ಹಳಿ ದಾಟುವಾಗ ಬೈಕ್ ಬಿಟ್ಟು ಓಡಿದ ಭೂಪ: ತಪ್ಪಿದ ಭಾರೀ ಅನಾಹುತ!

By Web DeskFirst Published Aug 16, 2018, 5:23 PM IST
Highlights

ಬೈಕ್ ಹಳಿ ಮೇಲೆ ಬಿಟ್ಟು ಓಟ ಕಿತ್ತ ಸವಾರ! ಬೆಳಗಾವಿ ಜಿಲ್ಲೆಯ ರಾಯಬಾಗದಲ್ಲಿ ಘಟನೆ! ಮೀರಜ್-ಹುಬ್ಬಳ್ಳಿ ರೈಲಿನ ಚಕ್ರಕ್ಕೆ ಸಿಕ್ಕ ಬೈಕ್! ಒಂದು ಗಂಟೆ ವಿಳಂಬ ಪ್ರಯಾಣಿಸಿದ ರೈಲು

ರಾಯಬಾಗ(ಆ.16): ರೈಲು ಬರುವ ವೇಳೆಯಲ್ಲಿ ವ್ಯಕ್ತಿಯೊಬ್ಬ ಬೈಕ್ ಮೂಲಕ ಹಳಿ ದಾಟುವಾಗ, ದಿಢೀರನೆ ರೈಲು ಬರುವುದನ್ನು ಗಮನಿಸಿ ಬೈಕ್ ಅನ್ನು ಹಳಿಯ ಮೇಲೆ ಬಿಟ್ಟು ಪರಾರಿಯಾದ ಘಟನೆ ರಾಯಬಾಗ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.

ಬೈಕ್ ಅನ್ನು ಹಳಿಯ ಮೇಲೆ ಬಿಟ್ಟು ಹೋಗಿದ್ದರಿಂದಾಗಿ ರೈಲು ಆ ಬೈಕ್‌ನ ಮೇಲೆಯೇ ಹರಿದು ಸುಮಾರು 300 ಮೀಟರ್ ದೂರದವರೆಗೂ ಎಳೆದುಕೊಂಡು ಹೋಗಿದೆ. ಪರಿಣಾಮವಾಗಿ ಬೈಕ್ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ರಾಯಬಾಗ ರೈಲ್ವೆ ಪ್ಲಾಟ್‌ಫಾರಂ ಕೂಡ ಅಲ್ಪ ಪ್ರಮಾಣದಲ್ಲಿ ಹಾನಿಯಾಗಿದೆ. ಪರಿಣಾಮವಾಗಿ ರೈಲು ಒಂದು ಗಂಟೆಗೂ ಅಧಿಕ ಕಾಲ ನಿಲ್ದಾಣದಲ್ಲಿಯೇ ನಿಲ್ಲುವಂತಾಯಿತು. ಹೀಗಾಗಿ ಪ್ರಯಾಣಿಕರು ತೀವ್ರ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಯಿತು.

ರಾಯಬಾಗ ರೈಲ್ವೆ ನಿಲ್ದಾಣದ ಹತ್ತಿರದಲ್ಲಿಯೇ ವ್ಯಕ್ತಿಯೊಬ್ಬ ಹಳಿಯ ಮೇಲೆ ಬೈಕ್ ತೆಗೆದುಕೊಂಡು ಹೋಗುತ್ತಿದ್ದ. ಈ ವೇಳೆ ದಿಢೀರನೆ ಮಿರಜ್‌ನಿಂದ ಹುಬ್ಬಳ್ಳಿಗೆ ಹೋಗುವ ರೈಲು ಬಂದಿದ್ದು, ಆತ ಬಾಕ್ ಅನ್ನು ಹಳಿಯ ಮೇಲೆಯೇ ಬಿಟ್ಟು ಹೋಗಿದ್ದಾನೆ. ಇದರಿಂದಾಗಿ ರೈಲಿನ ಚಕ್ರದಡಿ ಸಿಕ್ಕಿಹಾಕಿಕೊಂಡ ಬೈಕ್ ಅನ್ನು ರೈಲು ಅಂದಾಜು 300 ಮೀ.ವರೆಗೂ ಎಳೆದುಕೊಂಡು ರಾಯಬಾಗ ರೈಲು ನಿಲ್ದಾಣಕ್ಕೆ ಬಂದಿದೆ. 

ನಂತರ ರೈಲ್ವೆ ಇಲಾಖೆಯ ಸಿಬ್ಬಂದಿ ಹರಸಾಹಸಪಟ್ಟು ರೈಲಿನ ಚಕ್ರದಡಿ ಸಿಕ್ಕಿಹಾಕಿಕೊಂಡಿದ್ದ ಬೈಕ್ ಅನ್ನು ಹೊರಗೆ ತೆಗೆದಿದ್ದಾರೆ. ನಂತರ ರೈಲು ಒಂದು ಗಂಟೆಗೂ ಅಧಿಕ ಕಾಲ ಅಲ್ಲಿಯೇ ನಿಂತಿದ್ದು, ಮುಂದಿನ ಎಲ್ಲ ನಿಲ್ದಾಣಕ್ಕೆ ತಡವಾಗಿಯೇ ಪ್ರಯಾಣ ಬೆಳೆಸಿದೆ. 

ಇದರಿಂದಾಗಿ ಪ್ರಯಾಣಿಕರು ಬೈಕ್ ಸವಾರ ಮಾಡಿದ ಎಡವಟ್ಟಿನಿಂದ ಪ್ರಯಾಣಿಕರು ತೀವ್ರ ಪರದಾಡುವಂತಾಯಿತು. ಈ ಸಂಬಂಧ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

click me!