ಚುನಾವಣೆ ಭಯ: ವೋಟ್ ಬ್ಯಾಂಕ್‌ಗೆ ಜೆಡಿಎಸ್ ಶಾಸಕ ತಂತ್ರ

By Web DeskFirst Published Aug 28, 2018, 1:15 PM IST
Highlights

'ಗ್ರಾಮ ವಾಸ್ತವ್ಯ'ದ ಮೂಲಕ ಎಚ್.ಡಿ.ಕುಮಾರಸ್ವಾಮಿಯವರು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಜನರನ್ನು ತಲುಪಿದ್ದರು. ಯಾವುದೋ ಮೂಲೆಯೊಂದರ ಹಳ್ಳಿಯಲ್ಲಿ ರಾತ್ರಿ ಕಳೆದು, ಜನರೊಂದಿಗೆ ನೇರ ಸಂಪರ್ಕದಲ್ಲಿರಲು ಯತ್ನಿಸಿದ್ದರು. ಇದೀಗ ಮಳವಳ್ಳಿ ಶಾಸಕರು ಎಚ್ಡಿಕೆ ದಾರಿಯಲ್ಲಿಯೇ ನಡೆಯುತ್ತಿದ್ದು, ಆಗಾಗ ಗ್ರಾಮ ವಾಸ್ತವ್ಯ ನಡೆಸುತ್ತಿದ್ದಾರೆ.

ಮಂಡ್ಯ: ಎಚ್.ಡಿ.ಕುಮಾರಸ್ವಾಮಿ ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಜನರ ಸಾಮೀಪ್ಯ ಸಾಧಿಸಿದ್ದು ಗ್ರಾಮ ವಾಸ್ತವ್ಯದ ಮೂಲಕ. ಈಗಲೂ ಆ ಕಾರ್ಯವನ್ನು ಭತ್ತದ ಗದ್ದೆಯಲ್ಲಿ ನಾಟಿ ಮಾಡುವ ಮೂಲಕ ಹಾಗೂ ಜನತಾ ದರ್ಶನದ ಮೂಲಕ ಮುಂದುವರಿಸುತ್ತಿದ್ದಾರೆ. 

ಹೆಚ್ಡಿಕೆ ಗ್ರಾಮವಾಸ್ತವ್ಯ ಮಾಡಿದಂತೆ ಮಳವಳ್ಳಿ ಶಾಸಕರೂ ಗ್ರಾಮವಾಸ್ತವ್ಯ ಮಾಡುತ್ತಿದ್ದಾರೆ. ಮಳವಳ್ಳಿ ಜೆಡಿಎಸ್ ಶಾಸಕ ಡಾ.ಕೆ.ಅನ್ನದಾನಿ‌ ಅವರು ಮಳವಳ್ಳಿ ತಾಲೂಕಿನ ಹೂವಿನಕೊಪ್ಪಲು ಗ್ರಾಮದಲ್ಲಿ ಗ್ರಾಮವಾಸ್ತವ್ಯ ಮಾಡಿದ್ದಾರೆ. 

ಮಾದಿಗ ಸಮುದಾಯದ ಚಿಕ್ಕಣ್ಣ ಎಂಬುವರ ಮನೆಯಲ್ಲಿ ಅವರು ವಾಸ್ತವ್ಯ ಹೂಡಿದ್ದರು. ಕಳೆದ ಎರಡು ತಿಂಗಳಲ್ಲಿ ನಾಲ್ಕು ಬಾರಿ ಜಾತಿವಾರು ಗ್ರಾಮ ವಾಸ್ತವ್ಯ ಮಾಡಿದ್ದಾರೆ ಇವರು. 

ಕ್ಷೇತ್ರದ ಪ್ರತಿ ಗ್ರಾಮದಲ್ಲೂ ಜಾತಿವಾರು ಗ್ರಾಮ ವಾಸ್ತವ್ಯ ಮಾಡುವುದಾಗಿ ಹೇಳಿರುವ ಶಾಸಕರು, 15 ದಿನಗಳಿಗೊಮ್ಮೆ ಕ್ಷೇತ್ರದ ವಿವಿಧೆಡೆ ಗ್ರಾಮ ವಾಸ್ತವ್ಯ ಮಾಡುತ್ತಿದ್ದಾರೆ.

ಕ್ಷೇತ್ರದಲ್ಲಿ ಗಟ್ಟಿಯಾಗಿ ನೆಲೆಯೂರಲು ಶಾಸಕ ಅನ್ನದಾನಿ ಅವರ ರಣತಂತ್ರವಿದು ಎಂದು ಜನರು ಹೇಳುತ್ತಿದ್ದು, ಮುಂದಿನ ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಶಾಸಕರ ಮಾಸ್ಟರ್ ಪ್ಲಾನ್ ಇದು ಎಂದು ಕೆಲವರು ವಿಶ್ಲೇಷಿಸುತ್ತಿದ್ದಾರೆ. 

ಯಾವ ಸಂದರ್ಭದಲ್ಲಿ ಬೇಕಾದಲೂ ಚುನಾವಣೆ ನಡೆಯುವ ಸಾಧ್ಯತೆ ಇದ್ದು, ವೋಟ್ ಬ್ಯಾಂಕ್ ಹಿಡಿದಿಟ್ಟುಕೊಳ್ಳಲು ಅನ್ನದಾನಿ ಅವರು ಇಂತ ರಾಜಕೀಯ ತಂತ್ರಗಳನ್ನು ಅನುಸರಿಸುತ್ತಿದ್ದಾರೆನ್ನಲಾಗಿದೆ.

click me!