Mandya: ಕಮಿಷನ್‌ ಮೇಲಾಟ: ನಗರಾಭಿವೃದ್ಧಿ ಕಾಮಗಾರಿ ವಿಳಂಬ

By Govindaraj S  |  First Published Nov 30, 2022, 7:45 AM IST

ನಗರದ ರಸ್ತೆಗಳಲ್ಲಿ ರಕ್ಕಸ ಗುಂಡಿಗಳ ಕಾರುಬಾರು ನಡೆದಿರುವುದು ಎಲ್ಲರಿಗೂ ಗೊತ್ತಿರುವ ಬಹಿರಂಗ ಸತ್ಯ. ಯಮರೂಪಿ ಗುಂಡಿಗೆ ಯೋಧನೊಬ್ಬ ಬಲಿಯಾಗಿದ್ದರೂ ರಸ್ತೆ ಅಭಿವೃದ್ಧಿ ಪಡಿಸಬೇಕೆಂಬ ಇಚ್ಛಾಶಕ್ತಿ ಯಾರಲ್ಲೂ ಇಲ್ಲ. 


ಮಂಡ್ಯ ಮಂಜುನಾಥ

ಮಂಡ್ಯ (ನ.30): ನಗರದ ರಸ್ತೆಗಳಲ್ಲಿ ರಕ್ಕಸ ಗುಂಡಿಗಳ ಕಾರುಬಾರು ನಡೆದಿರುವುದು ಎಲ್ಲರಿಗೂ ಗೊತ್ತಿರುವ ಬಹಿರಂಗ ಸತ್ಯ. ಯಮರೂಪಿ ಗುಂಡಿಗೆ ಯೋಧನೊಬ್ಬ ಬಲಿಯಾಗಿದ್ದರೂ ರಸ್ತೆ ಅಭಿವೃದ್ಧಿ ಪಡಿಸಬೇಕೆಂಬ ಇಚ್ಛಾಶಕ್ತಿ ಯಾರಲ್ಲೂ ಇಲ್ಲ. ನಗರಾಭಿವೃದ್ಧಿ ಯೋಜನೆಯಡಿ ರಸ್ತೆ ಅಭಿವೃದ್ಧಿಗೆ ಸರ್ಕಾರದಿಂದ ಹಣ ಬಿಡುಗಡೆಯಾಗಿ ಟೆಂಡರ್‌ ಪೂರ್ಣಗೊಂಡಿದ್ದರೂ ಇದುವರೆಗೂ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಿಲ್ಲ. ಇದಕ್ಕೆ ಕಾರಣ ಕಮಿಷನ್‌..! 

Tap to resize

Latest Videos

ಕಮಿಷನ್‌ ನೀಡದೆ ಕಾಮಗಾರಿಗಳಿಗೆ ಕಾರ್ಯಾದೇಶ ನೀಡುತ್ತಿಲ್ಲವೆಂಬ ಮಾತುಗಳು ದಟ್ಟವಾಗಿ ಕೇಳಿಬರುತ್ತಿವೆ. ಹಣದ ಮೇಲಿನ ವ್ಯಾಮೋಹಕ್ಕೆ ನಗರದ ಅಭಿವೃದ್ಧಿಯನ್ನು ಬಲಿಕೊಡಲಾಗುತ್ತಿದೆ. ಅಭಿವೃದ್ಧಿಯನ್ನು ಮರೆತು ಜನಪ್ರತಿನಿಧಿಗಳು ಹಣವನ್ನು ಕೊಳ್ಳೆ ಹೊಡೆಯುವುದನ್ನಷ್ಟೇ ಆಲೋಚಿಸುತ್ತಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಯಾಗುತ್ತಿದೆ. ಮೊದಲೆಲ್ಲಾ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲು ಮಳೆ ಕಾರಣವೆಂಬ ನೆಪವನ್ನು ಮುಂದಿಡುತ್ತಿದ್ದರು. ಇದೀಗ ಮಳೆ ನಿಂತಿದ್ದರೂ ನಗರದ ಯಾವುದೇ ಭಾಗದಲ್ಲೂ ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭಗೊಂಡಿಲ್ಲ. 

ಸುಳ್ಳು ಭರವಸೆ ನೀಡುವವರನ್ನು ನಂಬಬೇಡಿ: ಸಿದ್ದರಾಮಯ್ಯ

ಇನ್ನೆಷ್ಟು ಜನ ಬಲಿಯಾಗಬೇಕೆಂದು ಜನಪ್ರತಿನಿಧಿಗಳು-ಅಧಿಕಾರಿಗಳು ಕಾಯುತ್ತಿದ್ದಾರೆ ಎನ್ನುವುದು ಪ್ರಶ್ನೆಯಾಗಿದೆ. ನಗರದ ಪ್ರಮುಖ ರಸ್ತೆಗಳೂ ಸೇರಿದಂತೆ ಯಾವುದೇ ಬಡಾವಣೆಯ ರಸ್ತೆಗಳು ಸುಸ್ಥಿತಿಯಲ್ಲಿಲ್ಲ. ಜಿಲ್ಲಾ ಕೇಂದ್ರದ ರಸ್ತೆಗಳೆಂದು ಹೇಳಿಕೊಳ್ಳುವುದಕ್ಕೆ ನಾಚಿಕೆಯಾಗುವಂತಹ ಸ್ಥಿತಿಯಲ್ಲಿ ರಸ್ತೆಗಳಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರಾದಿಯಾಗಿ ಯಾರೊಬ್ಬರಿಗೂ ಚಿಂತೆಯೇ ಇಲ್ಲ. ಇದರಿಂದ ರಸ್ತೆಗಳ ಅಭಿವೃದ್ಧಿ ಹಳ್ಳ ಹಿಡಿಯುವಂತಾಗಿದೆ.

ಉಸ್ತುವಾರಿ ಸಚಿವರು ನಾಪತ್ತೆ!: ಜಿಲ್ಲಾ ಉಸ್ತುವಾರಿ ಸಚಿವ ಡಿ.ಗೋಪಾಲಯ್ಯ ಅವರು ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ ಐದು ತಿಂಗಳಾಗಿದೆ. ಮಹಾ ಕುಂಭಮೇಳಕ್ಕೆ ಬಂದು ಹೋದವರು ಇದುವರೆಗೂ ಮುಖ ಮಾಡಿಲ್ಲ. ನಗರ ಸೇರಿದಂತೆ ಜಿಲ್ಲೆಯ ಅಭಿವೃದ್ಧಿ ಏನಾಗಿದೆ ಎಂದು ನೋಡುತ್ತಿಲ್ಲ. ಗುಂಡಿಮಯ ರಸ್ತೆಗಳಲ್ಲಿ ಬಿದ್ದು ಜನರು ಸಾಯುತ್ತಿದ್ದರೂ ಕೇಳೋರಿಲ್ಲ. ಅಧಿಕಾರಿಗಳ ದರ್ಬಾರ್‌ನೊಳಗೆ ಅಭಿವೃದ್ಧಿ ಕೇವಲ ಮರೀಚಿಕೆಯಾಗಿ ಉಳಿದಿದೆ. 

ನಗರಾಭಿವೃದ್ಧಿ ಯೋಜನೆಯಡಿ 22 ಕೋಟಿ ರು. ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಟೆಂಡರ್‌ ಪೂರ್ಣಗೊಂಡಿದ್ದರೂ ಗುತ್ತಿಗೆದಾರರಿಗೆ ಇದುವರೆಗೂ ಕಾರ್ಯಾದೇಶ ನೀಡದೆ ಸತಾಯಿಸಲಾಗುತ್ತಿದೆ. ಇಲ್ಲದ ನೆಪವೊಡ್ಡಿ ಕಾಮಗಾರಿಗಳನ್ನು ನಗರಾಭಿವೃದ್ಧಿ ಕೋಶ ಅಧಿಕಾರಿಗಳು ಮುಂದೂಡುತ್ತಲೇ ಇದ್ದಾರೆಂಬ ಆರೋಪಗಳು ಕೇಳಿಬರುತ್ತಿವೆ. ಅವ್ಯವಸ್ಥೆಯ ಆಗರವಾಗಿರುವ ನಗರ ರಸ್ತೆಗಳ ವಿರುದ್ಧ ಸಾರ್ವಜನಿಕವಾಗಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದರೂ ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಅಧಿಕಾರಿಗಳು ಡೋಂಟ್‌ ಕೇರ್‌ ಎಂಬಂತಿರುವುದು ಆಡಳಿತ ಅವ್ಯವಸ್ಥೆಗೆ ಸ್ಪಷ್ಟನಿದರ್ಶನವಾಗಿದೆ.

ಜಿಲ್ಲಾಡಳಿತದ ವಿರುದ್ಧವೂ ಆಕ್ರೋಶ: ನಗರದ ಬಹುತೇಕ ಬಡಾವಣೆಯ ರಸ್ತೆಗಳೂ ಹದಗೆಟ್ಟಿದ್ದು, ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿರುವುದರಿಂದ ನಿವಾಸಿಗಳು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಮಂತ್ರಿಯೂ ಸೇರಿದಂತೆ ಕ್ಷೇತ್ರದ ಶಾಸಕರು, ಜಿಲ್ಲಾಧಿಕಾರಿ ಕೂಡ ನಗರ ಪ್ರದಕ್ಷಿಣೆ ಕೈಗೊಳ್ಳುತ್ತಿಲ್ಲ. ಇದರಿಂದ ಸಂಚಾರದಲ್ಲಿ ಸಾಮಾನ್ಯ ಜನರು ಎದುರಿಸುತ್ತಿರುವ ಸಂಕಷ್ಟಅವರಿಗೆ ಅರ್ಥವಾಗುತ್ತಿಲ್ಲ. ರಸ್ತೆ ಅಭಿವೃದ್ಧಿ ಬಗ್ಗೆ ಯಾರೊಬ್ಬರೂ ಕಾಳಜಿ ವಹಿಸದಿರುವುದರಿಂದಲೇ ಅವುಗಳ ಸ್ವರೂಪ ದಶಕಗಳಿಂದಲೂ ಬದಲಾಗದೆ ಯಥಾಸ್ಥಿತಿಯಲ್ಲೇ ಉಳಿಯುವಂತಾಗಿದೆ ಎಂದು ಜನಸಾಮಾನ್ಯರು ದೂರುತ್ತಿದ್ದಾರೆ.

ಹಣವೇ ಪ್ರಧಾನ, ಅಭಿವೃದ್ಧಿ ಗೌಣ: ನಗರಾಭಿವೃದ್ಧಿ ಯೋಜನೆಯಡಿ ರಸ್ತೆ ಅಭಿವೃದ್ಧಿ ಕಾಮಗಾರಿಗಳು ನಡೆದರೆ ಎಷ್ಟೋ ರಸ್ತೆಗಳು ಸುಧಾರಣೆಯಾಗಿ ಸಂಚಾರದಲ್ಲಿ ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆ ದೂರವಾಗಲಿದೆ. ಟೆಂಡರ್‌ ಪೂರ್ಣಗೊಂಡಿದ್ದರೂ ಕಾರ್ಯಾದೇಶ ನೀಡದೆ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಮೀನಮೇಷ ಎಣಿಸುತ್ತಿರುವುದು ಸಾಕಷ್ಟುಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಅಧಿಕಾರಿಗಳು ಯಾರ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ ಎಂಬ ಬಗ್ಗೆ ಶಂಕೆ ಮೂಡಿದೆ. ಇಲ್ಲದ ನೆಪವೊಡ್ಡಿ ವಿಳಂಬ ಮಾಡುತ್ತಿರುವುದರಿಂದ ನಗರದ ರಸ್ತೆಗಳು ಅಭಿವೃದ್ಧಿಯ ಮುಖವನ್ನೇ ನೋಡದಂತಾಗಿದೆ. ನಗರಾಭಿವೃದ್ಧಿ ಯೋಜನೆಯ ಕಾಮಗಾರಿಗಳು ಆರಂಭಗೊಳ್ಳದಿರುವ ಬಗ್ಗೆ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಬ್ಯಾಂಕಿನಿಂದ ಬರಬೇಕು, ಮುಖ್ಯ ಕಚೇರಿಯಿಂದ ಬರಬೇಕು ಎಂದೆಲ್ಲಾ ಕಾರಣ ಹೇಳುತ್ತಿದ್ದಾರೆಯೇ ವಿನಃ ಕಾಮಗಾರಿಗಳು ಆರಂಭವಾಗದಿರುವುದಕ್ಕೆ ಯಾವುದೇ ಸಕಾರಣವನ್ನು ನೀಡದೆ ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ.

ತಾಲೂಕುಗಳಲ್ಲಿ ಆರಂಭ: ಜಿಲ್ಲಾ ಕೇಂದ್ರವನ್ನು ಹೊರತುಪಡಿಸಿದರೆ ನಗರಾಭಿವೃದ್ಧಿ ಯೋಜನೆಯ ಕಾಮಗಾರಿಗಳು ತಾಲೂಕು ವ್ಯಾಪ್ತಿಯಲ್ಲಿ ಆರಂಭಗೊಂಡಿವೆ. ರಸ್ತೆ ಕಾಮಗಾರಿಗಳಿಗೆ ಶಂಕುಸ್ಥಾಪನೆಯೂ ನಡೆದು ಕಾಮಗಾರಿ ನಡೆಯುತ್ತಿವೆ. ವಿಚಿತ್ರವೆಂದರೆ ಜಿಲ್ಲಾ ಕೇಂದ್ರದಲ್ಲಿ ಮಾತ್ರ ರಸ್ತೆ ಅಭಿವೃದ್ಧಿ ಕಾಮಗಾರಿಗಳು ನೆನಗುದಿಗೆ ಬಿದ್ದಿವೆ. ಕಮಿಷನ್‌ ಮೇಲಾಟದಿಂದಾಗಿ ಕಾಮಗಾರಿಗಳಿಗೆ ಹಿನ್ನಡೆ ಉಂಟಾಗಿ ಜನಸಾಮಾನ್ಯರು ರಕ್ಕಸ ಗುಂಡಿಗಳ ನಡುವೆ ಸಂಕಷ್ಟದಲ್ಲಿ ಸಂಚರಿಸುತ್ತಿದ್ದಾರೆ.

ಕಮಿಷನ್‌ಗಾಗಿ ಕಾದಿರುವ ಕಾಣದ ಕೈ!: ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನಗರಾಭಿವೃದ್ಧಿ ಯೋಜನೆಯಡಿ 50 ಕೋಟಿ ರು. ಹಣವನ್ನು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬಿಡುಗಡೆಗೊಳಿಸಿದ್ದರು. ನಂತರದಲ್ಲಿ ಎದುರಾದ ಕೊರೋನಾ ಕಾರಣದಿಂದ ಹಣವನ್ನು ತಡೆಹಿಡಿಯಲಾಯಿತು. ಬಿಜೆಪಿ ಸರ್ಕಾರ ಬಂದ ನಂತರ ಆ ಹಣವನ್ನು ಬಿಡುಗಡೆಗೊಳಿಸಲೇ ಇಲ್ಲ. ಅಮೃತ್‌ ಯೋಜನೆ ಕಾಮಗಾರಿಯಿಂದಾಗಿ ನಗರದ ಎಲ್ಲಾ ಬಡಾವಣೆಗಳ ರಸ್ತೆ ಗುಂಡಿ ಬಿದ್ದು ಹಾಳಾದವು. ಅವುಗಳನ್ನು ದುರಸ್ತಿಪಡಿಸುವುದಕ್ಕೆ ಹಣವಿಲ್ಲದೆ ನಗರಸಭೆಯವರು ಕೈಚೆಲ್ಲಿ ಕುಳಿತರು. 

ಶೀಘ್ರ ಭತ್ತ-ರಾಗಿಗೆ ಖರೀದಿ ಕೇಂದ್ರ ಸ್ಥಾಪಿಸಿ: ಸಿಎಂಗೆ ಗೂಳಿಗೌಡ ಮನವಿ

ಇದೀಗ ರಾಜ್ಯ ಸರ್ಕಾರ ನಗರಾಭಿವೃದ್ಧಿ ಯೋಜನೆಯಡಿ 50 ಕೋಟಿ ರು. ಹಣ ಬಿಡುಗಡೆ ಮಾಡಿದ್ದು, ಟೆಂಡರ್‌ ಪ್ರಕ್ರಿಯೆ ಮುಗಿದಿದೆ. ಮಳೆಯೂ ನಿಂತಿದೆ. ಕಾರ್ಯಾದೇಶ ಮಾತ್ರ ನೀಡುತ್ತಿಲ್ಲ. ಕಮಿಷನ್‌ಗಾಗಿ ಕಾದಿರುವ ಕಾಣದ ಕೈ ಅಭಿವೃದ್ಧಿಯನ್ನು ಬಲಿತೆಗೆದುಕೊಂಡಿದೆ. ರಸ್ತೆಗಳ ಅಭಿವೃದ್ಧಿಗಾಗಿ ಜನರು ಇನ್ನೆಷ್ಟುದಿನ ಕಾಯಬೇಕೆನ್ನುವುದೇ ಅರ್ಥವಾಗುತ್ತಿಲ್ಲ. ರಸ್ತೆಗಳ ಸ್ವರೂಪ ಬದಲಾಗುವುದು ಯಾವಾಗ, ನಗರದ ಜನರು ಸುಗಮವಾಗಿ ಸಂಚರಿಸುವುದು ಯಾವಾಗ ಎನ್ನುವುದನ್ನೂ ಯಾರೂ ಸ್ಪಷ್ಟವಾಗಿ ಹೇಳುತ್ತಿಲ್ಲ. ಅಭಿವೃದ್ಧಿಯನ್ನು ಅತಂತ್ರ ಸ್ಥಿತಿಯಲ್ಲಿಟ್ಟು ರಾಜಕೀಯ ದೊಂಬರಾಟದಲ್ಲಿ ಎಲ್ಲರೂ ತೊಡಗಿದ್ದಾರೆ.

ನಗರ ವ್ಯಾಪ್ತಿಯಲ್ಲಿ ನಗರೋತ್ಥಾನ ಕಾಮಗಾರಿಗಳು ಶೀಘ್ರವಾಗಿ ಆರಂಭವಾಗಲಿವೆ. ಟೆಂಡರ್‌ ಪ್ರಕ್ರಿಯೆಯೆಲ್ಲಾ ಮುಗಿದಿವೆ. ಮುಂದಿನ ಒಂದೆರಡು ದಿನಗಳಲ್ಲಿ ಕಾರ್ಯಾದೇಶ ನೀಡಲಾಗುವುದು. ಬ್ಯಾಂಕ್‌ ಪ್ರಕ್ರಿಯೆ ನಡೆಯಬೇಕಿತ್ತು. ಹೆಡ್‌ಆಫೀಸ್‌ನಿಂದ ಆರ್ಡರ್‌ ಬರಬೇಕಿತ್ತು. ಅದಕ್ಕಾಗಿ ಸ್ವಲ್ಪ ವಿಳಂಬವಾಗಿದೆಯಷ್ಟೇ.
- ನಾಗರಾಜು, ಇಇ, ಡಿಯುಡಿಸಿ

click me!