
ಮಂಗಳೂರು: ಮಂಗಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ಭಾನುವಾರ ಮುಕ್ತಾಯಗೊಂಡ ಕಂಬಳದಲ್ಲಿ ಕಂಬಳದ ಹಿರಿಯ ತೀರ್ಪುಗಾರರಿಗೆ ಕಂಬಳದ ವ್ಯಕ್ತಿ ಒಬ್ಬರು ಅವಮಾನ ಮಾಡಿದ್ದಾರೆ ಎಂಬ ವಿಚಾರ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ, ಕಂಬಳ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಕಂಬಳ ಕ್ಷೇತ್ರದ ಭೀಷ್ಮರೆಂದೇ ಗುರುತಿಸಲ್ಪಡುವ, ಸುಮಾರು 45 ವರ್ಷಗಳಿಂದ ಕಂಬಳಕ್ಕೆ ಸೇವೆ ಸಲ್ಲಿಸಿರುವ ಅನುಭವಿ ವ್ಯಕ್ತಿ ಗುಣಪಾಲ ಕಡಂಬ ಅವರಿಗೆ ಮಂಗಳೂರು ಕಂಬಳದ ಸಂದರ್ಭದಲ್ಲಿ ಅರುಣ್ ಶೆಟ್ಟಿ ಎಂಬ ವ್ಯಕ್ತಿಯಿಂದ ಸಾರ್ವಜನಿಕವಾಗಿ ಅವಮಾನ ಮಾಡಲಾಗಿದೆ. ಈ ಘಟನೆ ಗುಣಪಾಲ್ ಕಡಂಬರವರ ಅಭಿಮಾನಿಗಳು ಹಾಗೂ ಕಂಬಳವನ್ನು ಪ್ರೀತಿಸುವ ಅನೇಕ ಮಂದಿಯ ಮನಸ್ಸಿಗೆ ತೀವ್ರವಾಗಿ ನೋವುಂಟುಮಾಡಿದೆ ಎಂದು ಜಾಲತಾಣದಲ್ಲಿ ಆಕ್ಷೇಪಿಸಲಾದ ಬರಹ ಒಂದು ಪೋಸ್ಟ್ ಕಂಡಿದೆ.
ಆದ್ದರಿಂದ ಮುಂದಿನ ಕಂಬಳ ಕಾರ್ಯಕ್ರಮದಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಕ್ಷಮಾಪಣೆ ನೀಡಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ಜೊತೆಗೆ, ಮುಂದಿನ ಕಂಬಳಗಳಲ್ಲಿ ವ್ಯಾಖ್ಯಾನಕಾರರು (ಕಾಮೆಂಟೇಟರ್‌ಗಳು) ಮತ್ತು ನಿರ್ಣಾಯಕರು (ರಿಫರಿಗಳು) ಮಾತ್ರ ತಮ್ಮ ತಮ್ಮ ಕಾಮೆಂಟ್ರಿ ಬಾಕ್ಸ್‌ಗಳಲ್ಲಿ ಕುಳಿತುಕೊಳ್ಳಬೇಕು. ಅದರಲ್ಲಿ ಬೇರಾರಿಗೂ ಆಸನ ನೀಡಬಾರದು ಎಂದು ನಾವು ವಿನಂತಿಸುತ್ತೇವೆ ಎಂದು ಕಂಬಳ ಸಮಿತಿಗೆ ಬರೆದ ಪೋಸ್ಟ್ ನಲ್ಲಿ ತಿಳಿಸಲಾಗಿದೆ
ಇದು ಕಂಬಳದ ಗೌರವ, ಶಿಸ್ತು ಮತ್ತು ಪರಂಪರೆಯನ್ನು ಕಾಪಾಡಿಕೊಳ್ಳಲು ಅತ್ಯಂತ ಅಗತ್ಯವಾಗಿದೆ ಎಂದು ಕಂಬಳಾಭಿಮಾನಿಗಳು ಭೀಷ್ಮ ಗುಣಪಾಲ್ ಕಡಂಬ ಅಭಿಮಾನಿ ಬಳಗ ಎಂಬ ಹೆಸರಿನಲ್ಲಿ ಜಾಲತಾಣಗಳಲ್ಲಿ ಪೋಸ್ಟ್ ವೈರಲ್ ಆಗುತ್ತಿದೆ. ಈ ಕೃತ್ಯವನ್ನು ವಿರೋಧಿಸಲೆಂದೇ ಪ್ರತ್ಯೇಕ ವಾಟ್ಸಪ್ ಗ್ರೂಪ್ ಗಳು ರಚನೆಯಾಗುತ್ತಿವೆ.
ಗ್ರಾಮೀಣ ಸೊಗಡಿನ ಕಂಬಳವನ್ನು ನಗರಕ್ಕೆ ಪರಿಚಯಿಸಿದಂತೆ, ಜಗತ್ತಿನಾದ್ಯಂತ ಹರಡಿರುವ ಮಂಗಳೂರಿನ ಪ್ರತಿಭೆಗಳು ತಾಯ್ನಾಡಿಗೆ ಕೊಡುಗೆ ನೀಡಲು ಇಲ್ಲಿ ಉದ್ಯಮ ಸ್ಥಾಪಿಸುವಂತೆ ಹುರಿದುಂಬಿಸುವ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ‘ಬ್ಯಾಕ್ ಟು ಊರು’ ಪರಿಕಲ್ಪನೆ ಅತ್ಯಂತ ವಿಭಿನ್ನ ಹಾಗೂ ಶ್ಲಾಘನೀಯವಾದುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಹೇಳಿದ್ದಾರೆ.
ಬಂಗ್ರಕೂಳೂರಿನ ಗೋಲ್ಡ್‌ಪಿಂಚ್ ಸಿಟಿಯ ರಾಮ-ಲಕ್ಷ್ಮಣ ಜೋಡುಕರೆಯಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ನೇತೃತ್ವದಲ್ಲಿ ನಡೆದ ನವ ವರ್ಷದ ನವವಿಧದ 9ನೇ ವರ್ಷದ ಕಂಬಳದಲ್ಲಿ ಶನಿವಾರ ರಾತ್ರಿ ಭಾಗವಹಿಸಿ ಅವರು ಮಾತನಾಡಿದರು.
ಕಂಬಳ ಎನ್ನುವುದು ಕೇವಲ ಗ್ರಾಮೀಣ ಒಂದು ಜಾನಪದ ಕ್ರೀಡೆಯಲ್ಲ. ಈ ಕಂಬಳ ತುಳುನಾಡಿನ ಅಸ್ಮಿತೆಯ ಪ್ರತೀಕ. ಇಂಥಹ ಕಂಬಳ ವೇದಿಕೆಯಲ್ಲಿ ಕ್ಯಾ. ಚೌಟ ಅವರು ತಮ್ಮ ಬ್ಯಾಕ್ ಟು ಊರು ಪರಿಕಲ್ಪನೆಯಡಿ ತಾಯ್ನಾಡಿಗೆ ವಾಪಸಾಗಿ ಈ ತುಳುನಾಡಿಗೆ ಕೊಡುಗೆ ನೀಡುತ್ತಿರುವ ಕರಾವಳಿ ಭಾಗದ ಯಶಸ್ವಿ ಉದ್ಯಮಿಗಳನ್ನು ಗುರುತಿಸಿ ಅಂಥಹ ಸಾಧಕರನ್ನು ಗೌರವಿಸುತ್ತಿರುವುದು ಕೂಡ ಪ್ರಶಂಸನೀಯ ಹಾಗೂ ಮಾದರಿಯ ನಡೆ ಎಂದು ಅವರು ಹೇಳಿದರು.
ಕಂಬಳ ಸಮಿತಿಯ ಅಧ್ಯಕ್ಷರು ಹಾಗೂ ಸಂಸದ ಕ್ಯಾ. ಬ್ರಿಜೇಶ್ ಚೌಟ ಮಾತನಾಡಿ, ತುಳುನಾಡಿನ ಕಲೆ ಹಾಗೂ ಸಾಂಸ್ಕೃತಿಕ ಅಸ್ಮಿತೆಯನ್ನು ಮುಂದಿನ ಜನಾಂಗಕ್ಕೂ ಪರಿಚಯಿಸಲು ಈ ಕಂಬಳ ನಡೆಸಲಾಗುತ್ತಿದೆ. ಈ ಬಾರಿ ರಾಷ್ಟ್ರ ಜಾಗೃತಿಯ ಕಾರ್ಯಕ್ರಮ, ಬ್ಯಾಕ್ ಟು ಊರು ಸೇರಿದಂತೆ ನವ-ವಿಧ ಕಾರ್ಯಕ್ರಮಗಳ ಮೂಲಕ ಮಂಗಳೂರು ಕಂಬಳವನ್ನು ಮತ್ತಷ್ಟು ಅರ್ಥಪೂರ್ಣಗೊಳಿಸುವ ಪ್ರಯತ್ನ ಮಾಡಿರುವುದಾಗಿ ಹೇಳಿದರು. ಕಂಬಳ ಸಮಿತಿಯ ಗೌರವಾಧ್ಯಕ್ಷ ಡಾ.ಕೆ. ಪ್ರಕಾಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಹರೀಶ್ ಪೂಂಜಾ, ವೇದವ್ಯಾಸ ಕಾಮತ್, ಭಾಗೀರಥಿ ಮುರುಳ್ಯ, ಡಾ. ಭರತ್ ಶೆಟ್ಟಿ, ರಾಜೇಶ್ ನಾೖಕ್, ಗುರುರಾಜ ಗಂಟಿಹೊಳೆ, ವಿಧಾನ ಪರಿಷತ್ ಸದಸ್ಯರಾದ ಪ್ರತಾಪ ಸಿಂಹ ನಾಯಕ್, ಕಿಶೋರ್ ಕುಮಾರ್ ಬೊಟ್ಯಾಡಿ, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ನಾಗರಾಜ ಶೆಟ್ಟಿ, ಪ್ರಮುಖರಾದ ಶಶಿಧರ ಶೆಟ್ಟಿ ಬರೋಡಾ ಮತ್ತಿತರರು ಇದ್ದರು.
ದೇಶ-ವಿದೇಶದಲ್ಲಿ ಉದ್ಯಮ ಅಥವಾ ಉದ್ಯೋಗದಲ್ಲಿ ಉನ್ನತ ಹುದ್ದೆಯಲ್ಲಿ ನೆಲೆಸಿದ್ದವರು ವಾಪಸ್ ತಾಯ್ನಾಡಿಗೆ ಬಂದು ಸ್ವಂತ ಉದ್ಯಮ ಕಟ್ಟಿ ಬೆಳೆಸಿ ಸ್ಥಳೀಯರಿಗೆ ಉದ್ಯೋಗಾವಕಾಶ ನೀಡಿರುವ ಯಶಸ್ವಿ 10 ಮಂದಿ ಉದ್ಯಮಿಗಳನ್ನು ಗುರುತಿಸಿ ಗೌರವಿಸಿರುವುದು ಬ್ಯಾಕ್ ಟು ಊರಿಗೆ ಮತ್ತಷ್ಟು ಮಂಗಳೂರಿಗರು ಹಿಂದಿರುಗಲು ಪ್ರೇರಣೆ ನೀಡಿರುವುದು ಈ ಬಾರಿಯ ಮಂಗಳೂರು ಕಂಬಳದ ಬಹಳ ವಿಶೇಷತೆಯಾಗಿದೆ.
ಅದರಂತೆ ಮಂಗಳೂರಿನಲ್ಲಿ ಇಜಿ ಕಂಪೆನಿಯ ಆಪರೇಷನ್ ಆರಂಭಿಸಿ ಸಾಕಷ್ಟು ಉದ್ಯೋಗಾವಕಾಶ ನೀಡಿರುವ ಆನಂದ್ ಫರ್ನಾಂಡಿಸ್, ಮಂಗಳೂರಿನ ಎಸ್‌ಇಝೆಡ್‌ನಲ್ಲಿ ಸುಸ್ಥಿರ ಕಟ್ಟಡ ಸಾಮಗ್ರಿಗಳ ಘಟಕ ಸ್ಥಾಪಿಸಿರುವ ಎಂಐಆರ್ ಗ್ರೂಪ್‌ನ ಕಾರ್ಯನಿರ್ವಾಹಕ ನಿರ್ದೇಶಕ ನಿತಿನ್ ರತ್ನಾಕರ್, ಮಂಗಳೂರಿನ ಎಸ್‌ಇಝೆಡ್‌ನಲ್ಲಿ ಇಟ್ಯಾಗ್ ಎನರ್ಜಿಟೆಕ್ನಿಕ್ ಪ್ರೈವೆಟ್ ಲಿ.ನ ಉತ್ಪಾದನಾ ಘಟನೆ ಸ್ಥಾಪಿಸುತ್ತಿರುವ ಬ್ರೂನೋ ಮಾರ್ಸೆಲ್ ಪ್ರಕಾಶ್ ಪಿರೇರಾ, ಶೆಫ್ ಹಾಗೂ ಉದ್ಯಮಿಯಾಗಿರುವ ಶ್ರೀಯಾ ಶೆಟ್ಟಿ, ಅಗ್ರಿಲೀಫ್ ಮೂಲಕ ಗ್ರಾಮೀಣ ಭಾಗದಲ್ಲಿ ಸುಸ್ಥಿರ ಉತ್ಪಾದನಾ ಕಂಪೆನಿ ಸ್ಥಾಪಿಸಿರುವ ಅವಿನಾಶ್ ರಾವ್, ಇಂಡಸ್ಟ್ರೀಯಲ್ ಅಟೋಮೇಷನ್ ಅಂಡ್ ಡಿಜಿಟಲ್ ಟೆಕ್ನಾಲಜೀಸ್ ಮೂಲಕ ಮಂಗಳೂರಿಗೆ ಕೊಡುಗೆ ನೀಡಿರುವ ಸ್ಮಿತಾ ರಾವ್, ಬೋಸ್ ಫ್ರೊಫೆಷನಲ್ಸ್‌ನ ಇಂಡಿಯಾ ಆರ್‌ಅಂಡ್‌ಡಿ ಸೆಂಟರ್‌ನ್ನು ಮಂಗಳೂರಿನಲ್ಲಿ ಸ್ಥಾಪಿಸಿರುವ ನಮಿತಾ ಪಿ.ಪಿ., ಹೈದರಾಬಾದ್‌ನಿಂದ ಎಂಎನ್‌ಸಿ ಕಂಪನಿ ಕೆಲಸ ಬಿಟ್ಟುಬಂದು ಮಂಗಳೂರಿನಲ್ಲಿ ಡೀನೆಟ್ ಸರ್ವೀಸಸ್ ಪ್ರೈ.ಲಿ. ಮೂಲಕ ಇಂಟರ್‌ನೆಟ್ ಸೇವೆ ಒದಗಿಸಿ ನೂರಾರು ಮಂದಿಗೆ ಉದ್ಯೋಗ ನೀಡಿರುವ ಸಂದೇಶ್ ಡಿ. ಪೂಜಾರಿ, ಉದ್ಯಮಿಯಾಗಿ ಎಸ್‌ಎನ್ ಪೂಂಜಾ ಅಂಡ್ ಕೋ. ಮೂಲಕ ಮಂಗಳೂರು ನಗರದಲ್ಲಿ ಕದ್ರಿ ಪಾರ್ಕ್ ಅಭಿವೃದ್ಧಿ ಸೇರಿ ವಿವಿಧ ವೆಂಚರ್‌ಗಳನ್ನು ಮಾಡಿರುವ ಸುಧಾಕರ್ ಪೂಂಜಾ, ಸೌದಿ ಅರೇಬಿಯಾ ಸೇರಿ ಹಲವೆಡೆ ಇಂಡಿಪೆಂಡೆಂಟ್ ಇನ್ನೋವೇಷನ್ ಎಂಬ ಕಂಪನಿ ಮೂಲಕ ತಮ್ಮ ಉದ್ಯಮವನ್ನು ಮಂಗಳೂರಿಗೆ ವಿಸ್ತರಿಸಿರುವ ಅನ್ಸಾರಿ ಅಲಿ ಅವರನ್ನು ಕಂಬಳ ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಶನಿವಾರ ಆರಂಭವಾದ ಮಂಗಳೂರು ಕಂಬಳ ಭಾನುವಾರ ಮಧ್ಯಾಹ್ನ ವೇಳೆಗೆ ಮುಕ್ತಾಯಗೊಂಡಿತು. ಕಂಬಳದ ಫಲಿತಾಂಶ ಇಂತಿದೆ.
ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ :
ಕನೆಹಲಗೆ: 09 ಜೊತೆ
ಅಡ್ಡಹಲಗೆ: 10 ಜೊತೆ
ಹಗ್ಗ ಹಿರಿಯ: 17 ಜೊತೆ
ನೇಗಿಲು ಹಿರಿಯ: 26 ಜೊತೆ
ಹಗ್ಗ ಕಿರಿಯ: 19 ಜೊತೆ
ನೇಗಿಲು ಕಿರಿಯ: 60 ಜೊತೆ
ಒಟ್ಟು ಕೋಣಗಳ ಸಂಖ್ಯೆ: 141 ಜೊತೆ
ಪ್ರಥಮ: ಇರುವೈಲು ದೊಡ್ಡಗುತ್ತು ಜಗದೀಶ್ ಎಂ ಶೆಟ್ಟಿ ‘ಎ’ (11.68)
ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ
ದ್ವಿತೀಯ: ನಾರ್ಯ ಗುತ್ತು ಕುವೆತ್ತಬೈಲು ಸಂತೋಷ್ ರೈ ಬೊಳ್ಯಾರು (11.83)
ಹಲಗೆ ಮುಟ್ಟಿದವರು: ಬೈಂದೂರು ಮಹೇಶ್ ಪೂಜಾರಿ
ಪ್ರಥಮ: ಕೊಳಕೆ ಇರ್ವತ್ತೂರು ಭಾಸ್ಕರ ಎಸ್. ಕೋಟ್ಯಾನ್ (11.41)
ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ
ದ್ವಿತೀಯ: ನಲ್ಲೂರು ಬಜಗೋಳಿ ಶಿವಪ್ರಸಾದ್ ನಿಲಯ ಪ್ರಾಣೇಶ್ ದಿನೇಶ್ ಭಂಡಾರಿ ‘ಎ’ (11.50)
ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ
ಪ್ರಥಮ: ಬೆಳುವಾಯಿ ಪೆರೋಡಿ ಪುತ್ತಿಗೆ ಗುತ್ತು ಕೌಶಿಕ್ ದಿನಕರ ಬಿ. ಶೆಟ್ಟಿ ‘ಬಿ’ (11.41)
ಓಡಿಸಿದವರು: ಮಂಗಲ್ಪಾಡಿ ರಕ್ಷಿತ್ ಶೆಟ್ಟಿ
ದ್ವಿತೀಯ: ಎರ್ಮಾಳ್ ಡಾ.ಚಿಂತನ್ ರೋಹಿತ್ ಹೆಗ್ಡೆ (11.62)
ಓಡಿಸಿದವರು: ಮಿಜಾರ್ ಅಶ್ವಥಪುರ ಶ್ರೀನಿವಾಸ ಗೌಡ
ಪ್ರಥಮ: ಎಂಬತ್ತು ಬಡಗಬೆಟ್ಟು ಕಲ್ಲಪಾಪು ಶ್ರೀಕರ ಸಂದೀಪ್ ಶೆಟ್ಟಿ (10.87)
ಓಡಿಸಿದವರು: ಕುಂದ ಬಾರಂದಡಿ ಮಾಸ್ತಿಕಟ್ಟೆ ಸ್ವರೂಪ್
ದ್ವಿತೀಯ: ಮಂಗಳೂರು ಮರಕಡ ಬಾಯಾಡಿ ಮನೆ ಶಾಂತ ಸಂಜಯ್ ಶೆಟ್ಟಿ ‘ಎ’ (11.44)
ಓಡಿಸಿದವರು: ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ
ಪ್ರಥಮ: ಎರ್ಮಾಳ್ ಪುಚ್ಚೊಟ್ಟು ಬೀಡು ಬಾಲಚಂದ್ರ ಲೋಕಯ್ಯ ಶೆಟ್ಟಿ ‘ಬಿ’ (11.56)
ಓಡಿಸಿದವರು: ಕಾವೂರುದೋಟ ಸುದರ್ಶನ್
ದ್ವಿತೀಯ: ಮೂಲ್ಕಿ ಚಿತ್ರಾಪು ಸಾನದಮನೆ ಅಂಬಿಕಾ ರವೀಂದ್ರ ಪೂಜಾರಿ (11.74)
ಓಡಿಸಿದವರು: ಬಾರಾಡಿ ನತೀಶ್ ಸಫಲಿಗ