
ಬೆಂಗಳೂರು: ನೀವು ಬೈಕ್, ಸ್ಕೂಟರ್ ಅಥವಾ ಕಾರು ಹೊಂದಿದ್ದೀರಾ? ನಿಮ್ಮ ವಾಹನದ ಮೇಲೆ ಸಂಚಾರ ನಿಯಮ ಉಲ್ಲಂಘನೆಯ ಬಾಕಿ ದಂಡಗಳಿವೆಯೇ? ಹಾಗಿದ್ದರೆ ವಾಹನ ಸವಾರರಿಗೆ ಇಲ್ಲೊಂದು ಬಹುಮುಖ್ಯ ಮಾಹಿತಿ ಇಲ್ಲಿದೆ..
ಹಿಂದೆ ರಾಜ್ಯ ಸರ್ಕಾರ ಸಂಚಾರ ದಂಡ ಪಾವತಿಗೆ 50% ರಿಯಾಯಿತಿ ಘೋಷಣೆ ಮಾಡಿತ್ತು. ಆಗ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ಹರಿದು ಬಂದಿತ್ತು. ಜೊತೆಗೆ ಲಕ್ಷಾಂತರ ವಾಹನ ಸವಾರರು ನಿರಾಳರಾಗಿದ್ದರು. ಇದೀಗ ಅದೇ ಮಾದರಿಯಲ್ಲಿ ಬಾಕಿ ಇರುವ ಸಂಚಾರ ಇ-ಚಲನ್ ದಂಡಗಳಿಗೆ ಮತ್ತೊಮ್ಮೆ 50% ರಿಯಾಯಿತಿ (50% Discount on Traffic Fine) ನೀಡುವಂತೆ ಸಾರ್ವಜನಿಕರು ಹಾಗೂ ವಾಹನ ಸವಾರರ ಸಂಘಟನೆಗಳು ಸರ್ಕಾರಕ್ಕೆ ಮನವಿ ಮಾಡಿವೆ. ಈ ಕುರಿತು ಸಾರಿಗೆ ಇಲಾಖೆ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಚರ್ಚೆ ನಡೆಯುತ್ತಿದೆ.
ಹಿಂದೆ ನಡೆದ ಲೋಕ ಅದಾಲತ್‌ನಲ್ಲಿ ನೀಡಲಾಗಿದ್ದ 50% ರಿಯಾಯಿತಿ ಭರ್ಜರಿ ಯಶಸ್ಸು ಕಂಡಿತ್ತು. ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ AI ಆಧಾರಿತ ಕ್ಯಾಮೆರಾಗಳು ಜಾರಿಗೆ ಬಂದ ನಂತರ.. ಸಣ್ಣಪುಟ್ಟ ನಿಯಮ ಉಲ್ಲಂಘನೆಗಳಿಗೂ ಸಾವಿರಾರು ರೂಪಾಯಿ ದಂಡ ವಾಹನ ಮಾಲೀಕರ ಹೆಸರಿಗೆ ಜಮೆಯಾಗುತ್ತಿದೆ. ಹಲವರ ವಾಹನಗಳ ಮೌಲ್ಯಕ್ಕಿಂತ ದಂಡದ ಮೊತ್ತವೇ ಹೆಚ್ಚಾಗಿದೆ.
ಸರ್ಕಾರದಿಂದ 50% ರಿಯಾಯಿತಿ ಕುರಿತು ಅಧಿಕೃತ ಅಧಿಸೂಚನೆ ಹೊರಬಿದ್ದ ತಕ್ಷಣ ರಿಯಾಯಿತಿ ದರದಲ್ಲೇ ಪಾವತಿಸಲು ಅವಕಾಶ ಸಿಗಲಿದೆ. ವಾಹನ ಸವಾರರು ತಮ್ಮ ಬಾಕಿ ವಿವರಗಳನ್ನು ಮೊದಲೇ ತಿಳಿದಿಟ್ಟುಕೊಳ್ಳುವುದು ಉತ್ತಮ. ನಿಯಮ ಉಲ್ಲಂಘಿಸಿ ದಂಡ ಕಟ್ಟೋದಕ್ಕಿಂತ ಮೊದಲೇ ಜಾಗೃತರಾದರೆ ಇಂತಹ ಪ್ರಮೇಯಗಳು ಬರೋದೇ ಇಲ್ಲ. ಅಲ್ಲದೇ ಹೆಲ್ಮೆಟ್ ಧರಿಸುವಂತಹ ಸುರಕ್ಷತಾ ಕ್ರಮಗಳನ್ನ ತೆಗೆದುಕೊಳ್ಳುವುದರಿಂದ ನಿಮ್ಮ ಜೀವ ಕೂಡ ಸೇಫ್ ಆಗಿ ಇರಲಿದೆ.