ಬೆಂಗಳೂರಿನ 50 ಹಳ್ಳಿಯ ಜನರಿಗೆ ಭೂಮಿ ವಾಪಸ್ ಕೊಡಿಸಲು ಬೃಹತ್ ಹೋರಾಟ - ಕುಮಾರಸ್ವಾಮಿ ಘೋಷಣೆ

Published : Sep 27, 2026, 07:38 PM IST
hd kumaraswamy

ಸಾರಾಂಶ

ಅಕ್ಟೋಬರ್ 2 ರಿಂದ ನನ್ನ ಹೋರಾಟ ಶುರು. ನೈಸ್ ರಸ್ತೆ ವಿಚಾರಕ್ಕೆ ಸಂಬಂಧಿಸಿ ದಾಖಲೆಗಳನ್ನು ಬಿಡುಗಡೆ ಮಾಡ್ತೀನಿ. ಅಲ್ಲದೇ 50 ಹಳ್ಳಿಯ ಜನರಿಗೆ ಭೂಮಿ ವಾಪಸ್ ಕೊಡಿಸಲು ಬೃಹತ್ ಹೋರಾಟ ಮಾಡ್ತೀನಿ ಎಂದು ಹೆಚ್‌ಡಿ ಕುಮಾರಸ್ವಾಮಿ ಅವರು ಘೋಷಣೆ ಮಾಡಿದ್ದಾರೆ. ಸ್ಟೋರಿಯ ಸಂಪೂರ್ಣ ಮಾಹಿತಿಗಾಗಿ ಲಿಂಕ್ ಕ್ಲಿಕ್ ಮಾಡಿ..

ಬೆಂಗಳೂರು: ಸಿಲಿಕಾನ್ ಸಿಟಿಯ ಮಾದಾವರ ನೈಸ್ ಜಂಕ್ಷನ್ ಬಳಿ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರು ಮಹತ್ವದ ಸಭೆ ನಡೆಸಿದರು. ನೈಸ್ ಇಂಟಿಗ್ರೇಟೆಡ್ ರಸ್ತೆಯ ಬಾಧಿತ ಗ್ರಾಮಗಳ ಜನರಿಂದ ಅಹವಾಲು ಸ್ವೀಕರಿಸಿದರು. ಮಾದಾವರ, ಶ್ರೀಕಂಠಪುರ, ಅಂಚೆಪಾಳ್ಯ, ತೋಟದಗುಡ್ಡದಹಳ್ಳಿ, ತಮ್ಮೇನಹಳ್ಳಿ ಗ್ರಾಮಗಳ ನೂರಾರು ಜನರು ನೈಸ್ ಯೋಜನೆ ವಿರುದ್ಧ ದೂರುಗಳನ್ನು ಸಲ್ಲಿಸಿದರು.

ಬಳಿಕ ಮಾತನ್ನಾಡಿದ ಕುಮಾರಸ್ವಾಮಿ.. ಮಾಜಿ ಪ್ರಧಾನಿ ದೇವೇಗೌಡರ ಕಾಲ ಮುಗಿದೇ ಹೋಯ್ತು ಅಂದರು. ನಿಮ್ಮ ಆಶೀರ್ವಾದದಿಂದ ದೆಹಲಿಯಲ್ಲಿ ಸಚಿವನಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ದೇವೇಗೌಡರು ವ್ಹೀಲ್ ಚೇರ್‍‌ನಲ್ಲಿ ಓಡಾಡಬೇಕು, ಡಯಾಲಿಸೀಸ್ ಮಾಡಬೇಕು. ಈಗಲೂ ಜನರ ಪರವಾಗಿ ಹೋರಾಟ ಮಾಡ್ತೀನಿ ಎಂದು ಬರುತ್ತಾರೆ. ಅವರು ಮನೆಯಲ್ಲಿ ಇರಬಹುದಲ್ಲ, ಯಾಕೆ ಬರುತ್ತಾರೆ? ನಿಮ್ಮಂತ ಜನರ ಪರವಾಗಿ ಹೋರಾಟ ಮಾಡಲು ಬರ್ತಾರೆ. ನಿಮಗೆ ಮಾತು ಕೊಟ್ಟು ಹೋಗ್ತಾ ಇದ್ದೇನೆ. ಮುಂದಿನ ಅಕ್ಟೋಬರ್ 2 ಗಾಂಧಿ ಜಯಂತಿ ಯಂದು ಕಾರ್ಯಕ್ರಮ ಮಾಡ್ತೇನೆ. ಸುಮಾರು ಐವತ್ತು ಹಳ್ಳಿಯ ಜನರಿಗೆ ಭೂಮಿ ವಾಪಸ್ ಕೊಡಬೇಕು ಎಂದು ಆಂದೋಲನ ಮಾಡುತ್ತೇನೆ. ಇಲ್ಲಿಂದ ಎಲೆಕ್ಟ್ರಾನಿಕ್ ಸಿಟಿವರೆಗೆ ಪ್ರವಾಸ ಮಾಡ್ತೇನೆ ಎಂದಿದ್ದಾರೆ. ಯಾವುದಕ್ಕೂ ಅಂಜಬೇಡಿ. ಎಷ್ಟು ಜನ ಬರ್ತಾರೋ ಬರಲಿ. ನೀವೆಲ್ಲಾ ಒಗ್ಗಟ್ಟಾಗಿರಿ. ಕೋರ್ಟ್ ನಿಂದ ಕೆಲವರು ಸ್ಟೇ ತಂದಿದ್ದರೂ, ಅದನ್ನು ಈ ಸರ್ಕಾರ ಪರಿಗಣಿಸ್ತಿಲ್ಲ ಇಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಏನಂದ್ರು ಕುಮಾರಸ್ವಾಮಿ?

ಮುಖ್ಯಮಂತ್ರಿ ಡಿಕೆ ಶಿವಕುಮಾರ್‍‌ಗೆ ಈ ವೇದಿಕೆ ಮೂಲಕ ಕೇಳಲು ಬಯಸುತ್ತೇನೆ. 2003ರಲ್ಲಿ ಅಮಾಸೆ ಗೌಡ ಎಂಬುವವರ ಬಳಿ ನೋಟಿಫಿಕೇಷನ್ ಆದ ಭೂಮಿ ಕೊಂಡುಕೊಂಡು ಏನೆಲ್ಲಾ ನಡೆಸಿದ್ರಿ? ಮುಂದಿನ ದಿನಗಳಲ್ಲಿ ದಾಖಲೆಗಳನ್ನು ಇಡ್ತೀನಿ. ನೀವು ದೇವೇಗೌಡರ ಕುಟುಂಬದ ಬಗ್ಗೆ ಮಾತಾಡ್ತೀರಾ? ಬಿಡದಿಯಲ್ಲಿ ಪ್ರತಿಭಟನೆ ಮಾಡ್ತಾ ಇರುವ ರೈತರನ್ನು ಬಂಧಿಸಿ ಐದಾರು ಕಿಮೀ ದೂರ ಕರೆದುಕೊಂಡು ಹೋಗಿ ಬಿಟ್ಡಿದ್ದೀರಾ. ಇದು ನಿಮ್ಮ ಜನಪರ ಆಡಳಿತ. ನಾನು ಮೂರು ಸಲ ಹೃದಯದ ಚಿಕಿತ್ಸೆಗೆ ಒಳಗಾದವನು. ಈ ಬಿಸಿಲಿನಲ್ಲಿ ಬಂದು ಇಲ್ಲಿ ಕೂರುವ ಅವಶ್ಯಕತೆ ಏನಿದೆ? ನಾನು ಜನರ ಪರವಾಗಿ ಕೆಲಸ ಮಾಡಲು ಬಂದಿದ್ದೇನೆ. ರೈತನ ಮಗ ಅಂತೀಯಾ, ಜನರ ಬದುಕನ್ನು ಸರಿಪಡಿಸಪ್ಪಾ ಶಿವಕುಮಾರ್. ಇವರ ಅಪ್ಪ ಕನಕಪುರದಲ್ಲಿ ಚಿನ್ನ ಅಳೆಯುತ್ತಾ ಇದ್ರಂತೆ. ಚಿನ್ನ ಅಳೆದೇ ಬೆಂಗಳೂರನ್ನ ಈ ಮಟ್ಟಕ್ಕೆ ತಂದ್ರಾ? ನಾನು ಜನತೆಗೆ ಕರೆ ನೀಡುತ್ತಿದ್ದೇನೆ. ಒಗ್ಗಟ್ಟಾಗಿ ನಿಂತುಕೊಳ್ಳಿ. ಅದ್ಯಾವ ಜೆಸಿಬಿ ತಂದು ಮನೆ ಒಡೆಯುತ್ತಾರೋ ನೋಡೋಣ ಎಂದರು.

ನಿಮ್ಮ ನೋವು, ಕಣ್ಣೀರನ್ನು ದುರ್ಬಳಕೆ ಮಾಡಿಕೊಂಡು ರಾಜಕೀಯವಾಗಿ ಶಕ್ತಿ ಬೆಳೆಸಿಕೊಳ್ಳಬೇಕು ಅನ್ನೋ ದುರುದ್ದೇಶ ನನಗಿಲ್ಲ. ಬೆಂಗಳೂರು ಸುತ್ತಮುತ್ತ ಯಾಕೆ ಈ ಸಮಸ್ಯೆ ಗಳು ಉದ್ಭವ ಆಗಿದೆ? 1995 ರಿಂದ ಈ ಸಮಸ್ಯೆ ಗಳು ಆರಂಭವಾಗಿವೆ. ಒಂದು ರಸ್ತೆ ವಿಚಾರವಾಗಿ ಶುರುವಾದ ಸಮಸ್ಯೆ ಗಳಿವೆ. ಈ ಸರ್ಕಾರಕ್ಕೆ ಕನಿಕರ ಇಲ್ಲವೇ? ನಿಮ್ಮನ್ನು ಬೀದಿಗೆ ತಂದು ಈ ಯೋಜನೆ ತರಬೇಕು ಅನ್ನೋ ಉದ್ದೇಶ ಯಾಕೆ? ಕಷ್ಟ ಪಟ್ಟು ಬೆವರು ಸುರಿಸಿ ಸಂಪಾದಿಸಿ ಮನೆ ಕಟ್ಟಿ ನೆಮ್ಮದಿಯಿಂದ ಇದ್ರಿ. ಈ ಯೋಜನೆಗೆ ಹಿಂದೆ ನಿಂತು ಉತ್ತೇಜನ ಕೊಡ್ತಾ ಇರುವ ಜನಪ್ರತಿನಿಧಿಗಳಿಗೂ ಕೇಳ್ತೇನೆ. ನೈಸ್ ಸಂಸ್ಥೆಯ ವ್ಯಕ್ತಿಯ ಅನುಕೂಲಕ್ಕಾಗಿ ಸಾವಿರಾರು ಕುಟುಂಬ ದ ನೆಮ್ಮದಿ ಯಾಕೆ ಹಾಳು ಮಾಡ್ತಾ ಇದ್ದೀರಾ.

ಹಿಂದೆ ಮನೆಗಳನ್ನು ಕಟ್ಟುವಾಗಲೇ ಮುಂದೆ ಇಲ್ಲಿ ರಸ್ತೆ ಬರುತ್ತೆ ಅಂತ ನಿಲ್ಲಿಸಬೇಕಿತ್ತು. ಆ ನೈಸ್ ಮಾಲೀಕ ಯಾವುದೋ ಟಿವಿಯಲ್ಲಿ ಹೇಳ್ತಾನೆ. ನಾನು ಕೋರ್ಟ್ ಗೆ ಹೋದರೆ ಎರಡು ಲಕ್ಷ ಕೋಟಿ ಸರ್ಕಾರ ಕೊಡಬೇಕಾಗುತ್ತೆ. ಈ ಸರ್ಕಾರಕ್ಕೆ ದುಡ್ಡು ಕೊಡಲು ಆಗಲ್ಲ. ನನಗೆ ವಿಧಾನ ಸೌಧ ಬರೆದುಕೊಡಬೇಕಾಗುತ್ತೆ ಅಂತಾನೆ. ಬೇರೆ ರಾಜ್ಯಗಳಲ್ಲಿ ಈ ರೀತಿ ಆಗಿದ್ರೆ ಯಾವ ರೀತಿ ದಾಳಿ ಆಗುತ್ತಿತ್ತೇನೋ? ನಾವು ಸ್ವಲ್ಪ ಸುಸಂಸ್ಕೃತ ವಾಗಿ ಇದ್ದೇವೆ. ಇವನು ರಾಜ್ಯಕ್ಕೆ ಬಂದಾಗ ಕೇರ್ ಆಫ್ ಪುಟ್ ಪಾತ್. ನಿಮಗೆ ಒಂದು ಮಾತು ಕೊಡ್ತೇನೆ. ಈ ನಾಡು ಉಳಿಯಬೇಕು ಅಂದ್ರೆ, ನಿಮ್ಮ ಕುಟುಂಬ ಗಳು ಉಳಿಯಬೇಕು ಅಂದ್ರೆ ಒಗ್ಗಟ್ಟಾಗಿ ಬೀದಿಗೆ ಇಳಿಯಿರಿ ಎಂದರು.

PREV
Read more Articles on
click me!

Recommended Stories

ಬೆಂಗಳೂರಿನಲ್ಲಿ ಅಡುಗೆಯವರಿಗೆ ತಿಂಗಳಿಗೆ ₹8 ಸಾವಿರ ಸಂಬಳ ಕೊಡ್ತಿರೋದು ಊಟಕ್ಕಲ್ಲ, ನೆಮ್ಮದಿಗೆ! ವೈರಲ್ ಪೋಸ್ಟ್
127% ಸ್ಯಾಲರಿ ಹೈಕ್ VS ರಿಟೆನ್ಷನ್ ಆಫರ್; ಬೆಂಗಳೂರು ಉದ್ಯೋಗಿ ಗೊಂದಲಕ್ಕೆ ರೆಡ್ಡಿಟ್ ನೆಟ್ಟಿಗರು ಹೇಳಿದ್ದೇನು?