
ಬೆಳಗಾವಿ(ಆ.14): ಕಬ್ಬಿನ ಬಾಕಿ ಬಿಲ್ ಕೊಡಿಸುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯುವಕನೋರ್ವ ಟ್ವೀಟ್ ಮಾಡಿದ್ದು, ಬಾಕಿ ಬಿಲ್ ಸಮಸ್ಯೆ ಇತ್ಯರ್ಥವಾಗದಿದ್ದಲ್ಲಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ.
ಆಕಾಶ7353 ಟ್ವಿಟರ್ ಖಾತೆಯಿಂದ ಮೋದಿ ಅವರಿಗೆ ಟ್ವೀಟ್ ಮಾಡಲಾಗಿದ್ದು, ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ. ಹುಬ್ಬಳ್ಳಿಯ ಮಲಪ್ರಭಾ ಸಕ್ಕರೆ ಕಾರ್ಖಾನೆಯಿಂದ ರೈತರಿಗೆ ಬರಬೇಕಾದ ಬಾಕಿ ಬಿಲ್ ಕೊಡಿಸುವಂತೆ ಮನವಿ ಮಾಡಲಾಗಿದೆ.
ಸಕ್ಕರೆ ಕಾರ್ಖಾನೆಗೆ 28 ಟನ್ ಕಬ್ಬು ಪೂರೈಸಿದ್ದರೂ ಬಾಕಿ ಬಿಲ್ ಮಾತ್ರ ಪಾವತಿಸಿಲ್ಲ ಎಂದು ಅಳಲು ತೋಡಿಕೊಂಡಿರುವ ಯುವಕ, ಬಾಕಿ ಬಿಲ್ ಬರದ ಕಾರಣ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದೇವೆ ಎಂದು ತಿಳಿಸಿದ್ದಾನೆ.
ಇದು ನನ್ನ ಕೊನೆಯ ಮನವಿಯಾಗಿದ್ದು, ಬಾಕಿ ಬಿಲ್ ಕೊಡಿಸದಿದ್ದರೆ ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಆಕಾಶ ಎಚ್ಚರಿಕೆ ನೀಡಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಯುವಕನ ಟ್ವೀಟ್ ತೀವ್ರ ಚರ್ಚೆಗೆ ಗ್ರಾಸವಾಗಿದೆ.