ನಿಗದಿತ ಸಾಮರ್ಥ್ಯ ಮೀರಿ ಪ್ರಯಾಣಿಕರ ಸಂಚಾರ, ಮಂಗಳೂರು ವಿಮಾನ ನಿಲ್ದಾಣದ ವಿಸ್ತರಣೆ ಕಾಮಗಾರಿಗೆ ಶಿಲಾನ್ಯಾಸ

Published : Nov 13, 2026, 05:04 PM IST
Mangaluru International Airport Terminal Expansion

ಸಾರಾಂಶ

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಟರ್ಮಿನಲ್ ವಿಸ್ತರಣೆಗೆ ಶಿಲಾನ್ಯಾಸ ನೆರವೇರಿಸಲಾಗಿದೆ. 2029ರ ವೇಳೆಗೆ 52 ಲಕ್ಷ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದುವ ಗುರಿ ಇದೆ.

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಸಮಗ್ರ ಟರ್ಮಿನಲ್ ವಿಸ್ತರಣಾ ಕಾಮಗಾರಿಗೆ ಬುಧವಾರ ಶಿಲಾನ್ಯಾಸ ನೆರವೇರಿಸಲಾಯಿತು. ಪ್ರಸಕ್ತ ವಾರ್ಷಿಕ 25 ಲಕ್ಷ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯವನ್ನು 52 ಲಕ್ಷಕ್ಕೆ ಹೆಚ್ಚಿಸುವ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದ್ದು, 2029ರ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

ವಿಮಾನ ನಿಲ್ದಾಣದ ಈಗಿನ 48,574 ಚದರ ಮೀಟರ್ ವಿಸ್ತೀರ್ಣದ ಟರ್ಮಿನಲ್ ಅನ್ನು ವಾರ್ಷಿಕ 20 ಲಕ್ಷ ಪ್ರಯಾಣಿಕರನ್ನು ನಿರ್ವಹಿಸುವ ಉದ್ದೇಶದಿಂದ ವಿನ್ಯಾಸಗೊಳಿಸಲಾಗಿತ್ತು. ಆದರೆ 2025-26ನೇ ಆರ್ಥಿಕ ವರ್ಷದಲ್ಲಿ 25.5 ಲಕ್ಷ ಪ್ರಯಾಣಿಕರು ವಿಮಾನ ನಿಲ್ದಾಣವನ್ನು ಬಳಸಿದ್ದು, ನಿಗದಿತ ಸಾಮರ್ಥ್ಯವನ್ನು ಮೀರಿ ಪ್ರಯಾಣಿಕರ ಸಂಚಾರ ದಾಖಲಾಗಿದೆ.

ಕಳೆದ ಮೂರು ವರ್ಷಗಳಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ.42ರಷ್ಟು ಏರಿಕೆಯಾಗಿದೆ. ವಾರ್ಷಿಕ ಪ್ರಯಾಣಿಕರ ಸಂಚಾರದಲ್ಲಿ ಸರಾಸರಿ ಶೇ.9ರಷ್ಟು ಬೆಳವಣಿಗೆಯಾಗುವ ನಿರೀಕ್ಷೆಯಿದ್ದು, 2030-31ರ ವೇಳೆಗೆ 40 ಲಕ್ಷದ ಗಡಿ ದಾಟುವ ಅಂದಾಜಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಈಗಿನ ಟರ್ಮಿನಲ್‌ನ ಪೂರ್ವ ಭಾಗದಲ್ಲಿ ಹೆಚ್ಚುವರಿಯಾಗಿ 27,100 ಚದರ ಮೀಟರ್ ವಿಸ್ತೀರ್ಣದ ಕಟ್ಟಡ ನಿರ್ಮಿಸಲಾಗುವುದು. ಚೆಕ್‌ಇನ್, ಭದ್ರತಾ ತಪಾಸಣೆ, ವಲಸೆ ವಿಭಾಗ, ಲಗೇಜ್ ನಿರ್ವಹಣೆ, ಆಗಮನ ಮತ್ತು ನಿರ್ಗಮನ ವಿಭಾಗಗಳಲ್ಲಿ ಹೆಚ್ಚುವರಿ ಸೌಲಭ್ಯಗಳನ್ನು ಕಲ್ಪಿಸಲಾಗುವುದು.

ವಿಸ್ತರಣಾ ಯೋಜನೆಯಡಿ ಪ್ರಯಾಣಿಕರಿಗೆ ಆಧುನಿಕ ತಂತ್ರಜ್ಞಾನ ಆಧಾರಿತ ಸೇವೆಗಳು, ಸುಧಾರಿತ ಮೂಲಸೌಕರ್ಯ ಮತ್ತು ಹೆಚ್ಚಿನ ಅನುಕೂಲಗಳನ್ನು ಕಲ್ಪಿಸಲಾಗುತ್ತದೆ. ಇದರಿಂದ ವಿಮಾನ ನಿಲ್ದಾಣವು ಕೇವಲ ಪ್ರಯಾಣಿಕರ ಸಂಚಾರ ಕೇಂದ್ರವಾಗಿರದೆ ಸ್ಥಳೀಯರಿಗೂ ಮನರಂಜನೆ ಮತ್ತು ಸಾರ್ವಜನಿಕ ಚಟುವಟಿಕೆಗಳ ತಾಣವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇನ್ನೂ ಮೂರು ತಿಂಗಳು ವಿಮಾನ ಹಾರಾಟ ಇಲ್ಲ

ಶಿವಮೊಗ್ಗ: ಉಡಾನ್ ಯೋಜನೆ ಮುಕ್ತಾಯವಾಗಿರುವ ಹಿನ್ನೆಲೆಯಲ್ಲಿ ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣದಲ್ಲಿ ಮುಂದಿನ ಮೂರು ತಿಂಗಳ ಕಾಲ ವಿಮಾನ ಹಾರಾಟ ಇರುವುದಿಲ್ಲ ಎಂದು ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ನಂಜಯ್ಯನಮಠ್ ಸ್ಪಷ್ಟನೆ ನೀಡಿದರು. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, 2026ಕ್ಕೆ ಉಡಾನ್ ಯೋಜನೆ ಮುಗಿಯಲಿದ್ದು, ನ.21ರಿಂದ ವಿಮಾನ ಹಾರಾಟ ನಿಲ್ಲಲಿದೆ ಎಂದರು.

ಉಡಾನ್ ಯೋಜನೆಯನ್ನು ಮುಂದುವರಿಸುವಂತೆ ರಾಜ್ಯದ ಅಧಿಕಾರಿಗಳು ದೆಹಲಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ದೆಹಲಿಗೆ ಹೋಗಿ ವಿನಂತಿ ಮಾಡಿಕೊಂಡಿದ್ದೇನೆ ಎಂದ ಅವರು, ಇದರಿಂದ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಪುನಃ ವಿಮಾನ ಪ್ರಾರಂಭವಾಗಬೇಕಾದರೆ ಅಂದಾಜು ಕನಿಷ್ಠ ಮೂರು ತಿಂಗಳು ಬೇಕಾಗುತ್ತದೆ. ವಿಮಾನ ನಿಲ್ದಾಣವನ್ನು ಮತ್ತೆ ಸುಸ್ಥಿತಿಗೆ ತರಲು ಎಲ್ಲಾ ರೀತಿಯಿಂದ ಪ್ರಯತ್ನಿಸಲಾಗುತ್ತಿದೆ ಎಂದರು.

ಕೆಎಸ್‌ಐಐಡಿಸಿ ವತಿಯಿಂದ ಶಿವಮೊಗ್ಗದಿಂದ 13 ಮಾರ್ಗಗಳ ವಿಮಾನ ಹಾರಾಟಕ್ಕೆ ವಿನಂತಿಸಿಕೊಂಡಿದ್ದೇವೆ. ಶಿವಮೊಗ್ಗ- ಬೆಂಗಳೂರು, ಹೈದರಾಬಾದ್, ಗೋವಾ, ತಿರುಪತಿ, ಮುಂಬೈ, ಪುಣೆ, ಮೈಸೂರು, ಸೂರತ್, ಕೊಲ್ಲಾಪುರ, ಕೊಚ್ಚಿ, ಮಂಗಳೂರು, ಅಹಮದಾಬಾದ್, ಚೆನ್ನೈ ಸೇರಿದಂತೆ ಇತರೆ ಮಾರ್ಗಗಳಿಗೆ ಮನವಿ ಮಾಡಲಾಗಿದೆ ಎಂದರು.

ಸಂಸದರ ಜತೆ ಚರ್ಚೆ:

ವಿಮಾನಯಾನ ಪ್ರಾರಂಭಿಸಲು ಸಂಸದ ರಾಘವೇಂದ್ರ ಅವರನ್ನು ನಾನು ಸಂಪರ್ಕ ಮಾಡಿದ್ದೇನೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಈ ವಿಚಾರವನ್ನು ಅವರ ಪ್ರಯತ್ನಕ್ಕೆ ಬಿಡಲಾಗಿದೆ. ಉಡಾನ್ ಯೋಜನೆ ಜಾರಿ ಮಾಡಲು ವಿನಂತಿಸಿಕೊಂಡಿದ್ದೇನೆ ಎಂದು ಹೇಳಿದರು.

ನೈಟ್ ಲ್ಯಾಂಡಿಂಗ್ ಸಂಬಂಧ ಈಗಾಗಲೇ ಶೇ.95ರಷ್ಟು ಕಾಮಗಾರಿ ಮುಗಿದಿದೆ. ಇದರಿಂದ ಡಿಜಿಸಿಎ ಅವರು ಬಂದು ನೋಡಿ, ಅವರದ್ದೇ ಆದ ವಿಮಾನದ ಮೂಲಕ ಪರೀಕ್ಷೆ ನಡೆಸಿದ ನಂತರ ವರದಿ ನೀಡುತ್ತಾರೆ. ಅವರು ಕೊಟ್ಟ ಸರ್ಟಿಫಿಕೇಟ್ ಬಳಿಕ ಲ್ಯಾಂಡಿಂಗ್‌ಗೆ ಅವಕಾಶ ನೀಡಲಾಗುತ್ತದೆ ಎಂದರು.

ರಾಜ್ಯ ಸರ್ಕಾರಕ್ಕೆ ಮನವಿ:

ಇದೇ ವೇಳೆ, ಬೆಂಗಳೂರು-ಶಿವಮೊಗ್ಗ ವಿಮಾನ ಹಾರಾಟವು ರಾಜ್ಯ ಸರ್ಕಾರ ವಿಜಿಎಫ್ ಯೋಜನೆಯಡಿ ಬರುತ್ತಿತ್ತು. ಇದಕ್ಕೆ ಹಣ ನೀಡಲು ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ಶಿವಮೊಗ್ಗ ಏರ್ ಪೋರ್ಟ್ ನಿರ್ದೇಶಕ ಶಂಮತ್, ಕೆಎಸ್‌ಐಐಡಿಸಿ ಡಿವೈಎಸ್‌ಪಿ ಚಂದ್ರಶೇಖರ್ ಹಾಜರಿದ್ದರು

PREV
Read more Articles on
click me!

Recommended Stories

ಕಾಸ್ಮೋಸ್‌ ಮೈಸೂರು ಪ್ಲಾನಿಟೋರಿಯಂ ಉದ್ಘಾಟಿಸಿದ ಪ್ರಧಾನಿ ಮೋದಿ, ಭಾರತದ ಮೊದಲ ಟಿಲ್ಟೆಡ್‌ ಎಲ್‌ಇಡಿ ತಾರಾಲಯದ ವಿಶೇಷತೆಯೇನು?
ಕರುನಾಡ ಜನತೆಗೆ ಗುಡ್​ನ್ಯೂಸ್​: ರಾಜ್ಯದ ಅತಿ ದೊಡ್ಡ ‘ಭಾರತ ವನ'ಕ್ಕೆ ಸಚಿವೆ ನಿರ್ಮಲಾ ಸೀತಾರಾಮನ್​ ಚಾಲನೆ- ಏನಿದು ಯೋಜನೆ