ವರದಿ : ಮಂಡ್ಯ ಮಂಜುನಾಥ
ಮಂಡ್ಯ (ಜೂ.09): ರೋಹಿಣಿ ಸಿಂಧೂರಿ ಬಗ್ಗೆ ಚಲನಚಿತ್ರವೊಂದು ತಯಾರಾಗುತ್ತಿದೆ. ಚಿತ್ರದ ಹೆಸರು ಭಾರತ ಸಿಂಧೂರಿ. ಪತ್ರಕರ್ತ ಎಸ್.ಕೃಷ್ಣ ಸ್ವರ್ಣಸಂದ್ರ ಅವರು ಕಥೆ, ಚಿತ್ರಕತೆ, ನಿರ್ಮಾಣದೊಂದಿಗೆ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದಾರೆ.
ಮಂಡ್ಯ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಯಾಗಿ ರೋಹಿಣಿ ಸಿಂಧೂರಿ ನಿರ್ವಹಿಸಿದ ಪಾರದರ್ಶಕ ಕಾರ್ಯವೈಖರಿಯನ್ನು ಚಿತ್ರದಲ್ಲಿ ಅನಾವರಣಗೊಳಿಸುವ ಉದ್ದೇಶ ನಿರ್ದೇಶಕರದ್ದಾಗಿದೆ. ಚಿತ್ರ ನಿರ್ಮಾಣಕ್ಕೆ ರೋಹಿಣಿ ಸಿಂಧೂರಿ ಈಗಾಗಲೇ ಒಪ್ಪಿಗೆ ಸೂಚಿಸಿದ್ದಾರೆ. ಚಿತ್ರದ ಸ್ಕ್ರಿಪ್ಟ್‌ನ್ನು ಅವರ ಬಳಿಗೆ ತೆಗೆದುಕೊಂಡು ಹೋದ ಸಮಯದಲ್ಲಿ ನೀವು ಚಿತ್ರ ಮಾಡಿ. ಉತ್ತಮವಾಗಿ ಚಿತ್ರ ಮಾಡುವಿರೆಂಬ ಭರವಸೆ ಇದೆ ಎಂದು ನಿರ್ದೇಶಕ ಎಸ್.ಕೃಷ್ಣ ಅವರಿಗೆ ಹೇಳಿ ಕಳುಹಿಸಿದ್ದಾರೆ.
ಒಂದಲ್ಲೊಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರೋ ಖಡಕ್ ಡಿಸಿ ರೋಹಿಣಿ ಸಿಂಧೂರಿ ಹುಟ್ಟಹಬ್ಬವಿಂದು .
ಚಿತ್ರ ನಿರ್ಮಾಣಕ್ಕೆ ರೋಹಿಣಿ ಸಿಂಧೂರಿಯವರಿಂದ ಗ್ರೀನ್ ಸಿಗ್ನಲ್ ದೊರಕುತ್ತಿದ್ದಂತೆ ಭಾರತ ಸಿಂಧೂರಿ ಹೆಸರಿನ ಟೈಟಲ್ ಈಗಾಗಲೇ ಕರ್ನಾಟಕ ಚಲನಚಿತ್ರ ವಾಣಿಜ್ಯಮಂಡಳಿಯಲ್ಲಿ ನೋಂದಣಿ ಮಾಡಿಸಿ ಚಿತ್ರದ ಕೆಲಸಕ್ಕೆ ಚಾಲನೆ ನೀಡಿದ್ದಾರೆ.
ಸಿನಿಮಾ ಆಗಲಿದೆ ರೋಹಿಣಿ ಸಿಂಧೂರಿ ಜೀವನದ ಕಥೆ? ...
3.9.2014ರಲ್ಲಿ ಮಂಡ್ಯ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ರೋಹಿಣಿ ಸಿಂಧೂರಿ ಅವರು ಕೇವಲ ಒಂಬತ್ತು ತಿಂಗಳಲ್ಲಿ ಮಂಡ್ಯ ಮಹಿಳೆಯರ ಪಾಲಿಗೆ ಭಾರತ ಸಿಂಧೂರ ರಶ್ಮಿಯಾದ ಕಥೆ ಇದು.
ಒಂದು ವರ್ಷದ ಕಾಲಾವಧಿಯಲ್ಲಿ ಸ್ವಚ್ಛ ಭಾರತ್ ಅಭಿಯಾನ ನಡೆಸಿ ಮಂಡ್ಯ ಜಿಲ್ಲೆಯನ್ನು ಬಯಲು ಬಹಿರ್ದೆಸೆಮುಕ್ತ ಜಿಲ್ಲೆಯಾಗಿ ಮಾಡಿ ಮನೆಗೊಂದು ಶೌಚ ನಿರ್ಮಾಣಕ್ಕೆ ಶಪಥ ಮಾಡಿದರು. ಜಿಲ್ಲೆಯಲ್ಲಿ ವರ್ಷಕ್ಕೆ ಒಂದು ಲಕ್ಷ ಶೌಚಾಲಯ ನಿರ್ಮಾಣಕ್ಕೆ ಪಣತೊಟ್ಟು ಗುರಿ ಸಾಧಿಸಿದರು. ಜನಪ್ರತಿನಿಧಿಗಳ ಸಭೆ ನಡೆಸಿ ಶೌಚಾಲಯ ನಿರ್ಮಾಣ ಮಾಡದಿದ್ದರೆ ತಾವೂ ಚುನಾವಣೆಗೆ ನಿಲ್ಲಲು ಅನರ್ಹರು ಎಂದು ಎಚ್ಚರಿಸಿದ ಧೀಮಂತ ಮಹಿಳೆಯ ಕಥೆ ಇದು.
ಮನೆಯಲ್ಲಿ ದೇವರ ಮನೆಗಿಂತ ಶೌಚಾಲಯ ಮುಖ್ಯವೆಂದು ಜಾಗೃತಿ ಮೂಡಿಸಿ ಕನ್ನಡ ನಾಡಿನ ಮಹಿಳೆಯರ ಪಾಲಿಗೆ ಸ್ವಾಭಿಮಾನದ ಸ್ವಾತಂತ್ರ ತಂದುಕೊಟ್ಟ ರೋಹಿಣಿ ಸಿಂಧೂರಿ ಭಾರತ ಸಿಂಧೂರಿಯಾದ ಯಶೋಗಾಥೆ. ಒಂದು ವರ್ಷದ ಆಡಳಿತ ವೈಖರಿಯ ನೈಜ ಕಥೆ.
ಇದನ್ನೇ ಚಿತ್ರದ ಕಥಾನಕವಾಗಿಟ್ಟುಕೊಂಡು ಸದಭಿರುಚಿಯ ಮಹಿಳಾಪ್ರಧಾನ ಚಿತ್ರವನ್ನು ತೆರೆಗೆ ತರುವುದಕ್ಕೆ ಎಸ್.ಕೃಷ್ಣ ಸ್ವರ್ಣಸಂದ್ರ ಮುಂದಾಗಿದ್ದಾರೆ. ಪ್ರಸ್ತುತ ಜಾರಿಯಲ್ಲಿರುವ ಲಾಕ್‌ಡೌನ್ ತೆರವಾಗಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಮುಗಿದ ಬಳಿಕ ಭಾರತ ಸಿಂಧೂರಿ ಚಿತ್ರದ ಚಿತ್ರೀಕರಣ ಆರಂಭಿಸಲು ನಿರ್ಧರಿಸಿದ್ದಾರೆ.
ರೋಹಿಣಿ ಸಿಂಧೂರಿ ಪಾತ್ರದಲ್ಲಿ ಪಾಂಡವಪುರದ ಅಕ್ಷತಾ ಅಭಿನಯಿಸುತ್ತಿದ್ದಾರೆ. ಕತೆ, ಚಿತ್ರಕತೆ, ಸಾಹಿತ್ಯ, ನಿರ್ಮಾಣ ಹಾಗೂ ನಿರ್ದೇಶನದ ಹೊಣೆಯನ್ನು ಎಸ್.ಕೃಷ್ಣ ಸ್ವರ್ಣಸಂದ್ರ ವಹಿಸಿಕೊಂಡಿದ್ದಾರೆ. ಗೊರವಾಲೆ ಮಹೇಶ ಹಾಗೂ ಮದ್ದೂರಿನ ಪ್ರಶಾಂತ್ ಸಹ ನಿರ್ದೇಶಕರಾಗಲಿದ್ದು ಚಿತ್ರಕ್ಕೆ ಹೆಗಲು ಕೊಡಲಿದ್ದಾರೆ. ಉಳಿದಂತೆ ಆಂಜನಪ್ಪ, ತುಂಗಾ, ಮದನ್‌ಗೌಡ, ಮೋಹನ್‌ರಾಜ್, ಲಾಲಿಪಾಳ್ಯ ಮಹದೇವು ಸೇರಿದಂತೆ ಸ್ಥಳೀಯ ಪ್ರತಿಭೆಗಳು ಚಿತ್ರದಲ್ಲಿ ನಟಿಸಲಿದ್ದಾರೆ.