Vijayanagara: ಗಂಡ-ಹೆಂಡತಿ ಕೇಸ್, ಹಗರಿಬೊಮ್ಮನಹಳ್ಳಿ ಲಾಕಪ್‌ ಡೆತ್ ಪ್ರಕರಣದಲ್ಲಿ ಇಬ್ಬರು ಪೊಲೀಸರು ಸಿಐಡಿ ವಶಕ್ಕೆ

Published : Aug 13, 2026, 12:15 PM IST
hagaribommanahalli police station

ಸಾರಾಂಶ

ಪೊಲೀಸರ ಹಲ್ಲೆಯಿಂದ ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿಯೇ ತನ್ನ ಗಂಡನ ಸಾವಾಗಿದೆ ಎಂದು ಮೃತನ ಪತ್ನಿ ಹಾಗೂ ಕುಟುಂಸ್ಥರು ಆರೋಪ ಮಾಡಿದ್ದರು. ಹೀಗಾಗಿ ಪ್ರಕರಣವನ್ನು ಸಿಐಡಿಗೆ ವಹಿಸುವಂತೆ ಒತ್ತಡ ಇದ್ದ ಹಿನ್ನೆಲೆ ಕಳೆದ ವಾರ ಪ್ರಕರಣ ಸಿಐಡಿಗೆ ಹಸ್ತಾಂತರ ಮಾಡಲಾಗಿತ್ತು.

ವಿಜಯನಗರ: ಗಂಡ-ಹೆಂಡತಿ ಕೇಸ್, ಹಗರಿಬೊಮ್ಮನಹಳ್ಳಿ ಕಟ್ಟಡ ಕಾರ್ಮಿಕ ಸಾವನ್ನಪ್ಪಿದ ಪ್ರಕರಣಕ್ಕೆ ಸಿಐಡಿ ಎಂಟ್ರಿ ಕೊಟ್ಟಿದೆ. ಪ್ರಕರಣ ಸಂಬಂಧ ಇಬ್ಬರು ಪೊಲೀಸರನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಗಂಡ ಹೆಂಡತಿ ನಡುವಿನ ಜಗಳದ ವಿಚಾರದಲ್ಲಿ ಆರಂಭವಾದ ಪ್ರಕರಣ ಇದೀಗ ಪೊಲೀಸರಿಗೆ ಕಂಟಕವಾಗಿದೆ.

ಹಗರಿಬೊಮ್ಮನ ಹಳ್ಳಿ ಪೊಲೀಸ್ ಠಾಣೆಯಲ್ಲಿ ನಡೆದ ಕಟ್ಟಡ ಕಾರ್ಮಿಕನ ಸಾವನ್ನು ಲಾಕಪ್ ಡೆತ್ ಎಂದು ಆರೋಪಿಸಲಾಗಿತ್ತು. ಇದರ ಬೆನ್ನಲ್ಲೇ ಪ್ರಕರಣ ಸಿಐಡಿಗೆ ವರ್ಗಾವಣೆಯಾದ ಹಿನ್ನೆಲೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

ಏನಿದು ಪ್ರಕರಣ?

ಇದೇ ತಿಂಗಳ ಆರಂಭದಲ್ಲಿ ಅಂದರೆ ಆಗಸ್ಟ್ ಒಂದರಂದು ಪತ್ನಿ ಕಟ್ಟಡ ಕಾರ್ಮಿಕನಾಗಿದ್ದ ಪತಿಯ ಮೇಲೆ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸಿದ್ದರು. ಆದರೆ ಪೊಲೀಸ್ ಠಾಣೆಗೆ ಕರೆದುಕೊಂಡ ಬಳಿಕ 38 ವರ್ಷದ ಕಟ್ಟಡ ಕಾರ್ಮಿಕ ಖಲೀಲ್ ಸಾವನ್ನಪ್ಪಿದ್ದ. ಈ ವೇಳೆ ಪೊಲೀಸರು ಮಾತ್ರ, ಆತನಿಗೆ ಠಾಣೆಯಲ್ಲಿ ಫಿಟ್ಸ್ ಬಂದು ಸಾವನ್ನಪ್ಪಿದ್ದ ಎಂದು ವಾದ ಮಾಡಿದ್ದರು.

ಇದರ ಬೆನ್ನಲ್ಲೇ ಪೊಲೀಸರ ಹಲ್ಲೆಯಿಂದ ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿಯೇ ತನ್ನ ಗಂಡನ ಸಾವಾಗಿದೆ ಎಂದು ಮೃತನ ಪತ್ನಿ ಹಾಗೂ ಕುಟುಂಸ್ಥರು ಆರೋಪ ಮಾಡಿದ್ದರು. ಹೀಗಾಗಿ ಪ್ರಕರಣವನ್ನು ಸಿಐಡಿಗೆ ವಹಿಸುವಂತೆ ಒತ್ತಡ ಇದ್ದ ಹಿನ್ನೆಲೆ ಕಳೆದ ವಾರ ಪ್ರಕರಣ ಸಿಐಡಿಗೆ ಹಸ್ತಾಂತರ ಮಾಡಲಾಗಿತ್ತು.

ಆದರೆ, ಮರಣೋತ್ತರ ಪರೀಕ್ಷೆಯಲ್ಲಿ ಮೃತ ಖಲೀಲ್ ಬೆನ್ನು ಹಾಗೂ ತಲೆಗೆ ಏಟುಗಳು ಬಿದ್ದಿರುವುದು ಗೊತ್ತಾಗಿತ್ತು. ಅಲ್ಲದೇ ಕಿವಿ ಹಾಗೂ ಮೂಗಿನಲ್ಲಿಯೂ ತೀವ್ರ ರಸ್ತಸ್ರಾವ ಹಿನ್ನೆಲೆ ಹಲ್ಲೆಯಾಗಿರೋದು ಮೇಲ್ನೋಟಕ್ಕೆ ಧೃಡವಾಗಿತ್ತು. ಇದರೊಂದಿಗೆ ಅಂದು ಫಿಟ್ಸ್ ಬಂದು ಸಾವಾಗಿದೆ ಎಂದಿದ್ದ ಪೊಲೀಸರಿಗೆ ಮರಣೋತ್ತರ ಪರೀಕ್ಷೆ ವೇಳೆ ಸತ್ಯ ಬಯಲಾಗಿತ್ತು. ಸದ್ಯ ಮೃತ ಖಲೀಲ್ ಪತ್ನಿ ಶೈನಾಜ್ ದೂರಿನ ಮೇಲೆ ಹೆಡ್ ಕಾನ್ಸ್‌ಟೇಬಲ್ ರಾಘವೇಂದ್ರ ಹಾಗೂ ಕಾನ್ಸ್‌ಟೇಬಲ್ ವೆಂಕಟೇಶ್ ಮೇಲೆ ಎಫ್ ಐಆರ್ ದಾಖಲಾಗಿದ್ದು, ಇದೀಗ ಸಿಐಡಿ ಡಿವೈಎಸ್ಪಿ ಗೋಪಾಲಕೃಷ್ಣ ನೇತೃತ್ವದಲ್ಲಿ ತನಿಖೆ ಆರಂಭವಾಗಿದ್ದು, ಇಬ್ಬರು ಪೊಲೀಸರನ್ನು ವಶಕ್ಕೆ ಪಡೆದಿದ್ದಾರೆ.

ತಮ್ಮ ಪತಿಯ ಸಾವಿಗೆ ನ್ಯಾಯ ಕೊಡಿಸಿ ಎಂದು ಮೃತನ ಪತ್ನಿ ಶೈನಾಜ್ ಮನವಿ ಮಾಡಿದ್ದು, ನಮ್ಮ ಮನೆಯವರು ಕುಡಿದು ಬಂದಿದ್ದರು. ಆದ್ದರಿಂದ ನ್ಯಾಯ ಕೊಡಿಸಿ ಎಂದು ಗಂಡನನ್ನು ಕರೆದುಕೊಂಡು ಪೊಲೀಸ್ ಠಾಣೆಗೆ ಹೋಗಿದ್ದೆ. ಬೆಳಗ್ಗೆ ಕುಟುಂಬಸ್ಥರ ಕರೆದುಕೊಂಡು ಬಂದು ಮಾತುಕತೆ ಬಗೆಹರಿಸುಕೊಳ್ಳುವ ಬಗ್ಗೆ ಹೇಳಿದ್ದೆ. ಆದರೆ ಠಾಣೆಯಲ್ಲಿ ಇರಿಸಿಕೊಳ್ಳಲು ಆಗೋದಿಲ್ಲ ಎಂದು ಹೇಳಿದ್ದರು. ಆದರೆ ನಾನೇ ಅವರಿಗೆ ಮನವಿ ಮಾಡಿ ಬೆಳಗ್ಗೆವರೆಗೂ ಇರಿಸಿಕೊಳ್ಳಲು ಮನವಿ ಮಾಡಿದ್ದೆ. ಕೆಲ ಸಮಯದ ಬಳಿಕ ಗಂಡ ಕೂಗಿಕೊಳ್ಳುವ ಸದ್ದು ಕೇಳಿ ಹೋಗಿದ್ದೆ. ಆ ವೇಳೆಗಾಗಲೇ ಗಂಡ ಸಾವನ್ನಪ್ಪಿದ್ದ, ಮೂಗು-ಕಿವಿಯಲ್ಲಿ ರಕ್ತ ಬಂದಿತ್ತು. ಕೂಡಲೇ ಪೊಲೀಸರು ಟಾಟಾ ಏಸ್ ವಾಹನ ಮೂಲಕ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಿದ್ದರು, ಒಂದು ಅಂಬುಲೆನ್ಸ್ ಕೂಡ ಕರೆಸಲಿಲ್ಲ. ಕಷ್ಟ ಇದೇ ಅಂತ ಹೋದರೆ ಪೊಲೀಸರಿಗೆ ಹೀಗೆ ಮಾಡಿದ್ರು, ಆದ್ದರಿಂದ ನನ್ನ ಗಂಡನ ಸಾವಿಗೆ ನ್ಯಾಯ ಬೇಕಿದೆ ಎಂದು ಹೇಳಿದ್ದಾರೆ. (ವರದಿ: ನರಸಿಂಹಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯನಗರ)

PREV
Read more Articles on
click me!

Recommended Stories

ಕನ್ಯಾಕುಮಾರಿ ಟು ಕಾಶ್ಮೀರ: ರಾಹುಲ್ ಗಾಂಧಿ ಪ್ರಧಾನಿ ಆಗಲೆಂದು ಆಂಧ್ರದ ವಕೀಲರ ಪಾದಯಾತ್ರೆ, ಕೂಡ್ಲಿಗಿಯಲ್ಲಿ ಶಾಸಕ ಶ್ರೀನಿವಾಸ ಸಾಥ್
ಹುಬ್ಬಳ್ಳಿ-ವಾರಣಾಸಿ ರೈಲು ಸೇವೆ ವಾರಕ್ಕೆ 3 ದಿನ ವಿಸ್ತರಣೆ, ಯಾರಿಗೆಲ್ಲ ಅನುಕೂಲ? ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ!