
ಬೆಂಗಳೂರು (ಆ.26): ಬೆಂಗಳೂರಿನ ರಸ್ತೆ ಗುಂಡಿಗಳ ಸಮಸ್ಯೆ ದಿನೇ ದಿನೇ ಉಲ್ಬಣಗೊಳ್ಳುತ್ತಿದೆ. ಇದಕ್ಕೆ ಪೂರಕವಾಗಿ ಹೊಸ ಡೇಟಾಗಳು ಬೆಂಗಳೂರಿನ ಗುಂಡಿಗಳ ಪರಿಸ್ಥಿತಿಯನ್ನು ತಿಳಿಸಿವೆ. ಸರ್ಕಾರ ವಿಧಾನ ಪರಿಷತ್ತಿನಲ್ಲಿ ಮಂಡಿಸಿದ ಬಿಬಿಎಂಪಿ ಡೇಟಾ ಪ್ರಕಾರ, 2023-24ರಲ್ಲಿ ಬಿಬಿಎಂಪಿ 1.07 ಲಕ್ಷ ಚದರ ಮೀಟರ್ ಗುಂಡಿಗಳನ್ನು ಮುಚ್ಚಿದೆ. ಆದರೆ 2024-25ರಲ್ಲಿ ಈ ವಿಸ್ತೀರ್ಣ 1.78 ಲಕ್ಷ ಚದರ ಮೀಟರ್‌ಗೆ ಏರಿತು, ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 63 ರಷ್ಟು ಹೆಚ್ಚಳವಾಗಿದೆ, ಇದು ವರ್ಷದಿಂದ ವರ್ಷಕ್ಕೆ ಗುಂಡಿಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಸೂಚಿಸುತ್ತದೆ.
ಹೆಚ್ಚುತ್ತಿರುವ ಈ ಗುಂಡಿಗಳನ್ನು ಮುಚ್ಚಲು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 2024-25ರಲ್ಲಿ 12.25 ಕೋಟಿ ರೂ.ಗಳನ್ನು ಖರ್ಚು ಮಾಡಿದೆ, ಇದು 2023-24ರಲ್ಲಿ 7 ಕೋಟಿ ರೂ.ಗಳಿಂದ ಹೆಚ್ಚಾಗಿದೆ. ಆದರೆ, ಪ್ರಯಾಣಿಕರು ಆಗಿರುವ ಕಾಮಗಾರಿಯನ್ನು ತಿರಸ್ಕರಿಸಿದ್ದಾರೆ. ಇವರು ಮುಚ್ಚಿರುವ ಗುಂಡಿಗಳು ತೇಪೆ ಹಾಕಿದ ಒಂದೇ ವಾರದಲ್ಲಿ ಓಪನ್ ಆಗುತ್ತದೆ. ರಸ್ತೆಗಳ ಗುಂಡಿ ಮುಚ್ಚಲು ಇವರು ಹಾಕುತ್ತಿರುವ ಕೋಟ್ಯಂತರ ಹಣ ಯಾವುದೇ ಫಲಿತಾಂಶ ನೀಡುತ್ತಿಲ್ಲ ಎಂದಿದ್ದಾರೆ.
"ಬಿಬಿಎಂಪಿ ಗುಂಡಿ ಮುಚ್ಚುವ ಕೆಲಸವನ್ನು ಕೈಗೆತ್ತಿಕೊಂಡಿರುವುದನ್ನು ನಾವು ನೋಡಿದ್ದೇವೆ. ಆದರೆ, ಕೆಲವೇ ವಾರಗಳ ನಂತರ, ಅದೇ ರಸ್ತೆಗಳಲ್ಲಿ ಮತ್ತೆ ಗುಂಡಿಗಳು ನಿರ್ಮಾಣವಾಗಿರುವುದನ್ನು ನಾವು ಗಮನಿಸಿದ್ದೇವೆ. ಕೆಲವೇ ದಿನಗಳಲ್ಲಿ ರಸ್ತೆ ಮತ್ತೆ ಅದೇ ಸ್ಥಿತಿಗೆ ಬಂದರೆ, ಅದು ಶ್ರಮ ಮತ್ತು ತೆರಿಗೆದಾರರ ಹಣ ವ್ಯರ್ಥ," ಎಂದು ಮಹದೇವಪುರ ವಲಯದ ನಿವಾಸಿ ಮೂರ್ತಿ ಎನ್ನುವವರು ಹೇಳಿದ್ದಾರೆ.
ಬೆಂಗಳೂರು ದಕ್ಷಿಣದಲ್ಲಿರುವ ಹೊಸ ರೋಡ್ ವಲಯದ ದುಃಸ್ಥಿತಿಯನ್ನು ಸೂಚಿಸಿದ ನಿವಾಸಿಯೊಬ್ಬರು, ಬಿಬಿಎಂಪಿ ರಸ್ತೆಯ ಕೆಟ್ಟ ಭಾಗಗಳನ್ನು ಸರಿಪಡಿಸುವ ಮೂಲಕ ರಸ್ತೆಯನ್ನು ಪುನಃ ನಿರ್ಮಿಸಿದ ಕೇವಲ ಮೂರು ತಿಂಗಳ ನಂತರ ಗುಂಡಿಗಳು ಕಾಣಿಸಿಕೊಂಡಿವೆ ಎಂದು ಹೇಳಿದರು.
ಬನ್ನೇರುಘಟ್ಟ ರಸ್ತೆಯ ಬಗ್ಗೆಯೂ ಪ್ರಯಾಣಿಕರು ಇದೇ ರೀತಿಯ ಕಳವಳ ವ್ಯಕ್ತಪಡಿಸಿದ್ದಾರೆ. ಆದರೆ, ಹೆಸರು ಹೇಳಲು ಇಚ್ಛಿಸದ ಬಿಬಿಎಂಪಿಯ ಹಿರಿಯ ಎಂಜಿನಿಯರ್, ಬಿಬಿಎಂಪಿ ಗುಂಡಿಗಳನ್ನು ಮಾತ್ರ ಮುಚ್ಚುತ್ತಿದೆ ಮತ್ತು ಮೂಲ ಕಾರಣವನ್ನು ಪರಿಹರಿಸುತ್ತಿಲ್ಲ ಎಂದು ಹೇಳಿದರು.
"ಯಾವುದೇ ರಸ್ತೆಗಳಲ್ಲಿ ಗುಂಡಿಗಳು ಕಾಣಿಸುವುದಿಲ್ಲ. ರಸ್ತೆಗಳಲ್ಲಿ ನೀರು ನಿಂತಾಗ ಮಾತ್ರ ಅವು ಬೆಳೆಯುತ್ತವೆ. ಸರಿಯಾಗಿ ನಿರ್ವಹಿಸದ ಶೋಲ್ಡರ್ ಡ್ರೈನ್‌ಗಳು ಇದಕ್ಕೆ ಕಾರಣ, ಇದರಿಂದಾಗಿ ನೀರು ರಸ್ತೆಗಳಿಗೆ ನುಗ್ಗಿ ನಿಲ್ಲುತ್ತದೆ" ಎಂದು ಎಂಜಿನಿಯರ್ ಹೇಳಿದರು.
ಇದಲ್ಲದೆ, ಮೂಲಸೌಕರ್ಯ ಕಾಮಗಾರಿಗಳು ರಸ್ತೆಗಳನ್ನು ಹಾಳುಮಾಡುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. "ಬಿಡಬ್ಲ್ಯೂಎಸ್ಎಸ್ಬಿ, ಬೆಸ್ಕಾಂ ಮತ್ತು ಕೆಪಿಟಿಸಿಎಲ್ ನಂತಹ ವಿವಿಧ ಸಂಸ್ಥೆಗಳು ಅಗೆದಿರುವ ಅನೇಕ ರಸ್ತೆಗಳಿವೆ. ತಾವು ಅಗೆದ ಸ್ಥಳಗಳನ್ನು ಅವರು ಮುಚ್ಚಿದರೂ, ಅದರ ಅಕ್ಕಪಕ್ಕದ ಸ್ಥಳದಲ್ಲಿ ಮತ್ತೆ ಗುಂಡಿಗಳು ನಿರ್ಮಾಣವಾಗುತ್ತಿದೆ ಎಂದು ಮತ್ತೊಬ್ಬ ಹಿರಿಯ ಅಧಿಕಾರಿ ಹೇಳಿದರು.
ಮಳೆಗಾಲದಲ್ಲಿ ಶಾಶ್ವತ ಕ್ರಮಗಳನ್ನು ಕೈಗೊಳ್ಳುವುದು ಕಷ್ಟಕರವಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ ರಾವ್ ಹೇಳಿದರು. "ಮಳೆಯಿಂದಾಗಿ ನಾವು ತಾತ್ಕಾಲಿಕ ಪರಿಹಾರಗಳನ್ನು ಮಾತ್ರ ತೆಗೆದುಕೊಳ್ಳಬಹುದು. ಆದ್ದರಿಂದ, ಅವು ಮತ್ತೆ ಕಾಣಿಸಿಕೊಳ್ಳಬಹುದು. ಆದರೆ, ಮಳೆಗಾಲದ ನಂತರ ದೀರ್ಘಾವಧಿಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು" ಎಂದು ರಾವ್ ಹೇಳಿದರು.