
ಬೆಂಗಳೂರು (ನ.21) ಪರೀಕ್ಷಾ ವಿಚಾರದಲ್ಲಿ ಕರ್ನಾಟಕ ಮತ್ತಷ್ಟು ಕಟ್ಟು ನಿಟ್ಟಿನ ನೀತಿಗಳನ್ನು ಜಾರಿಗೊಳಿಸಿದೆ. ಇದೀಗ ಪಿಯುಸಿ ಪರೀಕ್ಷೆಯಲ್ಲಿ ಭಾರಿ ಬದಲಾವಣೆ ಮಾಡಿದೆ. ರಾಜ್ಯದ ಎಲ್ಲಾ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷಾ ಪದ್ಧತಿ ಬದಲಾಗುತ್ತಿದೆ. ಇನ್ಮುಂದೆ ರಾಜ್ಯಾದ್ಯಂತ ಏಕರೂಪದ ವಾರ್ಷಿಕ ಪರೀಕ್ಷಾ ವ್ಯವಸ್ಥೆ ಜಾರಿಗೆ ತರಲಾಗಿದೆ. ಹೊಸ ನಿಯಮದ ಪ್ರಕಾರ ವಾರ್ಷಿಕ ಪರೀಕ್ಷೆ ಒಂದೇ ಮಾದರಿಯಲ್ಲಿ ನಡೆಯಲಿದೆ.
ಹೊಸ ನಿಯಮದ ಅನ್ವಯ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಸೇರಿದಂತೆ ಎಲ್ಲಾ ಪಿಯು ಕಾಲೇಜುಗಳಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದಲೇ ಒಂದೇ ಮಾದರಿಯ ಪ್ರಶ್ನೆಪತ್ರಿಕೆ ನೀಡಲಾಗುತ್ತದೆ. ಈವರೆಗೆ ಜಿಲ್ಲಾ ಮಟ್ಟದಲ್ಲಿಯೇ ಪ್ರಶ್ನೆ ಪತ್ರಿಕೆ ತಯಾರಿಸಿ ಆಯಾ ಜಿಲ್ಲೆಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿತ್ತು. ಆದರೆ ಹೊಸ ನಿಯಮದ ಪ್ರಕಾರ, ರಾಜ್ಯ ಮಟ್ಟದಲ್ಲಿ ಒಂದೇ ಮಾದರಿ ಪ್ರಶ್ನೆ ಪತ್ರಿಕೆ ತಯಾರಿಸಿ ರಾಜ್ಯಾದ್ಯಂತ ಪೂರೈಕೆ ಮಾಡಲಾಗುತ್ತದೆ.
ಪಿಯುಸಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಜಿಲ್ಲಾ ಮಟ್ಟದ ಬದಲು ಕರ್ನಾಟ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿ ನೀಡಲಿದೆ. ಆದರೆ ಪರೀಕ್ಷೆಗಳು ಹಿಂದಿನಂತೆ ಶಾಲಾ ಶಿಕ್ಷಣ ಇಲಾಖೆ ನೇತೃತ್ವದಲ್ಲಿ ನಡೆಯಲಿದೆ. ಇನ್ನು ಕಾಲೇಜು ಮಟ್ಟದಲ್ಲಿ ಮೌಲ್ಯ ಮಾಪನ ಕೂಡ ನಡೆಯಲಾಗುತ್ತದೆ. ಗುಣ ಮಟ್ದ ಶಿಕ್ಷಣವನ್ನು ಖಚಿತ ಪಡಿಸಿಕೊಳ್ಳುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಶಿಕ್ಷಣ ಇಲಾಖೆ ಹೇಳಿದೆ.
ಒಂದೆ ಪಿಯುಸಿ ಪರೀಕ್ಷೆಯಲ್ಲಿ ಭಾರಿ ಬದಲಾವಣೆ ಮಾಡಿದ್ದರೆ, ಮತ್ತೊಂದೆಡೆ ಪರೀಕ್ಷಾ ವ್ಯವಸ್ಥೆಗಳ ಸುಧಾರಣೆ ಕುರಿತಂತೆ ಉನ್ನತಾಧಿಕಾರ ಸಮಿತಿ ಪ್ರತಿನಿಧಿಗಳ ಜೊತೆ ಸಿಎಂ ಮಹತ್ವದ ಸಭೆ ನಡೆಸಿದ್ದರು. ಸಭೆಯಲ್ಲಿ ಉನ್ನತಾಧಿಕಾರ ಸಮಿತಿಯ ಅಧ್ಯಕ್ಷ ನಂದನ್ ನಿಲೇಕಣಿ, ಪರೀಕ್ಷಾ ಸುಧಾರಣೆ ಕುರಿತ ಸಚಿವ ಸಂಪುಟ ಉಪಸಮಿತಿ ಅಧ್ಯಕ್ಷ ಸಚಿವ ಯು.ಟಿ. ಖಾದರ್, ಸಚಿವರಾದ ಬಸವರಾಜ ರಾಯರೆಡ್ಡಿ, ಪ್ರಿಯಾಂಕ್ ಖರ್ಗೆ, ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ , ಪರೀಕ್ಷಾ ಸುಧಾರಣೆ ಕುರಿತು ರಾಜ್ಯ ಸರ್ಕಾರ ರಚಿಸಿರುವ ಸಮಿತಿ ಅಧ್ಯಕ್ಷ, ನಿವೃತ್ತ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್, ಸದಸ್ಯರಾದ ನಿವೃತ್ತ ಐಎಎಸ್ ಅಧಿಕಾರಿ ವಿಜಯಭಾಸ್ಕರ್ , ಕೆ.ಇ.ಎ. ಕಾರ್ಯನಿರ್ವಾಹಕ ಅಧಿಕಾರಿ ಡಾ. ಹೆಚ್. ಪ್ರಸನ್ನ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.