
ಮಂಡ್ಯ (ಸೆ.27): ಬದುಕಿರುವ ವ್ಯಕ್ತಿಯೊಬ್ಬರಿಗೆ ಎರಡು ವರ್ಷಗಳ ಹಿಂದೆಯೇ ಮರಣ ಪ್ರಮಾಣಪತ್ರ ನೀಡಿ ಅಧಿಕಾರಿಗಳು ಮಾಡಿರುವ ಎಡವಟ್ಟಿನಿಂದ ಜೀವಂತ ಮನುಷ್ಯ ಸತ್ತಂತೆ ಅಲೆದಾಡುವಂತಾಗಿದೆ. ಪಡಿತರ, ಬ್ಯಾಂಕ್ ವಹಿವಾಟು ಸ್ಥಗಿತಗೊಂಡಿವೆ, ಸರ್ಕಾರಿ ಸೌಲಭ್ಯಗಳು ಬಂದ್ ಆಗಿವೆ. ತಾನು ಬದುಕಿದ್ದೇನೆ ಎಂದು ಸಾಬೀತುಪಡಿಸಿಕೊಳ್ಳಲು ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿದ್ದರೂ ಇದುವರೆಗೂ ಆತನಿಗೆ ನ್ಯಾಯ ಮಾತ್ರ ಸಿಗುತ್ತಿಲ್ಲ. ಇದರಿಂದ ಆತನ ಕುಟುಂಬವೂ ಸಂಕಷ್ಟಕ್ಕೆ ಸಿಲುಕಿದೆ.
ನಗರದ ಗುತ್ತಲು ಬಡಾವಣೆಯ ನಿವಾಸಿ ಶಫಿಉಲ್ಲಾ ಖಾನ್ ಬದುಕಿರುವಾಗಲೇ ಮರಣ ಪ್ರಮಾಣಪತ್ರ ಪಡೆದುಕೊಂಡಿರುವ ವ್ಯಕ್ತಿ. ಇವರು ಸ್ಕೂಟ್ ಮೆಕ್ಯಾನಿಕ್ ಆಗಿ ಕೆ.ಎಂ.ದೊಡ್ಡಿಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಪ್ರಸ್ತುತ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ನಡೆದು ಮೃತಪಟ್ಟಿರುವವರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿದ್ದಾರೆ. ಆದರೆ, ಇಲ್ಲಿ ಬದುಕಿರುವ ವ್ಯಕ್ತಿಗೆ ಮರಣ ಪ್ರಮಾಣಪತ್ರ ಸೃಷ್ಟಿಸಿ ಸರ್ಕಾರದ ದಾಖಲೆಗಳಿಂದ ಆತನ ಹೆಸರನ್ನು ಕೈಬಿಟ್ಟು ತ್ರಿಶಂಕು ಸ್ಥಿತಿಯಲ್ಲಿರಿಸಿರುವುದು ಅಚ್ಚರಿಗೆ ಕಾರಣವಾಗಿದೆ.
ಕಳೆದ ಮೂರು ತಿಂಗಳಿಂದ ಶಫಿಉಲ್ಲಾಖಾನ್ ಕುಟುಂಬಕ್ಕೆ ಪಡಿತರ ಸ್ಥಗಿತಗೊಂಡಿತ್ತು. ನ್ಯಾಯಬೆಲೆ ಅಂಗಡಿಗೆ ಹೋಗಿ ವಿಚಾರಿಸಿದಾಗ ಕೆವೈಸಿ ಮಾಡಿಸುವಂತೆ ಸಲಹೆ ನೀಡಿದರು. ಕೆವೈಸಿ ಮಾಡಿಸಲು ಹೋದ ಸಮಯದಲ್ಲಿ ಶಫೀಉಲ್ಲಾ ಖಾನ್‌ಗೆ ಶಾಕ್ ಕಾದಿತ್ತು. ನೀವು 2024ರಲ್ಲೇ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ನಮೂದಿಸಿ ಮರಣ ಪ್ರಮಾಣ ಪತ್ರವನ್ನೇ ಸೃಷ್ಟಿಸಿದ್ದರು. ಅದನ್ನು ಶಫಿಉಲ್ಲಾಖಾನ್ ಕೈಗೆ ನೀಡಿದರು.
ಆಹಾರ ಇಲಾಖೆಗೆ ತೆರಳಿ ವಿಚಾರಿಸಿದಾಗ ಆದಾಯ ಪ್ರಮಾಣಪತ್ರ ತರುವಂತೆ ತಿಳಿಸಿದರು. ನಂತರ ತಾಲೂಕು ಕಚೇರಿಗೆ ಆದಾಯ ಪ್ರಮಾಣ ಪತ್ರಕ್ಕೆ ಅರ್ಜಿ ಹಾಕಿದಾಗ ಅಲ್ಲಿಯೂ ಮೃತಪಟ್ಟಿರುವುದಾಗಿ ಅಧಿಕಾರಿಗಳಿಂದ ಉತ್ತರ ಬಂತು. ನಂತರ ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಹಲವು ಕಚೇರಿಗಳನ್ನು ಅಲೆದಾಡಿದರೂ ಯಾರಿಂದಲೂ ತಾವು ಸಾವನ್ನಪ್ಪಿರುವ ಸಂಬಂಧ ಸರಿಯಾದ ಉತ್ತರ ಸಿಗದೆ ಶಫಿಉಲ್ಲಾಖಾನ್ ದಿಕ್ಕೆಟ್ಟರು.
ಕೊನೆಗೆ ನಗರಸಭೆಗೆ ಹೋಗಿ ವಿಚಾರಿಸಿದಾಗಲೂ 2024ರಲ್ಲೇ ನೀವು ಸಾವನ್ನಪ್ಪಿದ್ದೀರೆಂದು ಅದೇ ಮರಣ ಪ್ರಮಾಣ ಪತ್ರವನ್ನು ಶಫಿಉಲ್ಲಾಖಾನ್ ಕೈಗಿಟ್ಟಿದ್ದಾರೆ. ಬದುಕಿರುವ ಇವರಿಗೆ ಮರಣ ಪ್ರಮಾಣಪತ್ರ ಸಿಕ್ಕಿರುವುದನ್ನು ಕಂಡು ಇಡೀ ಕುಟುಂಬವೇ ಬೆಚ್ಚಿಬಿದ್ದಿದೆ.
ಆ ನಂತರದಲ್ಲಿ ಮಿಮ್ಸ್ ಆಸ್ಪತ್ರೆಗೆ ತೆರಳಿ ವಿಚಾರಿಸಿದಾಗ ಅಲ್ಲಿನ ಅಧಿಕಾರಿಗಳ ವಾದವೇ ವಿಚಿತ್ರವಾಗಿತ್ತು. ಶಫಿಉಲ್ಲಾಖಾನ್ ಎಂಬ ವ್ಯಕ್ತಿಗೆ ನಮ್ಮ ಆಸ್ಪತ್ರೆಯಲ್ಲಿ ಮೂರು ತಿಂಗಳ ಕಾಲ ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಬಳಿಕ ಮರಣೋತ್ತರ ಪರೀಕ್ಷೆಯನ್ನೂ ಮಾಡಿರುವುದಾಗಿ ಅಧಿಕಾರಿಗಳು ವಾದಿಸುತ್ತಿದ್ದಾರೆ.
ಇಲ್ಲಿ ಬದುಕಿರುವ ಶಫಿಉಲ್ಲಾಖಾನ್ ಕಣ್ಣೆದುರಿಗೆ ನಿಂತಿದ್ದರೂ ಕಾಗದದ ಮೇಲೆ ಮಾತ್ರ ಶವವಾಗಿದ್ದಾರೆ. ಹಾಗಾದರೆ ಮಿಮ್ಸ್‌ನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ವ್ಯಕ್ತಿ ಯಾರು ಎನ್ನುವುದು ಎಲ್ಲರ ಮುಂದಿರುವ ಪ್ರಶ್ನೆ. ಇದು ತನಿಖೆಯಿಂದ ಹೊರಬೀಳಬೇಕಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲು ಹೋದರೆ ದೂರನ್ನು ಸ್ವೀಕರಿಸುತ್ತಿಲ್ಲ. ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಅಲ್ಲಿ ಹೋಗಿ, ಇಲ್ಲಿ ಹೋಗಿ ಎಂದು ಅಲೆದಾಡಿಸುತ್ತಿದ್ದಾರೆ. ಕಚೇರಿಯಿಂದ ಕಚೇರಿಗೆ ಅಲೆದಾಡಿ ಸುಸ್ತಾಗಿರುವ ಶಫಿಉಲ್ಲಾಖಾನ್ ನ್ಯಾಯ ಸಿಗದೆ ಕಣ್ಣೀರಿಡುತ್ತಿದ್ದಾರೆ.
ನಾನು ಜೀವಂತವಾಗಿದ್ದರೂ ನನ್ನನ್ನು ಸತ್ತವನೆಂದು ದಾಖಲೆಗಳಲ್ಲಿ ನಮೂದಿಸಿದ್ದಾರೆ. ಈಗ ನನಗೆ ಪಡಿತರ ಸಿಗುತ್ತಿಲ್ಲ. ಬ್ಯಾಂಕ್ ವಹಿವಾಟುಗಳೂ ಸ್ಥಗಿತಗೊಂಡಿದೆ. ಎಲ್ಲಿ ಹೋದರೂ ನೀನು ಮೃತಪಟ್ಟಿರುವುದಾಗಿ ದಾಖಲೆಗಳನ್ನು ತೋರಿಸುತ್ತಿದ್ದಾರೆ. ಅಧಿಕಾರಿಗಳ ಬಳಿ ನ್ಯಾಯ ಕೇಳಿದರೆ ಯಾರೂ ಸರಿಯಾಗಿ ಸ್ಪಂದಿಸುತ್ತಿಲ್ಲ. ನನಗೆ ಹೃದಯ ಸಂಬಂಧಿ ಖಾಯಿಲೆಯಿದ್ದು, ಪಡಿತರ ಚೀಟಿ ತೆಗೆದುಕೊಂಡು ಹೋದರೂ ಚಿಕಿತ್ಸೆಗೆ ಪ್ರಯೋಜನವಾಗುತ್ತಿಲ್ಲ. ಜೀವಂತ ಮನುಷ್ಯ ಸತ್ತಂತೆ ಅಲೆಯುವಂತಾಗಿದೆ.
- ಶಫಿಉಲ್ಲಾಖಾನ್, ಸಂತ್ರಸ್ತ ವ್ಯಕ್ತಿ.
ಇಂತಹ ನಾಲ್ಕು ದಾಖಲೆಗಳು ನನ್ನ ಬಳಿ ಇವೆ. ಮತ್ತಷ್ಟು ಮಾಹಿತಿಯನ್ನು ಕಲೆಹಾಕುತ್ತಿದ್ದೇನೆ. ಶೀಘ್ರದಲ್ಲೇ ಉನ್ನತ ತನಿಖಾ ಸಂಸ್ಥೆಗೆ ದೂರು ನೀಡುತ್ತೇನೆ. 2024ರಲ್ಲಿ ಮಿಮ್ಸ್‌ನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ವ್ಯಕ್ತಿ ಯಾರು ಎನ್ನುವುದು ಬಹಿರಂಗವಾಗಬೇಕಿದೆ. ಇದರಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಕೈವಾಡವಿರುವ ಶಂಕೆ ಇದೆ.
- ಫಿಲಿಪ್ಸ್, ಸಾಮಾಜಿಕ ಹೋರಾಟಗಾರ