ಸಿಲಿಂಡರ್‌ನೊಂದಿಗೆ ಆಸ್ಪತ್ರೆಗಳಿಗೆ ಅಲೆದ ರೋಗಿ

By Kannadaprabha NewsFirst Published Jul 19, 2020, 7:10 AM IST
Highlights

ಕೋವಿಡ್‌ ನೆಗೆಟಿವ್‌ ವರದಿ ಇದ್ದರೂ ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ರೋಗಿಯೊಬ್ಬರು ಆಮ್ಲಜನಕ ಸಿಲಿಂಡರ್‌ ಹಾಕಿಸಿಕೊಂಡೇ ಬೆಳಗ್ಗೆಯಿಂದ ಹಲವು ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಅಲೆದಾಡಿರುವ ಘಟನೆ ನಡೆದಿದೆ.

ಬೆಂಗಳೂರು(ಜು.19): ಕೋವಿಡ್‌ ನೆಗೆಟಿವ್‌ ವರದಿ ಇದ್ದರೂ ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ರೋಗಿಯೊಬ್ಬರು ಆಮ್ಲಜನಕ ಸಿಲಿಂಡರ್‌ ಹಾಕಿಸಿಕೊಂಡೇ ಬೆಳಗ್ಗೆಯಿಂದ ಹಲವು ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಅಲೆದಾಡಿರುವ ಘಟನೆ ನಡೆದಿದೆ.

ಬನಶಂಕರಿ ಮೂಲದ ದಂಪತಿ ಚಿಕಿತ್ಸೆಗಾಗಿ ಪರದಾಡಿದವರು. ಶನಿವಾರ ಬೆಳಗ್ಗೆ ಏಕಾಏಕಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ತೆರಳಿದ್ದಾರೆ. ಆದರೆ, ಆಸ್ಪತ್ರೆಗಳಲ್ಲಿ ವಿವಿಧ ಕಾರಣ ನೀಡಿ ವಾಪಸ್‌ ಕಳಿಸಲಾಗಿದೆ.

ಕೊರೋನಾದಿಂದ ಗುಣಮುಖರಾದ ಶಾಸಕ ಶರತ್​ ಬಚ್ಚೇಗೌಡ: ಜನರಿಗೆ ಕಿವಿಮಾತು..!

ಸೌತ್‌ ಎಂಡ್‌ ವೃತ್ತದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಆಮ್ಲಜನಕ ಸಿಲಿಂಡರ್‌ ಹಾಕಿಸಿಕೊಂಡು ರೋಗಿ ಹಾಗೂ ಪತ್ನಿ ಆಟೋದಲ್ಲೇ ಹಲವು ಆಸ್ಪತ್ರೆಗಳ ಬಾಗಿಲು ತಟ್ಟಿದ್ದಾರೆ. ಆಂಬುಲೆನ್ಸ್‌ಗೆ ಹಣವಿಲ್ಲದ್ದಕ್ಕೆ ಆಟೋದಲ್ಲೇ ಆಮ್ಲಜನಕ ಸಿಲಿಂಡರ್‌ ಇಟ್ಟು ಶನಿವಾರ ಬೆಳಗ್ಗೆ 9 ಗಂಟೆಯಿಂದ ಸಂಜೆಯವರೆಗೆ ಆಸ್ಪತ್ರೆಗಳಿಗೆ ಓಡಾಡಿದ್ದಾರೆ.

ರಾಜೀವ್‌ಗಾಂಧಿ, ಸಂಜಯಗಾಂಧಿ, ಸಾಗರ್‌, ಜಯನಗರ ಆಸ್ಪತ್ರೆಗಳಿಗೆ ಹೋಗಿದ್ದಾರೆ. ಮಧ್ಯಾಹ್ನ 3ರ ಸುಮಾರಿಗೆ ವಿಕ್ಟೋರಿಯಾ ಆಸ್ಪತ್ರೆಗೆ ತೆರಳಿದ್ದಾರೆ. ಆದರೆ, ಅಲ್ಲಿಯೂ ಕೆ.ಸಿ. ಜನರಲ್‌ ಅಥವಾ ಜಯನಗರ ಸಾರ್ವಜನಿಕ ಆಸ್ಪತ್ರೆಗೆ ಹೋಗುವಂತೆ ಸೂಚಿಸಿ ವಾಪಸ್‌ ಕಳಿಸಲಾಗಿದೆ. ಬಳಿಕ ಕಿಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸೋಂಕಿತರ ಕರೆಗಿಲ್ಲ ಸ್ಪಂದನೆ

ಕತ್ರಿಗುಪ್ಪೆಯ ಭುವನೇಶ್ವರಿ ನಗರದ ಸೋಂಕಿತ ವೃದ್ಧರೊಬ್ಬರ ಮನೆಯಲ್ಲಿ ಏಳು ಮಂದಿಗೆ ಜ್ವರ ಕಾಣಿಸಿಕೊಂಡಿದ್ದು, ಬಿಬಿಎಂಪಿ ಸಹಾಯವಾಣಿಗೆ ಕರೆ ಮಾಡಿದರೂ ಅಧಿಕಾರಿಗಳು ಸ್ಪಂದಿಸಿಲ್ಲ. ಕತ್ರಿಗುಪ್ಪೆಯ ಭುವನೇಶ್ವರಿ ನಗರದ ನಿವಾಸಿ ವೃದ್ಧನಿಗೆ ಕೊರೋನಾ ದೃಢಪಟ್ಟಿತ್ತು. ವೃದ್ಧನನ್ನು ಕುಟುಂಬದವರೇ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಇದೀಗ ಅದೇ ಕುಟುಂಬದ ಏಳು ಮಂದಿ ಜ್ವರ ಸೇರಿದಂತೆ ಕೆಲ ಲಕ್ಷಣಗಳಿಂದ ಬಳಲುತ್ತಿದ್ದಾರೆ.

ಅವ್ಯವಸ್ಥೆ ಬಗ್ಗೆ ಆಕ್ರೋಶ

ನಗರದ ವಿಕ್ಟೋರಿಯಾ ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ಮತ್ತೆ ಸೋಂಕಿತರೊಬ್ಬರಿಂದ ಆಕ್ರೋಶ ವ್ಯಕ್ತವಾಗಿದೆ. ವಿಕ್ಟೋರಿಯಾಗೆ ಬಂದರೆ ಕೊರೋನಾ ಗುಣವಾಗುವುದಿಲ್ಲ, ಬದಲಾಗಿ ಸೋಂಕು ಮತ್ತಷ್ಟುಹೆಚ್ಚಾಗುತ್ತದೆ ಎಂದು ಚಿಕಿತ್ಸೆ ಪಡೆಯುತ್ತಿರುವ ಸೋಂಕಿತೆ ವಿಡಿಯೋ ಮಾಡಿ ಆಸ್ಪತ್ರೆಯ ಅವ್ಯವಸ್ಥೆ ಬಿಚ್ಚಿಟ್ಟಿದ್ದಾರೆ.

ಆಸ್ಪತ್ರೆ ಸಿಬ್ಬಂದಿಗೆ ಸೋಂಕು

ಮಲ್ಲೇಶ್ವರಂನಲ್ಲಿರುವ ಕೆ.ಸಿ.ಜನರಲ್‌ ಆಸ್ಪತ್ರೆಯಲ್ಲಿ ಸೋಂಕಿನ ಭೀತಿ ಹೆಚ್ಚಾಗಿದೆ. ಕೋವಿಡ್‌ 19 ನಿಯಂತ್ರಣ ಕಾರ್ಯದಲ್ಲಿ ನಿರತರಾಗಿರುವ ಆಸ್ಪತ್ರೆಯ ಕೆಲ ಸಿಬ್ಬಂದಿಗೆ ಸೋಂಕು ದೃಢಪಟ್ಟಿತ್ತು. ಶುಕ್ರವಾರ ಆಸ್ಪತ್ರೆಯ 20 ಸಿಬ್ಬಂದಿಯಲ್ಲಿ ಸೋಂಕು ಕಂಡುಬಂದಿದ್ದು, ಈವರೆಗೆ ಒಟ್ಟು 59 ಮಂದಿಯಲ್ಲಿ ದೃಢಪಟ್ಟಿದೆ.

ಕ್ವಾರಂಟೈನ್‌ಗೆ ವಿರೋಧ

ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ನಗರದ ವಿವಿಧ ಬಡಾವಣೆಯ ನಿವಾಸಿಗಳಿಂದ ವಿದೇಶ ಹಾಗೂ ಹೊರ ರಾಜ್ಯಗಳಿಂದ ಬಂದವರನ್ನು ಕ್ವಾರಂಟೈನ್‌ ಮಾಡದಂತೆ ವಿರೋಧ ವ್ಯಕ್ತವಾಗುತ್ತಿದೆ. ಇದೀಗ ವಿದೇಶದಿಂದ ಬಂದವರನ್ನು ಕ್ವಾರಂಟೈನ್‌ ಮಾಡದಂತೆ ದೇವನಹಳ್ಳಿಯ ಶಾಂತಿನಗರದ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬಾರದ ಆ್ಯಂಬುಲೆನ್ಸ್‌

ಬಾಣಸವಾಡಿಯ ನಿವಾಸಿ 45 ವರ್ಷದ ಮಹಿಳೆಗೆ ಶುಕ್ರವಾರ ಸೋಂಕು ದೃಢಪಟ್ಟಿರುವುದಾಗಿ ಅಧಿಕಾರಿಗಳೇ ಮಾಹಿತಿ ನೀಡಿದ್ದು, ಬಿಬಿಎಂಪಿ ಅಧಿಕಾರಿಗಳು ಶನಿವಾರ ಬೆಳಗ್ಗೆ ಅಸ್ಪತ್ರೆಗೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದರಂತೆ. ಆದರೆ, ಆಂಬುಲೆನ್ಸ್‌ ಮಾತ್ರ ಬಂದಿಲ್ಲ ಎಂದು ಮಹಿಳೆಯ ಸೋದರ ತಿಳಿಸಿದ್ದಾರೆ.

click me!