
ಬೆಂಗಳೂರು (ಡಿ.31) ಬೆಂಗಳೂರಿನಲ್ಲಿ ಹೊಸ ವರ್ಷದ ಸಂಭ್ರಮ ಮುಗಿಲು ಮುಟ್ಟಿದೆ. ಹೊಸ ವರ್ಷವನ್ನು ಬರ ಮಾಡಿಕೊಳ್ಳಲು ಕೌಂಟ್‌ಡೌನ್ ಶುರುವಾಗಿದೆ. ಆದರೆ ಬೆಂಗಳೂರಿನ ಕೆಲ ಭಾಗದಲ್ಲಿ ಸಂಭ್ರಮಾಚರಣೆಯಲ್ಲಿದ್ದವರಿಗೆ ಮಳೆರಾಯ ಶಾಕ್ ಕೊಟ್ಟಿದ್ದಾನೆ. ಬೆಂಗಳೂರಿನ ಯಲಹಂಕ ಸುತ್ತ ಮುತ್ತ ಭಾರಿ ಮಳೆಯಾಗುತ್ತಿದೆ. ಕಳೆದ ಅರ್ಧಗಂಟೆಯಿಂದ ಯಲಂಕ ಹಾಗೂ ಸುತ್ತ ಮುತ್ತ ಭಾರಿ ಮಳೆಯಾಗುತ್ತಿದೆ. ಪರಿಣಾಮ ಬೆಂಗಳೂರಿನಲ್ಲಿ ಸಂಭ್ರಮಾಚರಣೆಗೆ ಸಜ್ಜಾಗಿದ್ದ ಹಲವರು ನಿರಾಸೆಗೊಂಡಿದ್ದಾರೆ.
ಯಲಹಂಕಾ ಹಾಗೂ ಸುತ್ತ ಮತ್ತಲಿನ ಪ್ರದೇಶಗಳಲ್ಲಿ ಕಳೆದ ಅರ್ಧ ಗಂಟೆಯಿಂದ ಸುರಿಯುತ್ತಿರುವ ಮಳೆಗೆ ಹೊಸ ವರ್ಷದ ಪಾರ್ಟಿ, ಸಂಭ್ರಮಾಚರಣೆ ಕಾರ್ಯಕ್ರಮಗಳು ಸ್ಥಗಿತಗೊಂಡಿದೆ. ಹಲವೆಡೆ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಹಾಕಿದ್ದ ಪೆಂಡಾಲ್, ಶಾಮಿಯಾನಗಳು ನೀರಿನಿಂದ ತುಂಬಿಕೊಂಡಿದೆ. ಭಾರಿ ಮಳೆಯಿಂದ ಹೊಸ ವರ್ಷ ಸಂಭ್ರಮಾಚರಣೆಗೆ ಅಡ್ಡಿಯಾಗಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಕಡೆ ಕಳೆದ ಕೆಲ ದಿನಗಳಿಂದ ಮೋಡ ಕವಿದ ವಾತಾವರಣವಿದೆ. ಚೆನ್ನೈ ಹಾಗೂ ತಮಿಳುನಾಡು ಕರಾವಳಿ ತೀರದಲ್ಲಿ ಮಳೆಯಾಗುತ್ತಿದೆ. ಇದರ ಪರಿಣಾಮ ಬೆಂಗಳೂರು ಸೇರಿದಂತೆ ರಾಜ್ಯದ ಮೇಲೂ ಆಗಿದೆ. ಹೀಗಾಗಿ ಅತೀವ ಚಳಿಯಿಂದ ಕೂಡಿದ್ದ ವಾತಾವರಣ ತಗ್ಗಿ, ಮೋಡ ಕವಿದ ವಾತಾವರಣವಾಗಿ ಮಾರ್ಪಟ್ಟಿತ್ತು. ಹವಾಮಾನ ಇಲಾಖೆ ಕೂಡ ಬೆಂಗಳೂರಿನಲ್ಲಿ ಮಳೆಯಾಗುವ ಕುರಿತು ಸೂಚನೆ ನೀಡಿತ್ತು. ಬೆಂಗಳೂರು ಸೇರಿದಂತೆ ಕೆಲೆವೆಡೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿತ್ತು.
ಬೆಂಗಳೂರಿನ ಎಂಜಿ ರಸ್ತೆ, ಬ್ರಿಗೇಡ್ ರಸ್ತೆಗಳಲ್ಲಿ ಹೊಸ ವರ್ಷದ ಸಂಭ್ರಮ ಜೋರಾಗಿದೆ. ಹೊಸ ವರ್ಷ ಬರಮಾಡಿಕೊಳ್ಳಲು ಹಲವರು ಸೇರಿದ್ದಾರೆ. ಪಾರ್ಟಿ, ಮ್ಯೂಸಿಕ್, ಸಂಭ್ರಮ ಮುಗಿಲು ಮುಟ್ಟಿದೆ. ಇತ್ತ ಬೆಂಗಳೂರು ಪೊಲೀಸರು ಭಾರಿ ಬಂದೋಬಸ್ತ್ ಮಾಡಿದ್ದಾರೆ. ಮಹಿಳಾ ಪೊಲೀಸ್ ಪಡೆ ಸೇರಿದಂತೆ ಹಲವು ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ. ಸಿಸಿಟಿವಿ ಅಳವಡಿಸಲಾಗಿದೆ. ಬ್ಯಾರಿಕೇಡ್ ಹಾಕಿ ಜನ ದಟ್ಟಣೆ ನಿರ್ವಹಣೆ ಮಾಡಲಾಗಿದೆ.