
ಮಂಗಳೂರು (ಅ.11): ಕೇರಳ ಚಿತ್ರರಂಗದ ನಟ ಜಯಕೃಷ್ಣನ್ ಮತ್ತು ಇಬ್ಬರು ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಆನ್‌ಲೈನ್‌ನಲ್ಲಿ ಬುಕ್ ಮಾಡಿದ್ದ ಕ್ಯಾಬ್ ಚಾಲಕನಿಗೆ ಜಾತಿ ನಿಂದನೆ ಮತ್ತು ಭಯೋತ್ಪಾದಕ ಎಂದು ನಿಂದಿಸಿದ ಗಂಭೀರ ಆರೋಪದ ಮೇಲೆ ಈ ಪ್ರಕರಣ ದಾಖಲಾಗಿದೆ. ಈ ಹಿನ್ನಲೆಯಲ್ಲಿ ನಟ ಜಯಕೃಷ್ಣನ್, ಸಂತೋಷ್ ಅಬ್ರಾಹಂ ಮತ್ತು ವಿಮಲ್ ವಿರುದ್ಧ ದೂರು ದಾಖಲಿಸಲಾಗಿದೆ. ದೂರುದಾರ ವ್ಯಕ್ತಿಯನ್ನು ಕ್ಯಾಬ್ ಚಾಲಕ ಶಫೀಕ್ ಅಹ್ಮದ್ ಎಂದು ಗುರುತಿಸಲಾಗಿದೆ.
ಅಕ್ಟೋಬರ್ 9 ರಂದು ಈ ಘಟನೆ ನಡೆದಿದೆ. ಮಂಗಳೂರಿನ ಬಿಜೈ ಬಳಿಯ ಹೋಂ ಸ್ಟೇನಿಂದ ರೈಲ್ವೆ ಸ್ಟೇಷನ್‌ಗೆ ಹೋಗುವ ಮಾರ್ಗದಲ್ಲಿ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಆ್ಯಪ್ ಮೂಲಕ ಕ್ಯಾಬ್ ಬುಕ್ ಮಾಡಿದ್ದ ಮೂವರು, ಕ್ಯಾಬ್ ತಲುಪುವ ಮೊದಲೇ ಕರೆ ಮಾಡಿದ ಚಾಲಕ ಶಫೀಕ್ ಅಹ್ಮದ್‌ಗೆ ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಮಲಯಾಳಂ ನಟ ಚಾಲಕನಿಗೆ 'ಮುಸ್ಲಿಂ ತೀವ್ರವಾದಿ' ಮತ್ತು 'ಟೆರರಿಸ್ಟ್' ಎಂದು ಅಪಹಾಸ್ಯ ಮಾಡಿ, ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎನ್ನಲಾಗಿದೆ. ಮಂಗಳೂರಿನ ಉರ್ವಾ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 352, 353(2) ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರಿನಲ್ಲಿ ಆನ್‌ಲೈನ್ ಕ್ಯಾಬ್ ಚಾಲಕನಿಗೆ ಧಾರ್ಮಿಕ ನಿಂದನೆ ಮತ್ತು "ಟೆರರಿಸ್ಟ್" ಎಂದು ನಿಂದಿಸಿದ ಗಂಭೀರ ಆರೋಪದ ಮೇಲೆ, ಕೇರಳ ಚಿತ್ರರಂಗದ ನಟ ಜಯಕೃಷ್ಣನ್ ಅವರನ್ನು ಉರ್ವಾ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಬಂಧನಕ್ಕೊಳಗಾದ ಇನ್ನೊಬ್ಬ ಆರೋಪಿ ಸಂತೋಷ್ ಅಬ್ರಾಹಂ ಕೂಡ ಪೊಲೀಸರ ವಶದಲ್ಲಿದ್ದಾರೆ.
ನಟ ಜಯಕೃಷ್ಣನ್ ಮತ್ತು ಆರೋಪಿ ಸಂತೋಷ್ ಅಬ್ರಾಹಂ ಅವರನ್ನು ಉರ್ವಾ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ವಿಮಲ್ ನಾಪತ್ತೆಯಾಗಿದ್ದಾನೆ. 9 ರಂದು, ನಟ ಜಯಕೃಷ್ಣನ್ ಸೇರಿ ಮೂವರು ಕ್ಯಾಬ್ ಚಾಲಕ ಶಫೀಕ್ ಅಹ್ಮದ್ ಅವರಿಗೆ ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಚಾಲಕನನ್ನು 'ಮುಸ್ಲಿಂ ತೀವ್ರವಾದಿ' ಮತ್ತು 'ಟೆರರಿಸ್ಟ್' ಎಂದು ಅಪಹಾಸ್ಯ ಮಾಡಿ, ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದರು.