'ನಾವೆಲ್ಲ ಹಿಂದೂ' ಎಂದ ವಿಜಯೇಂದ್ರ; ವೇದಿಕೆ ಮೇಲೆ ನುಗ್ಗಿ ಆಕ್ರೋಶ ಹೊರಹಾಕಿದ ಹೋರಾಟಗಾರರು

Published : Nov 29, 2026, 07:47 AM IST
Vijayendra

ಸಾರಾಂಶ

ಬಸವಕಲ್ಯಾಣದಲ್ಲಿ ನಡೆದ ಶರಣ ಕಮ್ಮಟದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು 'ನಾವೆಲ್ಲ ಹಿಂದೂ' ಎಂದಿದ್ದು ಲಿಂಗಾಯತ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಯಿತು. ಪ್ರತ್ಯೇಕ ಧರ್ಮದ ವಿಚಾರ ಕೈಬಿಡುವಂತೆ ಹೇಳಿದ್ದರಿಂದ ಸಭೆಯಲ್ಲಿ ಪರ-ವಿರೋಧ ಘೋಷಣೆಗಳು ಮೊಳಗಿ ಭಾರಿ ಗದ್ದಲ ಉಂಟಾಯಿತು.

ಬಸವಕಲ್ಯಾಣ (ಬೀದರ್‌): ಕೆಲ ಸೌಲತ್ತುಗಳಿಗಾಗಿ ಪ್ರತ್ಯೇಕ ಧರ್ಮದ ವಿಚಾರ ಕೈಬಿಟ್ಟು ‘ನಾವೆಲ್ಲ ಹಿಂದೂ, ಒಂದು’ ಅಂಬೋಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದು, ಇದು ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಗಾರರ ಕೋಪಕ್ಕೆ ಕಾರಣವಾಯಿತು.

ಬಸವಕಲ್ಯಾಣದಲ್ಲಿ ಶನಿವಾರ ನಡೆದ 47ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಆ ಜಾತಿ, ಈ ಜಾತಿ, ಈ ಧರ್ಮ, ಆ ಧರ್ಮ ಎಂದು ಹೇಳದೆ ನಾವೆಲ್ಲರೂ ಒಟ್ಟಾಗಿ ಹೋಗೋಣ. ನಾವೆಲ್ಲರೂ ಹಿಂದು, ನಾವೆಲ್ಲರೂ ಒಂದು ಎಂದು ಚಿಂತನೆ ಮಾಡೋಣ. ಸರ್ಕಾರದ ಸೌಲತ್ತಿಗಾಗಿ ನಾವು ಪ್ರತ್ಯೇಕ ಧರ್ಮ ಎಂದು ಚಿಂತನೆ ಮಾಡದಿರುವ ಅನಿವಾರ್ಯತೆ ಹಾಗೂ ಅವಶ್ಯಕತೆಯೂ ಇದೆ ಎಂದು ಹೇಳಿದರು.

ಗೋಬ್ಯಾಕ್‌ ವಿಜಯೇಂದ್ರ

ಈ ಸಂದರ್ಭದಲ್ಲಿ ವೇದಿಕೆ ಮುಂಭಾಗದಲ್ಲಿದ್ದ ಲಿಂಗಾಯತ ಪ್ರಮುಖರು ಆಕ್ರೋಶ ವ್ಯಕ್ತಪಡಿಸಿ, ಗೋಬ್ಯಾಕ್‌ ವಿಜಯೇಂದ್ರ ಎಂದು ವೇದಿಕೆಗೆ ನುಗ್ಗಲಾರಂಭಿಸಿದರು. ಕೆಲವರು ಸನಾತನ ಧರ್ಮಕ್ಕೆ ಜೈ, ಹಿಂದೂ ಧರ್ಮಕ್ಕೆ ಜೈ ಎಂಬ ಘೋಷಣೆ ಕೂಗಲಾರಂಭಿಸಿದರು. ಪರಿಸ್ಥಿತಿ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗುತ್ತಿದ್ದಂತೆ ಪೊಲೀಸರು, ಆಯೋಜಕರು ಮಧ್ಯ ಪ್ರವೇಶಿಸಿ ಭಾರಿ ಅನಾಹುತವನ್ನು ತಡೆದರು.

ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿನ ಹೋರಾಟ

ಅನುಭವ ಮಂಟಪ ಟ್ರಸ್ಟ್‌ ಅಧ್ಯಕ್ಷರಾದ ನಾಡೋಜ ಬಸವಲಿಂಗ ಪಟ್ಟದ್ದೇವರು ನಮ್ಮ ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿನ ಹೋರಾಟ ನಿಲ್ಲದು, ನಮ್ಮದೇಯಾದ ಸಿದ್ಧಾಂತವಿದೆ. ನಾವು ಮಾನ್ಯತೆ ಪಡೆದುಕೊಳ್ಳುತ್ತೇವೆ ಎಂಬ ವಿಶ್ವಾಸವಿದೆ ಎಂದು ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದರು. ಇನ್ನು ಪ್ರತ್ಯೇಕ ಲಿಂಗಾಯತ ಧರ್ಮವನ್ನು ಪ್ರಶ್ನಿಸಿದ ಬಿವೈ ವಿಜಯೇಂದ್ರ ಹಾಗೂ ಕೆಲ ಬಿಜೆಪಿ ಪ್ರಮುಖರು ಅಲ್ಲಿಂದ ಹೊರಟು ನಡೆದರು.

PREV
Read more Articles on
click me!

Recommended Stories

ಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಕ್ಕೆ ರಾಜ್ಯ ಸರ್ಕಾರದಿಂದ ಭೂಮಿ ಕೊಟ್ಟಿಲ್ಲ: ಹೆಚ್‌ಡಿಕೆ
ಬೆಂಗಳೂರಿನ ಈ ಪ್ರದೇಶಗಳಲ್ಲಿ ನಾಳೆ ವಿದ್ಯುತ್ ಇರಲ್ಲ! ನಿಮ್ ಏರಿಯಾ ಇದೆನಾ ಈಗಲೇ ಚೆಕ್ ಮಾಡಿ!