ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದೆ. ಇದೇ ವೇಳೆ ಪಕ್ಷಾಂತರ ಪರ್ವವೂ ಜೋರಾಗಿದೆ. ಇತ್ತ ಹಲವು ಮುಖಂಡರು ದಳಕ್ಕೆ ಕೈ ಕೊಟ್ಟು ತೆರಳಿದ್ದಾರೆ.
ರಾಮನಗರ (ಡಿ.07): ಗ್ರಾಮ ಪಂಚಾಯಿತಿ ಚುನಾವಣೆಯ ಮೂಲಕ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಮುಂದಾಗಿರುವ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಜೆಡಿಎಸ್ ಮನೆಗೆ ಕನ್ನ ಹಾಕುತ್ತಿದ್ದಾರೆ.
ಹಳ್ಳಿ ಫೈಟ್ ಎಂದೇ ಬಿಂಬಿತವಾಗಿರುವ ಗ್ರಾಮ ಪಂಚಾಯಿತಿ ಚುನಾವಣೆ ಕಾರ್ಯಚಟುವಟಿಕೆ ಜಿಲ್ಲೆಯಲ್ಲಿ ಚಳಿಗಾಲದಲ್ಲಿಯೂ ರಾಜಕೀಯ ನಾಯಕರಿಗೆ ಬೆವರುವಂತೆ ಮಾಡುತ್ತಿದೆ. ಇನ್ನೇನು ಚುನಾವಣೆಗೆ ಕೆಲವೇ ದಿನಗಳು ಮಾತ್ರ ಬಾಕಿ ಇರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಪಕ್ಷಾಂತರ ಪರ್ವ ಜೋರಾಗಿ ನಡೆಯುತ್ತಿದೆ.
ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಲ್ಲಿ ಕೆಲವು ಮುಖಂಡರು, ಕಾರ್ಯಕರ್ತರು ಅತ್ತಿಂದ ಇತ್ತ, ಇತ್ತಿಂದ ಅತ್ತ ಹಾರುತ್ತಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿಯ ನಾಯಕರು ಪೈಪೋಟಿಗೆ ಬಿದ್ದವರಂತೆ ಜೆಡಿಎಸ್ನ ಮುಖಂಡರು - ಕಾರ್ಯಕರ್ತರನ್ನು ಹೆಚ್ಚಾಗಿ ಸೆಳೆಯುತ್ತಿದ್ದಾರೆ.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಯಾರನ್ನು ಮದುವೆ ಆಗಿದ್ರು..?
ಜಿಲ್ಲೆಯಲ್ಲಿ ನೆಲೆ ಕಂಡುಕೊಳ್ಳಲು ಶ್ರಮಿಸುತ್ತಿರುವ ಬಿಜೆಪಿಯವರು ಕಾಂಗ್ರೆಸ್ - ಜೆಡಿಎಸ್ ಪಕ್ಷಗಳ ಮುಖಂಡರು , ಕಾರ್ಯಕರ್ತರನ್ನು ಕರೆದುಕೊಂಡು ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ. ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಪಕ್ಷಾಂತರ ಮಾಡಿದವರನ್ನೇ ಅಭ್ಯರ್ಥಿಗಳನ್ನಾಗಿಯೂ ಮಾಡುತ್ತಿದ್ದಾರೆ.
ಕೈ- ಕಮಲದ ಎದುರು ಮಂಕಾದ ದಳ: ಒಂದು ಹೋಬಳಿ ಅಥವಾ ಗ್ರಾಮದಲ್ಲಿ ಬಿಜೆಪಿಯವರು ಕಾಂಗ್ರೆಸ್‌ನವರನ್ನು ಪಕ್ಷಕ್ಕೆ ಸೆಳೆದುಕೊಂಡರೆ, ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್‌ನವರು ಬಿಜೆಪಿ ಹಾಗೂ ಜೆಡಿಎಸ್ ಮುಖಂಡರನ್ನು ಪಕ್ಷಕ್ಕೆ ಆಹ್ವಾನಿಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್-ಬಿಜೆಪಿಯ ಸೆಳೆದಾಟದ ಎದುರು ಜೆಡಿಎಸ್ ಮಂಕಾಗಿದೆ.
ಸಂಸದ ಡಿ.ಕೆ.ಸುರೇಶ್ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಜಿಲ್ಲೆಯಾದ್ಯಂತ ಗ್ರಾಮ ಪಂಚಾಯಿತಿ ಚುನಾವಣೆಯ ಪೂರ್ವ ಸಿದ್ಧತಾ ಸಭೆಗಳನ್ನು ನಡೆಸುತ್ತಿದ್ದಾರೆ. ಪ್ರತಿಯೊಂದು ಸಭೆಯಲ್ಲಿ 15ರಿಂದ 20 ಮಂದಿ ಜೆಡಿಎಸ್ ಮುಖಂಡರು - ಕಾರ್ಯಕರ್ತರು ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ.
ಗ್ರಾಮ ಸ್ವರಾಜ್ಯ ಸಮಾವೇಶ ನಡೆಸಿದ ಬಿಜೆಪಿ ನಾಯಕರು ಕೂಡ ಕಾಂಗ್ರೆಸ್- ಜೆಡಿಎಸ್ನವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದರು. ಅಲ್ಲದೆ, ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜು, ಮುಖಂಡರಾದ ಡಿ.ನರೇಂದ್ರ ಸೇರಿದ ಯುವ ಪಡೆಯ ಗುಂಪೊಂದು ವಿಪಕ್ಷಗಳ ಕೋಟೆಗೆ ಲಗ್ಗೆಯಿಟ್ಟು ಆ ಪಕ್ಷದ ಮುಖಂಡರ ಕೈಗೆ ಕಮಲ ಹಿಡಿಯುವಂತೆ ಮಾಡುತ್ತಿದ್ದಾರೆ.
ಇನ್ನು ಮಾಜಿ ಸಿಎಂ ಕುಮಾರಸ್ವಾಮಿ ಚನ್ನಪಟ್ಟಣ, ಶಾಸಕಿ ಅನಿತಾ ಕುಮಾರಸ್ವಾಮಿ ರಾಮನಗರ ಹಾಗೂ ಶಾಸಕ ಎ.ಮಂಜುನಾಥ್ ಮಾಗಡಿ ಕ್ಷೇತ್ರದಲ್ಲಿ ಅನ್ಯ ಪಕ್ಷದ ಕಾರ್ಯಕರ್ತರನ್ನು ಸೆಳೆಯುವ ಪ್ರಯತ್ನ ಮಾಡುತ್ತಿಲ್ಲ. ಬದಲಿಗೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.