
ಮಂಗಳೂರು/ಮೈಸೂರು (ಆ.21): ಕರಾವಳಿ ಕರ್ನಾಟಕದ ಸಾರ್ವಜನಿಕರ ಹಾಗೂ ರೈಲು ಪ್ರಯಾಣಿಕರ ದಶಕಗಳ ಸುದೀರ್ಘ ಬೇಡಿಕೆಗೆ ಕೊನೆಗೂ ಕೇಂದ್ರ ರೈಲ್ವೇ ಸಚಿವಾಲಯ ಅಸ್ತು ಎಂದಿದೆ. ಇದುವರೆಗೆ ಕೇರಳದ ಪಾಲಕ್ಕಾಡ್ ವಿಭಾಗದ ಆಡಳಿತ ವ್ಯಾಪ್ತಿಯಲ್ಲಿದ್ದ ಮಂಗಳೂರು ರೈಲ್ವೇ ಪ್ರದೇಶವನ್ನು, ಇದೀಗ ನೈಋತ್ಯ ರೈಲ್ವೆಯ (SWR) ಮೈಸೂರು ವಿಭಾಗಕ್ಕೆ ಅಧಿಕೃತವಾಗಿ ವರ್ಗಾಯಿಸಿ ರೈಲ್ವೇ ಮಂಡಳಿ ಆದೇಶ ಹೊರಡಿಸಿದೆ. ಕೇಂದ್ರ ಸರ್ಕಾರದ ಈ ಮಹತ್ವದ ನಿರ್ಧಾರದಿಂದಾಗಿ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಇಡೀ ಕರಾವಳಿ ಭಾಗದಲ್ಲಿ ಆಡಳಿತಾತ್ಮಕ ಗೊಂದಲಗಳಿಗೆ ತೆರೆಬಿದ್ದಿದ್ದು, ರೈಲ್ವೇ ಮೂಲಸೌಕರ್ಯ ಅಭಿವೃದ್ಧಿಗೆ ಹೊಸ ವೇಗ ಸಿಗಲಿದೆ.
ರೈಲ್ವೇ ಮಂಡಳಿಯ ಅಧಿಸೂಚನೆಯಂತೆ ಈ ಹೊಸ ಆಡಳಿತಾತ್ಮಕ ಬದಲಾವಣೆಯು 2026ರ ಅಕ್ಟೋಬರ್ 1 ರಿಂದ ಅಧಿಕೃತವಾಗಿ ಅನುಷ್ಠಾನಕ್ಕೆ ಬರಲಿದೆ. ಮಂಗಳೂರು ಸೆಂಟ್ರಲ್, ಮಂಗಳೂರು ಜಂಕ್ಷನ್ ಸೇರಿದಂತೆ ಉಳ್ಳಾಲ ರೈಲ್ವೇ ನಿಲ್ದಾಣದವರೆಗಿನ ಸಂಪೂರ್ಣ ಪ್ರದೇಶವು ಮೈಸೂರು ವಿಭಾಗಕ್ಕೆ ಹಸ್ತಾಂತರಗೊಳ್ಳಲಿದೆ. ಪ್ರಸ್ತುತ ಪಾಲಕ್ಕಾಡ್ ಮತ್ತು ಮೈಸೂರು ವಿಭಾಗಗಳ ನಡುವೆ 'ಪಡೀಲ್' ರೈಲ್ವೇ ನಿಲ್ದಾಣವು ಗಡಿಯಾಗಿತ್ತು (ಇಂಟರ್‌ಚೇಂಜ್ ಪಾಯಿಂಟ್). ಇನ್ನು ಮುಂದೆ 'ಉಳ್ಳಾಲ' ರೈಲ್ವೇ ನಿಲ್ದಾಣವು ನೂತನ ಇಂಟರ್‌ಚೇಂಜ್ ಪಾಯಿಂಟ್ ಆಗಿ ಕಾರ್ಯನಿರ್ವಹಿಸಲಿದೆ. ನೂತನ ವ್ಯವಸ್ಥೆಯಡಿ ವಿಭಾಗೀಯ ಪ್ರಧಾನ ಕಚೇರಿ (Divisional HQ) ಮೈಸೂರಿನಲ್ಲಿದ್ದರೆ, ವಲಯ ಪ್ರಧಾನ ಕಚೇರಿ (Zonal HQ) ಹುಬ್ಬಳ್ಳಿಯಲ್ಲಿ ಇರಲಿದೆ.
ಮಂಗಳೂರು ಪ್ರದೇಶವನ್ನು ಕರ್ನಾಟಕದ ವಲಯಕ್ಕೇ ಸೇರ್ಪಡೆಗೊಳಿಸಲು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ನಿರಂತರವಾಗಿ ಶ್ರಮಿಸಿದ್ದರು. ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರ ಗಮನಕ್ಕೆ ವಿಷಯ ತಂದಿದ್ದಲ್ಲದೆ, ಜುಲೈ 2024 ರಲ್ಲಿ ರೈಲ್ವೇ ರಾಜ್ಯ ಖಾತೆ ಸಚಿವರಾದ ವಿ. ಸೋಮಣ್ಣ ಅವರು ಮಂಗಳೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿಯೂ ಪ್ರತ್ಯೇಕ ಸಭೆ ನಡೆಸಿ ಸತತ ಒತ್ತಡ ಹೇರಿದ್ದರು. ಇದೀಗ ಅವರ ಶ್ರಮಕ್ಕೆ ಬಹುದೊಡ್ಡ ಯಶಸ್ಸು ಸಿಕ್ಕಂತಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಸಿದ್ಧಪಡಿಸಲಾದ ಈ ಪ್ರಸ್ತಾವನೆಗೆ ತಕ್ಷಣವೇ ಅನುಮೋದನೆ ನೀಡಿದ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೇ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಸಂಸದ ಚೌಟ ಧನ್ಯವಾದ ಅರ್ಪಿಸಿದ್ದಾರೆ.
ಮಂಗಳೂರು ರೈಲ್ವೇ ಪಾಲಕ್ಕಾಡ್ ವಿಭಾಗದಲ್ಲಿದ್ದ ಕಾರಣ ಹೊಸ ರೈಲುಗಳ ಚಾಲನೆ, ವೇಳಾಪಟ್ಟಿ ಬದಲಾವಣೆ ಹಾಗೂ ನಿಲ್ದಾಣಗಳ ಮೂಲಸೌಕರ್ಯ ಅಭಿವೃದ್ಧಿಯಂತಹ ಸಂದರ್ಭಗಳಲ್ಲಿ ಇಷ್ಟು ದಿನ ನಾನಾ ರೀತಿಯ ಆಡಳಿತಾತ್ಮಕ ತೊಡಕುಗಳು ಎದುರಾಗುತ್ತಿದ್ದವು. ಇದೀಗ ಮೈಸೂರು ವಿಭಾಗಕ್ಕೆ ಸೇರ್ಪಡೆಯಾಗಿರುವುದರಿಂದ ಸಾರ್ವಜನಿಕರ ಕುಂದುಕೊರತೆಗಳಿಗೆ ಶೀಘ್ರ ಪರಿಹಾರ ಸಿಗಲಿದೆ. ಕರಾವಳಿ ಭಾಗದಿಂದ ಬೆಂಗಳೂರು, ಮೈಸೂರು ಹಾಗೂ ಉತ್ತರ ಕರ್ನಾಟಕಕ್ಕೆ ಹೊಸ ರೈಲುಗಳ ಸಂಪರ್ಕ ಕಲ್ಪಿಸಲು ಹಾದಿ ಸುಗಮವಾಗಲಿದೆ. ಕರಾವಳಿ ರೈಲ್ವೇ ಮೂಲಸೌಕರ್ಯ ಯೋಜನೆಯ ಕಾಮಗಾರಿಗಳಿಗೆ ಭಾರಿ ವೇಗ ದೊರೆಯಲಿದೆ.ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಮಂಗಳೂರು ಹಾಗೂ ಕರಾವಳಿ ಭಾಗದ ರೈಲು ಪ್ರಯಾಣಿಕರು ಮತ್ತು ಸಾರ್ವಜನಿಕ ವಲಯದಿಂದ ವ್ಯಾಪಕ ಹರ್ಷ ವ್ಯಕ್ತವಾಗಿದೆ.