ಸಚಿವರ ಪಟ್ಟಿಯಲ್ಲಿದ್ದರೂ ಕೊನೇ ಕ್ಷಣದಲ್ಲಿ ಮಂಕಾಳ್‌ ವೈದ್ಯಗೆ ಕೈತಪ್ಪಿದ ಮಂತ್ರಿಗಿರಿ, ಕರಾವಳಿಯಲ್ಲಿ ಸಿಡಿದೆದ್ದ ಮೀನುಗಾರರ ಸಮುದಾಯ!

Published : Aug 03, 2026, 03:56 PM IST
Mankal Vaidya Minister

ಸಾರಾಂಶ

ಕಾಂಗ್ರೆಸ್ ಹೈಕಮಾಂಡ್ ಬಿಡುಗಡೆ ಮಾಡಿದ ಸಚಿವರ ಪಟ್ಟಿಯಲ್ಲಿದ್ದ ಶಾಸಕ ಮಂಕಾಳು ವೈದ್ಯ ಅವರ ಹೆಸರನ್ನು ಕೊನೆ ಕ್ಷಣದಲ್ಲಿ ಕೈಬಿಡಲಾಗಿದ್ದು, ಇದನ್ನು ಎಐಸಿಸಿ 'ಟೈಪಿಂಗ್ ಮಿಸ್ಟೇಕ್' ಎಂದು ಸಮಜಾಯಿಷಿ ನೀಡಿದೆ.

ಬೆಂಗಳೂರು (ಆ.3): ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಕ್ಷಣಗಣನೆ ನಡುವೆಯೇ ಕಾಂಗ್ರೆಸ್ ಹೈಕಮಾಂಡ್‌ಗೆ ಭಾರಿ ಮುಜುಗರ ಉಂಟುಮಾಡುವ ಅಚ್ಚರಿಯ ಬೆಳವಣಿಗೆ ನಡೆದಿದೆ. ಕಾಂಗ್ರೆಸ್‌ ಹೈಕಮಾಂಡ್‌ ಪ್ರಕಟಿಸಿದ್ದ 20 ನೂತನ ಸಚಿವರ ಅಧಿಕೃತ ಪಟ್ಟಿಯಲ್ಲಿ ಶಾಸಕ ಮಂಕಾಳು ವೈದ್ಯ ಅವರ ಹೆಸರು ಇತ್ತಾದರೂ, ಕೊನೆಯ ಕ್ಷಣದಲ್ಲಿ ಅವರಿಗೆ ಸಚಿವ ಸ್ಥಾನ ಕೈತಪ್ಪಿದೆ. ಚಿವ ಸ್ಥಾನ ಕೈತಪ್ಪಿದ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಎಐಸಿಸಿ (AICC), ಇದು ಕೇವಲ "ಟೈಪಿಂಗ್ ಮಿಸ್ಟೇಕ್" (Typing Error) ಎಂದು ಸಮಜಾಯಿಷಿ ನೀಡಿದೆ. ತಿದ್ದುಪಡಿ ಮಾಡಿದ ಪಟ್ಟಿಯಲ್ಲಿ ಮಂಕಾಳು ವೈದ್ಯ ಅವರ ಹೆಸರನ್ನು ಕೈಬಿಟ್ಟು, ಶಾಸಕ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ.

ಈ ದಿಢೀರ್‌ ಬೆಳವಣಿಗೆಯಿಂದ ಅಸಮಾಧಾನಗೊಂಡ ಮಂಕಾಳು ವೈದ್ಯ ಅವರು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆಗೆ ಯತ್ನಿಸಿದರೂ, ಡಿಕೆಶಿ ಭೇಟಿ ಸಾಧ್ಯವಾಗಲಿಲ್ಲ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವೈದ್ಯ, "ನಾನು ಸಿಎಂ ಅವರನ್ನು ಭೇಟಿ ಮಾಡಲು ಬಂದಿದ್ದೆ, ಅವರು ಸಿಗಲಿಲ್ಲ. ಮತ್ತೊಮ್ಮೆ ಬಂದು ಭೇಟಿಯಾಗುತ್ತೇನೆ" ಎಂದು ತೆರಳಿದರು. ಇನ್ನೊಂದೆಡೆ, ಸಚಿವ ಸ್ಥಾನ ಸಿಗದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಬೆದರಿಕೆ ಹಾಕಿದ್ದರಿಂದಲೇ ಹೈಕಮಾಂಡ್‌ ಕೊನೆ ಕ್ಷಣದಲ್ಲಿ ಮಲ್ಲಿಕಾರ್ಜುನ್ ಅವರಿಗೆ ಸಚಿವ ಸ್ಥಾನ ನೀಡಿದೆ ಎನ್ನಲಾಗುತ್ತಿದೆ.

ಸೋಷಿಯಲ್ ಮೀಡಿಯಾ ಕಿಚ್ಚು: ಮೀನುಗಾರ ಸಮುದಾಯದ ಆಕ್ರೋಶ!

ಕೊನೆಯ ಕ್ಷಣದಲ್ಲಿ ಮಂಕಾಳು ವೈದ್ಯ ಅವರ ಹೆಸರು ಕೈಬಿಡುತ್ತಿದ್ದಂತೆ 'X' (ಟ್ವಿಟರ್) ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆ ಹಾಗೂ ಕರಾವಳಿಯ ಮೀನುಗಾರ ಸಮುದಾಯದ ಜನರು ಕಾಂಗ್ರೆಸ್‌ ನಿರ್ಧಾರದ ವಿರುದ್ಧ ಸೋಷಿಯಲ್‌ ಮೀಡಿಯಾದಲ್ಲಿ ಅಭಿಯಾನವೇ ಆರಂಭಿಸಿದ್ದಾರೆ.

"ಕರ್ನಾಟಕ ರಾಜ್ಯದ ಮೀನುಗಾರ ಸಮುದಾಯದವರಿಗೆ ಮಾಡಿದ ಅನ್ಯಾಯ": ಟ್ವಿಟರ್‌ನಲ್ಲಿ #INJUSTICEFORFISHERIESCOMMUNITY ಹಾಗೂ #JusticeForUttaraKannada ಹ್ಯಾಶ್‌ಟ್ಯಾಗ್‌ಗಳು ತೀವ್ರವಾಗಿ ಟ್ರೆಂಡ್ ಆಗುತ್ತಿವೆ.

ಉಗ್ರ ಹೋರಾಟದ ಎಚ್ಚರಿಕೆ:

"ಮೀನುಗಾರ ಸಮುದಾಯದ ಶಾಸಕರಾದ ಮಂಕಾಳು ವೈದ್ಯರಿಗೆ ಸಚಿವ ಸ್ಥಾನ ನೀಡಲೇಬೇಕು. ಅವರು ಸಚಿವರಾಗಿದ್ದಾಗ ಮೀನುಗಾರಿಕೆ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ಅವರಿಗೆ ಸಚಿವ ಸ್ಥಾನ ನೀಡದಿದ್ದರೆ ಇಡೀ ಕರಾವಳಿ ಭಾಗದ ಮೀನುಗಾರರು ಉಗ್ರ ಹೋರಾಟ ನಡೆಸುತ್ತೇವೆ" ಎಂದು ಅಭಿಮಾನಿಗಳು ಹಾಗೂ ಬೆಂಬಲಿಗರು ಹೈಕಮಾಂಡ್‌ಗೆ ಎಚ್ಚರಿಕೆ ರವಾನಿಸಿದ್ದಾರೆ.

'ಮೀನುಗಾರ ಬಾಳಲ್ಲಿ ಹೊಸ ಕಿರಣವನ್ನು ತಂದು ಅವರ ಬದುಕಿಗೆ ಬೆಳಕಾದ ಶ್ರೀ ಮಾಂಕಾಳ್ ಎಸ್ ವೈದ್ಯ ಅವರಿಗೆ ಸಚಿವ ಸ್ಥಾನ ನೀಡಲೇಬೇಕು' ಎಂದು ಸಂಕೇತ್‌ ನಾಯ್ಕ್‌ ಎನ್ನುವವರು ಟ್ವೀಟ್‌ ಮಾಡಿದ್ದಾರೆ.

'ಮೀನುಗಾರ ಸಮುದಾಯದ ಶಾಸಕರಾದ ಮಂಕಾಳ ವೈದ್ಯರಿಗೆ ಸಚಿವ ಸ್ಥಾನ ನೀಡಬೇಕು. ಈ ಹಿಂದೆ ಸಚಿವರಾಗಿದ್ದಾಗ ಮೀನುಗಾರ ಸಮಾಜಕ್ಕೆ ಅವರ ಕೊಡುಗೆ, ಮೀನುಗಾರಿಕೆ ಕ್ಷೇತ್ರದಲ್ಲಿ ಅವರ ಸಾಧನೆ ಅಪಾರ ಅವರಿಗೆ ಸಚಿವ ಸ್ಥಾನ ನೀಡದೆ ಇದ್ದಲ್ಲಿ ಕರಾವಳಿ ಭಾಗದ ಸಮಸ್ತ ಮೀನುಗಾರರು ಉಗ್ರ ಹೊರಾಟವನ್ನು ನಡೆಸುತ್ತೇವೆ' ಎಂದು ಉತ್ತರ ಕನ್ನಡ ಮೀನುಗಾರರ ಸಂಘ ಎಚ್ಚರಿಸಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ಅಧಿಕೃತ 'X' ಖಾತೆಗಳನ್ನು ಟ್ಯಾಗ್ ಮಾಡಿ, ಮೀನುಗಾರ ಸಮುದಾಯಕ್ಕೆ ಆದ ಅನ್ಯಾಯವನ್ನು ಸರಿಪಡಿಸುವಂತೆ ನೆಟ್ಟಿಗರು ಕಠಿಣವಾಗಿ ತಗೆದುಕೊಂಡಿದ್ದಾರೆ.

 

PREV
Read more Articles on
click me!

Recommended Stories

Karnataka Cabinet expansion today: ಶಾಸಕ ತನ್ವೀರ್‌ ಸೇಠ್‌ಗೆ ಕೈತಪ್ಪಿದ ಸಚಿವ ಸ್ಥಾನ; ಬೆಂಬಲಿಗರಿಂದ ಪ್ರತಿಭಟನೆ
ನಾಳೆ ಬೆಳಗ್ಗೆ 10 ಗಂಟೆಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡ್ತೇನೆ: ಸುವರ್ಣ ನ್ಯೂಸ್‌ಗೆ ಬೇಳೂರು ಗೋಪಾಲಕೃಷ್ಣ ಅಧಿಕೃತ ಹೇಳಿಕೆ