ಸರಳವಾಗಿ ಮಳೆನೀರು ಸಂಗ್ರಹ ಮಾಡುವುದು ಹೀಗೆ!
ಇಂದಿನ ಯುವಜನತೆಯಲ್ಲಿ ಪರಿಸರಪ್ರಜ್ಞೆ ಬೆಳೆಯುತ್ತಿದೆ. ನೀರನ್ನು ಉಳಿಸಬೇಕೆಂದು ಬಹುತೇಕರು ಯೋಚಿಸುತ್ತಾರೆ. ಮಳೆನೀರು ಕೊಯ್ಲು ತಾವೂ ಮಾಡಬೇಕೆಂದು ಕನಸು ಕಾಣುತ್ತಾರೆ. ಆದರೆ, ಹೆಚ್ಚಿನವರು ಅದು ಹೇಗೆಂದು ತಿಳಿಯದೆ ಸುಮ್ಮನಾಗಿಬಿಡುತ್ತಾರೆ. ಮಳೆನೀರನ್ನು ಹೇಗೆಲ್ಲಾ ಸಂಗ್ರಹಿಸಬಹುದೆಂದು ತಿಳಿಯಲು ಈ ಲೇಖನ ಓದಿ.
ನಿಮಗೆ ಗೊತ್ತೇ? ಬೆಂಗಳೂರಿನಲ್ಲಿ ಸುರಿವ ಶೇ.30ರಷ್ಟು ಮಳೆಯನ್ನು ಸಂಗ್ರಹಿಸಿದರೂ ಸಾಕು, ಅದು ಬೆಂಗಳೂರು ಬಳಸುವ ಕಾವೇರಿ ನೀರಿಗಿಂತಲೂ ಹೆಚ್ಚು ನೀರನ್ನು ಸಂಗ್ರಹಿಸಿರುತ್ತದೆ. ಜೊತೆಗೆ, ಅದೆಷ್ಟೋ ನೀರಿನ ಬಿಲ್ ಕೂಡಾ ಕಡಿಮೆ ಮಾಡಬಹುದು. ನಾವಿರುವುದೇ ಹಾಗೆ, ಬಿಟ್ಟಿಯಾಗಿ ಸಿಕ್ಕಿದ್ದೆಲ್ಲ ಖಾಲಿಯಾಗುವವರೆಗೂ ಬೇಕಾಬಿಟ್ಟಿ ಬಳಸಿ ಮಜಾ ಮಾಡುತ್ತೇವೆ. ಅದರ ಕೊರತೆ ಕಾಣಿಸುತ್ತಲೇ ಗೋಳೋ ಎಂದು ಅಳುತ್ತಾ ಸರ್ಕಾರಕ್ಕೆ ಛೀಮಾರಿ ಹಾಕುತ್ತಾ ಕುಳಿತುಕೊಳ್ಳುತ್ತೇವೆ. ಆದರೆ, ಈ ಮಳೆಗಾಲದಲ್ಲಾದರೂ ಎಚ್ಚೆತ್ತುಕೊಂಡು ಸ್ವಲ್ಪ ಜಾಣತನ ತೋರೋಣ. ಮಳೆನೀರು ಸಂಗ್ರಹ, ನೀರಿನ ಮಿತವ್ಯಯ ನಮ್ಮ ಜವಾಬ್ದಾರಿ ಎಂದರಿತು ಬಾಳಿ ತೋರಿಸೋಣ.
ಏನಂತೀರಾ?
ರೇನ್ ಬ್ಯಾರೆಲ್ ಅಳವಡಿಸಿ
ಮಳೆ ನೀರು ಸಂಗ್ರಹಿಸಲು ಅತ್ಯಂತ ಸುಲಭ ವಿಧಾನವೆಂದರೆ ರೇನ್ ಬ್ಯಾರೆಲ್ ಅಳವಡಿಕೆ. ನಿಮ್ಮದೇ ಮನೆಯ ಹಳೆ ಡ್ರಮ್‌ಗೆ ರೂಫ್‌ಟಾಪ್ ಹಾಗೂ ವೆರಾಂಡಾದ ನೀರು ಹರಿದು ಬಂದು ಬೀಳುವಂತೆ ಪೈಪ್ ಅಳವಡಿಸಿ. ಇದು ಸೊಳ್ಳೆಗಳ ಆವಾಸಸ್ಥಾನವಾಗದಂತೆ ನೋಡಿಕೊಳ್ಳಲು ಪೈಪ್ ಸುತ್ತಲೂ ಮುಚ್ಚಳ ಗಟ್ಟಿಯಾಗಿ ಕೂರುವಂತೆ ನೋಡಿಕೊಳ್ಳಿ. ಅಥವಾ ಬ್ಯಾರೆಲ್‌ಗೆ ವೆಜಿಟೇಬಲ್ ಆಯಿಲ್ ಸಿಂಪಡಿಸಿ. ಇದು ನೀರಿನ ಮೇಲೆ ಒಂದು ಲೇಯರ್ ಆಗಿ ಕುಳಿತು ಲಾರ್ವೆ ಬೆಳೆಯದಂತೆ ನೋಡಿಕೊಳ್ಳುತ್ತದೆ.
ನಲ್ಲೀಲಿ ಹನಿ ನೀರು, ಪರಿಸರಕ್ಕೂ ಹಾನಿ, ಮನೆಗೂ ಅಶುಭ
ಮಳೆ ಉದ್ಯಾನ ನಿರ್ಮಿಸಿ
ಸ್ಥಳೀಯ ಸಸ್ಯಗಳು, ಮಣ್ಣು ಹಾಗೂ ಗೊಬ್ಬರ ಬಳಸಿ ಮನೆಯ ಮಳೆ ಉದ್ಯಾನ ನಿರ್ಮಿಸಿ. ಮನೆಯ ರೂಫ್‌ಟಾಪ್ ಮೇಲೆ ಬೀಳುವ ನೀರು ಇದಕ್ಕೆ ಹರಿದುಹೋಗುವಂತೆ ಇಳಿಜಾರಿನಲ್ಲಿ ನೀರು ಸೇರುವಂತೆ, ಅದರ ಸುತ್ತಲೂ ಸಸಿಗಳು ಬೆಳೆಯುವಂತೆ ನೋಡಿಕೊಳ್ಳಿ. ಈ ಸ್ಥಳೀಯ ಸಸ್ಯಗಳು ಬೇಗ ಬೇರು ಬಿಡುತ್ತವಲ್ಲದೆ, ಹೆಚ್ಚಿಗೆ ಮೇಂಟೇನೆನ್ಸ್ ಬೇಡುವುದಿಲ್ಲ. ಇವು ಬೇರಲ್ಲಿ ಮಣ್ಣನ್ನು ಹಿಡಿದುಕೊಂಡು ನೀರನ್ನು ಕೆಳಕ್ಕೆ ಕಳಿಸುತ್ತವೆ. ಹೀಗಾಗಿ ಮಳೆನೀರು ಚರಂಡಿಗಳಲ್ಲಿ ಹರಿದು ವೇಸ್ಟ್ ಆಗುವ ಬದಲು ಅಂತರ್ಜಲ ಉತ್ಪತ್ತಿಯಾಗುತ್ತದೆ. ಇದರ ನಿರ್ಮಾಣ ಸುಲಭ, ವರ್ಷವಿಡೀ ಉದ್ಯಾನ ಚೆನ್ನಾಗಿ ಕಾಣುತ್ತದೆ ಜೊತೆಗೆ ಪರಿಸರಕ್ಕೂ ಒಳ್ಳೆಯದು. ನಿಮ್ಮ ಮನೆಯ ಹಿತ್ತಿಲು ಹಾಗೂ ಅಂಗಳದಲ್ಲಿ ಸ್ಥಳವಿದ್ದಲ್ಲಿ ಹೀಗೆ ಮಾಡಬಹುದು. ಇದು ಪಾಂಡ್ ಅಲ್ಲ. ಬದಲಿಗೆ ಮಳೆ ಬಂದ ಸಮಯದಲ್ಲಿ ಇಲ್ಲಿ ನೀರು ನಿಂತಂತೆ ಕಾಣುತ್ತದೆ. ಆದರೆ, 12-48 ಗಂಟೆಗಳಲ್ಲಿ ಈ ನೀರು ಭೂಮಿಯಲ್ಲಿ ಇಂಗುತ್ತದೆ. ಇಲ್ಲಿ ಸಸ್ಯಗಲು ನೀರಿನಿಂದ ಮಾಲಿನ್ಯತೆ ತೆಗೆದು ಶುದ್ಧ ನೀರು ನೆ ಸೇರುವಂತೆ ನೋಡಿಕೊಳ್ಳುತ್ತವೆ.
ನಿಮ್ಮ ಮನೆಯ ಬಾವಿಗಳು ಹಾಗೂ ಬೋರ್‌ವೆಲ್ ರಿಚಾರ್ಜ್ ಮಾಡಿ
ರೂಫ್‌ಟಾಪ್ ಮಳೆನೀರು ಪೈಪ್ ಮೂಲಕ ಹರಿದು ನಿಮ್ಮ ಮನೆಯ ಬಾವಿಯ ಬಳಿ ಹರಿದು ಹೋಗುವಂತೆ ನೋಡಿಕೊಳ್ಳಿ. ಪೈಪ್ ಕೊನೆಯಲ್ಲಿ ಫಿಲ್ಟರ್ ಹಾಕಬಹುದು. ಹೀಗಾಗಿ ಶೋಧಿಸಿದ ಮಳೆನೀರು ಬಾವಿ ಸೇರುತ್ತದೆ. ಇದರಿಂದ ಬೇಸಿಗೆಯಲ್ಲೂ ಬಾವಿಯಲ್ಲಿ ಸಾಕಷ್ಟು ಮಳೆನೀರಿರುತ್ತದೆ. ಬೋರ್‌ವೆಲ್‌ಗಳಿಗೆ ರಿಚಾರ್ಜ್ ಪಿಟ್ ನಿರ್ಮಾಣ ಮಾಡುವುದು ಕೂಡಾ ಉತ್ತಮ ಐಡಿಯಾ. ಇದೂ ಕೂಡಾ ಮೇಲೆ ಹರಿವ ನೀರನ್ನು ಭೂಮಿಯ ಆಳಕ್ಕೆ ರವಾನಿಸುತ್ತದೆ. ಇದರಲ್ಲಿ ಫಿಲ್ಟರ್ ಆದ ಮಳೆನೀರು ಒಂದು ಮೀಟರ್ ವೃತ್ತ, 6 ಮೀ. ಆಳ ಹೊಂದಿದ ಸಣ್ಣ ಗುಂಡಿಯ ಮೂಲಕ ಅಂತರ್ಜಲ ಸೇರುವಂತೆ ಮಾಡಲಾಗುತ್ತದೆ. ಇದೂ ಕೂಡಾ ಬೋರ್‌ವೆಲ್‌ನಲ್ಲಿ ಎಲ್ಲ ಕಾಲದಲ್ಲೂ ನೀರಿರುವಂತೆ ನೋಡಿಕೊಳ್ಳುತ್ತದೆ.
ಧನ ಲಾಭ ತರೋ ಫೆಂಗ್ ಶ್ಯೂ ಗಿಡಗಳಿವು...
ರೇನ್ ಸಾಸರ್ ನಿರ್ಮಿಸಿ
ರೇನ್ ಸಾಸರ್‌ಗಳು ಕೊಡೆಯನ್ನು ಉಲ್ಟಾ ಇಟ್ಟಂತೆ ಕಾಣುತ್ತವೆ. ಇವುಗಳ ಮೇಲೆ ಬೀಳುವ ನೀರು ಟ್ಯಾಂಕ್‌ಗೆ ಹೋಗುವಂತೆ ವ್ಯವಸ್ಥೆ ಮಾಡಿಕೊಳ್ಳಿ. ಇಲ್ಲಿ ಮಳೆನೀರು ನೇರವಾಗಿ ಟ್ಯಾಂಕ್‌ಗೆ ಬೀಳುವುದರಿಂದ ಮಾಲಿನ್ಯವಾಗುವ ಸಂಭವವೂ ಕಡಿಮೆ.
ಮಳೆ ನೀರು ಸಂಗ್ರಹಣಾ ಟ್ಯಾಂಕ್
ಚಾವಣಿ ಮೇಲೆ ಬೀಳುವ ನೀರು ನೇರವಾಗಿ ಮನೆಯ ಸಂಪ್‌ಗೆ ಸೇರುವಂತೆ ಪೈಪ್ ಕನೆಕ್ಷನ್ ಕೊಡಬಹುದು. ಬೇಕಿದ್ದರೆ ಪೈಪ್ ಕೊನೆಯಲ್ಲಿ ಫಿಲ್ಟರ್ ಅಳವಡಿಸಿ. ಇದನ್ನೇ ಮನೆಯ ದೈನಂದಿನ ಬಳಕೆಗೆ ಬಳಸುವುದರ ಮೂಲಕ ಅಂತರ್ಜಲದ ಬಳಕೆ ಕಡಿಮೆ ಮಾಡಬಹುದು. ಇದು ನಿಮಗೆ ನೀರಿನ ಖರ್ಚೂ ಕಡಿಮೆ ಮಾಡುತ್ತದೆ. ಪರಿಸರಕ್ಕೂ ಪೂರಕ ಯೋಜನೆ.
ರೇನ್ ಚೈನ್
ಮಳೆನೀರನ್ನು ಚಾನೆಲೈಸ್ ಮಾಡಲು ಇದು ಬಹಳ ಹಳೆಯ ವಿಧಾನ. ಇದು ಮಳೆಗಾಲದಲ್ಲಿ ನಿಮ್ಮ ಮನೆಗೆ ಆಭರಣದಂತೆ ಕಾಣುತ್ತದೆ. ರೂಫ್‌ಟಾಪ್‌ನಿಂದ ನೀರು ಮೆಟಲ್ ರೈನ್ ಚೈನ್ ಮೂಲಕ ಹರಿದುಬರುವುದು ಕಣ್ಣಿಗೂ ಸೊಗಸು, ಕಿವಿಗೂ ಇಂಪು. ಮನೆಯ ಮೂಲೆಗಳಲ್ಲಿ ನೀರು ಫೌಂಟೇನ್‌ನಂತೆ ಹರಿದು ಬಂದರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ. ಈ ನೀರು ಬುಡದಲ್ಲಿ ಬ್ಯಾರೆಲ್ ಅಥವಾ ಟ್ಯಾಂಕ್ ಸೇರುವಂತೆ ನೋಡಿಕೊಳ್ಳಿ. ಆನ್‌ಲೈನ್‌ನಲ್ಲಿ ಕೂಡಾ ರೈನ್ ಚೈನ್‌ಗಳು ಲಭ್ಯ.
ಬೆಂಗಳೂರಿನ ಜಯನಗರದಲ್ಲಿ ಮಳೆನೀರು ಕೊಯ್ಲು ಥೀಮ್ ಪಾರ್ಕ್ ಇದ್ದು, ಈ ಸಂಬಂಧ ನಿಮ್ಮೆಲ್ಲ ಅನುಮಾನಗಳನ್ನು ಪರಿಹರಿಸಿಕೊಳ್ಳಲು ಅಲ್ಲಿಗೆ ಭೇಟಿ ನೀಡಬಹುದು.