ಖರ್ಜೂರ ಸಾಗಿಸುವ ಕ್ಯಾಂಟರ್‌ನಲ್ಲಿ ಬಂದಿದ್ದ ಸೋಂಕಿತ: ಪೆಟ್ರೋಲ್ ಬಂಕ್‌ನಲ್ಲಿ ಸ್ನಾನ

By Kannadaprabha NewsFirst Published Apr 28, 2020, 7:35 AM IST
Highlights

ಉಡುಪಿ ಜಿಲ್ಲಾಡಳಿತದ ಕಟ್ಟುನಿಟ್ಟಿನ ಕ್ರಮದಿಂದಾಗಿ ಕಳೆದ ಮೂವತ್ತು ದಿನಗಳಿಂದ ಒಂದೂ ಪಾಸಿಟಿವ್‌ ಪ್ರಕರಣವಿಲ್ಲದೇ ಗ್ರೀನ್‌ ಝೋನ್‌ನತ್ತ ಹೆಜ್ಜೆ ಇಡುತ್ತಿದ್ದ ಉಡುಪಿ ಜಿಲ್ಲೆಗೆ ಇದೀಗ ಮತ್ತೆ ಕೊರೋನಾ ಕಂಟಕ ಎದುರಾಗಿದೆ.

ಉಡುಪಿ(ಏ.28): ಉಡುಪಿ ಜಿಲ್ಲಾಡಳಿತದ ಕಟ್ಟುನಿಟ್ಟಿನ ಕ್ರಮದಿಂದಾಗಿ ಕಳೆದ ಮೂವತ್ತು ದಿನಗಳಿಂದ ಒಂದೂ ಪಾಸಿಟಿವ್‌ ಪ್ರಕರಣವಿಲ್ಲದೇ ಗ್ರೀನ್‌ ಝೋನ್‌ನತ್ತ ಹೆಜ್ಜೆ ಇಡುತ್ತಿದ್ದ ಉಡುಪಿ ಜಿಲ್ಲೆಗೆ ಇದೀಗ ಮತ್ತೆ ಕೊರೋನಾ ಕಂಟಕ ಎದುರಾಗಿದೆ.

ಮುಂಬೈನಿಂದ ಲಾರಿಯ ಮೂಲಕ ಪ್ರಯಾಣ ಬೆಳೆಸಿದ್ದ ಮಂಡ್ಯ ಮೂಲದ ಹೊಟೇಲ್‌ ಕಾರ್ಮಿಕನೊಬ್ಬನಿಗೆ ಕೋವಿಡ್‌- 19 ದೃಢಪಟ್ಟಿದ್ದು, ಈತ ಏಪ್ರಿಲ್‌ 21ರಂದು ಕುಂದಾಪುರ ತಾಲೂಕಿನ ಪೆಟ್ರೋಲ್‌ ಬಂಕ್‌ವೊಂದರಲ್ಲಿ ಸ್ನಾನ ಮಾಡಿ ಕೆಲ ಗಂಟೆಗಳ ಕಾಲ ವಿಶ್ರಾಂತಿ ಪಡೆದಿದ್ದ ಎನ್ನುವ ಮಾಹಿತಿ ತನಿಖೆಯ ವೇಳೆ ಬಯಲಿಗೆ ಬಂದಿದೆ.

ಲಾಕ್‌ಡೌನ್‌ನಲ್ಲಿ ಸ್ಮಶಾನದಲ್ಲಿ ಕಟ್ಟಿಗೆ ಒಡೆಯುತ್ತಿದ್ದಾರೆ ಸೂರಿ ಶೆಟ್ಟಿ

ಪೆಟ್ರೋಲ್‌ ಬಂಕ್‌ ಪರಿಶೀಲನೆ: ಸೋಂಕಿತ ಮರವಂತೆ ಆಸುಪಾಸಿನ ಪೆಟ್ರೋಲ್‌ ಬಂಕ್‌ನಲ್ಲಿ ಸ್ನಾನ ಮಾಡಿ ವಿಶ್ರಾಂತಿ ಪಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು ಈ ಬಗ್ಗೆ ಗಂಗೊಳ್ಳಿ ಠಾಣಾಧಿಕಾರಿ ಭೀಮಾಶಂಕರ್‌ ಸೋಮವಾರ ಸಂಜೆ ಠಾಣಾ ವ್ಯಾಪ್ತಿಯ ಪೆಟ್ರೋಲ್‌ ಬಂಕ್‌ನಲ್ಲಿ ಅಳವಡಿಸಿರುವ ಸಿಸಿ ಟಿವಿ ದೃಶ್ಯಾವಳಿಗಳನ್ನು ತಪಾಸಣೆ ನಡೆಸಿದ್ದಾರೆ. ಯಾವ ಪೆಟ್ರೋಲ್‌ ಬಂಕ್‌ ಎನ್ನುವುದನ್ನು ಪತ್ತೆ ಹಚ್ಚಿದ ಬಳಿಕವಷ್ಟೇ ಬಂಕ್‌ನ್ನು ಸೀಲ್‌ಡೌನ್‌ಗೊಳಪಡಿಸಲಿದ್ದಾರೆ ಎನ್ನುವ ಮಾಹಿತಿಗಳು ಪೊಲೀಸ್‌ ಮೂಲಗಳಿಂದ ತಿಳಿದುಬಂದಿದೆ.

ಎಡಬದಿಯ ಪೆಟ್ರೋಲ್‌ ಬಂಕ್‌!:

ಸೋಂಕಿತ ಮುಂಬೈನಿಂದ ಮಂಡ್ಯದತ್ತ ಪ್ರಯಾಣ ಬೆಳೆಸುತ್ತಿರುವ ವೇಳೆ ಕುಂದಾಪುರ ಆಸುಪಾಸಿನ ರಾಷ್ಟ್ರೀಯ ಹೆದ್ದಾರಿಯ ಎಡಬದಿಯಲ್ಲಿರುವ ಪೆಟ್ರೋಲ್‌ ಬಂಕ್‌ವೊಂದರಲ್ಲಿ ಸ್ನಾನ ಮಾಡಿ ವಿಶ್ರಾಂತಿ ಪಡೆದಿದ್ದೇವೆ ಎಂದು ವಿಚಾರಣೆ ವೇಳೆಯಲ್ಲಿ ತಿಳಿಸಿದ್ದಾನೆæ. ಬಹುತೇಕ ಪೆಟ್ರೋಲ್‌ ಬಂಕ್‌ಗಳು ರಾಷ್ಟ್ರೀಯ ಹೆದ್ದಾರಿಯ ಬಲ ಬದಿಯಲ್ಲಿವೆ. ಸೋಮವಾರ ಸಂಜೆಯಿಂದಲೇ ಕಾರ್ಯಾಚರಣೆಗಿಳಿದ ಪೊಲೀಸರು ಪೆಟ್ರೋಲ್‌ ಬಂಕ್‌ನ್ನು ಪತ್ತೆಹಚ್ಚುವಲ್ಲಿ ನಿರತರಾಗಿದ್ದಾರೆ.

ಸೋಂಕಿತನ ಟ್ರಾವೆಲ್‌ ಹಿಸ್ಟರಿ:

ಸೋಂಕಿತ ವ್ಯಕ್ತಿ ಮುಂಬೈನಲ್ಲಿ ಹೊಟೇಲ್‌ ಕಾರ್ಮಿಕನಾಗಿ ದುಡಿಯುತ್ತಿದ್ದು, ಮುಂಬೈನಿಂದ ಖರ್ಜೂರ ಸಾಗಿಸುವ ಕ್ಯಾಂಟರ್‌ನಲ್ಲಿ ಏಪ್ರಿಲ್‌ 20ರಂದು ಪ್ರಯಾಣ ಬೆಳೆಸಿ, 21ರ ಸಂಜೆ 5 ಗಂಟೆ ಸುಮಾರಿಗೆ ತ್ರಾಸಿ ಪೆಟ್ರೋಲ್‌ ಬಂಕ್‌ ಬಳಿ ಸ್ನಾನ ಮಾಡಿ ಚಾಲಕನೊಂದಿಗೆ ಸೇರಿ ಅಲ್ಲೇ ಊಟ ತಯಾರಿಸಿದ್ದಾರೆ. ಊಟ ಮಾಡಿ ಸ್ವಲ್ಪ ಹೊತ್ತು ನಿದ್ದೆ ಮಾಡಿದ ಬಳಿಕ ರಾತ್ರಿ ಎರಡು ಗಂಟೆ ಸುಮಾರಿಗೆ ಪ್ರಯಾಣ ಬೆಳಸಿ 4.30ರ ಆಸುಪಾಸಿಗೆ ಮಂಗಳೂರು ತಲುಪಿದ್ದಾರೆ.

ಸಂಜೆ ಹೊತ್ತಲ್ಲಿ ಕೊರೋನಾ ರಣಕೇಕೆ: ಬೆಚ್ಚಿಬಿದ್ದ ಕಲಬುರಗಿ ಜನತೆ..!

ಮತ್ತೆ ಅದೇ ಕ್ಯಾಂಟರ್‌ನಲ್ಲಿ ಪ್ರಯಾಣ ಬೆಳಿಸಿ ಚನ್ನರಾಯಪಟ್ಟಣಕ್ಕೆ ಬಂದಿಳಿದು ಅಲ್ಲಿಂದ ತನ್ನ ಕುಟುಂಬಿಕರ ಕಾರಿನಲ್ಲಿ ಮನೆಗೆ ತಲುಪಿದ್ದಾನೆ. ಏ.22ರಂದು ನಾಗಮಂಗಲ ತಾಲೂಕಿನ ಸಾತೇಹಳ್ಳಿ ಗ್ರಾಮಕ್ಕೆ ತಲುಪಿದ್ದ 50 ವರ್ಷದ ಸೋಂಕಿತ ವ್ಯಕ್ತಿಯನ್ನು ಏಪ್ರಿಲ್‌ 24ರಂದು ಪರೀಕ್ಷೆಗೊಳಪಡಿಸಲಾಗಿತ್ತು. ಏಪ್ರಿಲ್‌ 27 ಸೋಮವಾರದಂದು ಪಾಸಿಟಿವ್‌ ವರದಿ ದೃಢಪಟ್ಟಿದೆ.

ಸಂವಹನ ಸಾಧ್ಯತೆ ಇಲ್ಲ: ಆತಂಕ ಬೇಡ!:

ಸೋಂಕಿತ ಕುಂದಾಪುರ ತಾಲೂಕಿನ ಆಸುಪಾಸಿನ ಪೆಟ್ರೋಲ್‌ ಬಂಕ್‌ ಅಲ್ಲಿ ಸ್ನಾನ ಮಾಡಿ ಕೆಲಹೊತ್ತು ವಿಶ್ರಾಂತಿ ಪಡೆದು ಮತ್ತೆ ಪ್ರಯಾಣ ಮುಂದುವರೆಸಿದ್ದಾನೆ. ಆದರೆ ಲಾಕ್‌ಡೌನ್‌ ಇರುವ ಕಾರಣದಿಂದಾಗಿ ಸಂಜೆ ವೇಳೆ ವಾಹನ ಹಾಗೂ ಜನಸಂಚಾರ ಇರುವುದಿಲ್ಲ. ಸೋಂಕಿತ ರಾತ್ರೋರಾತ್ರಿ ಮತ್ತೆ ಪ್ರಯಾಣ ಮುಂದುವರೆಸಿದ್ದರಿಂದ ಆತ ತಂಗಿದ್ದ ವೇಳೆಯಲ್ಲಿ ಯಾರೊಂದಿಗೂ ಸಂವಹನ ನಡೆಸುವ ಸಾಧ್ಯತೆ ಇರುವುದಿಲ್ಲ. ಹೀಗಾಗಿ ಸಾರ್ವಜನಿಕರು ಭಯಪಡುವ ಅಗತ್ಯ ಇಲ್ಲ.

-ಶ್ರೀಕಾಂತ ಹೆಮ್ಮಾಡಿ ಕುಂದಾಪುರ

click me!