ನಯಾ ಪೈಸೆ ಖರ್ಚಿಲ್ಲದೆ ಬೋರ್‌ವೆಲ್ ರೀಚಾರ್ಜ್, ಕೃಷಿಕರೊಬ್ಬರ ಸೋಮಾರಿ ಐಡಿಯಾ ಕ್ಲಿಕ್!

By Web Desk  |  First Published Jul 8, 2019, 4:52 PM IST

ನಯಾ ಪೈಸೆ ಖರ್ಚಿಲ್ಲದೆ ಬೋರ್‌ವೆಲ್ ರೀಚಾರ್ಜ್| ಕೇವಲ ಬಟ್ಟೆಯನ್ನು ಉಪಯೋಗಿಸಿ ಮಳೆನೀರು ಕೊಳವೆಬಾವಿಗೆ ಸಂಗ್ರಹಿಸುವ ವಿಧಾನ| ಯಶಸ್ವಿಯಾದ ಕೃಷಿಕರೊಬ್ಬರ ಸೋಮಾರಿ ಐಡಿಯಾ!!


ಆತ್ಮಭೂಷಣ್, ಕನ್ನಡಪ್ರಭ

ಮಂಗಳೂರು[ಜು.08]: ಅಂತರ್ಜಲ ಮಟ್ಟ ಸಂರಕ್ಷಿಸುವ ಎಲ್ಲ ವೈಜ್ಞಾನಿಕ ವಿಧಾನಗಳಿಗೆ ಸೆಡ್ಡುಹೊಡೆಯುವ ರೀತಿಯಲ್ಲಿ ಇಲ್ಲೊಂದು ಹೊಸ ವಿಧಾನವನ್ನು ಕೃಷಿಕರೊಬ್ಬರು ಕಂಡುಕೊಂಡಿದ್ದಾರೆ. ಯಾವುದೇ ಖರ್ಚಿಲ್ಲದೆ ಅತ್ಯಂತ ಸುಲಭ ವಿಧಾನದಲ್ಲಿ ಬೋರ್‌ವೆಲ್ ರೀಚಾರ್ಜ್ ಮಾಡಲು ಸಾಧ್ಯವಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಗ್ರಾಮೀಣ ಭಾಷೆಯಲ್ಲಿ ಹೇಳುವುದಾದರೆ ಸೋಮಾರಿ ಐಡಿಯಾವೊಂದು ಜಲಮರುಪೂರಣವನ್ನು ಹೀಗೂ ಮಾಡಲು ಸಾಧ್ಯವಿದೆ ಎಂಬುದನ್ನು ತೋರಿಸಿಕೊಟ್ಟಿದೆ.

Latest Videos

undefined

ಬಂಟ್ವಾಳದ ಬಳ್ಳಮಜಲು ನಿವಾಸಿ ಬಿ.ಟಿ.ನಾರಾಯಣ ಭಟ್ ಅವರು ತಮ್ಮ ಕೃಷಿ ತೋಟದಲ್ಲಿ ಕೊಳವೆಬಾವಿಗಳಿಗೆ ಈ ಜಲಮರುಪೂರಣ ವಿಧಾನವನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಅವರದೇ ಕಲ್ಪನೆಯಲ್ಲಿ ಈ ನೂತನ ವಿಧಾನವನ್ನು ಕಂಡುಕೊಂಡಿದ್ದು, ಕೊಳವೆಬಾವಿ ಹೊಂದಿರುವ ಎಲ್ಲ ಕೃಷಿಕರನ್ನು ಈ ವಿಧಾನವನ್ನು ಸುಲಭವಾಗಿ ಅನುಸರಿಸಬಹುದು ಎನ್ನುತ್ತಾರೆ.

ಈಗ ಇರುವ ವಿಧಾನ:ಪ್ರಸಕ್ತ ಬೋರ್‌ವೆಲ್ ರೀಚಾರ್ಜ್‌ಗೆ ಎರಡು ಮಾದರಿಯ ವೈಜ್ಞಾನಿಕ ವಿಧಾನಗಳಿವೆ. ಕೊಳವೆಬಾವಿ ಹೊರಗೆ ಸುತ್ತಲು ಸುಮಾರು ಏಳೆಂಟು ಅಡಿಗಳಷ್ಟು ಮಣ್ಣನ್ನು ತೆಗೆದು ಮೇಲ್ಭಾಗದಲ್ಲಿ ಬಲೆ ಮಾದರಿಯ ಪೈಪನ್ನು ಅಳವಡಿಸುತ್ತಾರೆ. ಇದರ ಸುತ್ತಲು ಕಲ್ಲು-ಮಣ್ಣು ಹಾಕುವ ಮೂಲಕ ಮಳೆನೀರು ಬಸಿಯಲು ಅವಕಾಶ ಕಲ್ಪಿಸಲಾಗುತ್ತದೆ. ಬಲೆ ಮಾದರಿಯ ಪೈಪಿನ ಮೂಲಕ ಮಳೆನೀರು ಕೊಳವೆಬಾವಿಯೊಳಗೆ ಸೋಸಿ ಸಂಗ್ರಹವಾಗುತ್ತದೆ.

ಇನ್ನೊಂದು ವಿಧಾನದಲ್ಲಿ, ಮನೆ ಅಥವಾ ಕಟ್ಟಡಗಳಲ್ಲಿ ಸಂಗ್ರಹವಾಗುವ ಮಳೆ ನೀರನ್ನು ಪೈಪ್‌ಗಳ ಮೂಲಕ ಒಂದೇ ಕಡೆ ಬರುವಂತೆ ಮಾಡಿ ಬಳಿಕ ನೇರವಾಗಿ ಕೊಳವೆಬಾವಿಗೆ ಬಿಡಲಾಗುತ್ತದೆ. ಇದರ ಮೂಲಕವೂ ಬೋರ್‌ವೆಲ್ ರೀಚಾರ್ಜ್ ಮಾಡುತ್ತಾರೆ. ಈ ಎರಡು ವಿಧಾನಗಳಿಗೆ ಒಂದಷ್ಟು ವೆಚ್ಚ ತಗಲುತ್ತದೆ. ಇದಕ್ಕೆ ವೆಚ್ಚ ಮಾಡುವುದು ದೊಡ್ಡ ವಿಚಾರವಲ್ಲವಾದರೂ ಸಾಮಾನ್ಯ ಕೃಷಿಕರು ಹಣ ಖರ್ಚು ಮಾಡಿ ಬೋರ್‌ವೆಲ್ ರೀಚಾರ್ಜ್ ಮಾಡುವ ಗೋಜಿಗೆ ಹೋಗುವುದು ಕಡಿಮೆ. ಅಲ್ಲದೆ ಜಲಮರುಪೂರಣ ಬಗ್ಗೆ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ಗಮನಿಸಿದರೂ ಅದನ್ನು ಅನುಷ್ಠಾನಗೊಳಿಸುವ ಬಗ್ಗೆ ಗಂಭೀರವಾಗಿ ಚಿಂತಿಸದೆ ಇರುವ ಕೃಷಿಕರು ಈಗಲೂ ಇದ್ದಾರೆ. ಅಂಥದ್ದರಲ್ಲಿ ಈ ಎರಡು ವಿಧಾನಗಳಿಗೆ ಸೆಡ್ಡುಹೊಡೆಯುವ ಮಾದರಿಯಲ್ಲಿ ಈ ಹೊಸ ವಿಧಾನ ಅನುಷ್ಠಾನಕ್ಕೆ ಬರುತ್ತಿದೆ.

ಸರಳವಾಗಿ ಮಳೆನೀರು ಸಂಗ್ರಹ ಮಾಡುವುದು ಹೀಗೆ!

ಏನಿದು ಸುಲಭ ವಿಧಾನ?:ಬೋರ್‌ವೆಲ್‌ನ ಮೇಲ್ಭಾಗದಲ್ಲಿ ಯಾವುದೇ ಬಟ್ಟೆಯನ್ನು ನಾಲ್ಕು ಮೂಲೆಗೆ ಕಟ್ಟಬೇಕು. ಬಳಿಕ ಮಳೆನೀರು ಬಟ್ಟೆಯ ಮಧ್ಯಭಾಗದಲ್ಲಿ ಸಂಗ್ರಹಿಸಿ ನೇರವಾಗಿ ಬೋರ್ ವೆಲ್ ಕೊಳವೆಗೆ ಬೀಳುವಂತೆ ಮಾಡಬೇಕು. ಬಟ್ಟೆ ವಿಸ್ತಾರವಾದಷ್ಟು ಸಂಗ್ರಹಗೊಳ್ಳುವ ನೀರಿನ ಪ್ರಮಾಣ ಜಾಸ್ತಿಯಾಗುತ್ತದೆ. ಬಟ್ಟೆಯ ಮಧ್ಯಭಾಗಕ್ಕೆ ಭಾರದ ವಸ್ತುವನ್ನು ಇರಿಸಿದರೆ, ನೀರು ಸುಲಭದಲ್ಲಿ ಕೊಳವೆಬಾವಿಗೆ ಬೀಳುತ್ತದೆ. ಈ ವಿಧಾನದಲ್ಲಿ ಮಳೆ ನೀರನ್ನು ಸೋಸುವ ಅಗತ್ಯ ಇರುವುದಿಲ್ಲ. ಬಟ್ಟೆಯಿಂದಲೇ ನೀರು ಸೋಸಿಕೊಂಡು ಕೊಳವೆಬಾವಿಯನ್ನು ಸೇರುತ್ತದೆ.

ಈ ವಿಧಾನಕ್ಕೆ ಮನೆಯಲ್ಲಿರುವ ಯಾವುದೇ ಬಟ್ಟೆಯನ್ನು ಉಪಯೋಗಿಸಬಹುದು. ಬಟ್ಟೆಯ ನಾಲ್ಕು ಮೂಲೆಗಳನ್ನು ಹಗ್ಗ ಅಥವಾ ಅಡಕೆ ತೋಟದಲ್ಲಾದರೆ ಮರಗಳಿಗೆ ಹಗ್ಗದಿಂದ ಎಳೆದು ಕಟ್ಟಿದರೆ ಸಾಕಾಗುತ್ತದೆ. ಅತ್ಯಂತ ಸುಲಭದಲ್ಲಿ, ಹೆಚ್ಚಿನ ಶ್ರಮ ಇಲ್ಲದೆ ಮಳೆನೀರನ್ನು ಬೋರ್‌ವೆಲ್ ಗೆ ರೀಚಾರ್ಜ್ ಮಾಡಲು ಸಾಧ್ಯವಿದೆ. ಈ ವಿಧಾನದಲ್ಲಿ ಮಳೆನೀರು ಇಳಿದುಹೋಗಲು ಬೋರ್‌ವೆಲ್ ಕ್ಯಾಪ್ ತೆಗೆಯಬಹುದು. ಇಲ್ಲವೇ ಸಣ್ಣ ರಂಧ್ರ ಇರುವ ಕ್ಯಾಪ್‌ನ್ನು ಹಾಕಿಕೊಳ್ಳಬಹುದು ಎನ್ನುತ್ತಾರೆ ಇದನ್ನು ಪ್ರಯೋಗ ಮಾಡಿ ಯಶಸ್ವಿಯಾದ ಬಿ.ಟಿ.ನಾರಾಯಣ ಭಟ್.

ಪ್ರತಿ ಬೋರ್‌ವೆಲ್‌ಗೂ ಇಂಗಿಸಬಹುದು

ಗ್ರಾಮೀಣ ಪ್ರದೇಶಗಳಲ್ಲಿ ನಿತ್ಯ ಮನೆ ಬಳಕೆಗೆ ಕನಿಷ್ಠ 500 ಲೀಟರ್ ನೀರು ಬೇಕಾಗುತ್ತದೆ. ಈ ವಿಧಾನದಲ್ಲಿ ಬೋರ್‌ವೆಲ್‌ನಲ್ಲಿ ನೀರು ಹಿಡಿದಿಟ್ಟುಕೊಂಡರೆ ದಿನದಲ್ಲಿ ಮಳೆಯನ್ನು ಅವಲಂಬಿಸಿಕೊಂಡು ಕನಿಷ್ಠ 60 ಲೀಟರ್, ಜಾಸ್ತಿ ಮಳೆಯಾದರೆ ಮಾಸಿಕ 30 ಸಾವಿರ ಲೀಟರ್‌ಗೂ ಅಧಿಕ ನೀರನ್ನು ಇಂಗಿಸಲು ಸಾಧ್ಯವಿದೆ. ಪ್ರತಿ ವರ್ಷ ಜೂನ್‌ನಿಂದ ಸೆಪ್ಟೆಂಬರ್ ವರೆಗೆ ನಾಲ್ಕು ತಿಂಗಳ ಕಾಲ ಮಳೆಗಾಲದ ನೀರನ್ನು ಈ ರೀತಿ ಹಿಡಿದಿಟ್ಟುಕೊಂಡರೆ, ಬೇಸಿಗೆಯಲ್ಲಿ ಅಂತರ್ಜಲ ಮಟ್ಟ ಕುಸಿತ ತಡೆಗಟ್ಟಲು ಸಾಧ್ಯವಿದೆ ಎನ್ನುತ್ತಾರೆ ಪ್ರಗತಿಪರ ಕೃಷಿಕ ಕೈಂತಜೆ ರಮೇಶ್ ಭಟ್.

ಪ್ರಸ್ತುತ ಬಂಟ್ವಾಳದ ಪೆರಾಜೆ ಗ್ರಾಮವೊಂದರಲ್ಲೇ 600 ಕೃಷಿ ತೋಟಗಳಲ್ಲಿ ಬೋರ್‌ವೆಲ್‌ಗಳಿವೆ. ಸರಿಸುಮಾರು ಪ್ರತಿ ಕೃಷಿ ತೋಟದಲ್ಲೂ ಎರಡರಿಂದ ನಾಲ್ಕು ಕೊಳವೆಬಾವಿಗಳಿವೆ. ಇಡೀ ಜಿಲ್ಲೆಯಲ್ಲಿ ಏನಿಲ್ಲವೆಂದರೂ 50 ಸಾವಿರಕ್ಕೂ ಅಧಿಕ ಕೊಳವೆಬಾವಿ ಇರಬಹುದು ಎನ್ನುವುದು ಇವರ ಅಂಬೋಣ. ಎಲ್ಲ ಬೋರ್‌ವೆಲ್‌ಗೂ ಇದೇ ರೀತಿ ರೀಚಾರ್ಜ್ ವಿಧಾನ ಅನುಸರಿಸಿದರೆ, ಅಂತರ್ಜಲ ಮಟ್ಟ ಸುಧಾರಣೆ ಸುಲಭವಾಗಲಿದೆ ಎನ್ನುವುದು ಕೈಂತಜೆ ರಮೇಶ್ ಭಟ್ ಮಾತು.

click me!