ವರದಿ : ರಾಮಮೂರ್ತಿ ನವಲಿ
ಕೊಪ್ಪಳ (ಅ.13): ಹೆರಿಗೆ ಬೇನೆಯಿಂದ (labour pain) ಬಳಲುತ್ತಿದ್ದ ಕುರಿಯೊಂದನ್ನು (sheep) ವಿಜಯಪುರ ಜಿಲ್ಲೆಯ ಇಂಡಿಯ ( Indi) ಕುರಿಗಾರರೊಬ್ಬರು ಬರೋಬ್ಬರಿ 250 ಕಿ.ಮೀ. ದೂರ ಕ್ರಮಿಸಿ ಕೊಪ್ಪಳದ (Koppal) ಪಶು ವೈದ್ಯರ ಬಳಿ ತಂದು ಶಸ್ತ್ರಚಿಕಿತ್ಸೆ ಕೊಡಿಸುವ ಮೂಲಕ ಕುರಿಯನ್ನು ಉಳಿಸಿಕೊಂಡ ಹೃದಯಸ್ಪರ್ಶಿ ಘಟನೆಯೊಂದು ಮಂಗಳವಾರ ವರದಿಯಾಗಿದೆ.
ಸಾಮಾನ್ಯವಾಗಿ ಮನುಷ್ಯರು, ಹೆಚ್ಚೆಂದರೆ ಆಕಳುಗಳ (Cow) ಹೆರಿಗೆ ಸಂದರ್ಭದಲ್ಲಿ ತೊಂದರೆ ಕಾಣಿಸಿಕೊಂಡಲ್ಲಿ ದೂರದ ಊರಿಗೆ ಕರೆದೊಯ್ಯುವುದು ಸಹಜ. ಆದರೆ ಇಂಡಿಯ ಕುರಿಗಾಹಿಯು ತನ್ನ ಪ್ರೀತಿಯ ಕುರಿಯನ್ನು ಉಳಿಸಿಕೊಳ್ಳಲು ದೂರದ ಕೊಪ್ಪಳಕ್ಕೆ ತಂದು ದುಬಾರಿ ಚಿಕಿತ್ಸೆ ನೀಡಿದ್ದು ಅವರ ಕಾಳಜಿಗೆ ಶ್ಲಾಘನೆ ವ್ಯಕ್ತವಾಗಿದೆ.
ಹಸು-ಎಮ್ಮೆ ಅಥವಾ ಮೇಕೆ, ಮಗುವಿಗೆ ಯಾವ ಹಾಲು ಬೆಸ್ಟ್?
ಇಂಡಿಯ ಕುರಿಗಾರರಾದ ವಿಠೋಭ ಯಲ್ಲಪ್ಪ ಡಂಗಿ ಸಾಕಿದ್ದ ಮಾಡಿಗಾಳ ತಳಿಯ ಕುರಿಗೆ ಹೆರಿಗೆ ಸಂದರ್ಭದಲ್ಲಿ ತೊಂದರೆ ಕಾಣಿಸಿಕೊಂಡಿದ್ದು, ಅವರು ತಕ್ಷಣ ಟಾಟಾ ಏಸ್ (TATA Ace) ವಾಹನವನ್ನು ಮಾಡಿಕೊಂಡು ಕೊಪ್ಪಳಕ್ಕೆ ಆಗಮಿಸಿದ್ದರು. ವೈದ್ಯರು (Doctor) ಶಸ್ತ್ರಚಿಕಿತ್ಸೆ ಮಾಡಿ ಕುರಿಯನ್ನು ಉಳಿಸಿಕೊಂಡಿದ್ದಾರೆ. ಆದರೆ ದುರದೃಷ್ಟವಶಾತ್ ನವಜಾತ ಮರಿ ಬದುಕುಳಿಯಲಿಲ್ಲ.
ಸದ್ಯ ಕೊಪ್ಪಳದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಾ. ಅಶೋಕ ಗೊಣಸಗಿ (Dr Ashok Gonasagi) ಅವರು ಈ ಹಿಂದೆ ವಿಜಯಪುರ ಪಶು ಚಿಕಿತ್ಸಾಲಯದಲ್ಲಿ ಕರ್ತವ್ಯದಲ್ಲಿದ್ದರು. ಅವರು ರಾಸುಗಳಿಗೆ ನೀಡುತ್ತಿರುವ ಚಿಕಿತ್ಸೆ (Treatment), ಕಾಳಜಿಯಿಂದ ಕುರಿಗಾಹಿಗಳಲ್ಲಿ ಮನೆಮಾತಾಗಿದ್ದರು. ಅವರ ಕರ್ತವ್ಯದ ಬಗ್ಗೆ ಅರಿವಿದ್ದ ವಿಠೋಬ ತೊಂದರೆಯಲ್ಲಿದ್ದ ತನ್ನ ಕುರಿಯನ್ನು ಖರ್ಚಾದರೂ ತೊಂದರೆ ಇಲ್ಲ, ಸುಕ್ಷಿತವಾಗಿ ಹೆರಿಗೆ ಮಾಡಿಸಿದರಾಯಿತು ಎಂದು ಕೊಪ್ಪಳಕ್ಕೆ ತಂದಿದ್ದಾನೆ. ಆದರೆ ಹೆರಿಗೆಗೂ ಮುನ್ನ ಕುರಿ ಮರಿ ಮೃತಪಟ್ಟಿತ್ತು. ಕೊನೆಗೆ ಶಸ್ತ್ರಚಿಕಿತ್ಸೆ ಮೂಲಕ ಮರಿ ಹೊರತೆಗೆದ ಡಾ. ಅಶೋಕ ತಾಯಿ ಕುರಿ ಉಳಿಸಿದರು.
ಭಾರಿ ಬೇಡಿಕೆ: ವಿಜಯಪುರ (Vijayapura) ಜಿಲ್ಲೆ ಮತ್ತು ಮಹಾರಾಷ್ಟ್ರ ಗಡಿ ಭಾಗದಲ್ಲಿ ಕುರಿ ಮತ್ತು ಟಗರುಗಳಿಗೆ ಭಾರಿ ಬೇಡಿಕೆ ಇದ್ದು, ವಿಶಿಷ್ಟತಳಿಗಳಾದ ಗಿಣಿಮೋತಿ, ಕುಡಗೋಲ್ ಮೋತಿ ಮತ್ತು ಮಾಡಿಗಾಳ ತಳಿಯ ಕುರಿಗಳಿಗೆ ಭಾರಿ ಬೇಡಿಕೆ ಇವೆ. ಈ ಕುರಿಗಳನ್ನು ವಿವಿಧ ರಾಜ್ಯಗಳಿಗೆ ತೆಗೆದುಕೊಂಡು ಹೋಗುವ ಕುರಿಗಾರರು ಹೊಲ, ಗದ್ದೆಗಳಲ್ಲಿ ಬೀಡು ಬಿಡುತ್ತಾರೆ.
ಮಾಡಿಗಾಳ ತಳಿಯ ಕುರಿಗೆ 3 ರಿಂದ 4 ಲಕ್ಷದ ವರೆಗೂ ಬೇಡಿಕೆ ಇದೆ. ಮರಿಗಳು ಸಹ 1 ಲಕ್ಷ 20 ಸಾವಿರದ ವರೆಗೆ ಬೆಲೆಬಾಳುತ್ತವೆ. ಹಿಂಡು ಕುರಿಗಳಲ್ಲಿ ಒಂದೊಂದು ಮಾಡಿಗಾಳ ಟಗರು ಬಿಡುವ ಕುರಿಗಾರರು ಇದನ್ನು ವಂಶಾಭಿವೃದ್ಧಿಗಾಗಿ ಸಾಕುತ್ತಾರೆ. ಒಂದು ಟಗರಿನ ಬೆಲೆ ಸುಮಾರು 10 ಲಕ್ಷ ರು. ಇದೆ.
ವಿಜಯಪುರ ಜಿಲ್ಲೆಯಲ್ಲಿ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಿದ್ದೇನೆ. ಆ ಸಂದರ್ಭದಲ್ಲಿ ಸಾವಿರಾರು ಕುರಿಗಳು ಮತ್ತು ಟಗರುಗಳಿಗೆ ಚಿಕಿತ್ಸೆ ನೀಡುವುದರ ಮೂಲಕ ಔಷಧೋಪಚಾರ ಮಾಡಿದ್ದೇನೆ. ಮಾಡಿಗಾಳ ತಳಿ ಕುರಿಗೆ ಹೆರಿಗೆ ಸಮಸ್ಯೆಯಿದ್ದ ಕಾರಣ ಇಂಡಿಯಿಂದ ಕೊಪ್ಪಳಕ್ಕೆ ಕುರಿ ತರಲಾಗಿತ್ತು. ಸೂಕ್ತ ಚಿಕಿತ್ಸೆ ನೀಡಿ ಹೆರಿಗೆ ಮಾಡಿಸಲಾಗಿದೆ.
ಡಾ. ಅಶೋಕ ಗೊಣಸಗಿ, ಉಪ ನಿರ್ದೇಶಕರು, ಪಶು ಇಲಾಖೆ, ಕೊಪ್ಪಳ
ಇಲ್ಲಿಯ ವೈದ್ಯರಾಗಿರುವ ಅಶೋಕ ಗೊಣಸಗಿ ಅವರು ಉತ್ತಮ ಚಿಕಿತ್ಸೆ ನೀಡುತ್ತಿದ್ದರು. ಈ ಕಾರಣಕ್ಕಾಗಿ ಇಂಡಿಯಿಂದ ಕೊಪ್ಪಳಕ್ಕೆ ಕುರಿಯ ಹೆರಿಗೆ ಮಾಡಿಸಲು ಬಂದಿದ್ದೇವೆ. ಹೆರಿಗೆ ಸಮಯ ಮುಗಿದ್ದರಿಂದ ಮರಿ ಸಾವನ್ನಪ್ಪಿತು.
ವಿಠೋಭ ಯಲ್ಲಪ್ಪ ಡಂಗಿ ಕುರಿಗಾರ, ಇಂಡಿ