
ಮಂಗಳೂರು (ಅ.01): ಕೇರಳದ ಪಾಲಕ್ಕಾಡ್ ವಿಭಾಗದ ವ್ಯಾಪ್ತಿಯಲ್ಲಿದ್ದ ಮಂಗಳೂರು ರೈಲು ಪ್ರದೇಶವನ್ನು ಬುಧವಾರ ಮಧ್ಯರಾತ್ರಿಯಿಂದ ಮೈಸೂರು ವಿಭಾಗಕ್ಕೆ ವರ್ಗಾಯಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮೈಸೂರು ವಿಭಾಗದ ಎಡಿಆರ್‌ಎಂ ಶಮ್ಮಾಸ್ ಹಮೀದ್ ಅವರು ಮಂಗಳೂರಿನಲ್ಲಿ ವ್ಯವಸ್ಥೆಗಳನ್ನು ಪರಿಶೀಲಿಸಿ, ಸುಗಮ ವರ್ಗಾವಣೆ ಹಾಗೂ ರೈಲು ಕಾರ್ಯಾಚರಣೆಗಳು ಯಾವುದೇ ಅಡಚಣೆಯಿಲ್ಲದೆ ಮುಂದುವರಿಯಲು ಅಗತ್ಯ ಕ್ರಮಗಳನ್ನು ಕೈಗೊಂಡರು.
ಮೈಸೂರು ವಿಭಾಗದ ಇತರ ಶಾಖಾಧಿಕಾರಿಗಳೊಂದಿಗೆ ಶಮ್ಮಾಸ್ ಹಮೀದ್ ಅವರು ಮಂಗಳೂರು ಸೆಂಟ್ರಲ್, ಮಂಗಳೂರು ಜಂಕ್ಷನ್, ಪಣಂಬೂರು ಮತ್ತು ಜೋಕಟ್ಟೆ ಸೇರಿದಂತೆ ಮಂಗಳೂರು ಪ್ರದೇಶದ ಪ್ರಮುಖ ರೈಲು ಕೇಂದ್ರಗಳಿಗೆ ಭೇಟಿ ನೀಡಿ, ಅಲ್ಲಿನ ಕಾರ್ಯಾಚರಣಾ ವ್ಯವಸ್ಥೆಗಳು ಹಾಗೂ ಸೌಲಭ್ಯಗಳನ್ನು ಪರಿಶೀಲಿಸಿದರು. ಅಧಿಕಾರಿಗಳು ರೈಲ್ವೆ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿ, ರೈಲು ಕಾರ್ಯಾಚರಣೆಗಳು ಸುಗಮವಾಗಿ ನಡೆಯಲು ಅಗತ್ಯವಿರುವ ಸಿಬ್ಬಂದಿ, ಸಂಪನ್ಮೂಲಗಳು ಹಾಗೂ ಇತರ ಮೂಲಭೂತ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿದರು.
ಈ ಭೇಟಿಯ ಸಂದರ್ಭದಲ್ಲಿ ವಿವಿಧ ವಿಭಾಗಗಳ ನಡುವಿನ ಪರಿಣಾಮಕಾರಿ ಸಮನ್ವಯ, ಸಿಬ್ಬಂದಿಯ ಸಿದ್ಧತೆ, ರೈಲುಗಳ ಕಾರ್ಯಾಚರಣೆ, ಸುರಕ್ಷತಾ ವ್ಯವಸ್ಥೆಗಳು, ನಿರ್ವಹಣಾ ಚಟುವಟಿಕೆಗಳು ಹಾಗೂ ಪ್ರಯಾಣಿಕರಿಗೆ ಸಂಬಂಧಿಸಿದ ಸೇವೆಗಳಿಗೆ ವಿಶೇಷ ಒತ್ತು ನೀಡಲಾಯಿತು. ಕಾರ್ಯಾಚರಣೆಗೆ ಸಂಬಂಧಿಸಿದ ಅಗತ್ಯತೆಗಳನ್ನು ತ್ವರಿತವಾಗಿ ಪರಿಹರಿಸುವಂತೆ ಹಾಗೂ ಕ್ಷೇತ್ರ ಮಟ್ಟದ ಘಟಕಗಳು ಮತ್ತು ವಿಭಾಗೀಯ ಕಚೇರಿಯ ನಡುವೆ ನಿರಂತರ ಸಮನ್ವಯವನ್ನು ಕಾಯ್ದುಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಲಾಯಿತು.
ಮಂಗಳೂರು ರೈಲು ಪ್ರದೇಶವನ್ನು ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಿರುವುದು ಆಡಳಿತಾತ್ಮಕ ಹಾಗೂ ಕಾರ್ಯಾಚರಣೆಯ ದೃಷ್ಟಿಯಿಂದ ಮಹತ್ವದ ಬೆಳವಣಿಗೆಯಾಗಿದೆ. ಹೊಸ ವ್ಯಾಪ್ತಿಯಡಿ ರೈಲುಗಳ ಸಂಚಾರ, ನಿರ್ವಹಣಾ ಚಟುವಟಿಕೆಗಳು, ಸುರಕ್ಷತಾ ಕ್ರಮಗಳು ಹಾಗೂ ಇತರ ರೈಲ್ವೆ ಸೇವೆಗಳು ಯಾವುದೇ ವ್ಯತ್ಯಯವಿಲ್ಲದೆ ಸುಗಮವಾಗಿ ಮುಂದುವರಿಯುವಂತೆ ಮೈಸೂರು ವಿಭಾಗ ಅಗತ್ಯ ವ್ಯವಸ್ಥೆಗಳನ್ನು ಕೈಗೊಂಡಿದೆ.
ಮೈಸೂರು ವಿಭಾಗದ ಆಡಳಿತ ಶಾಖಾಧಿಕಾರಿಗಳು ಹಾಗೂ ಕ್ಷೇತ್ರ ಮಟ್ಟದ ಸಿಬ್ಬಂದಿಯೊಂದಿಗೆ ನಿರಂತರ ಸಮನ್ವಯ ಸಾಧಿಸುತ್ತಿದ್ದು, ವಿವಿಧ ಸ್ಥಳಗಳಲ್ಲಿರುವ ಸಿಬ್ಬಂದಿಯ ಸಹಕಾರದೊಂದಿಗೆ ಸುಗಮ ವರ್ಗಾವಣೆ ಹಾಗೂ ಹೊಸ ವ್ಯಾಪ್ತಿಯಲ್ಲಿ ಪರಿಣಾಮಕಾರಿ ರೈಲು ಕಾರ್ಯಾಚರಣೆಯನ್ನು ಖಚಿತಪಡಿಸಲು ಕ್ರಮ ಕೈಗೊಂಡಿದೆ.
ಕಳೆದ 35 ವರ್ಷಗಳ ಬೇಡಿಕೆ ಈಡೇರಿದರೂ ಪ್ರಮುಖವಾಗಿ ಮಂಗಳೂರಿನಲ್ಲಿ ಯಾವುದೇ ಸಂಭ್ರಮಾಚರಣೆ ನಡೆದಿಲ್ಲ. ಮಾತ್ರವಲ್ಲ ಮಂಗಳೂರು ಪ್ರದೇಶ ಮೈಸೂರು ವಿಭಾಗಕ್ಕೆ ಸೇರ್ಪಡೆಯಾದ ಬಗ್ಗೆ ಎರಡು ದಿನಗಳಿಂದ ಕೇವಲ ಜಾಲತಾಣಗಳಲ್ಲಿ ಪೋಸ್ಟರ್ ಮೂಲಕ ಜನಪ್ರತಿನಿಧಿಗಳಿಗೆ, ಸಚಿವರಿಗೆ ಕೃತಜ್ಞತೆ ವ್ಯಕ್ತಪಡಿಸುವುದು ಬಿಟ್ಟರೆ ಬೇರೇನೂ ಸಂಭ್ರಮ ನಡೆದಿಲ್ಲ.
ಅಕ್ಟೋಬರ್ 1 ರಿಂದ ಕೇರಳದ ಪಾಲ್ಘಾಟ್‌ನಿಂದ ಮೈಸೂರು ವಿಭಾಗಕ್ಕೆ ಮಂಗಳೂರು ಪ್ರದೇಶ ಸೇರ್ಪಡೆ ಎಂಬ ಕೇಂದ್ರ ರೈಲ್ವೆ ಸಚಿವಾಲಯದ ತೀರ್ಮಾನ ಹೊರಬಿದ್ದ ಕೂಡಲೇ ಇಡೀ ಕರಾವಳಿಯೇ ಸಂಭ್ರಮಪಟ್ಟಿತ್ತು. ಮೈಸೂರು ವಿಭಾಗ ಮಂಗಳೂರಿಗೆ ಸೇರ್ಪಡೆಯಾದರೆ ಸಾಕಷ್ಟು ರೈಲ್ವೆ ಅಭಿವೃದ್ಧಿಗೆ ಅವಕಾಶಗಳು ಇವೆ ಎಂದು ಹೇಳಲಾಗಿತ್ತು. ಕೇಂದ್ರ ರೈಲ್ವೆ ಸಚಿವರನ್ನು ಕರೆಸಿ ಮಂಗಳೂರಿನಲ್ಲಿ ಅದ್ದೂರಿ ಸನ್ಮಾನ ಸಮಾರಂಭ ಏರ್ಪಡಿಸಲು ರಾಜಕೀಯ ಪಕ್ಷದಲ್ಲೂ ಚಿಂತನೆ ನಡೆದಿತ್ತು. ಆದರೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಮಂಗಳೂರು ಸೆಂಟ್ರಲ್ ಪ್ರವೇಶಿಸದೆ ನೇರವಾಗಿ ಜಂಕ್ಷನ್ ಮೂಲಕ ಸಂಚರಿಸುವ ಪ್ರಸ್ತಾಪ ಗೊತ್ತಾಗುತ್ತಿದ್ದಂತೆ ಮಂಗಳೂರಿಗರಲ್ಲಿ ಸಂಭ್ರಮ ಮರೆಯಾಯಿತು.
ಹೀಗಾಗಿ ಮೈಸೂರು ವಿಭಾಗಕ್ಕೆ ಮಂಗಳೂರು ಸೇರಿದರೂ ವಂದೇ ಭಾರತ್‌ನಂತಹ ರೈಲುಗಳು ಸೆಂಟ್ರಲ್ ಪ್ರವೇಶಿಸದೇ ಇರುವುದು, ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ಸೇರಿದಂತೆ ಹೆಚ್ಚುವರಿ ರೈಲುಗಳಿಗೂ ಅವಕಾಶ ಲಭಿಸದೇ ಇರುವುದು, ಈ ಬಗ್ಗೆ ದ.ಕ. ಸಂಸದರು ನಿರಂತರ ಪ್ರಯತ್ನಿಸಿದರೂ ರೈಲ್ವೆ ಇಲಾಖೆ ಸ್ಪಂದಿಸದೇ ಇರುವುದು ಮುಂತಾದವು ಮಂಗಳೂರು ಸೆಂಟ್ರಲ್ ನಿಲ್ದಾಣವನ್ನು ಮೂಲೆಗುಂಪು ಮಾಡುವ ಹುನ್ನಾರ ರೈಲ್ವೆಯಿಂದಲೇ ನಡೆಯುತ್ತಿದೆಯೇ ಎಂದು ಸಂಶಯ ಪಡುವಂತೆ ಆಗಿದೆ ಎನ್ನುತ್ತಿವೆ ರೈಲ್ವೆ ಸಂಘಟನೆಗಳು.