
ಮಂಗಳೂರು(ಆ.13): ರಾತ್ರಿ ವೇಳೆ ಅಪ್ರಾಪ್ತ ಬಾಲಕಿಯನ್ನ ಪುಸಲಾಯಿಸಿ ಕಾರಿನಲ್ಲಿ ಕರೆದೊಯ್ಯುತ್ತಿದ್ದ ಆರೋಪ ಕೇಳಿಬಂದ ತಕ್ಷಣ ಬಾಲಕಿಯ ರಕ್ಷಣೆಗೆ ಮುಂದಾದ ಯುವಕರ ಗುಂಪು ಕಾರು ಅಡ್ಡಗಟ್ಟಿ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಬಳಿಯ ಕೊಕ್ಕಡದಲ್ಲಿ ನಡೆದಿದೆ.
ಕುಟುಂಬಸ್ಥರ ಅನುಮತಿ ಇಲ್ಲದೆ ಮಂಗಳೂರಿನಿಂದ ಹಾಸನದ ಕಡೆಗೆ ಶೇಕ್ ಮುಖ್ತಾರ್ ಎಂಬಾತ ಕಾರಿನಲ್ಲಿ ಅಪ್ರಾಪ್ತ ಬಾಲಕಿಯನ್ನು ಕರೆದೊಯ್ಯುತ್ತಿದ್ದ ಎನ್ನಲಾಗಿದೆ. ರಾತ್ರಿ ವೇಳೆ ಬಾಲಕಿಯನ್ನು ಕಾರಿನಲ್ಲಿ ಕರೆದೊಯ್ಯುತ್ತಿದ್ದುದನ್ನು ಗಮನಿಸಿದ ಸ್ಥಳೀಯರ ಗುಂಪೊಂದು ಕಾರನ್ನು ತಡೆದಿದೆ. ಈ ವೇಳೆ ಶೇಕ್ ಮುಖ್ತಾರ್ ಗುಂಪಿನ ನಡುವೆ ಮಾತು ಬೆಳೆದು ಹಲ್ಲೆ ನಡೆದಿದೆ.
ಈ ಬಗ್ಗೆ ಅಪ್ರಾಪ್ತ ಬಾಲಕಿಯ ತಾಯಿ ಆತಂಕ ವ್ಯಕ್ತಪಡಿಸಿದ್ದು, 'ನನ್ನ ಮಗಳನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಹೋಗಿದ್ದಾನೆ, ಕಾಪಾಡುವಂತೆ ಅಂಗಲಾಚಿದ್ದಾಳೆ. ತಾಯಿ ನೀಡಿದ ದೂರಿನ ಆಧಾರದ ಮೇಲೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಶೇಕ್ ಮುಖ್ತಾರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಇನ್ನೊಂದೆಡೆ ಕಾರನ್ನು ತಡೆದ ಗುಂಪು ತನ್ನ ಮೇಲೆ ಹಲ್ಲೆ ನಡೆಸಿದೆ ಎಂದು ಶೇಕ್ ಮುಖ್ತಾರ್ ಕೂಡ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇಲೆ ಪೊಲೀಸರು ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮುಖ್ತಾರ್ ನೀಡಿದ ದೂರಿನ ಮೇರೆಗೆ ಧನುಷ್ (23), ದಿನೇಶ್ (45), ಪೂರ್ಷಾಕ್ಷ (40), ಸೂರಜ್ (25) ಹಾಗೂ ರಂಜಿತ್ ಭಂಡಾರಿ (29) ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಪ್ರಾಪ್ತ ಬಾಲಕಿಯನ್ನು ಕರೆದುಕೊಂಡು ಹೋಗಿದ್ದ ಪ್ರಕರಣ ಒಂದೆಡೆಯಾದರೆ, ಈ ವಿಚಾರದಲ್ಲಿ ವ್ಯಕ್ತಿಯ ಮೇಲೆ ಗುಂಪು ಹಲ್ಲೆ ನಡೆದಿದೆ ಎಂಬ ಆರೋಪ ಮತ್ತೊಂದೆಡೆ ಕೇಳಿಬಂದಿದೆ. ಎರಡೂ ದೂರುಗಳ ಆಧಾರದ ಮೇಲೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.