ಮಹಾರಾಷ್ಟ್ರದಲ್ಲಿ ಲಂಚ ಸ್ವೀಕರಿಸಿ ಸಿಕ್ಕಿಬಿದ್ದ ಕರ್ನಾಟಕ ಪೊಲೀಸ್‌!

By Kannadaprabha NewsFirst Published Aug 23, 2019, 10:53 AM IST
Highlights

ಕರ್ನಾಟಕ ಪೊಲೀಸ್ ಮೇಲೆ ಗಂಭೀರ ಆರೋಪ ಎದುರಾಗಿದೆ. ಲಂಚ ಪಡೆದು ಸಿಕ್ಕಿಬಿದ್ದವರನ್ನು ಬಂಧಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿ DYSP ಸ್ಥಳದಿಂದ ಪರಾರಿಯಾಗಿದ್ದಾರೆ.

ವಿಜಯಪುರ [ಆ.23]:  ಭಾರೀ ಸಂಚಲನಕ್ಕೆ ಕಾರಣವಾಗಿದ್ದ ವಿಜಯಪುರದ ಪ್ರಭಾವಿ ಕಾಂಗ್ರೆಸ್‌ ನಾಯಕಿ ರೇಷ್ಮಾ ಪಡೇಕನೂರ ಹತ್ಯೆ ಪ್ರಕರಣದ ಆರೋಪಿಗಳನ್ನು ಲಂಚ ಪಡೆದು ಪಾರು ಮಾಡಲು ಯತ್ನಿಸಿದ ಗಂಭೀರ ಆಪಾದನೆಗೆ ಕರ್ನಾಟಕ ಪೊಲೀಸರು ಗುರಿಯಾಗಿದ್ದಾರೆ. ಸೊಲ್ಲಾಪುರದಲ್ಲಿ ಬುಧವಾರ ರಾತ್ರಿ ರೇಷ್ಮಾ ಹತ್ಯೆ ಆರೋಪಿಗಳಿಂದ ಲಂಚ ಪಡೆಯುತ್ತಿದ್ದ ವೇಳೆ ಮಹಾರಾಷ್ಟ್ರದ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ದಾಳಿ ನಡೆಸಿದ್ದು, ಬಸವನಬಾಗೇವಾಡಿ ಪೊಲೀಸ್‌ ಠಾಣೆಯ ಕಾನ್ಸ್‌ಟೇಬಲ್‌ ಮಲ್ಲಿಕಾರ್ಜುನ ಪೂಜಾರಿ ಹಾಗೂ ಮಧ್ಯವರ್ತಿ ರಿಯಾಜ್‌ ಕೊಕಟನೂರ ಎಂಬವರನ್ನು ಬಂಧಿಸಿದ್ದಾರೆ. ಲಂಚ ಪ್ರಕರಣದ ರೂವಾರಿ ಎನ್ನಲಾಗಿರುವ ಬಸವನಬಾಗೇವಾಡಿ ಡಿವೈಎಸ್‌ಪಿ ಮಹೇಶ್ವರ ಗೌಡ ಪಾಟೀಲ್‌ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ವಿಜಯಪುರ ಕಾಂಗ್ರೆಸ್‌ ಮುಖಂಡೆ ರೇಷ್ಮಾ ಪಡೆಕನೂರು ಅವರನ್ನು ಮೇ 17, 2019ರಂದು ಕೊಲ್ಹಾರ ಪಟ್ಟಣದ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆ ಕೆಳಗೆ ಹತ್ಯೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ರೇಷ್ಮಾ ಪಡೆಕನೂರ ಅವರ ಪತಿಯನ್ನೂ ವಿಚಾರಣೆ ಒಳಪಡಿಸಿ ಮಾಹಿತಿ ಪಡೆದುಕೊಂಡಿದ್ದ ರಾಜ್ಯ ಪೊಲೀಸರು ಜೂನ್‌ 3ರಂದು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಲಸಂಗಿ ಕ್ರಾಸ್‌ ಬಳಿ ರೇಷ್ಮಾ ಪಡೆಕನೂರು ಸ್ನೇಹಿತ ತೌಫಿಕ್‌ ಪೈಲ್ವಾನ್‌ ಹಾಗೂ ಇಜಾಜ್‌ ಬಿರಾದಾರ ಅವರನ್ನು ಬಂಧಿಸಿದ್ದರು.

ಹೆಚ್ಚಿನ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಬಸವನಬಾಗೇವಾಡಿ ಉಪ ವಿಭಾಗದ ಡಿವೈಎಸ್ಪಿ ಮಹೇಶ್ವರಗೌಡ ಪಾಟೀಲ್, ಪೇದೆ ಮಲ್ಲಿಕಾರ್ಜುನ ಪೂಜಾರಿ ಅವರೊಂದಿಗೆ ಮಧ್ಯವರ್ತಿ ರಿಯಾಜ್‌ ಕೊಕಟನೂರ ಬುಧವಾರ ಮಹಾರಾಷ್ಟ್ರದ ಸೊಲ್ಲಾಪುರಕ್ಕೆ ತೆರಳಿದ್ದರು. ಡಿವೈಎಸ್‌ಪಿ ಸೂಚನೆಯಂತೆ ಆರೋಪಿಗಳನ್ನು ನಿಗದಿಪಡಿಸಿದ ಸ್ಥಳದಲ್ಲಿ ಭೇಟಿ ಮಾಡಿದ ಪೊಲೀಸ್‌ ಪೇದೆ ಮತ್ತು ಮಧ್ಯವರ್ತಿ ರಿಯಾಜ್‌ ಕೊಕಟನೂರ ಮೊದಲು 5 ಲಕ್ಷ ರು. ಬೇಡಿಕೆ ಇಟ್ಟಿದ್ದಾರೆ. ಆನಂತರ ಚೌಕಾಶಿ ಮಾಡಿ ಅಂತಿಮವಾಗಿ 1 ಲಕ್ಷ ರು.ಗೆ ಮಾತುಕತೆಯಾಗಿದೆ. ಆ ಪ್ರಕಾರ ಆರೋಪಿಗಳಿಂದ ಲಂಚ ಪಡೆಯುತ್ತಿದ್ದಾಗ ದಾಳಿ ನಡೆಸಿದ ಮಹಾರಾಷ್ಟ್ರದ ಎಸಿಬಿ ಪೊಲೀಸರು ಕಾನ್‌ಸ್ಟೇಬಲ್‌ ಮಲ್ಲಿಕಾರ್ಜುನ, ರಿಯಾಜ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರ ರೂವಾರಿ ಡಿವೈಎಸ್ಪಿ ಮಹೇಶ್ವರಗೌಡ ಪಾಟೀಲ್‌ ಪರಾರಿಯಾಗಿದ್ದು ಶೋಧ ಮುಂದುವರಿದಿದೆ. ಈ ಕುರಿತು ಸೊಲ್ಲಾಪುರದ ಸದರಬಜಾರ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡಿವೈಎಸ್‌ಪಿ ಮಹೇಶ್ವರಗೌಡ ಪಾಟೀಲ್‌ ಹಣಕ್ಕೆ ಬೇಡಿಕೆ ಇಟ್ಟಿದ್ದ ವಿಚಾರವನ್ನು ರೇಷ್ಮಾ ಕೊಲೆಯ ಆರೋಪಿಗಳ ಸಂಬಂಧಿಕರು ಮಹಾರಾಷ್ಟ್ರದ ಎಸಿಬಿಗೆ ತಿಳಿಸಿದ್ದು ಆ ಪ್ರಕಾರ ದಾಳಿ ನಡೆದಿದೆ ಎಂದು ಸೊಲ್ಲಾಪುರ ಪೊಲೀಸರು ತಿಳಿಸಿದ್ದಾರೆ.

ಪೇದೆ ಅಮಾನತು, ಡಿವೈಎಸ್ಪಿ ಬಗ್ಗೆ ಸರ್ಕಾರಕ್ಕೆ ವರದಿ: ಎಸ್ಪಿ

ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಎಸಿಬಿ ಬಲೆಗೆ ಬಿದ್ದಿರುವ ಪೊಲೀಸ್‌ ಪೇದೆ ಮಲ್ಲಿಕಾರ್ಜುನ ಪೂಜಾರಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ವಿಜಯಪುರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ ತಿಳಿಸಿದ್ದಾರೆ. ಇದೇವೇಳೆ ಬಸವನ ಬಾಗೇವಾಡಿ ಡಿವೈಎಸ್ಪಿ ಮಹೇಶ್ವರಗೌಡ ಪಾಟೀಲ ಅವರ ಬಂಧನ ಆಗದ ಕಾರಣ ಅವರ ವಿರುದ್ಧ ಮುಂದಿನ ಕ್ರಮಕ್ಕೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ.

click me!