ಅಗ್ನಿಪಥ್‌ ಹಿಂಸಾಚಾರ: ಮಂಡ್ಯದ 70 ಮಂದಿ ವಾರಾಣಸಿಯಲ್ಲಿ ಅತಂತ್ರ

Published : Jun 19, 2022, 02:30 AM IST
ಅಗ್ನಿಪಥ್‌ ಹಿಂಸಾಚಾರ: ಮಂಡ್ಯದ 70 ಮಂದಿ ವಾರಾಣಸಿಯಲ್ಲಿ ಅತಂತ್ರ

ಸಾರಾಂಶ

*  ತವರಿಗೆ ವಾಪಸಾಗದೆ ಮಂಡ್ಯದ 70 ಮಂದಿ ಕಾಶಿಯಲ್ಲೇ ಅತಂತ್ರ *  ರಕ್ಷಣೆಗಾಗಿ ಸಿಎಂ ಬಸವರಾಜ ಬೊಮ್ಮಾಯಿಗೆ ಮನವಿ ಮಾಡಿದ ಮಂಡ್ಯದ ಜನರು *  ಹತ್ತು ಮಂದಿ ವಿಮಾನದಲ್ಲಿ ಪ್ರಯಾಣ

ಮಂಡ್ಯ(ಜೂ.19):  ಅಗ್ನಿಪಥ್‌ ಯೋಜನೆ ವಿರುದ್ಧ ನಡೆಯುತ್ತಿರುವ ಹಿಂಸಾಚಾರದಿಂದ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದ್ದು, ತವರಿಗೆ ವಾಪಸಾಗದೆ ಮಂಡ್ಯದ 70 ಮಂದಿ ಕಾಶಿಯಲ್ಲೇ ಅತಂತ್ರರಾಗಿದ್ದಾರೆ. ಕಾಶಿಯಲ್ಲಿರುವ ಜಂಗಮ ಮಠದಲ್ಲಿ ಆಶ್ರಯ ಪಡೆದಿರುವ ಮಂಡ್ಯದ ಜನರು ರಕ್ಷಣೆಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಾರೆ. 

ಮಂಡ್ಯದ 72 ಮಂದಿಯ ತಂಡ ಜೂ.9ರಂದು ಉತ್ತರ ಪ್ರದೇಶದ ಕಾಶಿ ಮತ್ತು ಅಯೋಧ್ಯೆ ಪ್ರವಾಸ ಕೈಗೊಂಡಿತ್ತು. ಯಾತ್ರೆ ಮುಗಿಸಿಕೊಂಡು ಜೂ.17ರಂದು ತವರಿಗೆ ವಾಪಸಾಗಬೇಕಿತ್ತು. ಅಷ್ಟರಲ್ಲಿ ಉತ್ತರ ಪ್ರದೇಶದಲ್ಲಿ ಅಗ್ನಿಪಥ್‌ ಯೋಜನೆ ವಿರುದ್ಧ ಆಕ್ರೋಶ ಭುಗಿಲೆದ್ದಿದ್ದರಿಂದ ಬೆಂಗಳೂರಿಗೆ ವಾಪಸಾಗಲು ಟಿಕೆಟ್‌ ಬುಕ್‌ ಆಗಿದ್ದ ಸಂಗಮಿತ್ರ ಎಕ್ಸ್‌ಪ್ರೆಸ್‌ ರೈಲು ಸಂಚಾರ ರದ್ದುಗೊಂಡಿತು. ಇದರಿಂದ ರೈಲು ನಿಲ್ದಾಣಕ್ಕೆ ಬಂದವರು ಮತ್ತೆ ಆದಿ ಚುಂಚನಗಿರಿ ಮಠದಲ್ಲಿ ಆಶ್ರಯ ಪಡೆಯಲು ಹೋದಾಗ ಅಲ್ಲಿ ಭರ್ತಿಯಾಗಿತ್ತು. ಬಳಿಕ ಜಂಗಮ ಮಠದಲ್ಲಿ ಆಶ್ರಯ ಪಡೆದಿದ್ದಾರೆ. ಹಲವರ ಬಳಿ ಹಣ ಖಾಲಿಯಾಗಿದೆ. ಕರ್ನಾಟಕ ಭವನದಲ್ಲೂ ಜಾಗ ಸಿಗಲಿಲ್ಲವೆಂದು ತಿಳಿದುಬಂದಿದೆ.

ಅಗ್ನಿಪಥ ದಿಕ್ಕಿಲ್ಲದ ಯೋಜನೆ, ಪ್ರತಿಭಟನಕಾರರಿಗೆ ಆಸ್ಪತ್ರೆಯಿಂದಲೇ ಬೆಂಬಲ ಸೂಚಿಸಿದ ಸೋನಿಯಾ ಗಾಂಧಿ!

ಜಂಗಮ ಮಠದಲ್ಲಿ ಆಶ್ರಯ:

ಇದೀಗ ಕೆಲವರು ಜಂಗಮ ಮಠದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಅಲ್ಲಿಯೂ ಕಿಕ್ಕಿರಿದ ಜನಸಂದಣಿ ಇದೆ. ಹೊರಗೆ ತಿಂಡಿ-ಊಟ ಮಾಡುವುದಕ್ಕೂ ಹಲವರ ಬಳಿ ದುಡ್ಡಿಲ್ಲ. ಅಲ್ಲಿಂದ ತಮ್ಮ ಸ್ನೇಹಿತರು, ಸಂಬಂಧಿಕರಿಗೆ, ಮಕ್ಕಳಿಗೆ ದೂರವಾಣಿ ಕರೆ ಮಾಡಿ ಹಣವನ್ನು ಬ್ಯಾಂಕ್‌ ಖಾತೆಗೆ ಹಾಕಿಸಿಕೊಂಡು ಖರ್ಚಿಗೆ ದಾರಿ ಮಾಡಿಕೊಂಡಿದ್ದಾರೆ.

ಪ್ರವಾಸಕ್ಕೆ ತೆರಳಿರುವವರಲ್ಲಿ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರೂ ಹೆಚ್ಚಿದ್ದಾರೆ. 8-10 ದಿನಕ್ಕೆ ತೆಗೆದುಕೊಂಡು ಹೋಗಿದ್ದ ಮಾತ್ರೆಗಳು ಖಾಲಿಯಾಗಿವೆ. ಇಲ್ಲಿನ ಮಾತ್ರೆಗಳು ಅಲ್ಲಿ ಸಿಗದಿರುವುದರಿಂದ ಸಮಸ್ಯೆಯಾಗಿದೆ. ಮಳೆಯೂ ಜೋರಾಗಿ ಬರುತ್ತಿದ್ದು ಮಠದ ಮೂಲೆಯಲ್ಲಿ ಮುದುಡಿಕೊಂಡು ಕೂರುವ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ಕಾಶಿಯಲ್ಲಿ ಅತಂತ್ರರಾದವರು ಹೇಳುವ ಮಾತಾಗಿದೆ.

ಗೃಹ ಸಚಿವಾಲಯದ ಬೆನ್ನಲ್ಲೇ ಅಗ್ನಿಪಥಕ್ಕೆ ಶೇ. 10ರಷ್ಟು ಮೀಸಲಾತಿ ನೀಡಿದ ರಕ್ಷಣಾ ಸಚಿವ!

ಹತ್ತು ಮಂದಿ ವಿಮಾನದಲ್ಲಿ ಪ್ರಯಾಣ:

ಕಾಶಿ ಮತ್ತು ಅಯೋಧ್ಯೆಗೆ ಪ್ರವಾಸಕ್ಕೆ ತೆರಳಿದವರಲ್ಲಿ ಹತ್ತು ಮಂದಿ ವಿಮಾನದ ಮೂಲಕ ತವರು ಸೇರಲು ನಿರ್ಧರಿಸಿ ವಿಮಾನ ನಿಲ್ದಾಣಕ್ಕೆ ತೆರಳಿದ್ದಾರೆ ಎಂದು ಕೆಲವರು ತಿಳಿಸಿದ್ದಾರೆ. ಮುನ್ನೆಚ್ಚರಿಕೆಯಾಗಿ ಹೆಚ್ಚು ಹಣ ತಂದವರು ವಿಮಾನದಲ್ಲಿ ತೆರಳುವುದಕ್ಕೆ ಮುಂದಾಗಿದ್ದು, ಹಣವಿಲ್ಲದವರು ರೈಲಿಗಾಗಿ ಕಾದು ಕುಳಿತಿದ್ದಾರೆ.

ಕಾಶಿ, ಅಯೋಧ್ಯೆ ಪ್ರವಾಸಕ್ಕೆ ಬಂದಿದ್ದ ನಾವು ಅಲ್ಲಿಂದ ಹೊರಡುವ ಮುನ್ನಾ ದಿನ ಗಲಾಟೆ ಹೆಚ್ಚಾಗಿದ್ದರಿಂದ ಸಂಗಮಿತ್ರ ಎಕ್ಸ್‌ಪ್ರೆಸ್‌ ರದ್ದಾಗಿದೆ. ನಾವು ಕಾಶಿಯಲ್ಲೇ ಉಳಿದುಕೊಂಡಿದ್ದು, ಇಲ್ಲಿ ಮಲಗುವುದಕ್ಕೂ ಜಾಗ ಕೊಡುತ್ತಿಲ್ಲ. ಊಟ-ತಿಂಡಿ ಇಲ್ಲದೆ ಪರದಾಡುವಂತಾಗಿದೆ ಅಂತ ವೀಡಿಯೋ ಸಂದೇಶ ಕಳುಹಿಸಿದ ಮಧು ಶಿವಲಿಂಗಯ್ಯ ತಿಳಿಸಿದ್ದಾರೆ. 
 

PREV
Read more Articles on
click me!

Recommended Stories

ರೈತರಿಗೆ ಅನುಕೂಲ ಮಾಡುವುದೇ ಗುರಿ: ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್
ದಾವಣಗೆರೆ ಮಹಿಳೆಯನ್ನ ಕಚ್ಚಿಕೊಂದ 2 ರಾಟ್‌ವೀಲರ್ ನಾಯಿಗಳು ಜನರ ಹಲ್ಲೆಯಿಂದ ಸಾವು; ಶ್ವಾನಗಳ ಮಾಲೀಕ ಬಂಧನ