
ಮಂಡ್ಯ (ಏ.28): ರೈತರ ಸಮಸ್ಯೆಗಳಿಗೆ ಸ್ಪಂದಿಸದ ಮತ್ತು ಅಪಾಯಕಾರಿ ಸ್ಥಳದಲ್ಲಿರುವ ಟ್ರಾನ್ಸ್‌ಫಾರ್ಮರ್‌ಗಳನ್ನು ಸ್ಥಳಾಂತರಿಸಲು ನಿರ್ಲಕ್ಷ್ಯ ವಹಿಸಿದ ಸೆಸ್ಕಾಂ (Chescom) ಅಧಿಕಾರಿಗಳ ವಿರುದ್ಧ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾಂಡವಪುರದಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, 'ಸ್ವಲ್ಪ ಎಡವಟ್ಟಾದರೂ ನಾವೆಲ್ಲಾ ಜೈಲಿಗೆ ಹೋಗಬೇಕಾಗುತ್ತದೆ' ಎಂದು ಅಧಿಕಾರಿಗಳಿಗೆ ನೇರ ಎಚ್ಚರಿಕೆ ನೀಡಿದ್ದಾರೆ.
ನರಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದ ಬಳಿಯೇ ಅಪಾಯಕಾರಿ ರೀತಿಯಲ್ಲಿ ಟ್ರಾನ್ಸ್‌ಫಾರ್ಮರ್ (TC) ಅಳವಡಿಸಲಾಗಿದೆ. ಇದನ್ನು ಸ್ಥಳಾಂತರಿಸುವಂತೆ ಗ್ರಾಮಸ್ಥರು ಮತ್ತು ಅಂಗನವಾಡಿ ಸಿಬ್ಬಂದಿ ಹತ್ತಾರು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಕಿವಿಗೊಟ್ಟಿಲ್ಲ. ಈ ಬಗ್ಗೆ ಗರಂ ಆದ ಶಾಸಕರು, 'ಪುಟ್ಟ ಮಕ್ಕಳು ಓಡಾಡುವ ಅಂಗನವಾಡಿ ಬಳಿ ಟಿಸಿ ಇಟ್ಟುಕೊಂಡು ಏನು ಮಾಡ್ತಿದ್ದೀರಾ? ಅಲ್ಲಿ ಅನಾಹುತ ಸಂಭವಿಸಿದರೆ ಅದಕ್ಕೆ ಹೊಣೆ ಯಾರು? ಮೊದಲು ಅದನ್ನು ಸ್ಥಳಾಂತರಿಸಿ. ಅಧಿಕಾರಿಗಳಾದ ನೀವು ಮತ್ತು ನಾವು ಜೈಲಿಗೆ ಹೋಗುವ ಪರಿಸ್ಥಿತಿ ತಂದುಕೊಳ್ಳಬೇಡಿ' ಎಂದು ಪಾಂಡವಪುರ ಸೆಸ್ಕಾಂ ಇಇ (EE) ವಿನುತಾ ಹಾಗೂ ಎಇಇ (AEE) ರವಿಕುಮಾರ್ ಅವರಿಗೆ ವಾರ್ನಿಂಗ್ ನೀಡಿದರು.
ಬೇಸಿಗೆಯ ನೆಪ ಹೇಳಿ ಲೋಡ್ ಶೆಡ್ಡಿಂಗ್ ಮಾಡುತ್ತಿರುವ ಸೆಸ್ಕಾಂ ಸಿಬ್ಬಂದಿಗಳ ವಿರುದ್ಧವೂ ದರ್ಶನ್ ಪುಟ್ಟಣ್ಣಯ್ಯ ಸಿಡಿಮಿಡಿಗೊಂಡರು. "ಬೆಳೆಗಳಿಗೆ ನೀರು ಹರಿಸದಿದ್ದರೆ ರೈತರು ಕಷ್ಟಪಟ್ಟು ಬೆಳೆಸಿದ ಬೆಳೆ ನಾಶವಾಗುತ್ತದೆ. ಟ್ರಾನ್ಸ್‌ಫಾರ್ಮರ್ ಸುಟ್ಟು ಹೋದರೆ ದಿನಗಟ್ಟಲೆ ಕಾಯಿಸಬೇಡಿ, ತಕ್ಷಣವೇ ಬದಲಾಯಿಸಿ. ಪ್ರತಿ ಸೆಕ್ಷನ್ ಆಫೀಸ್‌ಗೆ ಅಗತ್ಯವಿರುವಷ್ಟು ಟಿಸಿಗಳನ್ನು ತಲುಪಿಸಿ. ಅದಿಲ್ಲ, ಇದಿಲ್ಲ ಎಂದು ಕಥೆ ಹೇಳುವ ಚಾಳಿ ಬಿಡಿ" ಎಂದು ತಾಕೀತು ಮಾಡಿದರು.
ಅಧಿಕಾರಿಗಳು ನೀಡುವ ಕುಂಟು ನೆಪಗಳಿಗೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕರು, 'ಎಲ್ಲವನ್ನೂ ಕೇವಲ ಲೆಕ್ಕಾಚಾರದ ಮೇಲೆ ನೋಡಲು ಸಾಧ್ಯವಿಲ್ಲ. ರೈತರ ಭಾವನೆ ಮತ್ತು ಬೆಳೆ ಎರಡೂ ಮುಖ್ಯ. ಟಿಸಿ ದುರಸ್ತಿ ವಿಚಾರದಲ್ಲಿ ವಿಳಂಬ ಧೋರಣೆ ಅನುಸರಿಸಿದರೆ ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ' ಎಂದು ಅಧಿಕಾರಿಗಳಿಗೆ ಖಡಕ್ ಸಂದೇಶ ರವಾನಿಸಿದರು. ಈ ಸಭೆಯ ನಂತರ ಸಾರ್ವಜನಿಕ ವಲಯದಲ್ಲಿ ಶಾಸಕರ ಈ ನಡೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಅಪಾಯಕಾರಿ ಸ್ಥಳಗಳಲ್ಲಿರುವ ವಿದ್ಯುತ್ ಉಪಕರಣಗಳ ಸ್ಥಳಾಂತರಕ್ಕೆ ವೇಗ ಸಿಗುವ ನಿರೀಕ್ಷೆಯಿದೆ.