ಆಸ್ತಿ ದಾಹಕ್ಕೆ ತಮ್ಮನ ನೆತ್ತರು ಹರಿಸಿದ ಅಣ್ಣ: ಹಸೆಮಣೆ ಏರಬೇಕಿದ್ದ ತಮ್ಮನಿಗೆ ಚಟ್ಟ ಕಟ್ಟಿದ ಕಟುಕ ಸಹೋದರ!

Published : Jan 16, 2026, 03:02 PM IST
Mandya Brother Murder

ಸಾರಾಂಶ

ಮಂಡ್ಯ ತಾಲೂಕಿನ ಮಾಯಪ್ಪನಹಳ್ಳಿಯಲ್ಲಿ, ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಮದುವೆಗೆ ಐದು ದಿನ ಬಾಕಿ ಇರುವಾಗ ಯೋಗೇಶ್ ಎಂಬ ಯುವಕನನ್ನು ಸ್ವಂತ ಅಣ್ಣನೇ ತನ್ನ ಮಕ್ಕಳೊಂದಿಗೆ ಸೇರಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಮಂಡ್ಯ (ಜ.16): ರಕ್ತ ಸಂಬಂಧಕ್ಕಿಂತ ಆಸ್ತಿಯೇ ದೊಡ್ಡದಾಯಿತೇ? ಒಟ್ಟಿಗೆ ಹುಟ್ಟಿ ಬೆಳೆದ ಸೋದರನ ಮದುವೆ ಸಂಭ್ರಮ ನೋಡಬೇಕಾದ ಕಣ್ಣುಗಳೇ ಆತನ ರಕ್ತ ಹರಿಸುವಂತಾಯಿತೇ? ಹೌದು, ಮಂಡ್ಯ ತಾಲೂಕಿನ ಮಾಯಪ್ಪನಹಳ್ಳಿಯಲ್ಲಿ ಇಂತಹದ್ದೊಂದು ಮನುಕುಲವೇ ತಲೆತಗ್ಗಿಸುವಂತಹ ಘಟನೆ ನಡೆದಿದೆ. ಕೇವಲ ಆಸ್ತಿ ಎಂಬ ಮಣ್ಣಿನ ಪಾಲಿನ ಆಸೆಗಾಗಿ, ಸ್ವಂತ ಅಣ್ಣನೇ ತನ್ನ ಮಕ್ಕಳೊಂದಿಗೆ ಸೇರಿ ತಮ್ಮನನ್ನು 28 ಬಾರಿ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಹಸೆಮಣೆ ಏರಬೇಕಿದ್ದವ ಸ್ಮಶಾನಕ್ಕೆ

ಕೊಲೆಯಾದ ದುರ್ದೈವಿಯನ್ನು ಯೋಗೇಶ್ (30) ಎಂದು ಗುರುತಿಸಲಾಗಿದೆ. ವಿಶೇಷವೆಂದರೆ, ಯೋಗೇಶ್‌ಗೆ ಇದೇ ತಿಂಗಳು 21 ರಂದು ಮದುವೆ ನಿಶ್ಚಯವಾಗಿತ್ತು. ಇಡೀ ಮನೆಯಲ್ಲಿ ಮದುವೆಯ ಸಂಭ್ರಮ ಮನೆಮಾಡಿತ್ತು. ಸಂಬಂಧಿಕರಿಗೆಲ್ಲ ಲಗ್ನಪತ್ರಿಕೆ ಹಂಚಿ ಮದುವೆಯ ತಯಾರಿಯಲ್ಲಿದ್ದ ಯೋಗೇಶ್, ಆಸ್ತಿ ಕಿತ್ತುಕೊಂಡರೂ ದ್ವೇಷ ಸಾಧಿಸದೇ ತನ್ನ ಅಣ್ಣ ಲಿಂಗರಾಜು ಮೇಲಿನ ಗೌರವಕ್ಕೆ ಲಗ್ನಪತ್ರಿಕೆಯಲ್ಲಿ ಆತನ ಹೆಸರನ್ನೂ ಹಾಕಿಸಿದ್ದರು. ಆದರೆ, ಅಣ್ಣನೆಂಬ ಸ್ಥಾನದಲ್ಲಿದ್ದ ಲಿಂಗರಾಜು ಮಾತ್ರ ಮಾನವೀಯತೆ ಮರೆತು, ಮದುವೆಗೆ ಕೇವಲ 5 ದಿನ ಬಾಕಿ ಇರುವಾಗಲೇ ತಮ್ಮನ ಕಥೆ ಮುಗಿಸಿದ್ದಾನೆ.

19 ಎಕರೆ ಜಮೀನಿನ ವಂಚನೆಯ ಜಾಲ

ಈ ಭೀಕರ ಹತ್ಯೆಯ ಹಿಂದೆ ಬರೋಬ್ಬರಿ 19 ಎಕರೆ ಜಮೀನಿನ ವಿವಾದವಿದೆ. ತಂದೆಯ ನಿಧನದ ಬಳಿಕ ಸಂಸಾರದ ಜವಾಬ್ದಾರಿ ಹೊತ್ತಿದ್ದ ಅಣ್ಣ ಲಿಂಗರಾಜು, ಇಡೀ ಕುಟುಂಬಕ್ಕೆ ದ್ರೋಹ ಎಸಗಿದ್ದ ಎನ್ನಲಾಗಿದೆ. ಒಟ್ಟು 12 ಎಕರೆ ಪಿತ್ರಾರ್ಜಿತ ಆಸ್ತಿ ಹಾಗೂ ತಾಯಿಯ ಹೆಸರಿನಲ್ಲಿದ್ದ 6 ಎಕರೆ ಜಮೀನನ್ನು ಸಹೋದರ-ಸಹೋದರಿಯರಿಗೆ ಪಾಲು ನೀಡದೆ ತನ್ನ ಹೆಸರಿಗೆ ಮಾಡಿಸಿಕೊಂಡಿದ್ದನು. ಅಷ್ಟೇ ಅಲ್ಲದೆ, ಮೈಸೂರು ಮತ್ತು ಮಂಡ್ಯದಲ್ಲಿದ್ದ 4 ನಿವೇಶನಗಳನ್ನೂ ತನ್ನ ಹೆಸರಿಗೆ ವರ್ಗಾಯಿಸಿಕೊಂಡು, ನಂತರ ಅವುಗಳನ್ನು ತನ್ನಿಂದ ಕಿತ್ತುಕೊಳ್ಳಲಾಗದಂತೆ ತನ್ನ ಪತ್ನಿಯ ಹೆಸರಿಗೆ ಖಾತೆ ಮಾಡಿಸಿದ್ದ ಎನ್ನಲಾಗಿದೆ.

ಕಾನೂನು ಹೋರಾಟವೇ ಮುಳುವಾಯಿತೇ?

ಅಣ್ಣ ಮಾಡಿದ್ದ ಈ ವಂಚನೆಯನ್ನು ಪ್ರಶ್ನಿಸಿದ ಯೋಗೇಶ್, ತನ್ನ ಪಾಲಿನ ಆಸ್ತಿಗಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಅಪ್ಪ-ಅಮ್ಮನ ಮಕ್ಕಳಾದ ನಾವು ಆಸ್ತಿಯಲ್ಲೂ ಪಾಲುದಾರರು ಎಂಬ ಹಠ ಇವರಲ್ಲಿಯೂ ಇತ್ತು. ಆದರೆ, ಇದು ಲಿಂಗರಾಜು ಮತ್ತು ಆತನ ಮಕ್ಕಳಾದ ಭರತ್ ಹಾಗೂ ದರ್ಶನ್‌ನ ಕೆಂಗಣ್ಣಿಗೆ ಗುರಿಯಾಗಿತ್ತು. ಆಸ್ತಿಯನ್ನು ಕೊಡಬಾರದು ಎಂಬ ಹುನ್ನಾರದಿಂದ ಮದುವೆಯ ಸಂಭ್ರಮದಲ್ಲಿದ್ದ ತಮ್ಮನನ್ನು ಮುಗಿಸಲು ಹೊಂಚು ಹಾಕಿದ್ದ ಈ ಕಿರಾತಕರು, ಇಂದು ಬೆಳಿಗ್ಗೆ ಯೋಗೇಶ್ ಮೇಲೆ ಎರಗಿ 28 ಬಾರಿ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾರೆ.

ಗ್ರಾಮಸ್ಥರ ಆಕ್ರೋಶ, ಆರೋಪಿಗಳಿಗಾಗಿ ಶೋಧ

ಈ ಬರ್ಬರ ಹತ್ಯೆ ತಿಳಿಯುತ್ತಿದ್ದಂತೆಯೇ ಮಾಯಪ್ಪನಹಳ್ಳಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ರೊಚ್ಚಿಗೆದ್ದ ಗ್ರಾಮಸ್ಥರು ಆರೋಪಿ ಲಿಂಗರಾಜುವಿನ ಮನೆಗೆ ನುಗ್ಗಿ ಗೃಹೋಪಯೋಗಿ ವಸ್ತುಗಳನ್ನು ಧ್ವಂಸ ಮಾಡಿದ್ದಾರೆ. ಕೆರಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆ ಮಾಡಿ ತಲೆಮರೆಸಿಕೊಂಡಿರುವ ಲಿಂಗರಾಜು, ಭರತ್ ಹಾಗೂ ದರ್ಶನ್‌ಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಮದುವೆ ಮನೆಯಲ್ಲಿ ಮಸಣದ ಮೌನ ಆವರಿಸಿದ್ದು, ಯೋಗೇಶ್ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಆದರೆ, ಸತ್ತ ನಂತರ ಯಾರೊಬ್ಬರೂ ಏನು ಹೊತ್ತೊಯ್ಯುವುದಿಲ್ಲ ಎಂಬ ಜೀವನದ ಸಾರ ಅರಿಯದೇ, ಬದುಕಿ ಬಾಳಬೇಕಾದ ತಮ್ಮನನ್ನು ಕೊಲೆಗೈದ ಈ ದುರುಳರಿಗೆ ಕಠಿಣ ಶಿಕ್ಷೆಯೇ ಆಗಬೇಕು ಎಂದು ಇಡೀ ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ. ಇತ್ತ ಆತನ ಸಹೋದರಿಯರೂ ಕೂಡ ತಮ್ಮನ ಮದುವೆಗೆ ಬಂದು ತಲೆಮೇಲೆ ಅಕ್ಷತೆ ಹಾಕಬೇಕೆಂದಿದ್ದವರು, ಬಾಯಿಗೆ ಅಕ್ಕಿ ಕಾಳು ಹಾಕುವಂತಹ ನೋವಿನಲ್ಲಿದ್ದಾರೆ.

PREV
Read more Articles on
click me!

Recommended Stories

ಕೇರಳದಿಂದ ಓದಲು ಬಂದು ಇಲ್ಲಿ ಬೇರೆಯದೇ ಕಾರುಬಾರು: ಕಾರಿನ ಬೆಲೆಗಿಂತಲೂ ದುಬಾರಿ ದಂಡ ವಿಧಿಸಿದ ಪೊಲೀಸರು
ಲಕ್ಕುಂಡಿಗೆ ಶ್ರೀರಾಮನ ಕಾಲದ ಇತಿಹಾಸವಿದೆ, ಆತ ಭೇಟಿ ಕೊಟ್ಟ ಪುಣ್ಯ ಭೂಮಿ: ಇತಿಹಾಸ ತಜ್ಞ ಅಬ್ದುಲ್ ಕಟ್ಟಿಮನಿ