಯ ಸೇವೆ ಗಗನ ಕುಸುಮವಾಗಿ ಕ್ರಿಮಿ ಕೀಟಗಳಿಗಿಂತ ಕನಿಷ್ಟವಾಗಿ ಸಾವನ್ನಪ್ಪುತ್ತಿದ್ದಾರೆ. ಅಪೌಷ್ಠಿಕತೆಯಿಂದ ಮಕ್ಕಳು ನರಳಿ ಸಾಯುವವರ ಸಂಖ್ಯೆ ದೇಶದಲ್ಲಿಯೇ ರಾಯಚೂರು ಜಿಲ್ಲೆಯಲ್ಲಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ರಂಗಗಳಲ್ಲಿ ಹಿಂದುಳಿದ ರಾಯಚೂರು ಜಿಲ್ಲೆಗೆ ಕೇಂದ್ರ ಸರಕಾರ ರಾಯಚೂರು ಜಿಲ್ಲೆಯನ್ನು ಮಹತ್ವಾಕಾಂಕ್ಷಿ ಜಿಲ್ಲೆ ಎಂದು ಘೋಷಿಸಿ ಸರ್ವಾಂಗೀಣ ಬೆಳವಣಿಗೆಗೆ ಪಣತೊಟ್ಟಿರುವುದಾಗಿ ಹೇಳಿದೆ. ಹೇಳಿದಂತೆ ರಾಯಚೂರು ಜಿಲ್ಲೆಗೆ ಏಮ್ಸ್ ಮಂಜೂರು ಮಾಡಬೇಕಾಗಿದೆ.
ಬಿಜೆಪಿಯಿಂದ ಮೀಸಲಾತಿ ಅಪ್ರಸ್ತುತ: ಸಿದ್ದರಾಮಯ್ಯ
ಏಮ್ಸ್ ಗಾಗಿ 'ಮಾಡು ಇಲ್ಲವೆ ಮಡಿ' ಹೋರಾಟ:
ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಅತೀ ಹಿಂದುಳಿದ ಜಿಲ್ಲೆ ಅಂದ್ರೆ ಅದು ರಾಯಚೂರು. ಈ ಪ್ರದೇಶದ ಅಭಿವೃದ್ಧಿಗಾಗಿ ಸರ್ಕಾರ 371(ಜೆ) ಕಲಂಗೆ ತಿದ್ದುಪಡಿ ತಂದು ವಿಶೇಷ ಸ್ಥಾನಮಾನ ಕಲ್ಪಿಸಿ ಘೋಷಣೆ ಮಾಡಿದೆ. ಕೇವಲ ಘೋಷಣೆಗಳಿಗೆ ಮಾತ್ರ ಸೀಮಿತವಾಗಿದ್ದು, ನಮ್ಮ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಮಹತ್ವಾಕಾಂಕ್ಷಿ ಯೋಜನೆಗಳು ಅನುಷ್ಠಾನಗೊಳಿಸುವಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಬದ್ಧತೆಯನ್ನು ತೋರದೇ ಇರುವುದು ಖಂಡನೀಯವಾಗಿದೆ. ಮತ್ತೊಂದು ಕಡೆ ಬೃಹತ್ ಯೋಜನೆಗಳಾದ ಐ.ಐ.ಟಿ, ಏಮ್ಸ್, ಟೆಕ್ಸ್ಟೈಲ್ ಪಾರ್ಕ್, ಬೃಹತ್ ಉದ್ದಿಮೆಗಳು, ಬಹುದೊಡ್ಡ ಸಂಸ್ಥೆಗಳು ಅನೇಕ ವಿಶ್ವ ವಿದ್ಯಾಲಯಗಳು ಇತರೆ ಎಲ್ಲವೂ ಹುಬ್ಬಳ್ಳಿ-ಧಾರವಾಡಕ್ಕೆ ಮಾತ್ರ ತೆಗೆದುಕೊಂಡು ಹೋದರೆ ನಮ್ಮ ಕಲ್ಯಾಣ ಕರ್ನಾಟಕದ ಪರಿಸ್ಥಿತಿ ಏನಾಗಬೇಕು?
RAICHUR: ಉಟಕನೂರು ಮರಿಬಸಲಿಂಗಸ್ವಾಮಿ ಜಾತ್ರೆ: ವರ್ಷಪೂರ್ತಿ ಕೂಡಿಟ್ಟ ಕಾಣಿಕೆ ಜಾತ್ರೆಗೆ ಅರ್ಪಣೆ
ಹೀಗಾಗಿ ಸರ್ಕಾರದ ಮಲತಾಯಿ ಧೋರಣೆಯನ್ನು ಖಂಡಿಸಿ 'ಮಾಡು ಇಲ್ಲವೆ ಮಡಿ' ಎನ್ನುವಂತೆ ರಾಯಚೂರಿನಲ್ಲಿಯೇ ಏಮ್ ಸ್ಥಾಪಿಸುವುದಾಗಿ ನೀವು ಘೋಷಿಸುವವರೆಗೂ ನಿರ್ಣಾಯಕವಾಗಿ ಈ ಅನಿರ್ದಿಷ್ಟ ಧರಣಿ ಸತ್ಯಾಗ್ರಹವನ್ನು ಮುಂದುವರೆಸುತ್ತೇವೆ. ನಮ್ಮ ಜೀವ ಬಲಿದಾನಕ್ಕೂ ಸಿದ್ಧರಿದ್ದೇವೆ. ಇದಕ್ಕೆ ನಾವೆಲ್ಲ ಪಣ ತೊಟ್ಟಿದ್ದೇವೆ. ಜನವರಿ 18ರಿಂದ ಸರದಿ ಉಪವಾಸ ಸತ್ಯಾಗ್ರಹ ಶುರು ಮಾಡುತ್ತೇವೆ. ಇನ್ನು ಮುಂದೆ ನಮ್ಮ ತಾಳ್ಮೆಯನ್ನು ಪರೀಕ್ಷಿಸಬೇಡಿರಿ ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಸರ್ಕಾರಕ್ಕೆ ಆಗ್ರಹಿಸಿದರು. ಒಟ್ಟಿನಲ್ಲಿ ರಾಯಚೂರು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಏಮ್ಸ್ ಗಾಗಿ ಹೋರಾಟವು ಹೊಸ ಹೊಸ ತಿರುವು ಪಡೆಯುತ್ತಿದೆ.