
ಯಾದಗಿರಿ (ಫೆ.26): ಕಲ್ಯಾಣ ಕರ್ನಾಟಕ ಭಾಗದಲ್ಲಿ ಪವಾಡ ಪುರುಷನೆಂದೇ ಖ್ಯಾತಿ ಪಡೆದಿದ್ದ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಪೋಕ್ಸೋ ಪ್ರಕರಣ ದಾಖಲಾಗಿರುವುದು ರಾಜ್ಯಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿತ್ತು. ಆದರೆ, ಈಗ ಸ್ವತಃ ಆ ಸಂತ್ರಸ್ತ ಬಾಲಕಿಯ ತಂದೆ-ತಾಯಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡುವ ಮೂಲಕ ಪ್ರಕರಣಕ್ಕೆ ಹೊಸ ಆಯಾಮ ನೀಡಿದ್ದಾರೆ. ಮುತ್ಯಾ ಅವರದ್ದು ಯಾವುದೇ ತಪ್ಪಿಲ್ಲ, ಕಿಡಿಗೇಡಿಗಳು ವಿಡಿಯೋವನ್ನು ತಿರುಚಿ ವೈರಲ್ ಮಾಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.
ಮಹಾರಾಷ್ಟ್ರದ ಸೊಲ್ಲಾಪುರದಿಂದ ವಿಡಿಯೋ ಬಿಡುಗಡೆ ಮಾಡಿರುವ ಪೋಷಕರು ಅಂದಿನ ಘಟನೆಯನ್ನು ವಿವರಿಸಿದ್ದಾರೆ. 'ನಮ್ಮ ಮಗಳ ಹುಟ್ಟುಹಬ್ಬವಿದ್ದ ಕಾರಣ ದರ್ಶನ ಮತ್ತು ಆಶೀರ್ವಾದ ಪಡೆಯಲು ನಾವು ಅಪ್ಪಾಜಿ (ಮುತ್ಯಾ) ಅವರ ಮಠಕ್ಕೆ ಹೋಗಿದ್ದೆವು. ನಾವು ಕಳೆದ 3-4 ವರ್ಷಗಳಿಂದ ಮುತ್ಯಾ ಅವರ ಪರಮ ಭಕ್ತರಾಗಿದ್ದೇವೆ. ಅಂದು ಮಗಳಿಗೆ ಆಶೀರ್ವಾದ ಮಾಡುತ್ತಿದ್ದ ದೃಶ್ಯವನ್ನು ನಾವೇ ಖುಷಿಯಿಂದ ವಿಡಿಯೋ ಮಾಡಿಕೊಂಡಿದ್ದೆವು. ಆ ಪವಿತ್ರ ಕ್ಷಣವನ್ನು ನಮ್ಮ ವಾಟ್ಸಾಪ್ ಸ್ಟೇಟಸ್ ಹಾಗೂ ಸೋಶಿಯಲ್ ಮೀಡಿಯಾದಲ್ಲಿ 'ಆಶೀರ್ವಾದ' ಎಂದು ಹೆಮ್ಮೆಯಿಂದ ಹಂಚಿಕೊಂಡಿದ್ದೆವು' ಎಂದು ತಿಳಿಸಿದ್ದಾರೆ.
'ನಮ್ಮ ಮಗಳು ಮತ್ತು ಅಪ್ಪಾಜಿ ಅವರು ಜೊತೆಗಿರುವ ವಿಡಿಯೋವನ್ನು ಕೆಲವರು ದುರುದ್ದೇಶದಿಂದ ಪಡೆದುಕೊಂಡು, ಅದನ್ನು ಎಡಿಟ್ ಮಾಡಿ, ತಪ್ಪು ಸಂದೇಶ ಬರುವಂತೆ ತಿರುಚಿದ್ದಾರೆ. ನಮ್ಮ ಮಗಳಿಗೆ ಅಪ್ಪಾಜಿ ಅವರು ತಂದೆಯ ಸ್ಥಾನದಲ್ಲಿದ್ದು ಆಶೀರ್ವಾದ ಮಾಡಿದ್ದಾರೆ. ಆದರೆ ಸಮಾಜದಲ್ಲಿ ಅವರಿಗೆ ಕೆಟ್ಟ ಹೆಸರು ತರಲು ಈ ರೀತಿ ಮಾಡಲಾಗಿದೆ. ಈ ವಿಡಿಯೋವನ್ನು ತಿರುಚಿ ವೈರಲ್ ಮಾಡಿದವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು' ಎಂದು ಪೋಷಕರು ಆಗ್ರಹಿಸಿದ್ದಾರೆ.
ಪ್ರಕರಣ ದಾಖಲಾದ ನಂತರ ಪೊಲೀಸರು ನಡೆಸಿದ ವಿಚಾರಣೆಗೂ ಪೋಷಕರು ಸ್ಪಂದಿಸಿದ್ದಾರೆ. 'ಪೊಲೀಸ್ ಇಲಾಖೆ ಕರೆದಾಗಲೆಲ್ಲಾ ನಾವು ಹೋಗಿ ನಮ್ಮ ಹೇಳಿಕೆ ನೀಡಿದ್ದೇವೆ. ಅಪ್ಪಾಜಿ ಅವರದ್ದು ಯಾವುದೇ ತಪ್ಪಿಲ್ಲ, ಅವರು ನಮಗೆ ದೇವರ ಸಮಾನ ಎಂದು ಪೊಲೀಸರ ಮುಂದೆಯೂ ಹೇಳಿದ್ದೇವೆ. ಮುಗ್ಧ ಮಗುವಿನ ಹುಟ್ಟುಹಬ್ಬದ ಸಂಭ್ರಮವನ್ನು ಈ ರೀತಿ ವಿವಾದಕ್ಕೀಡು ಮಾಡಿರುವುದು ನಮಗೆ ತುಂಬಾ ನೋವು ತಂದಿದೆ' ಎಂದು ನೊಂದ ಪೋಷಕರು ಅಳಲು ತೋಡಿಕೊಂಡಿದ್ದಾರೆ.
ಪೋಷಕರ ಈ ಹೇಳಿಕೆಯು ಈಗ ತನಿಖಾಧಿಕಾರಿಗಳಿಗೆ ಹೊಸ ಸವಾಲೊಡ್ಡಿದೆ. ಪೋಕ್ಸೋ ಕಾಯ್ದೆಯಡಿ ಒಮ್ಮೆ ದೂರು ದಾಖಲಾದರೆ ಅದರ ಪ್ರಕ್ರಿಯೆಗಳು ಹೇಗೆ ನಡೆಯಲಿವೆ ಎಂಬುದು ಕುತೂಹಲ ಮೂಡಿಸಿದೆ. ಒಂದೆಡೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ನೋಡಿ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ಮತ್ತೊಂದೆಡೆ ಪೋಷಕರೇ ಮುತ್ಯಾ ಪರ ನಿಂತಿರುವುದು ಪ್ರಕರಣವನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ. ಸದ್ಯ ಪೊಲೀಸರು ವಿಡಿಯೋ ನೈಜತೆಯ ಬಗ್ಗೆ ಎಫ್‌ಎಸ್‌ಎಲ್ ವರದಿಗಾಗಿ ಕಾಯುತ್ತಿದ್ದಾರೆ.