
ಮಂಗಳೂರು(ಆ.29): ಆಡಿನ ಮರಿಯೊಂದನ್ನು ರಕ್ಷಿಸಲು ಹೋದ ಯುವಕನೊಬ್ಬ ರೈಲು ಹರಿದು ಹೋಗಿ ತನ್ನ ಎರಡೂ ಕಾಲನ್ನು ಕಳೆದುಕೊಂಡಿರುವ ಘಟನೆ ಮಂಗಳೂರಿನ ಜೋಕಟ್ಟೆಯಲ್ಲಿ ಸಂಭವಿಸಿದೆ.
ಮಂಗಳೂರು ಹೊರವಲಯದ ಜೋಕಟ್ಟೆ ಎಂಬಲ್ಲಿ ಈ ಘಟನೆ ನಡೆದಿದ್ದು, ಚೇತನ್ ಕುಮಾರ್ ಕಾಲು ಕಳೆದುಕೊಂಡ ನತದೃಷ್ಟ ಯುವಕ.
ಹೌದು ಆಡು ಮರಿಯೊಂದು ರೈಲು ಹಳಿಯ ಉದ್ದಕ್ಕೂ ಓಡಿಕೊಂಡಿದ್ದನ್ನು ಕಂಡ ಚೇತನ್ ಕುಮಾರ್, ರೈಲು ಬರುವುದನ್ನು ಗಮನಿಸಿ ಆಡುಮರಿ ರಕ್ಷಣೆಗೆ ಮುಂದಾಗಿದ್ದಾನೆ. ಆದರೆ ಆಡು ಮರಿಯನ್ನು ಹಳಿ ಮೇಲಿನಿಂದ ಎತ್ತಿ ರಕ್ಷಿಸುವಷ್ಟರಲ್ಲಿ ರೈಲು ಬಂದು ಅಪ್ಪಳಿಸಿದೆ.
ರೈಲು ಚೇತನ್ ಕಾಲಿನ ಮೇಲಿಂದಲೇ ಹರಿದು ಹೋಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಚೇತನ್‌ನನ್ನು ಕೂಡಲೇ ನಗರದ ಕಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚೇತನ್ ಪರಿಸ್ಥಿತಿ ಪರಿಶೀಲಿಸಿದ ವೈದ್ಯರು ಒಂದು ಕಾಲು ಉಳಿಸಬಹುದು ಎಂಬ ಭರವಸೆ ನೀಡಿದ್ದಾರೆ. ಆದರೂ ಕುಟುಂಬದ ಆಧಾರವಾಗಿದ್ದ ಚೇತನ್ ಸದ್ಯ ದಿಕ್ಕು ತೋಚದಂತಾಗಿದ್ದಾರೆ.