ಅಜ್ಞಾತ ಸ್ಥಳದಿಂದ ಮಲ್ಲಿಕಾರ್ಜುನ ಮುತ್ಯಾ ವಿಡಿಯೋ ಪ್ರತ್ಯಕ್ಷ: 'ನಾನು ಓಡಿ ಹೋಗಿಲ್ಲ, ಪೊಲೀಸರು ಕರೆದಾಗ ಬರ್ತೀನಿ'

Published : Feb 26, 2026, 03:25 PM IST
Yadgir Mallikarjun Muthya

ಸಾರಾಂಶ

ಯಾದಗಿರಿಯ ಪೋಕ್ಸೋ ಪ್ರಕರಣದ ಆರೋಪಿ 'ಪವಾಡ ಪುರುಷ' ಮಲ್ಲಿಕಾರ್ಜುನ ಮುತ್ಯಾ, ತಲೆಮರೆಸಿಕೊಂಡ ನಂತರ ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿದ್ದಾರೆ. ತಾನು ಎಲ್ಲೂ ಹೋಗಿಲ್ಲ, ಮಠದ ಸಾಮೂಹಿಕ ವಿವಾಹದ ಲಗ್ನ ಪತ್ರಿಕೆ ಹಂಚಲು ಹೊರಗೆ ಬಂದಿದ್ದೇನೆ. ಪೊಲೀಸರ ವಿಚಾರಣೆಗೆ ಬರುವುದಾಗಿ ತಿಳಿಸಿದ್ದಾರೆ.

ಯಾದಗಿರಿ (ಫೆ.26): ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಪೋಕ್ಸೋ (POCSO) ಪ್ರಕರಣ ದಾಖಲಾದ ನಂತರ ತಲೆಮರೆಸಿಕೊಂಡಿದ್ದ ಯಾದಗಿರಿಯ ವಿವಾದಿತ 'ಪವಾಡ ಪುರುಷ' ಮಲ್ಲಿಕಾರ್ಜುನ ಮುತ್ಯಾ ಈಗ ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡುವ ಮೂಲಕ ಪ್ರತ್ಯಕ್ಷವಾಗಿದ್ದಾರೆ. ಪೊಲೀಸರು ತನ್ನನ್ನು ಹುಡುಕುತ್ತಿದ್ದಾರೆ ಎಂಬ ಸತ್ಯ ಗೊತ್ತಿದ್ದರೂ, ತಾನು ಎಲ್ಲಿಯೂ ಹೋಗಿಲ್ಲ, ಸ್ಥಳೀಯವಾಗಿಯೇ ಇದ್ದೇನೆ ಎಂದು ಮುತ್ಯಾ ಸಮರ್ಥಿಸಿಕೊಂಡಿದ್ದಾರೆ.

ಭಕ್ತರಿಗೆ ಅಭಯ ನೀಡಿದ ಮುತ್ಯಾ:

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೋದಲ್ಲಿ ಮಲ್ಲಿಕಾರ್ಜುನ ಮುತ್ಯಾ ತಮ್ಮ ಭಕ್ತರನ್ನು ಉದ್ದೇಶಿಸಿ ಮಾತನಾಡಿದ್ದಾರೆ. 'ನನ್ನ ಶ್ರೀಮಠದ ಭಕ್ತಾಧಿಗಳೇ, ನೀವು ಯಾರೂ ಆತಂಕಪಡುವ ಅಗತ್ಯವಿಲ್ಲ. ನಾನು ಎಲ್ಲೂ ಓಡಿ ಹೋಗಿಲ್ಲ, ಇಲ್ಲೇ ಲೋಕಲ್‌ನಲ್ಲೇ ಇದ್ದೇನೆ. ಮಠದಲ್ಲಿ ಶೀಘ್ರದಲ್ಲೇ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದರ ಆಮಂತ್ರಣ ಪತ್ರಿಕೆ (ಲಗ್ನ ಪತ್ರಿಕೆ) ಹಂಚಲು ನಾನು ಹೊರಗಡೆ ಬಂದಿದ್ದೇನೆ ಅಷ್ಟೆ' ಎಂದು ಹೇಳಿದ್ದಾರೆ.

ಪೊಲೀಸ್ ವಿಚಾರಣೆಗೆ ಸಿದ್ಧ ಎಂದ ಆರೋಪಿ:

ತನ್ನ ವಿರುದ್ಧ ದಾಖಲಾಗಿರುವ ಗಂಭೀರ ಪ್ರಕರಣದ ಬಗ್ಗೆಯೂ ವಿಡಿಯೋದಲ್ಲಿ ಪ್ರಸ್ತಾಪಿಸಿರುವ ಮುತ್ಯಾ, 'ಪೊಲೀಸ್ ಸಿಬ್ಬಂದಿ ನನ್ನನ್ನು ವಿಚಾರಣೆಗೆ ಕರೆ ನೀಡಿದ್ದಾರೆ ಎಂಬ ವಿಷಯ ತಿಳಿದಿದೆ. ನಾನು ಕಾನೂನಿಗೆ ಗೌರವ ನೀಡುತ್ತೇನೆ. ಪೊಲೀಸರು ಯಾವಾಗ ಬನ್ನಿ ಅಂತಾರೋ ಆವಾಗ ನಾನು ಅವರ ಮುಂದೆ ಹಾಜರಾಗಲು ಸಿದ್ಧನಿದ್ದೇನೆ. ಇದರಲ್ಲಿ ಹೆದರುವಂತಹ ಅಥವಾ ಆತಂಕ ಪಡುವಂತಹ ವಿಷಯ ಯಾವುದೂ ಇಲ್ಲ' ಎಂದು ಅತೀವ ಆತ್ಮವಿಶ್ವಾಸದಿಂದ ನುಡಿದಿದ್ದಾರೆ.

ಪ್ರಕರಣದ ಹಿನ್ನೆಲೆ ಏನು?

ಕೆಲ ದಿನಗಳ ಹಿಂದೆ ಮಲ್ಲಿಕಾರ್ಜುನ ಮುತ್ಯಾ ಅಪ್ರಾಪ್ತ ಬಾಲಕಿಯೊಬ್ಬಳೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ವಿವಿಧ ಸಂಘಟನೆಗಳು ಮುತ್ಯಾ ವಿರುದ್ಧ ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿದ್ದವು. ಪ್ರಕರಣ ದಾಖಲಾಗುತ್ತಿದ್ದಂತೆಯೇ ಮುತ್ಯಾ ತಲೆಮರೆಸಿಕೊಂಡಿದ್ದರು. ಪೊಲೀಸರು ಈತನ ಪತ್ತೆಗಾಗಿ ಬಲೆ ಬೀಸಿದ್ದ ಸಮಯದಲ್ಲಿಯೇ ಈಗ ಅಜ್ಞಾತ ಸ್ಥಳದಿಂದ ಈ ವಿಡಿಯೋ ಹೊರಬಿದ್ದಿದೆ.

ಡೋಂಗಿತನದ ಬಗ್ಗೆ ಸಾರ್ವಜನಿಕರ ಆಕ್ರೋಶ:

ಒಂದೆಡೆ ಮುತ್ಯಾ ಭಕ್ತರಿಗೆ ಸಮಾಧಾನ ಹೇಳುತ್ತಿದ್ದರೆ, ಇನ್ನೊಂದೆಡೆ ಸಾರ್ವಜನಿಕರು ಈತನ ವರ್ತನೆಯನ್ನು ತೀವ್ರವಾಗಿ ಖಂಡಿಸುತ್ತಿದ್ದಾರೆ. 'ತಪ್ಪಿತಸ್ಥನಲ್ಲದಿದ್ದರೆ ಪೊಲೀಸರ ಮುಂದೆ ನೇರವಾಗಿ ಹಾಜರಾಗುವ ಬದಲು ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುತ್ತಿರುವುದು ಯಾಕೆ?' ಎಂದು ಅನೇಕರು ಪ್ರಶ್ನಿಸುತ್ತಿದ್ದಾರೆ. ಅಲ್ಲದೆ, ಇತ್ತೀಚೆಗಷ್ಟೇ ಮಾಜಿ ಸಚಿವ ಬಾಬುರಾವ್ ಚಿಂಚನಸೂರು ಅವರೊಂದಿಗೆ ನಡೆದಿದೆ ಎನ್ನಲಾದ ಆಡಿಯೋ ಕೂಡ ವೈರಲ್ ಆಗಿದ್ದು, ಮುತ್ಯಾ ಅವರ ಭವಿಷ್ಯವಾಣಿಗಳೆಲ್ಲವೂ ಸುಳ್ಳು ಎಂಬುದು ಸಾಬೀತಾಗಿತ್ತು.

ಸದ್ಯ ಪೊಲೀಸರು ಈ ವಿಡಿಯೋದ ಮೂಲವನ್ನು ಪತ್ತೆಹಚ್ಚಲು ಮುಂದಾಗಿದ್ದಾರೆ. ಮುತ್ಯಾ ನಿಜವಾಗಿಯೂ ಮದುವೆಯ ಕಾರ್ಡ್ ಹಂಚುತ್ತಿದ್ದಾರೋ ಅಥವಾ ಬಂಧನದ ಭೀತಿಯಿಂದ ನಾಟಕವಾಡುತ್ತಿದ್ದಾರೋ ಎಂಬುದು ಪೊಲೀಸರ ತನಿಖೆಯಿಂದಷ್ಟೇ ತಿಳಿಯಬೇಕಿದೆ.

PREV
Read more Articles on
click me!

Recommended Stories

ಕನ್ನಡದ ನಿರ್ದೇಶಕನ ಕಿಡ್ನಾಪ್, ದುನಿಯಾ ವಿಜಯ್ ಸಿನೆಮಾದ ನಟಿ ಐಶ್ವರ್ಯಾ ಸೇರಿ 11 ಮಂದಿ ಅರೆಸ್ಟ್!
ನೀನೇ ಖುಷಿಯಾಗಿರು, ಈ ಪ್ರಪಂಚನೇ ಬಿಟ್ಟು ಹೋಗ್ತಿದಿನಿ ಬಾಯ್, ವಾಟ್ಸಾಪ್ ಸ್ಟೇಟಸ್ ಹಾಕಿ ವಿದ್ಯಾರ್ಥಿ ಸಾವಿಗೆ ಶರಣು!