
ಮಂಗಳೂರು(ಮೇ 27): ಸುರತ್ಕಲ್‌ನ ಕಟ್ಟಡವೊಂದರಲ್ಲಿ ಆಹಾರ ಇಲ್ಲದೆ ಅತಂತ್ರ ಸ್ಥಿತಿಯಲ್ಲಿದ್ದ ವಲಸೆ ಕರ್ಮಿಕರಿಗೆ ಸಕಾಲದಲ್ಲಿ ತಲುಪಿದ ಕಿಟ್, ಬೆಳ್ತಂಡಿಯಲ್ಲಿ ಕ್ವಾರಂಟೈನ್ ಕೇಂದ್ರಕ್ಕೆ ನಿಗಾ ವ್ಯವಸ್ಥೆ, ಮೂಡುಬಿದಿರೆಯಲ್ಲಿ ಪರದಾಡುತ್ತಿದ್ದ ವ್ಯಕ್ತಿಗೆ ತಕ್ಷಣವೇ ಮೆಡಿಸಿನ್ ಪೂರೈಕೆ, ವೃದ್ಧಾಪ್ಯ ವೇತನಕ್ಕೆ ಕ್ರಮ. ಇದು ಲಾಕ್‌ಡೌನ್ ಅವಧಿಯಲ್ಲಿ ಜನತೆಯ ಕಷ್ಟಕಾರ್ಪಣ್ಯಗಳಿಗೆ ಹೀಗೂ ಸ್ಪಂದಿಸಲು ಸಾಧ್ಯವಿದೆ ಎಂಬುದನ್ನು ಮಂಗಳೂರು ಆಕಾಶವಾಣಿ ತೋರಿಸಿಕೊಟ್ಟಿದೆ.
ಕೊರೋನಾ ವಾರಿಯರ್ಸ್‌ನ್ನು ಮಾತನಾಡಿಸಿ, ಕೊರೋನಾ ಬಗ್ಗೆ ಹೇಗೆ ಕೆಲಸ ಮಾಡುತ್ತಿದ್ದಾರೆ, ಜನತೆಯ ಮುನ್ನೆಚ್ಚರಿಕೆಯಲ್ಲಿ ಇರಬೇಕಾದ ಔಚಿತ್ಯದ ಬಗ್ಗೆ ತಿಳಿ ಹೇಳಿದೆ. ಇದಲ್ಲದೆ ಜನತೆ ಮತ್ತು ಆಡಳಿತ ನಡುವೆ ಸೇತುವಾಗಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ಮಾತನಾಡಿಸಿದೆ. ಲಾಕ್‌ಡೌನ್ ಆರಂಭದಿಂದ ಇಲ್ಲಿವರೆಗೂ ಆಕಾಶವಾಣಿಯಲ್ಲಿ ಕೊರೋನಾ ಕುರಿತ ಬಿಡುವಿಲ್ಲದ ಕಾರ್ಯಕ್ರಮ ಪ್ರಸಾರವಾಗಿ ಕೇಳುಗರ ಮೆಚ್ಚುಗೆ ಗಳಿಸಿದೆ.
COVID19 ಹೆಚ್ಚುತ್ತಿರುವ ಹಿನ್ನೆಲೆ 30ರಂದು ವೈದ್ಯ, ಸಿಬ್ಬಂದಿ ನೇರ ಸಂದರ್ಶನ
ಆಕಾಶವಾಣಿಗೆ ಧ್ವನಿಯಾದವರು ಮಂಗಳೂರು ಆಕಾಶವಾಣಿ ದ.ಕ. ಮಾತ್ರವಲ್ಲ ಚಿಕ್ಕಮಗಳೂರು, ಉಡುಪಿ ಹಾಗೂ ಕಣ್ಣೂರು ವರೆಗೆ ಸುಮಾರು 42 ಲಕ್ಷದಷ್ಟುಶೋತೃಗಳನ್ನು ತಲುಪುವ ಪ್ರಸಾರ ವಿಸ್ತಾರವನ್ನು ಹೊಂದಿದೆ. ಇದಲ್ಲದೆ ನ್ಯೂಸ್ ಆನ್ ಏರ್ ಆ್ಯಪ್ ಮೂಲಕವೂ ಜಗತ್ತಿನಾದ್ಯಂತ ಬಿತ್ತರಗೊಳ್ಳುತ್ತಿದೆ.
ಸಹಾಯಕ ನಿರ್ದೇಶಕಿ ಉಷಾಲತಾ ಸರಪಾಡಿ ನೇತೃತ್ವದ ಆಕಾಶವಾಣಿ ತಂಡ, ಜಿಲ್ಲಾಡಳಿತ, ಪೊಲೀಸ್ ಅಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಆರೋಗ್ಯ ಅಧಿಕಾರಿಗಳು, ಕೊರೋನಾ ಸೋಂಕಿತ ಗುಣಮುಖರಾದವರು, ಆಶಾ ಕಾರ್ಯಕರ್ತೆಯರು, ಸ್ವಚ್ಛತಾ ಕಾರ್ಯಕರ್ತರು, ವಿವಿಧ ರಂಗದ ಗಣ್ಯರು, ಸಮಾಜಸೇವಕರು, ಕೊರೋನಾ ವಾರಿಯರ್ಸ್ ನೆಲೆಯಲ್ಲಿ ವಿಮಾನದ ಪೈಲಟ್, ಏರ್‌ಹೋಸ್ಟರ್ಸ್ ಹೀಗೆ ಹತ್ತುಹಲವು ಮುಖಗಳನ್ನು ಸಮಾಜಮುಖಿಯಾಗಿ ಬಿತ್ತರಿಸಿದೆ. ಆಕಾಶವಾಣಿ ರೇಡಿಯೋ ಮೂಲಕ ಹಳ್ಳಿಯ ಮೂಲೆ ಮೂಲೆಗಳಲ್ಲಿ ಕೊರೋನಾ ಜಾಗೃತಿ ಮೂಡಿಸುವಲ್ಲಿ ತನ್ನದೇ ಕಾಣಿಕೆ ನೀಡುತ್ತಿದೆ.
ಲಾಕ್‌ಡೌನ್ ಸಮೀಪದ ಕೇಂದ್ರಗಳಲ್ಲೇ ಕೆಲಸ!
ಲಾಕ್‌ಡೌನ್ ವೇಳೆಯಲ್ಲಿ ಅಲ್ಲಲ್ಲಿ ಸಿಲುಕಿಕೊಂಡಿದ್ದರೆ, ಅಲ್ಲಿಗೆ ಸಮೀಪದ ಆಕಾಶವಾಣಿ ಮತ್ತು ದೂರದರ್ಶನ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಲು ಇದೇ ಮೊದಲ ಬಾರಿಗೆ ಪ್ರಸಾರ ಭಾರತಿ ಅವಕಾಶ ಮಾಡಿಕೊಟ್ಟಿದೆ.
ಲಾಕ್‌ಡೌನ್‌ಗೆ ಮೊದಲು ಅನೇಕ ಸಿಬ್ಬಂದಿ ಪ್ರವಾಸ, ರಜೆ ಮೇಲೆ ಅಥವಾ ಅನಾರೋಗ್ಯ ರಜೆಯಲ್ಲಿದ್ದರು. ಲಾಕ್‌ಡೌನ್ ಆದ ಕೂಡಲೇ ಇವರೆಲ್ಲ ಕರ್ತವ್ಯಕ್ಕೆ ಮರಳುವ ಬಗ್ಗೆ ಚಿಂತಾಕ್ರಾಂತರಾಗಿದ್ದರು. ಇದಕ್ಕೆ ಸ್ಪಂದಿಸಿದ ಪ್ರಸಾರ ಭಾರತಿ, ಲಾಕ್‌ಡೌನ್‌ನಿಂದ ಎಲ್ಲೆಲ್ಲಿ ಬಾಕಿಯಾಗಿದ್ದಾರೋ ಅಲ್ಲಿಂದಲೇ ಸಮೀಪದ ಆಕಾಶವಾಣಿ ಅಥವಾ ದೂರದರ್ಶನ ಕೇಂದ್ರಗಳಿಗೆ ತೆರಳಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಟ್ಟಿದ್ದರು ಎಂದು ಆಕಾಶವಾಣಿ ಮತ್ತು ದೂರದರ್ಶನ ಎಂಜಿನಿಯರಿಂಗ್ ಉದ್ಯೋಗಿಗಳ ದಕ್ಷಿಣ ವಲಯ ಕಾರ್ಯದರ್ಶಿ ಚಂದ್ರಶೇಖರ್ ಹೇಳುತ್ತಾರೆ.
ಮೇ ಅಂತ್ಯಕ್ಕೆ ಉಷಾಲತಾ ನಿವೃತ್ತಿ
ಮಂಗಳೂರು ಆಕಾಶವಾಣಿಯ ಸಹಾಯಕ ನಿರ್ದೇಶಕಿಯಾಗಿರುವ ಉಷಾಲತಾ ಸರಪಾಡಿ ಮೇ ಅಂತ್ಯಕ್ಕೆ ಸೇವೆಯಿಂದ ನಿವೃತ್ತರಾಗಲಿದ್ದಾರೆ. 1993ರಲ್ಲಿ ಆಕಾಶವಾಣಿಗೆ ಸೇರ್ಪಡೆಯಾದ ಇವರು 27 ವರ್ಷಗಳ ಕಾಲ ಕಾರ್ಯನಿರ್ವಹಿಸಿದಂತಾಗುತ್ತದೆ. ಚಿತ್ರದುರ್ಗ, ಭದ್ರಾವತಿ, ಹಾಸನ, ಮತ್ತೆ ಚಿತ್ರದುರ್ಗ, ಬಳಿಕ 2017ರಲ್ಲಿ ಮಂಗಳೂರಿಗೆ ವರ್ಗಾವಣೆಗೊಂಡಿದ್ದರು.
ವಿದ್ಯಾರ್ಥಿನಿಯ ಕವನ ಪುಸ್ತಕಕ್ಕೆ ಅಭಿನಂದನಾ ಪತ್ರ ಬರೆದ ಶಿಕ್ಷಣ ಸಚಿವ
ಬದಲಾದ ಈ ಕಾಲಘಟ್ಟದಲ್ಲಿ ಆಕಾಶವಾಣಿ ಕೂಡ ಉಳಿದ ಮಾಧ್ಯಮಗಳಂತೆ ಜನಮನ ತಲುಪುವ ಕೆಲಸ ಮಾಡುತ್ತಿದೆ. ಮನರಂಜನೆ, ಶಿಕ್ಷಣ ಜೊತೆಗೆ ಸಮಾಜಮುಖಿ ಕೆಲಸವೂ ಆಕಾಶವಾಣಿಯಿಂದ ನಡೆಯುತ್ತಿರಬೇಕು ಎಂದು ಮಂಗಳೂರು ಆಕಾಶವಾಣಿ ಸಹಾಯಕ ನಿರ್ದೇಶಕಿ ಉಷಾಲತಾ ಸರಪಾಡಿ ತಿಳಿಸಿದ್ದಾರೆ.
-ಆತ್ಮಭೂಷಣ್