
ವರದಿ: ಭರತ್ ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ
ಉತ್ತರಕನ್ನಡ(ಅ.19): ಉತ್ತರಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನಲ್ಲಿ ಹಲವು ವರ್ಷಗಳಿಂದ ಸಾವಿರಾರು ಕುಟುಂಬಗಳು ಕಾಡಿನ ನಡುವೆಯೇ ಜೀವನ ಕಟ್ಟಿಕೊಂಡು ಬಂದಿದ್ದಾರೆ. ಆದರೆ, ಇದೀಗ ಕಾಡಿನ ರಕ್ಷಣೆಯ ಹೆಸರಿನಲ್ಲಿ ಅರಣ್ಯ ಇಲಾಖೆ ಎನ್‌ಜಿಒವೊಂದರ ಮೂಲಕ ಈ ನಿವಾಸಿಗಳನ್ನು ಒಕ್ಕಲೆಬ್ಬಿಸುವ ಪ್ರಯತ್ನಕ್ಕೆ ಕೈ ಹಾಕಿದೆ. ಕೆಲವು ಜನರಿಗೆ ಬೆದರಿಸಲು ಯತ್ನಿಸಿದರೆ, ಮತ್ತಷ್ಟು ಜನರಿಗೆ ಹಣ ಆಮಿಷ ತೋರಿಸಿ ಜಾಗ ಖಾಲಿ ಮಾಡಲು ಸೂಚಿಸುತ್ತಿದೆ ಎಂಬ ಆರೋಪ ವ್ಯಕ್ತವಾಗಿದೆ. ಅರಣ್ಯ ಇಲಾಖೆ ನಡೆಸುತ್ತಿರುವ ಈ ದಬ್ಬಾಳಿಕೆ ವಿರುದ್ಧ ಇದೀಗ ಅರಣ್ಯ ವಾಸಿಗಳು ಸಿಡಿದೆದ್ದಿದ್ದು, ಭಾರೀ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ, ಮುಂದಿನ ದಿನಗಳಲ್ಲಿ ರಸ್ತೆ ಬಂದ್ ನಡೆಸಿ ಪ್ರತಿಭಟಿಸುವ ಎಚ್ಚರಿಕೆ ಕೂಡಾ ನೀಡಿದ್ದಾರೆ. ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ...
ಹೌದು, ಉತ್ತರಕನ್ನಡ ಜಿಲ್ಲೆಯ ಜೊಯಿಡಾ ತಾಲೂಕು ಶೇ. 87ರಷ್ಟು ಮೀಸಲು ಅರಣ್ಯವನ್ನು ಹೊಂದಿದ್ದು, ಶೇ. 17ರಷ್ಟು ಪ್ರದೇಶದಲ್ಲಿ ಜನರು ಜೀವನ ನಡೆಸುತ್ತಿದ್ದಾರೆ. ಕಾಳಿ ಹುಲಿ ಸಂರಕ್ಷಿತ ಪ್ರದೇಶವಾಗಿರುವ ಜೊಯಿಡಾದಲ್ಲಿ ಅರಣ್ಯದ ನಡುವೆ ಸಾಕಷ್ಟು ವರ್ಷಗಳಿಂದ ಸುಮಾರು 3000ದಿಂದ 4000 ಕುಟುಂಬಗಳು ವಾಸಿಸುತ್ತಿದ್ದಾರೆ. ಆದರೆ, ಇದೀಗ ಅರಣ್ಯ ರಕ್ಷಣೆಯ ಹೆಸರಿನಲ್ಲಿ ಅರಣ್ಯ ಇಲಾಖೆ ಡಬ್ಲ್ಯಸಿಎಸ್ ಅನ್ನೋ ಎನ್‌ಜಿಒ ಮೂಲಕ ಈ ಕಾಡಿನ ನಡುವೆಯೇ ವಾಸಿಸುತ್ತಿರುವ ಜನರನ್ನು ಒಕ್ಕಲೆಬ್ಬಿಸಲು ಯತ್ನಿಸುತ್ತಿದ್ದಾರೆ ಅನ್ನೋ ಆರೋಪ ವ್ಯಕ್ತವಾಗಿದೆ. ಕೆಲವರನ್ನು ಅಧಿಕಾರಿಗಳು ವಿವಿಧ ಕಾನೂನುಗಳಡಿ ಹೆದರಿಸಿದರೆ, ಮತ್ತಷ್ಟು ಜನರಿಗೆ ಸುಮಾರು 15 ಲಕ್ಷ ರೂ. ನೀಡುವುದಾಗಿ ಆಮಿಷ ತೋರಿಸಿ ಕಾಡನ್ನು ಬಿಟ್ಟು ಹೋಗಲು ಒತ್ತಾಯಿಸುತ್ತಿದ್ದಾರೆ. ಇದರಿಂದ ರೋಸಿ ಹೋಗಿರುವ ಅರಣ್ಯ ವಾಸಿಗಳು ಇದೀಗ ಬೀದಿಗಿಳಿದು ಸರಕಾರ ಹಾಗೂ ಅರಣ್ಯ ಇಲಾಖೆಯ ವಿರುದ್ಧ ಮತ್ತೆ ಭಾರೀ ಪ್ರತಿಭಟನೆ ನಡೆಸಿದ್ದಾರೆ. ಈ ಜನರ ಹೋರಾಟಕ್ಕೆ ರಾಜಕೀಯ ಮುಖಂಡರಾದ ಬಿಜೆಪಿಯ ಮಾಜಿ ಶಾಸಕ ಸುನೀಲ್ ಹೆಗಡೆ, ಕಾಂಗ್ರೆಸ್ ಮುಖಂಡ ಎಸ್.ಎಲ್. ಘೋಟ್ನೇಕರ್ ಕೂಡಾ ಪಕ್ಷಾತೀತವಾಗಿ ಬೆಂಬಲ ನೀಡಿದ್ದಾರೆ.
ದಟ್ಟ ಅರಣ್ಯಕ್ಕೆ ಕಾಂಕ್ರೀಟ್ ಬೇಲಿ?: ಸರ್ಕಾರದ ಹಣದ ಮೇಲೆ ಅರಣ್ಯ ಇಲಾಖೆ ಕಣ್ಣು?
ಇಂದು ಬೆಳಗ್ಗೆ ಜೊಯಿಡಾ ಕುಣಬಿ ಸಮುದಾಯ ಭವನದಲ್ಲಿ ಸೇರಿದ ನೂರಾರು ಬುಡಗಟ್ಟು ಕುಣಬಿ, ದೇಸಾಯಿ, ದೇವಳಿ ಸೇರಿದಂತೆ ಹಲವಾರು ಸಮುದಾಯದ ಮುಖಂಡರು ಹಾಗೂ ಜನರು ಸಭೆ ನಡೆಸಿ ಜನಸಾಮಾನ್ಯರಿಗೆ ಆಗುತ್ತಿರುವ ಸಮಸ್ಯೆಗಳು, ಅಧಿಕಾರಿಗಳು ನಡೆಸುತ್ತಿರುವ ದಬ್ಬಾಳಿಕೆ ಹಾಗೂ ಸರಕಾರದಿಂದ ದೊರೆಯಬೇಕಾದ ಸವಲತ್ತುಗಳ ಬಗ್ಗೆ ಚರ್ಚಿಸಲಾಯಿತು. ಬಳಿಕ ಮೆರವಣಿಗೆ ಮೂಲಕ ಜೊಯಿಡಾ ನಗರದಿಂದ ತಹಶೀಲ್ದಾರ್ ಕಚೇರಿಯವರೆಗೆ ಸಾಗಿದ ಪ್ರತಿಭಟನಾಕಾರರು ತಮ್ಮ ಬೇಡಿಕೆ ಈಡೇರಿಕೆಗೆ ಹಾಗೂ ಅರಣ್ಯಾಧಿಕಾರಿಗಳ ದಬ್ಬಾಳಿಕೆ ನಿಲ್ಲಿಸುವಂತೆ ಭಾರೀ ಪ್ರತಿಭಟನೆಯ ಮೂಲಕ ಒತ್ತಾಯಿಸಿದರು. ಉನ್ನತಾಧಿಕಾರಿಗಳೇ ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸಬೇಕೆಂದು ಪ್ರತಿಭಟನಾಕಾರರ ಒತ್ತಾಯ ಗಲಾಟೆಯ ಸ್ವರೂಪ ಪಡೆಯುವ ಸಾಧ್ಯತೆ ಎದುರಾಗಿತ್ತು. ಕೊನೆಗೇ ಮುಂದಿನ ತಿಂಗಳು 2 ಅಥವಾ 4 ತಾರೀಕಿಗೆ ಜಿಲ್ಲಾಧಿಕಾರಿಗಳೇ ಬಂದು ಸಮಸ್ಯೆ ಪರಿಹರಿಸುವುದಾಗಿ ಅಧಿಕಾರಿಗಳು ನೀಡಿದ ಆಶ್ವಾಸನೆಯಿಂದಾಗಿ ಪ್ರತಿಭಟನಾಕಾರರು ತಮ್ಮ ಹೆಜ್ಜೆ ಹಿಂದಕ್ಕಿಟ್ಟರು.
ಪ್ರತಿಭಟನಾಕಾರರು ಹೇಳುವ ಪ್ರಕಾರ, ಸಾಕಷ್ಟು ವರ್ಷಗಳಿಂದ ಕಾಡಿನ ನಡುವೆಯೇ ಜೀವನ ಕಟ್ಟಿಕೊಂಡು ಬಂದ ಜನರನ್ನು ಇದೀಗ ಅರಣ್ಯಾಧಿಕಾರಿಗಳು ಒಕ್ಕಲೆಬ್ಬಿಸಲು ಪ್ರಯತ್ನಿಸುತ್ತಿದ್ದಾರೆ. ಕುಂಬಾರವಾಡ, ಡಿಗ್ಗಿ, ಪಣಸೋಳಿ, ಬಜಾರ್ ಕುಣಂಗ್ ಮುಂತಾದೆಡೆ ಜನರಿಗೆ ಹಣದ ಆಮಿಷ ನೀಡಿ ಮನೆಗಳನ್ನು ಬಿಟ್ಟು ಬೇರೆಡೆ ಹೋಗಲು ಒತ್ತಾಯಿಸುತ್ತಿದ್ದಾರೆ. ಈಗಾಗಲೇ ಅರಣ್ಯ ಇಲಾಖೆಯಿಂದಾಗಿ ಜಾಗ ಕಳೆದುಕೊಂಡವರ ಪರಿಸ್ಥಿತಿ ಇಂದಿಗೂ ಬಹಳಷ್ಟು ಸಂಕಷ್ಟದಿಂದಲೇ ಜೀವನ ನಡೆಸುತ್ತಿದ್ದಾರೆ. ಅರಣ್ಯಾಧಿಕಾರಿಗಳು 15 ಲಕ್ಷ ರೂ. ನೀಡುವುದಾಗಿ ಆಮಿಷ ತೋರಿಸುತ್ತಿದ್ದಾರೆ. ಈ ಹಣದಲ್ಲಿ ಒಂದು ಮನೆ ಕೂಡಾ ನಿರ್ಮಾಣ ಮಾಡಲಾಗುವುದಿಲ್ಲ. ನಮಗೆ ಎಷ್ಟು ಲಕ್ಷ ಹಣ ನೀಡಿದರೂ ಬೇಡ. ಜೊಯಿಡಾದಲ್ಲಿ ಸಾಕಷ್ಟು ವರ್ಷಗಳಿಂದ ನೆಲೆಸಿಕೊಂಡು ಬರುತ್ತಿರುವ ಅರಣ್ಯ ವಾಸಿಗಳಿಗೆ ನೀರು, ವಿದ್ಯುತ್, ರಸ್ತೆ ಸಂಪರ್ಕದಂತಹ ಮೂಲ ಸೌಕರ್ಯಗಳನ್ನು ಸರಕಾರ ಒದಗಿಸಬೇಕು. ಅಲ್ಲದೇ, ಇಲ್ಲಿನ ಜನರಿಗೆ ಯಾವುದೇ ಸಮಸ್ಯೆಗಳನ್ನು ಮಾಡದೇ ಕಾಡಿನೊಂದಿಗೆ ಜನರನ್ನು ಜೀವಿಸಲು ಬಿಡಬೇಕು. ಪ್ರತಿಭಟನೆಯ ಹಿನ್ನೆಲೆಯ ಇದೀಗ ಮುಂದಿನ ತಿಂಗಳು 2 ಅಥವಾ 4 ತಾರೀಕಿಗೆ ಜನರ ಅಹವಾಲು ಸಭೆ ನಡೆಸಿ ಜನರ ಸಮಸ್ಯೆ ಪರಿಹರಿಸುವುದಾಗಿ ಜಿಲ್ಲಾಧಿಕಾರಿ ಆಶ್ವಾಸನೆ ನೀಡಿದ್ದಾರೆ. ಒಂದು ಜನರಿಗೆ ಪರಿಹಾರ ದೊರಕದೆ ಇದೇ ರೀತಿ ಜನರಿಗೆ ತೊಂದರೆಯಾದಲ್ಲಿ ರಸ್ತೆ ತಡೆ ಮಾಡಿ ಭಾರೀ ಪ್ರತಿಭಟನೆ ನಡೆಸುವುದಾಗಿ ಜಿಲ್ಲಾ ಕುಣಬಿ ಸಮಾಜದ ಅಧ್ಯಕ್ಷ ಸುಭಾಷ್ ಗಾವುಡ ಎಚ್ಚರಿಸಿದ್ದಾರೆ.
ಒಟ್ಟಿನಲ್ಲಿ ಅರಣ್ಯ ವಾಸಿಗಳನ್ನು ಒಕ್ಕಲೆಬ್ಬಿಸುವ ಉದ್ಧೇಶದಿಂದ ಅರಣ್ಯಾಧಿಕಾರಿಗಳು ನಡೆಸುವ ದೌರ್ಜನ್ಯದ ವಿರುದ್ಧ ಇದೀಗ ನೂರಾರು ಜನರು ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ಸದ್ಯ ಅಧಿಕಾರಿಗಳ ಆಶ್ವಾಸನೆಯಿಂದಾಗಿ ಪ್ರತಿಭಟನಾಕಾರರು ತಮ್ಮ ಹೋರಾಟಕ್ಕೆ ಕೊಂಚ ಬ್ರೇಕ್ ನೀಡಿದ್ದು, ಸಮಸ್ಯೆ ಪರಿಹಾರ ಕಾಣದಿದ್ದಲ್ಲಿ ಮುಂದಿನ ಹೋರಾಟದ ತೀವ್ರತೆ ಯಾವ ರೀತಿಯಿರಲಿದೆ ಎಂದು ಕಾದು ನೋಡಬೇಕಷ್ಟೇ.