2 ಲಕ್ಷ ಮೌಲ್ಯದ ಬೆಳೆ ಕಳೆದುಕೊಂಡರೂ ಪರಿಹಾರ ಚೆಕ್ ವಾಪಸ್ ಮಾಡಿದ ರೈತ..!

By Kannadaprabha NewsFirst Published Aug 28, 2019, 8:38 AM IST
Highlights

ಮಂಡ್ಯದಲ್ಲಿ ತಾಲೂಕು ಆಡಳಿತ ನೀಡಿದ ಪರಿಹಾರ ಚೆಕ್‌ನ್ನು ರೈತ ವಾಪಸ್ ಮಾಡಿರುವ ಘಟನೆ ನಡೆದಿದೆ. ಲಕ್ಷಗಳಲ್ಲಿ ನಷ್ಟ ಅನುಭವಿಸಿದ ರೈತ ಸಾವಿರಗಳಲ್ಲಿ ಬಂದ ಪರಿಹಾರ ಮೊತ್ತವನ್ನು ತಿರಸ್ಕರಿಸಿದ್ದಾನೆ. ಹಾಗೆಯೇ ತಾಲೂಕು ಆಡಳಿತದ ಕ್ರಮವನ್ನು ಖಂಡಿಸಿದ್ದಾನೆ.

ಮಂಡ್ಯ(ಆ.28): ಅತಿವೃಷ್ಟಿಯಿಂದಾಗಿ ಲಕ್ಷಾಂತರ ರು. ಮೌಲ್ಯದ ಬಾಳೆ ಬೆಳೆ ಕಳೆದುಕೊಂಡ ರೈತನಿಗೆ, ಪರಿಹಾರದ ರೂಪವಾಗಿ ಕೇವಲ 1350 ರು. ನೀಡಿದ ಚೆಕ್‌ ನೀಡಿದ ತಾಲೂಕು ಆಡಳಿತದ ಕ್ರಮ ಖಂಡಿಸಿ ರೈತ ಚೆಕ್‌ ಅನ್ನೇ ವಾಪಸ್‌ ನೀಡಿದ ಪ್ರಸಂಗ ಜರುಗಿದೆ.

ತಾಲೂಕಿನ ಬೂಕನಕೆರೆ ಹೋಬಳಿಯ ವಿಜಯ ಹೊಸಹಳ್ಳಿ ಗ್ರಾಮದ ರೈತ ಸಿದ್ದಲಿಂಗೇಗೌಡ ಅವರು ಚೆಕ್‌ ಅನ್ನು ತಹಸೀಲ್ದಾರ್‌ಗೆ ಹಿಂತಿರುಗಿಸಿದ್ದಾರೆ.

ತಮ್ಮ 2 ಎಕರೆ 20 ಗುಂಟೆ ಜಮೀನಿನಲ್ಲಿ ಬಾಳೆ ಬೆಳೆ ಬೆಳೆದಿದ್ದರು. ಕಟಾವು ಮಾಡುವ ವೇಳೆಗೆ ಸುರಿದ ಭಾರಿ ಮಳೆಗೆ ಒಂದು ಎಕರೆ ಬಾಳೆ ಗಿಡಗಳು ಬುಡಸಮೇತ ಉರುಳಿ ಬಿದ್ದು ಸಂಪೂರ್ಣ ನಾಶವಾಗಿದ್ದವು. ಇದರಿಂದ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ನಷ್ಟಉಂಟಾಗಿತ್ತು. ಈ ಸಂಬಂಧ ರೈತ ಸಿದ್ದಲಿಂಗೇಗೌಡ ಸೂಕ್ತ ಪರಿಹಾರ ಕೋರಿ ತಹಸೀಲ್ದಾರ್‌ರವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.

ಮಂಡ್ಯ ಜಿಲ್ಲಾ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ದೂರಿನ ಮೇರೆಗೆ ಬಾಳೆ ತೋಟಕ್ಕೆ ಭೇಟಿ ನೀಡಿದ್ದ ಕಂದಾಯ, ಕೃಷಿ ಅಧಿಕಾರಿಗಳು ನಾಶವಾಗಿದ್ದ ಬೆಳೆ ವೀಕ್ಷಣೆ ಮಾಡಿ ಸೂಕ್ತ ಪರಿಹಾರ ಕೊಡುವುದಾಗಿ ಭರವಸೆ ನೀಡಿದ್ದರು. ಕೊನೆಗೆ ಪರಿಹಾರದ ರೂಪದಲ್ಲಿ ಕೇವಲ 1,350 ರು. ಚೆಕ್‌ ನೀಡಿದರು.

2 ಲಕ್ಷ ನಷ್ಟಕ್ಕೆ ಸಾವಿರಗಳಲ್ಲಿ ಪರಿಹಾರ:

ತೀವ್ರ ಅಸಮಾಧಾನಗೊಂಡ ರೈತ ಸಿದ್ದಲಿಂಗೇಗೌಡ, ಬಾಳೆ ಬೆಳೆ ಫಸಲು ಬೆಳೆಯಲು ಸುಮಾರು 75ರಿಂದ 80 ರು ಸಾವಿರ ಖರ್ಚು ಮಾಡಿದ್ದೆ. ಬಿರುಗಾಳಿ, ಮಳೆ ಬಂದು ಬಾಳೆ ನಾಶವಾಗದೇ ಇದ್ದರೆ ಸುಮಾರು 2 ಲಕ್ಷ ರು. ಆದಾಯ ಬರುತ್ತಿತ್ತು. ಆದರೆ ನೀವು ಕೇವಲ 1,350 ರು. ಪರಿಹಾರವನ್ನು ನೀಡಿ ಕೈತೊಳೆದುಕೊಂಡಿದ್ದೀರಿ. ಯಾವ ಆಧಾರದ ಮೇಲೆ ನೀಡಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ ರೈತ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.

ತಾಲೂಕು ಆಡಳಿತ ಕ್ರಮಕ್ಕೆ ಖಂಡನೆ:

ರೈತರು ಸಾಲ ಮಾಡಿ ಬೇಸಾಯ ಮಾಡುತ್ತಾರೆ. ಅವರಿಗೆ ಆಗಿರುವ ನಷ್ಟಕ್ಕೆ ಸೂಕ್ತ ಪರಿಹಾರ ನೀಡದೇ, ನಷ್ಟಗಿದ್ದರಲ್ಲಿ ಶೇ.1ರಷ್ಟುಪರಿಹಾರ ನೀಡುವ ಮೂಲಕ ರೈತರಿಗೆ ಅವಮಾನ ಮಾಡುತ್ತಿರುವ ಸರ್ಕಾರದ ಧೋರಣೆಯನ್ನು ತೀವ್ರವಾಗಿ ಖಂಡಿಸಿದ ರೈತ ಸಿದ್ದಲಿಂಗೇಗೌಡ, ಸರ್ಕಾರವು ವೈಜ್ಞಾನಿಕ ಬೆಳೆ ನಷ್ಟಪರಿಹಾರ ನೀಡಲಿ, ಇಲ್ಲವೇ ಯಾವುದೇ ಪರಿಹಾರ ಕೊಡುವುದೂ ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿ ತಹಸೀಲ್ದಾರ್‌ಗೆ ಮಂಗಳವಾರ ಚೆಕ್‌ ವಾಪಸ್‌ ನೀಡುವ ಮೂಲಕ ತಮ್ಮ ಅಸಮಾಧಾನವನ್ನು ಹೊರ ಹಾಕಿದರು.

ಮಂಡ್ಯ: ಹಂದಿ ಬೇಟೆಯಾಡಿದ ನಾಲ್ವರ ಬಂಧನ

click me!