
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೆಲೆಗೊಂಡಿರುವ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸುರಕ್ಷತೆ ದೃಷ್ಟಿಯಿಂದ ರನ್ ವೇ ವಿಸ್ತರಣೆ ಅಗತ್ಯವಾಗಿದೆ. ಶೀಘ್ರದಲ್ಲೇ 45 ಎಕರೆ ಭೂಮಿಯನ್ನು ವಶಕ್ಕೆ ಪಡೆದು ವಿಸ್ತರಣೆ ಕಾರ್ಯ ನಡೆಯಲಿದೆ ಎಂದು ದ.ಕ. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದರು. ಮಂಗಳೂರು ಕೆನರಾ ಕೈಗಾರಿಕಾ ವಾಣಿಜ್ಯ ಸಂಸ್ಥೆ ಹಮ್ಮಿಕೊಂಡ 'ಎಲಿವೇಟ್ ಬ್ಯಾಂಡ್ ಮಂಗಳೂರು ಅನ್ನು ಸೋಮವಾರ ಅನಾವರಣಗೊಳಿಸಿ ಅವರು ಮಾತನಾಡಿದರು. ಮಂಗಳೂರು ವಿಮಾನ ನಿಲ್ದಾಣಕ್ಕೆ ಪಾಯಿಂಟ್ ಆಫ್ ಕಾಲ್ ಮಾನ್ಯತೆ ಒದಗಿಸಲು ವಿಮಾನಯಾನ ಸಚಿವಾಲಯದೊಂದಿಗೆ ಸಂಪರ್ಕದಲ್ಲಿದ್ದೇನೆ. ಪ್ರಯಾಣಿಕರ ಬೇಡಿಕೆ ಹೆಚ್ಚಿದ್ದರೆ ಹೊಸ ತಾಣಗಳಿಗೆ ವಿಮಾನ ಯಾನ ಸಾಧ್ಯ. ಆದರೆ ವೈಡ್ ಬಾಡಿ ಏರ್ ಕ್ರಾಫ್ಟ್ ಚಾಲನೆಗೆ ಇನ್ನಷ್ಟು ಕಾಲ ಬೇಕು ಎಂದರು. ಹೊರಗಿನಿಂದ ಇಲ್ಲಿಗೆ ಹೊಸ ಹೂಡಿಕೆಗಳನ್ನು ಆಕರ್ಷಿಸುವುದಕ್ಕಿಂತ ಮಂಗಳೂರು ಮೂಲದವರೇ ಇಲ್ಲಿಗೆ ಮರಳಿ ಅಭಿವೃದ್ಧಿ ಕೈಗೊಳ್ಳುವುದು ಸುಲಭ. ಇದಕ್ಕಾಗಿ 'ಬೊಲ್ಪು ' ಹಾಗೂ 'ಬ್ಯಾಕ್ ಟು ಊರು' ಎನ್ನುವ ಪರಿಕಲ್ಪನೆಯಡಿ ಯೋಜನೆ ರೂಪಿಸಲಾಗಿದೆ ಎಂದರು.
ಮಂಗಳೂರು ಎನ್ನುವುದು ಸಾಧ್ಯತೆಗಳ ಸಾಗರ. ಮಂಗಳೂರಿಗೆ ಹೊರಗಿನಿಂದ ಹೊಸ ಹೂಡಿಕೆಗಳನ್ನು ಆಹ್ವಾನಿಸುವುದು ಕಷ್ಟ, ಮಂಗಳೂರಿನವರೇ ಇಲ್ಲಿಗೆ ಮರಳಿ ಅಭಿವೃದ್ಧಿಗೆ ಕೊಡುಗೆ ನೀಡುವುದು ಸುಲಭ. ಇದಕ್ಕಾಗಿಯೇ ಬೊಲ್ಪು ಹಾಗೂ ಬ್ಯಾಕ್ ಟು ಊರು ಎನ್ನುವ ಯೋಜನೆ ರೂಪಿಸಲಾಗಿದೆ ಎಂದು ಸಂಸದರು ಹೇಳಿದರು.
ಸುರತ್ಕಲ್-ಬಿ.ಸಿ.ರೋಡ್ ಚತುಷ್ಪಥ ರಸ್ತೆ ಇನ್ನೂ ರಾಷ್ಟ್ರೀಯ ಹೆದ್ದಾರಿ ಲಾಜಿಸ್ಟಿಕ್ಸ್ ವಿಭಾಗದ ಅಧೀನವಿರುವುದು ನಿರ್ವಹಣೆಗೆ ಅಡ್ಡಿಯಾಗಿದೆ, ಇದನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರಿಸುವ ಬಗ್ಗೆ ಸಚಿವ ನಿತಿನ್ ಗಡ್ಕರಿ ಜತೆಗೆ ಮಾತುಕತೆ ನಡೆಸಿದ್ದು, ಅದು ಫಲಪ್ರದವಾಗುವ ನಿರೀಕ್ಷೆ ಇದೆ ಎಂದು ಸಂಸದ ಚೌಟ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕೆಸಿಸಿಐ ಅಧ್ಯಕ್ಷ ಆನಂದ್ ಜಿ. ಪೈ ಮಾತನಾಡಿ, ದೇಶದ ಪ್ರಗತಿಗೆ ನಮ್ಮ ಮಂಗಳೂರು ದೊಡ್ಡ ಕೊಡುಗೆ ನೀಡಲು ಸಾಧ್ಯವಿದೆ. ಸುಸ್ಥಿರ ಅಭಿವೃದ್ಧಿಯ ದೃಷ್ಟಿಕೋನದೊಂದಿಗೆ ನಮ್ಮ ಸಂಸ್ಕೃತಿ-ಪರಂಪರೆಯ ಒಟ್ಟು ಯೋಜನೆಯೊಂದಿಗೆ ಸಾಗಬೇಕು ಎಂದರು. ಕೆಸಿಸಿಐ ಮಾಜಿ ಅಧ್ಯಕ್ಷ ಗಣೇಶ್ ಕಾಮತ್ ಸಂವಾದ ನಿರೂಪಿಸಿದರು. ನಿರ್ದೇಶಕಿ ಆತ್ಮಿಕಾ ಅಮೀನ್ 'ಎಲಿವೇಟ್ ಬ್ಯಾಂಡ್ ಮಂಗಳೂರು' ಬಗ್ಗೆ ವಿವರಿಸಿದರು.
ದೇಶದಲ್ಲಿ ಯುವಜನತೆಯನ್ನು ಅಡ್ಡದಾರಿಗೆ ಎಳೆಯುತ್ತಿರುವ ಬೆಟ್ಟಿಂಗ್, ಮನಿ ಗೇಮ್ಸ್ ಸೇರಿದಂತೆ ಹಣಕಾಸು ಆಧಾರಿತ ಎಲ್ಲ ಆನ್‌ಲೈನ್ ಮನಿ ಗೇಮಿಂಗ್ಸ್ ನಿಷೇಧಿಸುವುದಕ್ಕೆ ಹೊರ ತಂದಿರುವ ‘ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಮಸೂದೆ- 2025ʼನ್ನು ಸಂಸತ್ತು ಅಂಗೀಕರಿಸಿದೆ. ಆ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಯುವ ಸಮುದಾಯದ ಹಿತಕಾಪಾಡುವಲ್ಲಿ ದಿಟ್ಟ ನಿರ್ಧಾರ ಕೈಗೊಂಡಿರುವುದು ಸ್ವಾಗತಾರ್ಹ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ.
ಆನ್ ಲೈನ್ ಮನಿ ಗೇಮಿಂಗ್ ಜಾಲದೊಳಗೆ ಸಿಲುಕಿಕೊಂಡ ಸಾವಿರಾರು ಅಮಾಯಕರ ಬದುಕು ಬೀದಿಗೆ ಬಂದಿದೆ. ಪ್ರತಿನಿತ್ಯವೂ ಜನರು ಆನ್‌ಲೈನ್ ಗೇಮಿಂಗ್ ದುಷ್ಪಟಕ್ಕೆ ಬಲಿಯಾಗಿ ಹಣದ ಜತೆಗೆ ನೆಮ್ಮದಿಯನ್ನೂ ಕಳೆದುಕೊಂಡು ಒದ್ದಾಡುವ ಅತ್ಯಂತ ದಯನೀಯ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಆನ್‌ಲೈನ್ ಜೂಜಾಟ, ಗೇಮಿಂಗ್ಸ್ ಗಂಭೀರತೆಯನ್ನು ಅರಿತು ಅವುಗಳನ್ನು ಸಂಪೂರ್ಣವಾಗಿ ನಿಷೇಧಿಸುವುದಕ್ಕೆ ಕೇಂದ್ರ ಸರ್ಕಾರವು ಪ್ರತ್ಯೇಕ ಕಾಯ್ದೆಯನ್ನು ಜಾರಿಗೆ ತಂದಿರುವುದು ಅತ್ಯಂತ ಸಮಯೋಚಿತ ಹಾಗೂ ತುರ್ತು ಅಗತ್ಯವಾಗಿದೆ ಎಂದಿದ್ದಾರೆ.