
ಮಂಗಳೂರು (ಏ.28): ಎಂಜಿನಿಯರ್‌ಗಳು ಈ ಸಮಾಜಕ್ಕೆ, ದೇಶಕ್ಕೆ ಕೊಟ್ಟ ಕೊಡುಗೆಯನ್ನು ಮರೆಯುವಂತಿಲ್ಲ. ಅಭಿವೃದ್ಧಿ, ನಗರದ ಸೌಂದರ್ಯತೆಗೆ ಎಂಜಿನಿಯರ್‌ಗಳ ಕೊಡುಗೆ ಅನನ್ಯವಾದುದು ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು. ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಎಂಸಿಸಿ ರಿಜಿಸ್ಟರ್ಡ್ ಡಿಪ್ಲೊಮಾ ಸಿವಿಲ್ ಎಂಜಿನಿಯರ್ಸ್ ಹಾಗೂ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ ಮಂಗಳೂರು ಕೇಂದ್ರದ ಸಹಯೋಗದೊಂದಿಗೆ ನಡೆದ ಕೃತಜ್ಞತಾ ಸಮರ್ಪಣಾ ಸಮಾರಂಭ ಉದ್ಘಾಟಿಸಿ, ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ತಳ ಮಟ್ಟದಿಂದ ನಡೆಯುವ ಅಭಿವೃದ್ಧಿಗೆ ಮಾರ್ಗದರ್ಶನ ನೀಡುವವರು ಎಂಜಿನಿಯರ್‌ಗಳು. ಕೆಲಸದಲ್ಲಿ ಸ್ಕಿಲ್ ಅತಿ ಅಗತ್ಯ. ಡಿಪ್ಲೊಮಾ ಎಂಜಿನಿಯರ್‌ಗಳಲ್ಲಿ ಸ್ಕಿಲ್ ಇರುತ್ತದೆ ಎಂಬುದು ಅವರ ಕೊಡುಗೆಗಳಿಂದ ಕಾಣಬಹುದು. ಬಿಇ ಕಲಿತವರ ಜ್ಞಾನವೂ ಬೇಕು, ತಳಮಟ್ಟದಿಂದ ಕಲಿತವರೂ ಬೇಕು ಎಂದರು. ಡಿಪ್ಲೊಮಾ ಎಂಜಿನಿಯರ್‌ಗಳಿಗೆ ಎದುರಾಗಿದ್ದ ಸಮಸ್ಯೆಗಳನ್ನು ನಾವೆಲ್ಲರೂ ಸೇರಿ ಸರಕಾರದ ಹಂತದಲ್ಲಿ ಬಗೆಹರಿಸಿದ್ದೇವೆ.
ಅದು ನಮ್ಮ ಕರ್ತವ್ಯ. ನಿಮ್ಮಿಂದ ಜನರಿಗೆ ಪ್ರಯೋಜನ ಆಗಬೇಕು, ನಿಮಗೆ ಸಿಕ್ಕ ಅವಕಾಶದಲ್ಲಿ ಜನರಿಗಾಗಿ ಕೆಲಸ ಮಾಡಿ ಎಂದರು. ಶಾಸಕ ಡಿ.ವೇದವ್ಯಾಸ ಕಾಮತ್ ಸನ್ಮಾನ ಸ್ವೀಕರಿಸಿ ಮಾತನಾಡಿ, ನಿಮ್ಮೆ ಬೇಡಿಕೆ ಈಡೇರಿಸುವ ಮೂಲಕ ನಾವು ನಮ್ಮ ಕರ್ತವ್ಯ ಮಾಡಿದ್ದೇವೆ. ಮಾಡಿದ ಕೆಲಸವನ್ನು ಜನರಿಗೆ ತಿಳಿಸಿ ಗೌರವಿಸಿದ ಕಾರ್ಯಕ್ರಮ ಉತ್ತಮವಾದುದು, ಅಭಿನಂದನೀಯ ಎಂದರು.
ವೃತ್ತಿಪರ ಡಿಪ್ಲೊಮಾ ಸಿವಿಲ್ ಎಂಜಿನಿಯರ್ಸ್‌ಗಳ ಅರ್ಹತೆ ಮತ್ತು ಸಾಮರ್ಥ್ಯದಲ್ಲಿ ಆದ ಅನ್ಯಾಯದ ವಿರುದ್ಧ ಹೋರಾಟದಲ್ಲಿ ಕೈಜೋಡಿಸಿ, ಈ ಹಿಂದಿನ ಸ್ಥಾನಮಾನ ಪುನರ್‌ಸ್ಥಾಪಿಸಿ ನ್ಯಾಯ ಒದಗಿಸಿಕೊಡುವಲ್ಲಿ ಸಹಕರಿಸಿದ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್, ಶಾಸಕ ವೇದವ್ಯಾಸ ಕಾಮತ್ ಸೇರಿದಂತೆ ಸಹಕರಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು, ಸಹಕರಿಸಿದ ಪ್ರಮುಖರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.