ಚಿನ್ನ ದೋಚಿ ಮಹಿಳೆಯನ್ನು ಕೊಲೆ ಮಾಡಿದ ವ್ಯಕ್ತಿ ತನಿಖೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಚಿನ್ನದ ಆಸೆಗೆ ಮಹಿಳೆಯನ್ನು ಕೊಂದ ವ್ಯಕ್ತಿ ಒಡವೆ ದೋಚಿ ಪರಾರಿಯಾಗಿ ಮನೆಯೊಳಗೆ ಅವಿತ್ತಿದ್ದ. ದೋಚಿದ್ದ ಚಿನ್ನವನ್ನೆಲ್ಲ ಅಲ್ಲೇ ಬಿಟ್ಟು ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಂತಹದೊಂದು ವಿಚತ್ರ ಘಟನೆ ಕಲಬುರಗಿಯಲ್ಲಿ ನಡೆದಿದ್ದು, ಹೆಚ್ಚಿನ ಮಾಹಿತಿಗಾಗಿ ಈ ಸುದ್ದಿ ಓದಿ.
ಕಲಬುರಗಿ(ಆ.23) : ಗುರುವಾರವಷ್ಟೇ ಮಹಿಳೆಯನ್ನು ಕೊಲೆ ಮಾಡಿ ಬಂಗಾರ ದೋಚಿದ್ದ ಹಂತಕ ಇಂದು ಪೊಲೀಸ್ ತನಿಖೆಗೆ ಹೆದರಿ ತಾನೇ ಪ್ರಾಣ ಬಿಟ್ಟಿರುವ ಘಟನೆ ಗಾಣಗಾಪುರದಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ಕೊಲೆ ಆರೋಪಿಯನ್ನು ಪೋಸಯ್ಯ ಕಲ್ಯಾಣಕರ್ (28) ಎಂದು ಗುರುತಿಸಲಾಗಿದೆ.
ಇಂತಹ ವಿಲಕ್ಷಣ ಹಾಗೂ ವಿಚಿತ್ರವಾದಂತಹ ಘಟನೆಗೆ ಅಫಜಲ್ಪುರ ತಾಲೂಕಿನ ಸ್ಟೇಷನ್ ಗಾಣಗಾಪುರ ಸಾಕ್ಷಿಯಾಗಿದೆ. ಪೋಸಯ್ಯ ಹಂದಿ ಹಿಡಿಯುವ ಕಾಯಕ ಮಾಡುತ್ತಿದ್ದ. ರಾತ್ರಿ ಹೊತ್ತಲ್ಲಿ ಮನೆಯಲ್ಲಿಯೇ ಸೀರೆಯಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಿನ್ನೆ ನೀಲೂರಲ್ಲಿ ಮಧ್ಯಾಹ್ನ ಈತ ಬಹಿರ್ದೆಸೆದೆಗೆ ಬಂದಿದ್ದ ಲಕ್ಷ್ಮೀಬಾಯಿ ಹೂಗಾರ್ ಎಂಬ ಮಹಿಳೆಯನ್ನು ಕೊಲೆ ಮಾಡಿ ಆಕೆಯ ಬಳಿಯಲ್ಲಿದ್ದಂತಹ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದ.
undefined
ಹೆಚ್ಚಿನ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ನಿಲೂರ ಗ್ರಾಮದ ಹಿಂದಿರುವ ನಿರ್ಜನ ಪ್ರದೇಶದಲ್ಲಿ ಬಹಿರ್ದೆಸೆಗೆ ಹೋಗಿದ್ದ ಲಕ್ಷ್ಮೀಬಾಯಿ ಹೂಗಾರ ಎಂಬುವರನ್ನು ಗಾಣಗಾಪುರದ ನಿವಾಸಿ ಪೋಸಯ್ಯ ಚಂದ್ರು ಕಲ್ಯಾಾಣಕರ್(24) ಮಹಿಳೆಯ ಮೈ ಮೇಲಿನ ಬಂಗಾರದಾಸೆಗೆ ಕೊಲೆ ಮಾಡಿ ಮಾಂಗಲ್ಯ ಸರ, ಕಿವಿಯೋಲೆ ಕಿತ್ತುಕೊಂಡಿದ್ದ. ಸ್ಥಳಕ್ಕೆ ಶ್ವಾನ ದಳದ ಪೊಲೀಸರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಿಪಿಐ ಮಹಾಂತೇಶ ಪಾಟೀಲ್ ಪಿಎಸ್‌ಐಗಳಾದ ಮಲ್ಲಣ್ಣ ಯಲಗೋಡ, ಮಂಜುನಾಥ ಹೂಗಾರ ಹಾಗೂ ಸಿಬ್ಬಂದಿಗಳೂ ಭೇಟಿ ನೀಡಿ ಪರಿಶೀಲನೆ ನಡೆಸಿ ಆರೋಪಿ ಬಂಧನಕ್ಕೆ ಜಾಲ ಬೀಸಿದ್ದರು. ಪೋಸಯ್ಯ ಮನೆಗೆ ಪೊಲೀಸರು ಭೇಟಿ ನೀಡಿದ್ದರು.
ಕೊಲೆ ಕೇಸ್‌ಗೆ ಟ್ವಿಸ್ಟ್: ತಂದೆಗೆ ನಿದ್ದೆ ಮಾತ್ರೆ ಕೊಟ್ಟ ಮಗಳು, ಇರಿದು ಕೊಂದ ಪ್ರಿಯತಮ!
ಈ ಸಂಗತಿ ಅರಿತ ಆರೋಪಿ ಪೊಲೀಸರ ಬಂಧನ, ತನಿಖೆ, ಶಿಕ್ಷೆಯ ವಿಚಾರ ಅರಿತು ಭೀತನಾಗಿ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಮೂಲಗಳು ಹೇಳಿವೆ. ಆತನ ಮನೆಯಲ್ಲಿ ಮೃತ ಮಹಿಳೆಯ ಮಾಂಗಲ್ಯ ಸರ, ಕಿವಿಯೋಲೆ ದೊರಕಿವೆ.
ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರೀಷ್ಠಾಧಿಕಾರಿ ಪ್ರಸನ್ನಕುಮಾರ ದೇಸಾಯಿ, ಡಿವೈಎಸ್‌ಪಿ ತುಳಜಪ್ಪ ಸುಲ್ಪಿ, ಸಿಪಿಐ ಮಹಾಂತೇಶ ಪಾಟೀಲ್, ಪಿಎಸ್‌ಐ ಮಲ್ಲಣ್ಣ ಯಲಗೋಡ್, ಅಧಿಕಾರಿಗಳಾದ ಆನಂದ ಮೇತ್ರಿ, ಹಾಗೂ ಶ್ವಾಾನ ದಳದ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ರೇವೂರ(ಬಿ) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.'
[ಸಮಸ್ಯೆಗಳು ಜೀವನದ ಅವಿಭಾಜ್ಯ ಅಂಗ. ಸಮಸ್ಯೆಯಿಲ್ಲದ ಮನುಷ್ಯನಿಲ್ಲ. ಯಾವುದೇ ಸಮಸ್ಯೆ ಜೀವನದ ಅಂತ್ಯವಲ್ಲ. ಆತ್ಮಹತ್ಯೆ ಆಲೋಚನೆ ಹೊಳೆದರೆ ಸರ್ಕಾರದ ಸಹಾಯವಾಣಿಗೆ ಕರೆ ಮಾಡಿ: 080 25497777 ಅಥವಾ ಆರೋಗ್ಯ ಸಹಾಯವಾಣಿ 104 ಗೆ ಕರೆ ಮಾಡಿ]