ದೇಶದಲ್ಲೇ ವಿಭಿನ್ನವಾಗಿ ಈ ರೈಲ್ವೇ ನಿಲ್ದಾಣ ತಲೆ ಎತ್ತಲಿದ್ದು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಂತೆ ಸೌಲಭ್ಯಗಳು ಇರಲಿವೆ. ಈಗಾಗಲೇ ವಿಸ್ತತ ಯೋಜನಾ ವರದಿ ರೂಪಿಸಲಾಗಿದ್ದು, ದೆಹಲಿ ರೈಲ್ವೇ ಮಂಡಳಿಗೆ ಕಳಿಸಲಾಗಿದೆ. ಅಲ್ಲಿ ಮೂರರಿಂದ ನಾಲ್ಕು ತಿಂಗಳಲ್ಲಿ ಅಂತಿಮ ತೀರ್ಮಾನ ಕೈಗೊಂಡು, ಟೆಂಡರ್ ಕರೆಯಲಾಗುವುದು ಎಂದ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ
ಬೆಂಗಳೂರು(ನ.17): ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣವನ್ನು (ಕೆಎಸ್‌ಆರ್) ₹1500 ಕೋಟಿ ವೆಚ್ಚದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾದರಿಯಲ್ಲಿ ಆಧುನೀಕರಿಸಲಾಗುವುದು ಎಂದು ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.
ಶನಿವಾರ ನಗರದ ಕೆಎಸ್‌ಆರ್‌ನಿಲ್ದಾಣದ ಒಂದನೇ ಪ್ಲಾಟ್ ಫಾರ್ಮ್‌ನಲ್ಲಿ ಎರಡು ಹಾಗೂ ಕೆಂಗೇರಿ ರೈಲು ನಿಲ್ದಾಣದ ಒಂದನೇ ಪ್ಲಾಟ್‌ಫಾರ್ಮ್‌ನಲ್ಲಿ ಒಂದು ಎಸ್ಕಲೇಟರ್ ಉದ್ಘಾಟಿಸಿ ಮಾತನಾಡಿದರು. ದೇಶದಲ್ಲೇ ವಿಭಿನ್ನವಾಗಿ ಈ ರೈಲ್ವೇ ನಿಲ್ದಾಣ ತಲೆ ಎತ್ತಲಿದ್ದು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಂತೆ ಸೌಲಭ್ಯಗಳು ಇರಲಿವೆ. ಈಗಾಗಲೇ ವಿಸ್ತತ ಯೋಜನಾ ವರದಿ ರೂಪಿಸಲಾಗಿದ್ದು, ದೆಹಲಿ ರೈಲ್ವೇ ಮಂಡಳಿಗೆ ಕಳಿಸಲಾಗಿದೆ. ಅಲ್ಲಿ ಮೂರರಿಂದ ನಾಲ್ಕು ತಿಂಗಳಲ್ಲಿ ಅಂತಿಮ ತೀರ್ಮಾನ ಕೈಗೊಂಡು, ಟೆಂಡರ್ ಕರೆಯಲಾಗುವುದು ಎಂದರು.
ನೆಲಮಂಗಲ-ತುಮಕೂರಿನವರೆಗೆ 6 ಪಥದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ: ಕೇಂದ್ರ ಸಚಿವ ಸೋಮಣ್ಣ
ಈ ಮಾಸ್ಟರ್‌ಪ್ಲಾನ್ ಅನ್ವಯ ಮೆಟ್ರೋ ರೈಲಿನ ಸಂಪರ್ಕ ವ್ಯವಸ್ಥೆಯೂ ರೈಲ್ವೇ ನಿಲ್ದಾಣದಲ್ಲಿ ಇರಲಿದ್ದು, ಪ್ರಯಾಣಿಕರು ಇಲ್ಲಿಂದಲೇ ಹತ್ತಿಳಿಯಬಹುದು. ಜೊತೆಗೆ ಏರ್ ಕಾನ್‌ಕಾರ್ಸ್ ಸೇರಿ ಹಲವು ವ್ಯವಸ್ಥೆ ಇದರಲ್ಲಿದೆ. ಪ್ರಸ್ತುತ ದೇಶದಲ್ಲಿ 6ನೇ ಸ್ಥಾನದಲ್ಲಿರುವ ರಾಜ್ಯ ರಾಜಧಾನಿಯ ಈ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸಿ 2-3ನೇ ಸ್ಥಾನಕ್ಕೇರಿಸುವ ಗುರಿ ನಮ್ಮದಾಗಿದೆ ಎಂದು ತಿಳಿಸಿದರು.
ನಗರದ ಸರ್.ಎಂ.ವಿಶ್ವೇಶ್ವರಯ್ಯ ರೈಲ್ವೇ ನಿಲ್ದಾಣ ಈಗಾಗಲೇ ಮಾದರಿ ಎನ್ನಿಸಿಕೊಂಡಿದೆ. ಬೆಂಗಳೂರಿನ ಯಶವಂತಪುರ, ಬೆಂಗಳೂರು ದಂಡು ರೈಲ್ವೇ ನಿಲ್ದಾಣಗಳನ್ನು ಈಗಾಗಲೇ ಸರಿ ಸುಮಾರು 900 ಕೋಟಿ ವೆಚ್ಚದಲ್ಲಿ ಮರುನಿರ್ಮಾಣ ಮಾಡಲಾಗುತ್ತಿದೆ. ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲದಂತೆ ಕಾಮಗಾರಿ ನಡೆಸಲಾಗುತ್ತಿದೆ. ಇದೀಗ ಕೆಎಸ್‌ಆರ್ ನಿಲ್ದಾಣವನ್ನು ಮರುನಿರ್ಮಿಸಿ ಪ್ರಯಾಣಿಕರಿಗೆ ಸಕಲ ಸೌಲಭ್ಯ ಒದಗಿಸಲಾಗುವುದು ಎಂದರು.
ಕೆಂಗೇರಿ ರೈಲ್ವೇ ನಿಲ್ದಾಣದಲ್ಲಿ 29 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಸ್ಥಳೀಯರ ಕೋರಿಕೆಯಂತೆ ದುಬಾಸಿಪಾಳ್ಯ ಹಾಗೂ ನಿಲ್ದಾಣದ ಸಮೀಪ ಅಗತ್ಯ ವಾಕ್ ಸೇರಿ ಇತರೆ ವ್ಯವಸ್ಥೆ ಕಲ್ಪಿಸಲಾಗುವುದು. ಅಗತ್ಯ ಶೌಚಾಲಯ, ಕುಡಿಯುವನೀರುಸೇರಿಇತರೆಲ್ಲ ಸೌಲಭ್ಯವನ್ನುಕಲ್ಪಿಸಲಾಗುವುದು. ಮೂರ್ನಾಲ್ಕು ದಿನಗಳಲ್ಲಿ ಸಭೆ ನಡೆಸಿ ಕ್ರಮ ವಹಿಸಲಾಗುವುದು ಎಂದರು.
ಬೆಂಗಳೂರಿಗೆ 281 ಕಿ.ಮೀ ಸರ್ಕ್ಯೂಲರ್ ರೈಲು ಯೋಜನೆ: ಸಚಿವ ಸೋಮಣ್ಣ ಬಿಗ್ ಅಪ್ಡೇಟ್
ವರ್ತುಲ ರೈಲಿಗೆ ರಾಜ್ಯದ ಅನುದಾನ ಪಡೆಯಲ್ಲ
ಮಹತ್ವದ 281ಕಿಮೀ ವರ್ತುಲ ರೈಲು ಯೋಜನೆಗಾಗಿ ಡಿಪಿಆರ್ ಮಾಡಲಾಗುತ್ತಿದೆ. ಇದರ ಸಂಪೂರ್ಣ ವೆಚ್ಚವನ್ನು ಕೇಂದ್ರವೇ ಭರಿಸಲಿದ್ದು, ರಾಜ್ಯ ಸರ್ಕಾರವನ್ನು ಅನುದಾನಕ್ಕಾಗಿ ಅವಲಂಬಿಸುವುದಿಲ್ಲ. ಇನ್ನು, ಉಪನಗರ ರೈಲ್ವೆ ಯೋಜನೆ ಪ್ರಗತಿಯಲ್ಲಿದ್ದು, ನಗರದಲ್ಲಿ ಹಾಗೂ ಸುತ್ತಮುತ್ತಲ ಭಾಗದ ಸಾರಿಗೆ ವ್ಯವಸ್ಥೆಗೆ ಹೆಚ್ಚಿನ ಬಲ ತುಂಬಲಿವೆ. ಎಸ್ಕಲೇಟರ್‌ಗಳು ಪ್ರಯಾಣಿಕರಿಗೆ, ವಿಶೇಷವಾಗಿ ವೃದ್ಧರು ಮತ್ತು ಅಂಗವಿಕಲರಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಿದರು. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆ, ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವ ಶೋಭಾ ಕರಂದ್ಲಾಜೆ, ವಿಧಾನಪರಿಷತ್ ಸದಸ್ಯ ಎಚ್.ಎಸ್.ಗೋಪಿನಾಥ್ ರೆಡ್ಡಿ ಸೇರಿ ಬೆಂಗಳೂರು ರೈಲ್ವೇ ವಿಭಾಗೀಯ ಅಧಿಕಾರಿಗಳು ಇದ್ದರು.
ಎಸ್ಕಲೇಟರ್ ಉದ್ಘಾಟನೆ
ಕೆಎಸ್‌ಆರ್ ನಿಲ್ದಾಣದಲ್ಲಿ 1ನೇ ಪ್ಲಾಟ್‌ಫಾರ್ಮ್ ನಲ್ಲಿ 2.8 ಕೋಟಿ ವೆಚ್ಚದಲ್ಲಿ ಎರಡು ಹೊಸ ಎಸ್ಕಲೇಟರ್‌ಗಳನ್ನು ಅಳವಡಿಸಲಾಗಿದೆ. ಮೇಲ್ಮುಖವಾಗಿ ಚಲಿಸಲು ಒಂದು ಮತ್ತು ಕೆಳಮುಖವಾಗಿ ಚಲಿಸಲು ಒಂದು ಎಸ್ಕಲೇಟರ್ ಗಳನ್ನು ಒದಗಿಸಲಾಗಿದೆ. ಇದು ನಿಲ್ದಾಣದ ಎಲ್ಲಾ 10 ಪ್ಲಾಟ್‌ಫಾರ್ಮ್‌ಗಳನ್ನು ಸಂಪರ್ಕಿಸುತ್ತದೆ. ಕೆಂಗೇರಿ ರೈಲು ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್ 1ರಲ್ಲಿ ಅಂದಾಜು 71.06 ಕೋಟಿ ವೆಚ್ಚದಲ್ಲಿ ಒಂದು ಎಸ್ಕಲೇಟರ್ ಅಳವಡಿಸಲಾಗಿದ್ದು, 1ರಿಂದ 4ರವರೆಗಿನ ಎಲ್ಲ ಪ್ಲಾಟ್‌ಫಾರ್ಮ್‌ಗಳನ್ನು ಫುಟ್ ಓವರ್‌ಬ್ರಿಡ್ಜ್ ಮೂಲಕ ಸಂಪರ್ಕಿಸುತ್ತದೆ ಎಂದು ಸಚಿವ ಸೋಮಣ್ಣ ತಿಳಿಸಿದರು.