ಬೆಂಗಳೂರಲ್ಲಿ ಐದು ತಿಂಗಳ ನಾಯಿ ಮೇಲೆ ಹೀನ ಕೃತ್ಯ, ಭಾರೀ ಆಕ್ರೋಶ ವ್ಯಕ್ತವಾಗಿದೆ

Published : Sep 27, 2026, 06:52 PM IST
attack on puppy

ಸಾರಾಂಶ

ಐದು ತಿಂಗಳ ನಾಯಿ ಮರಿ ಮೇಲೆ ರಾಕ್ಷಸೀಯ ಕೃತ್ಯ ನಡೆಸಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ. ಕೃತ್ಯದ ಬಳಿಕ ಆತ ಕೊಟ್ಟಿರುವ ಕಾರಣ ತುಂಬಾ ವಿಚಿತ್ರವಾಗಿದೆ. ಏನಿದು ಪ್ರಕರಣ? ಸ್ಟೋರಿ ಓದಿ..

ಬೆಂಗಳೂರು: ನೆಲಮಂಗಲ ಬಳಿಯ ಮಾದನಾಯಕನಹಳ್ಳಿಯಲ್ಲಿ ಅಮಾನವೀಯ ಪ್ರಕರಣ ಒಂದು ಬೆಳಕಿಗೆ ಬಂದಿದ್ದು, ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆ ನಡೆಸ್ತಿದ್ದಾರೆ.

ಆಗಿದ್ದು ಏನು?

ಕಳೆದ ಸೆಪ್ಟೆಂಬರ್ 20ರಂದು ಮಾದನಾಯಕನಹಳ್ಳಿಯ ಕಣ್ಣ ಲೇಔಟ್‌ನಲ್ಲಿ ಪ್ರಾಣಪ್ರಿಯರೊಬ್ಬರು ಬೀದಿ ನಾಯಿಗಳಿಗೆ ಆಹಾರ ಹಾಕುತ್ತಿದ್ದರು. ಈ ವೇಳೆ 65 ವರ್ಷದ ನಿವಾಸಿ ಎಸ್.ಕೃಷ್ಣಮೂರ್ತಿ ಎಂಬಾತ ಕೈಯಲ್ಲಿ ಏರ್‌ಗನ್ ಹಿಡಿದು ನಿಂತಿದ್ದ. ನಾಯಿಗಳನ್ನು ನೋಡಿದ ಆತ ತನ್ನ ಏರ್‍‌ಗನ್‌ನಿಂದ ಗುಂಡೇಟು ಕೊಟ್ಟಿದ್ದಾನೆ. ಅದು ನಾಯಿ ಮರಿಗೆ ಬಂದು ತಗುಲಿದ್ದು, ಅದರ ಕುತ್ತಿಗೆ ಭಾಗಕ್ಕೆ ಗಂಭೀರ ಪೆಟ್ಟು ಬಿದ್ದಿದೆ.

ಇದನ್ನು ಗಮನಿಸಿದ ಪ್ರಾಣಿಪ್ರಿಯರಾದ ಸಿಂಧು ಮತ್ತು ಸಹನಾ .. ಕೂಡಲೇ ನಾಯಿಮರಿಯನ್ನು ಆಟೋದಲ್ಲಿ ತುಂಬಿಕೊಂಡು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಪ್ರಾಣಿಪ್ರಿಯರ ಸಮಯಪ್ರಜ್ಞೆ ನಾಯಿ ಮರಿಯ ಜೀವ ಉಳಿದಿದೆ. ನಂತರ ಆರೋಪಿ ಕೃಷ್ಣಮೂರ್ತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಆರೋಪಿ ಹೇಳಿದ್ದೇನು?

ಪೊಲೀಸ್ ವಿಚಾರಣೆ ವೇಳೆ ಆರೋಪಿ ಕೃಷ್ಣಮೂರ್ತಿ, ನಾಯಿ ಮರಿಗೆ ಗುಂಡು ಹಾರಿಸಿದ್ದನ್ನು ಸಮರ್ಥಿಸಿಕೊಂಡಿದ್ದಾನೆ. ನನ್ನ ಹಿತ್ತಲಿನಲ್ಲಿ ಕೋಳಿ, ಮೇಕೆ ಮತ್ತು ಕುರಿಗಳನ್ನು ಸಾಕಿದ್ದೇನೆ. ಬೀದಿ ನಾಯಿಗಳು ಬಂದು ಅವುಗಳನ್ನು ತಿಂದುಹಾಕಬಹುದು ಎಂಬ ಭಯವಿತ್ತು. ಹೀಗಾಗಿ ಅವುಗಳನ್ನು ಹೆದರಿಸಿ ಓಡಿಸಲು ದೂರದಿಂದ ಗಾಳಿಯಲ್ಲಿ ಗುಂಡು ಹಾರಿಸಿದೆ. ಆ ನಾಯಿಮರಿಗೆ ತಗಲುತ್ತದೆ ಎಂದು ಊಹಿಸಿರಲಿಲ್ಲ ಎಂದು ಕ್ಷಮೆ ಕೇಳಿದ್ದಾನೆ.

ಈ ಪ್ರಕರಣವು ಹಲವು ಚರ್ಚೆಗಳಿಗೆ ಕಾರಣವಾಗಿದೆ. ಕೇವಲ ಐದು ತಿಂಗಳ ನಾಯಿ ಮರಿಯಿಂದ ಆತನ ಜಾನುವಾರುಗಳಿಗೆ ಅಪಾಯವಿತ್ತಾ? ಅದು ಮೇಕೆ, ಕೋಳಿಗಳನ್ನ ಬೇಟೆ ಆಡಲು ಸಾಧ್ಯವಿತ್ತೇ? ಏರ್‍ ಗನ್‌ಗೆ ಲೈಸೆನ್ಸ್ ಸಿಕ್ಕಿದೆ ಎಂಬ ಕಾರಣಕ್ಕೆ ಅದನ್ನೂ ಹೇಗೆ ಬೇಕಾದರೂ ಬಳಸಿಕೊಳ್ಳಬಹುದಾ? ಕ್ಷುಲ್ಲಕ ಕಾರಣಗಳಿಗೂ ಮೂಕ ಪ್ರಾಣಿಗಳ ಮೇಲೆ ಗುಂಡು ಹಾರಿಸುವುದು ಎಷ್ಟು ಸರಿ? ಎಂದು ಪ್ರಶ್ನೆ ಮಾಡಿದ್ದಾರೆ.

ಗ್ರಾಮ ಮತ್ತು ನಗರಗಳಲ್ಲಿ ಜಾನುವಾರು ಮಾಲೀಕರು ಹಾಗೂ ಬೀದಿ ನಾಯಿಗಳ ನಡುವಿನ ಸಂಘರ್ಷ ಹೊಸದೇನಲ್ಲ. ಬೇಲಿ ಹಾಕಿದ ಮೇಲೂ, ಕೇವಲ ಭಯದ ನೆಪವೊಡ್ಡಿ ಗುಂಡು ಹಾರಿಸುವ ಮಟ್ಟಕ್ಕೆ ಮನುಷ್ಯನ ಅಸಹನೆ ಬೆಳೆದಿರುವುದು ಆತಂಕಕಾರಿ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಅಲ್ಲದೇ ಆರೋಪಿ ತಪ್ಪಾಯಿತೆಂದು ಕೈಮುಗಿದು ಕ್ಷಮೆ ಕೇಳಿದ ಮಾತ್ರಕ್ಕೆ, ಆ ಮುಗ್ಧ ಪ್ರಾಣಿ ಅನುಭವಿಸುತ್ತಿರುವ ನರಕಯಾತನೆ ಕಡಿಮೆ ಆಗಲ್ಲ. ಶೂಟ್ ಮಾಡಿರುವ ಹಿಂದೆ ಬೇರೆ ಏನಾದರೂ ಕಾರಣವಿತ್ತೆ ಅನ್ನೋದ್ರ ಬಗ್ಗೆ ತನಿಖೆ ಆಗಬೇಕು ಎಂದು ಪ್ರಾಣಿ ಪ್ರಿಯರು ಆಗ್ರಹಿಸಿದ್ದಾರೆ. ಸದ್ಯ ಪೊಲೀಸರು. ಪ್ರಾಣಿ ಹಿಂಸೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಅಸಹನೆಯ ಪರಾಕಾಷ್ಠೆಯೋ, ಭಯದ ನೆಪವೋ? ನಾಯಿ ಮರಿಗೆ ಹಿಂಸೆ ನೀಡಿದ ವ್ಯಕ್ತಿಗೆ ಶಿಕ್ಷೆ ಆಗಬೇಕು ಅನ್ನೋದು ಪ್ರಾಣಿಪ್ರಿಯರ ಆಗ್ರಹ ಆಗಿದೆ.

PREV
Read more Articles on
click me!

Recommended Stories

Drought; ಕೇಂದ್ರ-ರಾಜ್ಯಗಳ ನಡುವೆ 'ಬರ' ಸಂಗ್ರಾಮ; ಪರಿಹಾರದ ಚಾವಿ ಯಾರ ಕೈಯಲ್ಲಿದೆ? ಬರ ಘೋಷಣೆಗೆ ಇರುವ ಮಾನದಂಡಗಳೇನು?
ನದಿ, ಕುಳಗಳನ್ನು ಸ್ವಚ್ಛಗೊಳಿಸಿ ವೈರಲ್ ಆದ 'ಬಿಟ್ಟು ತಬಾಹಿ'ಗೆ ಆರ್ಥಿಕ ನೆರವು ಚಾಚಿದ ಬೆಂಗಳೂರು ಉದ್ಯಮಿ!