ಕಾರ್ನಾಡ್ ಅರಿಯಲು ಅವರ ಸಾಹಿತ್ಯವೇ ಮಾಧ್ಯಮ : ಜೋಗಿ

By Web Desk  |  First Published Jul 8, 2019, 9:10 AM IST

ಓದುಗ ಲೇಖಕನ ಬಗ್ಗೆ ತನ್ನದೇ ಆದ ಕಲ್ಪನೆಯನ್ನು ಹೊಂದಿರುತ್ತಾನೆ. ಆದರೆ, ತನ್ನ ನೆಚ್ಚಿನ ಲೇಖಕನ ಭೇಟಿ ನಂತರ ಓದುಗನ ಕಲ್ಪನೆ ಬದಲಾಗುತ್ತದೆ. ಕೃತಿಯ ಆಚೆಗೆ ಸಿಗುವಂತಹ ಲೇಖಕ ಕೃತಕನಾಗಿರುತ್ತಾನೆ. ಕಾರ್ನಾಡರನ್ನು ಅರಿಯಲು ಅವರ ಸಾಹಿತ್ಯವೇ ಮಾಧ್ಯಮ ಎಂದು ಗಿರೀಶ್ ಕಾರ್ನಾಡ್ ನುಡಿನಮನ ಕಾರ್ಯಕ್ರಮದಲ್ಲಿ ಪತ್ರಕರ್ತ  ಹಾಗೂ ಸಾಹಿತಿ ಗಿರೀಶ್ ರಾವ್ ಹತ್ವಾರ್ (ಜೋಗಿ) ಹೇಳಿದರು.


ಬೆಂಗಳೂರು [ಜು.08] : ಶ್ರೇಷ್ಠ ನಾಟಕಕಾರ ಗಿರೀಶ್ ಕಾರ್ನಾಡರನ್ನು ಕಾಣಲು ಸಾಧ್ಯವಿರುವ ಏಕೈಕ ಮಾಧ್ಯಮ ಅವರ ಸಾಹಿತ್ಯ ಎಂದು ಪತ್ರಕರ್ತ  ಹಾಗೂ ಸಾಹಿತಿ ಗಿರೀಶ್ ರಾವ್ ಹತ್ವಾರ್ (ಜೋಗಿ) ಹೇಳಿದರು.

ಶಿವರಾಮ ಕಾರಂತ ವೇದಿಕೆ ಮತ್ತು ತರಳಬಾಳು ಕೇಂದ್ರ ಭಾನುವಾರ ಏರ್ಪಡಿಸಿದ್ದ  ‘ಗಿರೀಶ್ ಕಾರ್ನಾಡರಿಗೆ ನುಡಿ ನಮನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರಂಭದಲ್ಲಿ ಓದುಗ ಲೇಖಕನ ಬಗ್ಗೆ ತನ್ನದೇ ಆದ ಕಲ್ಪನೆಯನ್ನು ಹೊಂದಿರುತ್ತಾನೆ. ಆದರೆ, ತನ್ನ ನೆಚ್ಚಿನ ಲೇಖಕನ ಭೇಟಿ ನಂತರ ಓದುಗನ ಕಲ್ಪನೆ ಬದಲಾಗುತ್ತದೆ. ಕೃತಿಯ ಆಚೆಗೆ ಸಿಗುವಂತಹ ಲೇಖಕ ಕೃತಕನಾಗಿರುತ್ತಾನೆ. ಯಾವುದೇ ಒಬ್ಬ ಲೇಖಕನನ್ನು ಆತನ ಕೃತಿಗಳ ಮೂಲಕ ನೋಡಬಹುದು. ಕಾರ್ನಾಡರ ಕೃತಿಗಳು ಕಿಟಕಿ ಇದ್ದಂತೆ. ಅವರ ಕೃತಿಗಳಿಂದ ಅವರನ್ನು ಅರಿಯಬಹುದು ಎಂದರು.

Latest Videos

undefined

ಕಾರ್ನಾಡರಿಗೆ ನಾಟಕ ಕಟ್ಟುವ ಕಸುಬು ದಾರಿಗೆ ತಿಳಿದಿತ್ತು. ಲಂಕೇಶ್ ಸಹ ತಲೆದಂಡ ನಾಟಕ ನೋಡಿ, ಕಾರ್ನಾಡರಷ್ಟು ನಾಟಕ ಕಟ್ಟುವ ಕಲೆ ಯಾರಿಗೂ ಬರುವುದಿಲ್ಲ ಎಂದು ಮೆಚ್ಚುಗೆ ಸೂಚಿಸಿದ್ದರು. ಒಂದು ನಿರ್ದಿಷ್ಟ ವಿಷಯವನ್ನು ಇಟ್ಟುಕೊಂಡು ನಾಟಕವನ್ನು ಪೋಣಿಸುವ ಕಲೆ ಅವರಿಗೊಲಿದಿತ್ತು. ನಾಟಕ ರಚನೆ ಮುನ್ನ ಅದರ ಚಾರಿತ್ರಿಕ ವಿವರಗಳನ್ನು ಸಂಗ್ರಹಿಸುತ್ತಿದ್ದರು. ಹಾಗಾಗಿ ಅವರು ತಮ್ಮ ನಾಟಕದ ಪ್ರತಿಭಾ ಶಕ್ತಿಯಿಂದ ದೇಶ, ಕಾಲ ಗಳನ್ನು ಮೀರಲು ಸಾಧ್ಯವಾಯಿತು ಎಂದರು. 

ಲೇಖಕರನ್ನು ಯಾರೂ ಬೆಳೆಸಲು ಸಾಧ್ಯ ವಿಲ್ಲ. ಏಕಾಂತ, ಕುತೂಹಲ ಹಾಗೂ ಸ್ವಚಿಂತನೆ ಯನ್ನು ಹೊಂದಿದ್ದರೆ ಉತ್ತಮ ಲೇಖಕನಾಗಲು ಸಾಧ್ಯ. ಆತನ ಕೃತಿ ಹಾಗೂ ಸಾಮಾಜಿಕ ಸ್ಪಂದನೆ ಮುಖಾಂತರ ಲೇಖಕನನ್ನು ಗುರುತಿಸಲಾಗುತ್ತದೆ. ಆತನ ವಿಚಾರಧಾರೆಯಿಂದಲೂ ಜನ ರಿಗೆ ಪರಿಚಿತನಾಗುತ್ತಾನೆ ಎಂಬುದು ಕಾರ್ನಾಡರ ನಂಬಿಕೆಯಾಗಿತ್ತು. ಒಬ್ಬ ಲೇಖಕನಾಗಿ ಏನನ್ನು ನೋಡಬೇಕು, ಮಾತನಾಡಬೇಕು, ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂಬ ಸ್ಪಷ್ಟತೆ ಅವರಲ್ಲಿತ್ತು. ಅವರನ್ನು ನಾವು ಸರಿಯಾಗಿ ಅರ್ಥೈಸಿ ಕೊಳ್ಳಲಿಲ್ಲ. ಕಾರ್ನಾಡರನ್ನು ಬೆಂಗಳೂರು ಸ್ವಾಗತಿದಷ್ಟು ಸುಖವಾಗಿ ಅವರನ್ನು ಕಳಿಸಿಕೊಡಲಿಲ್ಲಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಶಿವರಾಮ ಕಾರಂತ ವೇದಿಕೆಯ ಅಧ್ಯಕ್ಷ ಬಿ.ವಿ ಕೆದಿಲಾಯ, ಕಾರ್ಯದರ್ಶಿ ಚಂದ್ರಶೇಖರ ಚಡಗ, ಕಾರ್ಯದರ್ಶಿ ಡಾ.ಎಸ್.ಸಿದ್ದಯ್ಯ ಇದ್ದರು. 

click me!