
ಗದಗ: ಐತಿಹಾಸಿಕ ಹಾಗೂ ಪೌರಾಣಿಕ ಹಿನ್ನೆಲೆಯುಳ್ಳ ಗದಗ ತಾಲ್ಲೂಕಿನ ಪ್ರಸಿದ್ಧ ಲಕ್ಕುಂಡಿ ಗ್ರಾಮ ಮತ್ತೊಮ್ಮೆ ಇಡೀ ರಾಜ್ಯದ ಗಮನ ಸೆಳೆದಿದೆ. ಇತ್ತೀಚೆಗೆ ಗ್ರಾಮದಲ್ಲಿ ಅಪರೂಪದ ಚಿನ್ನದ ಆಭರಣಗಳು (ನಿಧಿ) ಪತ್ತೆಯಾದ ಹಿನ್ನೆಲೆಯಲ್ಲಿ, ಪುರಾತತ್ವ ಇಲಾಖೆ ಉತ್ಖನನ ಕಾರ್ಯಕ್ಕೆ ಮುಂದಾಗಿದ್ದು, ಜನವರಿ 16ರಿಂದ ಅಧಿಕೃತವಾಗಿ ಉತ್ಖನನ ಪ್ರಾರಂಭವಾಗಿದೆ.
ಇತಿಹಾಸ ತಜ್ಞ ಅಬ್ದುಲ್ ಕಟ್ಟಿಮನಿ ಲಕ್ಕುಂಡಿಯ ಪೌರಾಣಿಕ ಮತ್ತು ಐತಿಹಾಸಿಕ ಮಹತ್ವದ ಕುರಿತು ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ರಾಮಾಯಣ ಕಾಲಘಟ್ಟದಲ್ಲಿ ಶ್ರೀರಾಮನು ಕಿಷ್ಕಿಂದೆಗೆ ತೆರಳುವ ಮುನ್ನ ಲಕ್ಕುಂಡಿಗೆ ಭೇಟಿ ನೀಡಿದ್ದಾನೆ ಎಂಬ ಐತಿಹಾಸಿಕ ಉಲ್ಲೇಖಗಳು ಲಭ್ಯವಿವೆ ಎಂದು ಅವರು ತಿಳಿಸಿದ್ದಾರೆ.
ಲಕ್ಕುಂಡಿ ಗ್ರಾಮವು ಕಲ್ಯಾಣಿ ಚಾಲುಕ್ಯರು, ಹೊಯ್ಸಳರು, ಕಲಚೂರರ ಅವರ ನಾಡು. ಇವರೆಲ್ಲರೂ ಆಳ್ವಿಕೆ ನಡೆಸಿದ ಪ್ರಮುಖ ಕೇಂದ್ರವಾಗಿತ್ತು ಎಂದು ಇತಿಹಾಸದಲ್ಲಿ ದಾಖಲಾಗಿದೆ. ಒಂದು ಕಾಲದಲ್ಲಿ ಲಕ್ಕುಂಡಿಯಲ್ಲಿ 101 ಬಾವಿಗಳು ಹಾಗೂ 101 ದೇವಸ್ಥಾನಗಳಿದ್ದವು ಎಂಬ ಉಲ್ಲೇಖಗಳೂ ಇವೆ. ಆದರೆ, ಕಾಲಕ್ರಮೇಣ ಅವುಗಳ ಬಹುಪಾಲು ಭೂಮಿಯಲ್ಲಿ ಹುದುಗಿಹೋಗಿವೆ ಎಂದು ಅಬ್ದುಲ್ ಕಟ್ಟಿಮನಿ ತಿಳಿಸಿದ್ದಾರೆ.
ಲಕ್ಕುಂಡಿಯ ಶ್ರೀಮಂತ ಇತಿಹಾಸವನ್ನು ಸಂಪೂರ್ಣವಾಗಿ ಬಹಿರಂಗಗೊಳಿಸಲು ಕನಿಷ್ಠ 50 ದೇವಸ್ಥಾನಗಳ ಉತ್ಖನನ ಕಾರ್ಯ ನಡೆಯಬೇಕು ಎಂಬ ಅಭಿಪ್ರಾಯವನ್ನು ಇತಿಹಾಸ ತಜ್ಞರು ವ್ಯಕ್ತಪಡಿಸಿದ್ದಾರೆ. ಇವುಗಳ ಅವಶೇಷಗಳು ಇನ್ನೂ ಭೂಮಿಯ ಅಡಿಯಲ್ಲಿ ಅಡಗಿಕೊಂಡಿವೆ ಎಂದು ಅವರು ಹೇಳಿದ್ದಾರೆ.
ಗದಗ ತಾಲ್ಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಜನವರಿ 10ರಂದು ಮನೆಯ ಅಡಿಪಾಯ ತೆಗೆಯುವ ವೇಳೆ ಸುಮಾರು ಅರ್ಧ ಕೆಜಿ ತೂಕದ ಚಿನ್ನದ ಆಭರಣಗಳು ಪತ್ತೆಯಾಗಿದ್ದವು. ಈ ಅಪರೂಪದ ಘಟನೆ ನಂತರ ಸರ್ಕಾರ ತಕ್ಷಣ ಸ್ಪಂದಿಸಿ, ಪುರಾತತ್ವ ಇಲಾಖೆಗೆ ಉತ್ಖನನ ನಡೆಸುವಂತೆ ನಿರ್ದೇಶನ ನೀಡಿದೆ.
ಉತ್ಖನನ ಕಾರ್ಯವು ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಮುಂಭಾಗದ ಪ್ರದೇಶದಲ್ಲಿ ಆರಂಭಗೊಳ್ಳಲಿದೆ. ಇತಿಹಾಸದಲ್ಲಿ ಕೋಟೆ ವೀರಭದ್ರೇಶ್ವರ ದೇವಸ್ಥಾನ ಮತ್ತು ಸಿದ್ದರ ಬಾವಿಗೆ ಪರಸ್ಪರ ಸಂಪರ್ಕವಿತ್ತು ಎಂಬ ಉಲ್ಲೇಖಗಳಿವೆ. ಈ ಹಿಂದೆ, ಉತ್ಖನನ ನಡೆಯಲಿರುವ ಸ್ಥಳದ ಪಕ್ಕದ ಖಾಲಿ ಜಾಗದಲ್ಲಿ ಗ್ರಾಮದಲ್ಲಿ ನಾಟಕ ಪ್ರದರ್ಶನದ ವೇಳೆ ಭೂಮಿ ಅಗೆಯುವ ಸಂದರ್ಭದಲ್ಲಿ ಕಟ್ಟಡಗಳ ಅವಶೇಷಗಳು ಪತ್ತೆಯಾಗಿದ್ದವು, ಇದು ಈ ಪ್ರದೇಶದ ಪುರಾತನ ಮಹತ್ವವನ್ನು ಮತ್ತಷ್ಟು ದೃಢಪಡಿಸಿದೆ.
ಉತ್ಖನನ ಕಾರ್ಯ ಆರಂಭಕ್ಕೂ ಮುನ್ನ, ಪುರಾತತ್ವ ಇಲಾಖೆಯ ಅಧಿಕಾರಿಗಳು ಕಾರ್ಮಿಕರಿಗೆ ಸಂಪೂರ್ಣ ಮಾಹಿತಿ ನೀಡಿದರು. ಕೋಟೆ ವೀರಭದ್ರೇಶ್ವರ ದೇವಸ್ಥಾನ ಆವರಣದಲ್ಲಿ ನಡೆದ ಈ ಬ್ರೀಫಿಂಗ್‌ನಲ್ಲಿ ಪ್ರಾಚೀನ ವಸ್ತುಗಳನ್ನು ಗುರುತಿಸುವ ವಿಧಾನ, ಉತ್ಖನನದ ವೇಳೆ ಅನುಸರಿಸಬೇಕಾದ ನಾಜೂಕಾದ ಕ್ರಮಗಳು. ಯಾವುದೇ ಅವಶೇಷಗಳಿಗೆ ಹಾನಿಯಾಗದಂತೆ ಕಾರ್ಯನಿರ್ವಹಿಸುವ ಬಗ್ಗೆ ಸೂಚನೆ ನೀಡಲಾಯಿತು.
ಈ ಉತ್ಖನನ ಕಾರ್ಯಕ್ಕೆ 20 ಸದಸ್ಯರ ವಿಶೇಷ ತಂಡವನ್ನು ನಿಯೋಜಿಸಲಾಗಿದೆ. ಪ್ರಾಚೀನ ವಸ್ತುಗಳು ದೊರೆಯುವ ಸಾಧ್ಯತೆ ಇರುವುದರಿಂದ, ಅತ್ಯಂತ ಜಾಗರೂಕತೆಯಿಂದ ಮತ್ತು ನಾಜೂಕಾಗಿ ಉತ್ಖನನ ಪ್ರಕ್ರಿಯೆ ನಡೆಸುವಂತೆ ಕಾರ್ಮಿಕರಿಗೆ ಕಟ್ಟುನಿಟ್ಟಾದ ಸೂಚನೆ ನೀಡಲಾಗಿದೆ.
ಲಕ್ಕುಂಡಿಯಲ್ಲಿ ಆರಂಭಗೊಳ್ಳಲಿರುವ ಈ ಉತ್ಖನನ ಕಾರ್ಯದಿಂದ ಪೌರಾಣಿಕ ಹಾಗೂ ಐತಿಹಾಸಿಕ ಸಾಕ್ಷ್ಯಗಳು ಬೆಳಕಿಗೆ ಬರುವ ನಿರೀಕ್ಷೆ ವ್ಯಕ್ತವಾಗಿದೆ. ಇದು ಲಕ್ಕುಂಡಿಯ ಗಂಭೀರ ಇತಿಹಾಸವನ್ನು ದೇಶದ ಮುಂದಿಟ್ಟುಕೊಡುವ ಮಹತ್ವದ ಹೆಜ್ಜೆಯಾಗಲಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.