Mangaluru: 'ಈ ಪುಣ್ಯವೇ ನಮ್ಮನ್ನು ಉಳಿಸಿತು'; ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್

Published : Nov 18, 2026, 02:33 PM IST
Nalinkumar Kateel, Former MP

ಸಾರಾಂಶ

ಮಂಗಳೂರಿನಿಂದ ಬೆಂಗಳೂರಿಗೆ ಹೊರಟಿದ್ದ ಇಂಡಿಗೋ ವಿಮಾನ ಟೇಕಾಫ್ ಆಗುವಾಗ ತಾಂತ್ರಿಕ ಸಮಸ್ಯೆಯಿಂದ ಬೆಂಕಿ ಕಾಣಿಸಿಕೊಂಡಿದೆ. ಪೈಲಟ್‌ನ ಸಮಯಪ್ರಜ್ಞೆಯಿಂದ 229 ಪ್ರಯಾಣಿಕರು ಮತ್ತು 7 ಸಿಬ್ಬಂದಿ ಪಾರಾಗಿದ್ದಾರೆ. ವಿಮಾನದಲ್ಲಿ ಹಲವು ಗಣ್ಯರು ಪ್ರಯಾಣಿಸುತ್ತಿದ್ದರು.

ಮಂಗಳೂರು: ಮಂಗಳೂರಿನಿಂದ ಬೆಂಗಳೂರಿಗೆ ಹೊರಟಿದ್ದ 229 ಪ್ರಯಾಣಿಕರು ಹಾಗೂ ಏಳು ಮಂದಿ ಸಿಬ್ಬಂದಿ ಇದ್ದ ಇಂಡಿಗೋ ವಿಮಾನ ಸೋಮವಾರ ಸಂಜೆ ಟೇಕಾಫ್‌ಗೆ ಸಿದ್ಧವಾಗುತ್ತಿದ್ದಂತೆ ಏಕಾಏಕಿ ತಾಂತ್ರಿಕ ಸಮಸ್ಯೆ ಕಾಣಿಸಿದ ಹಿನ್ನೆಲೆಯಲ್ಲಿ ಸಮಯಪ್ರಜ್ಞೆ ಮೆರೆದ ಪೈಲಟ್ ತುರ್ತು ಬ್ರೇಕ್ ಹಾಕಿ ಪ್ರಯಾಣಿಕರ ಜೀವರಕ್ಷಿಸಿದ ಘಟನೆ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಕೈಹಿಡಿದ ಅದೃಷ್ಟ; ತಾಂತ್ರಿಕ ಸಮಸ್ಯೆಯಿಂದ ವಿಮಾನದ ಟೇಕಾಫ್ ಸ್ಥಗಿತ

ಬೆಂಗಳೂರಿಗೆ ಹೊರಟ ವಿಮಾನ ಸಂಜೆ 6.05ಕ್ಕೆ ರನ್‌ವೇನಲ್ಲಿ ವೇಗ ಪಡೆದುಕೊಳ್ಳುತ್ತಿತ್ತು. ಟೇಕಾಫ್‌ಗೆ ಇನ್ನು ಕೇವಲ 100 ಮೀಟರ್ ಅಂತರ ಇರುವಾಗ ವಿಮಾನದ ತಳಭಾಗದಲ್ಲಿ ಬೆಂಕಿಯ ಕಿಡಿ ಕಾಣಿಸಿತ್ತು. ಇದನ್ನು ಗಮನಿಸಿದ ಪೈಲಟ್ ತಕ್ಷಣ ತುರ್ತು ಬ್ರೇಕ್ ಹಾಕಿ ವಿಮಾನವನ್ನು ನಿಲ್ಲಿಸಿದ್ದಾರೆ. ಈ ಸಂದರ್ಭ ವಿಮಾನದ ಒಂದು ಚಕ್ರ ಒಡೆದಿರುವುದಾಗಿ ತಿಳಿದುಬಂದಿದೆ. ಈ ದಿಢೀರ್ ದೋಷ ಕಾಣಿಸಿದ ಹಿನ್ನೆಲೆಯಲ್ಲಿ ವಿಮಾನದ ಟೇಕಾಫ್ ಸ್ಥಗಿತಗೊಳಿಸಿದ ಪೈಲಟ್‌ನ ಸಮಯಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದಂತಾಗಿದೆ. ವಿಮಾನದ ಕೆಳಭಾಗದಲ್ಲಿ ಹಠಾತ್ ಬೆಂಕಿ ಕಾಣಿಸಿರುವುದನ್ನು ಪ್ರಯಾಣಿಕರೊಬ್ಬರು ವಿಡಿಯೋ ಮಾಡಿರುವುದು ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಪೈಲಟ್ ಸಮಯಪ್ರಜ್ಞೆ, ಪ್ರಯಾಣಿಕರು ಪಾರು

ಬಳಿಕ ವಿಮಾನವನ್ನು ಮರಳಿ ನಿಲ್ದಾಣದ 'ಬೇ' ಗೆ ತಂದು ನಿಲ್ಲಿಸಿದ್ದು, ಅದರಲ್ಲಿದ್ದ ಎಲ್ಲ ಪ್ರಯಾಣಿಕರು ಹಾಗೂ ಸಿಬ್ಬಂದಿಯನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ. ಈ ಸಂದರ್ಭದಲ್ಲಿ ವಿಮಾನ ನಿಲ್ದಾಣ ಹಾಗೂ ವಿಮಾನಯಾನ ಸಂಸ್ಥೆಯ ಸಿಬ್ಬಂದಿ ಸ್ಥಳದಲ್ಲಿದ್ದು, ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿದರು. ಬಳಿಕ ಇಂಡಿಗೋ ಸಂಸ್ಥೆ ಬೆಂಗಳೂರಿನಿಂದ ಮಂಗಳೂರಿಗೆ ಇನ್ನೊಂದು ವಿಮಾನ ತರಿಸಿಕೊಂಡು ತಡರಾತ್ರಿ 12.10 ಗಂಟೆ ಸುಮಾರಿಗೆ ಪ್ರಯಾಣಿಕರನ್ನು ಬೆಂಗಳೂರಿಗೆ ಕಳುಹಿಸುವ ವ್ಯವಸ್ಥೆ ಮಾಡಿತು. ಈ ವೇಳೆ ವಿಮಾನದಲ್ಲಿದ್ದ 229 ಪ್ರಯಾಣಿಕರ ಪೈಕಿ 34 ಮಂದಿ ಮಾತ್ರ ಬದಲಿ ವಿಮಾನದಲ್ಲಿ ಪ್ರಯಾಣಿಸಿದ್ದಾರೆ.

ವಿಮಾನ ಟೇಕಾಫ್ ಆಗಿರಲಿಲ್ಲ. ಬ್ರೇಕ್ ಹಾಕಿದ ಬಳಿಕ ವಿಮಾನದ ಸಹಜ ವೇಗದ ಚಲನೆಯಿಂದ ರನ್‌ವೇಯಲ್ಲಿ ಇನ್ನಷ್ಟು ದೂರ ಸಾಗುವ ಸಾಧ್ಯತೆಯಿತ್ತು. ಸಾಮಾನ್ಯವಾಗಿ ವಿಮಾನಗಳು ಟೇಕಾಫ್ ಆಗುವಾಗ 2,330 ಮೀಟರ್‌ ಉದ್ದದ ರನ್ ವೇಯ ಕನಿಷ್ಠ ಶೇ.50ರಷ್ಟು ಭಾಗ ಇನ್ನೂ ಬಾಕಿ ಇರುತ್ತದೆ. ಟೇಕಾಫ್‌ಗೆ ಸಂಪೂರ್ಣ ರನ್‌ವೇಯನ್ನು ಯಾವುದೇ ವಿಮಾನ ಬಳಸುವುದಿಲ್ಲ ಎಂದು ಮೂಲಗಳು ವಿವರಿಸಿವೆ.

ಗಣ್ಯರಿದ್ದ ವಿಮಾನ

ಈ ವಿಮಾನದಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕಿ ಮಂಜುಳಾ, ಮಾಜಿ ಸಚಿವ ಅರವಿಂದ ಲಿಂಬಾವಳಿ, ಹೈಕೋರ್ಟ್ ನ್ಯಾಯಾಧೀಶ ರಾಜೇಶ್ ರೈ ಸೇರಿದಂತೆ ಹಲವು ಗಣ್ಯರು ಇದ್ದರು. ಅಲ್ಲದೆ ಬೆಂಗಳೂರಿನಿಂದ ವಿದೇಶಕ್ಕೆ ತೆರಳಬೇಕಿದ್ದ ಪ್ರಯಾಣಿಕರೂ ವಿಮಾನದಲ್ಲಿದ್ದರು. ಈ ವಿಮಾನದಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ವಿಮಾನದ ತುರ್ತು ನಿರ್ಗಮನ ದ್ವಾರದ ಬಳಿ ಆಸೀನರಾಗಿದ್ದರು. ಈ ಅವಘಡ ಬಗ್ಗೆ ಅವರು ತಮ್ಮ ಆಪ್ತರಲ್ಲಿ, ನೂರಾರು ದೇವಸ್ಥಾನಗಳ ಬ್ರಹ್ಮಕಲಶ ನಡೆಸಿದ ಪುಣ್ಯ ಕಾರ್ಯದಲ್ಲಿ ಭಾಗಿಯಾದ ಪುಣ್ಯವೇ ನಮ್ಮನ್ನು ಉಳಿಸಿತು ಎಂದು ಹೇಳಿಕೊಂಡಿದ್ದಾರೆ. ನಳಿನ್ ಕುಮಾರ್ ಬಳಿಕ ತಮ್ಮ ಪ್ರಯಾಣವನ್ನು ರದ್ದುಗೊಳಿಸಿದರು.

ಟೇಕಾಫ್‌ಗೆ ಕೆಲವೇ ಕ್ಷಣಗಳಿರುವಾಗ ವಿಮಾನವನ್ನು ನಿಲ್ಲಿಸಿದ ಪೈಲಟ್‌ನ ಸಮಯಪ್ರಜ್ಞೆಗೆ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಘಟನೆಯಿಂದ ಕೆಲವು ಕಾಲ ವಿಮಾನದಲ್ಲಿ ಆತಂಕದ ವಾತಾವರಣ ಉಂಟಾಗಿತ್ತು.

ವಿಮಾನಯಾನ ಸಂಸ್ಥೆಯ ಎಂಜಿನಿಯರಿಂಗ್ ತಂಡ ಸುದೀರ್ಘ ತಾಂತ್ರಿಕ ತಪಾಸಣೆ ನಡೆಸಿದ ಬಳಿಕ ವಿಮಾನವನ್ನು 'ಏರ್‌ಕ್ರಾಫ್ಟ್ ಆನ್ ಗ್ರೌಂಡ್' ಎಂದು ಘೋಷಿಸಿದೆ. ಅಂದರೆ, ತಾಂತ್ರಿಕ ಪರಿಶೀಲನೆ ಪೂರ್ಣಗೊಳ್ಳುವವರೆಗೆ ವಿಮಾನ ಹಾರಾಟಕ್ಕೆ ಬಳಸುವಂತಿಲ್ಲ ಎಂದು ತಿಳಿಸಲಾಗಿದೆ.

ಟೇಕಾಫ್ ಸ್ಥಗಿತಗೊಳಿಸಲು ನಿಖರ ಕಾರಣ ವಿಮಾನಯಾನ ಸಂಸ್ಥೆಯೇ ಅಧಿಕೃತವಾಗಿ ದೃಢಪಡಿಸಬೇಕಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.

30 ಸೆಕೆಂಡುಗಳಲ್ಲಿ ವಿಮಾನ ನಿಯಂತ್ರಣ: ಪ್ರತ್ಯಕ್ಷದರ್ಶಿ

ಬೆಂಗಳೂರಿಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿದ್ದ ಪ್ರಯಾಣಿಕ ಶಮಾವುನ್ ಯಾಕೂಬ್ ಅವರು ಘಟನೆಯ ಭೀಕರ ಕ್ಷಣ ಹಾಗೂ ತಮ್ಮ ಅನುಭವವನ್ನು ಮಾಧ್ಯಮಗಳಿಗೆ ಹಂಚಿಕೊಂಡಿದ್ದಾರೆ. 'ವಿಮಾನ ರನ್ ವೇನಲ್ಲಿ 200 ಕಿ.ಮೀ. ನಷ್ಟು ವೇಗದಲ್ಲಿ ಸಾಗುತ್ತಿತ್ತು. ಅಷ್ಟರಲ್ಲಿ ವಿಮಾನದ ಎಡಭಾಗದಲ್ಲಿ ಇಂಜಿನ್ ಕಡೆಯಿಂದ ಬೆಂಕಿ ಕಾಣಿಸಿತ್ತು. ಇದನ್ನು ಗಮನಿಸಿದ ಪೈಲಟ್ ಕೂಡಲೇ ತುರ್ತು ಬ್ರೇಕ್ ಹಾಕಿ ಕೇವಲ 30 ಸೆಕೆಂಡುಗಳಲ್ಲಿ ವಿಮಾನವನ್ನು ನಿಲ್ಲಿಸಿ ಸಮಯ ಪ್ರಜ್ಞೆ ಮೆರೆದಿದ್ದಾರೆ. ಈ ಸಂದರ್ಭ ನಾವು ಬಹಳಷ್ಟು ಆತಂಕಕ್ಕೆ ಒಳಗಾಗಿದ್ದೆವು. ಸುಮಾರು ಒಂದೂವರೆ ಗಂಟೆಗಳ ಕಾಲ ನಾವು ವಿಮಾನದೊಳಗೆ ಇದ್ದೆವು. ಪೈಲಟ್ ಸಮಯಪ್ರಜ್ಞೆಯಿಂದ ಏನು ಆಗದೆ ಪಾರಾಗಿದ್ದೇವೆ. ಎಲ್ಲವೂ ದೇವರ ದಯೆ' ಎಂದಿದ್ದಾರೆ.

PREV
Read more Articles on
click me!

Recommended Stories

ಉತ್ತರ ಕರ್ನಾಟಕ ಸಮಸ್ಯೆಗಳನ್ನು ಬಗೆಹರಿಸದ ಸರ್ಕಾರದ ಸೌಲಭ್ಯಗಳನ್ನೇ ತಿರಸ್ಕರಿಸಿದ ಶಾಸಕ ಶರಣುಗೌಡ ಕಂದಕೂರು!
ಗುಂಡ್ಲುಪೇಟೆ ದೇವಾಲಯದ ಎದುರು ಗೋಮಾಂಸ ಎಸೆದವರಾರು? ಸಿಸಿಟಿವಿಯಲ್ಲಿ ಬಯಲಾಯ್ತು ಭಯಾನಕ ಸತ್ಯ