ಪ್ರತಿಯೊಂದು ಕ್ಷೇತ್ರದಲ್ಲೂ ಸ್ಪರ್ಧೆಯ ವಾತಾವರಣ ನಿರ್ಮಾಣವಾಗಿದೆ. ತಂತ್ರಜ್ಞಾನವು ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿದ್ದು, ತಂತ್ರಜ್ಞಾನ ಮತ್ತು ಸಂಶೋಧನೆಯನ್ನು ಬಳಸಿಕೊಂಡು ಉತ್ಪನ್ನದ ಉತ್ತಮ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್ ಕರೆ ನೀಡಿದರು.
ಮೈಸೂರು (ಡಿ.02): ಪ್ರತಿಯೊಂದು ಕ್ಷೇತ್ರದಲ್ಲೂ ಸ್ಪರ್ಧೆಯ ವಾತಾವರಣ ನಿರ್ಮಾಣವಾಗಿದೆ. ತಂತ್ರಜ್ಞಾನವು ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿದ್ದು, ತಂತ್ರಜ್ಞಾನ ಮತ್ತು ಸಂಶೋಧನೆಯನ್ನು ಬಳಸಿಕೊಂಡು ಉತ್ಪನ್ನದ ಉತ್ತಮ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್ ಕರೆ ನೀಡಿದರು. ನಗರದ ಮೇಟಗಳ್ಳಿ ಕೈಗಾರಿಕಾ ಪ್ರದೇಶದ ವಿಕ್ರಾಂತ್ ಟೈರ್ ಪ್ಲಾಂಟ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಜೆಕೆ ಟೈರ್ ವಿಕ್ರಾಂತ್ ರಜತ ಮಹೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸ್ಪರ್ಧಾತ್ಮಕ ಜಗತ್ತಿನಲ್ಲಿ ಕರ್ನಾಟಕ ರಾಜ್ಯ ತನ್ನದೇ ಆದ ಛಾಪು ಮೂಡಿಸಿದೆ. ರಾಜ್ಯವನ್ನು ವ್ಯಾಪಾರ ಮತ್ತು ಕೈಗಾರಿಕೆಗೆ ಆದ್ಯತೆಯ ತಾಣವನ್ನಾಗಿ ಮಾಡಲು ಸರ್ಕಾರವು ವಿವಿಧ ಪ್ರಯತ್ನ ಮಾಡುತ್ತಿದೆ. ಜೆಕೆ ಆರ್ಗನೈಸೇಷನ್‌ನ ಪ್ರಮುಖ ಕಂಪನಿಯಾಗಿದ್ದು, ಟೈರ್ ಅಂಡ್ ಇಂಡಸ್ಟ್ರೀಸ್ ಲಿಮಿಟೆಡ್ ಭಾರತದಲ್ಲಿನ ಪ್ರಮುಖ ಟೈರ್ ತಯಾರಕರಲ್ಲಿ ಒಂದಾಗಿದೆ ಮತ್ತು ವಿಶ್ವದ ಅಗ್ರ 25 ತಯಾರಕರಲ್ಲಿ ಒಂದಾಗಿದೆ ಎಂದರು. ದೇಶದ ಆರ್ಥಿಕ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡಿದ್ದು, ಕಳೆದ ನಾಲ್ಕು ದಶಕಗಳಿಂದ, ಜೆಕೆ ಟೈರ್, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಉತ್ಪನ್ನಗಳ ಪರಿಚಯದ ಮೂಲಕ ಟೈರ್ ಉದ್ಯಮದಲ್ಲಿ ನಾವೀನ್ಯತೆ ಮತ್ತು ಉತ್ಕೃಷ್ಟತೆ ತರುವಲ್ಲಿ ಮುಂಚೂಣಿಯಲ್ಲಿದೆ ಎಂದು ಅವರು ಶ್ಲಾಘಿಸಿದರು.
Davanagere: ಕಾರ್ಯಾಂಗ ತನ್ನ ಶಕ್ತಿ ಮರೆತಿದೆ: ನ್ಯಾ.ಸಂತೋಷ್ ಹೆಗ್ಡೆ
2019ರಲ್ಲಿ, ಕಂಪನಿಯು ದೇಶದ ಅತಿದೊಡ್ಡ ಆಫ್-ರೋಡ್ ಟೈರ್- ವಿಇಎಂ045 ನೊಂದಿಗೆ ಲಿಮ್ಕಾ ಬುಕ್ ಆಫ್ ರೆಕಾಡ್ಸರ್ ಅನ್ನು ಪ್ರವೇಶಿಸಿತು. ಜೆಕೆ ಟೈರ್ 1997ರಲ್ಲಿ ಕರ್ನಾಟಕದ ಕೈಗಾರಿಕಾ ರಂಗವನ್ನು ಪ್ರವೇಶಿಸಿತು ಮತ್ತು ಕರ್ನಾಟಕ ಸರ್ಕಾರದ ಅಂಡರ್ಟೇಕಿಂಗ್ ವಿಕ್ರಾಂತ್ ಟೈರ್ಸ್ ಲಿಮಿಟೆಡ್‌ನ ನಿರ್ವಹಣಾ ನಿಯಂತ್ರಣಕ್ಕಾಗಿ ಅಂದಿನ ಕರ್ನಾಟಕ ಸರ್ಕಾರದೊಂದಿಗೆ ಕಾರ್ಯತಂತ್ರದ ಮೈತ್ರಿ ಪಾಲುದಾರಿಕೆ ಪಡೆಯಿತು.
ಮೈಸೂರು ತಾಂತ್ರಿಕ ಶ್ರೇಷ್ಠತೆಯ ಸ್ಥಳವಾಗಿದೆ. 2016ರಲ್ಲಿ ಡಾ. ರಘುಪತಿ ಸಿಂಘಾನಿಯಾ ಎಕ್ಸಲೆನ್ಸ್ ಸೆಂಟರ್ ಆಫ್ ಗ್ಲೋಬಲ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಅಂಡ್ ಟೆಕ್ ಸೆಂಟರ್ ಅನ್ನು ಮೈಸೂರಿನಲ್ಲಿ ಸ್ಥಾಪಿಸಿತು. ಇಂದು ಅದು ಮೈಸೂರಿನ ಕೈಗಾರಿಕಾ ವಲಯದಲ್ಲಿ ಒಂದು ಉದಾಹರಣೆಯಾಗಿದೆ ಎಂದು ತಿಳಿದು ಸಂತೋಷವಾಗಿದೆ. ಈ ಕೇಂದ್ರದ ಮೂಲಕ, ರಬ್ಬರ್ ಮತ್ತು ಟೈರ್ ಉದ್ಯಮಕ್ಕೆ ಅತ್ಯಾಧುನಿಕ ತಂತ್ರಜ್ಞಾನವನ್ನು ಒದಗಿಸುವುದರೊಂದಿಗೆ ಕೌಶಲ್ಯ ಅಭಿವೃದ್ಧಿ ಮತ್ತು ಸುಸ್ಥಿರತೆಯ ಕ್ಷೇತ್ರದಲ್ಲಿ ಬಹಳಷ್ಟುಕೆಲಸಗಳನ್ನು ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಗೆಲುವಿನ ಸ್ಫೂರ್ತಿಯಿಂದ ಕ್ರೀಡೆಯಲ್ಲಿ ಪಾಲ್ಗೊಳ್ಳಿ: ಸಿಎಂ ಬೊಮ್ಮಾಯಿ
ಜೆಕೆ ಟೈರ್ ಇಂಡಸ್ಟ್ರೀಸ್ ಲಿಮಿಟೆಡ್, ಡಾ. ರಘುಪತಿ ಸಿಂಘಾನಿಯಾ ಅವರ ಸಮರ್ಥ ನಾಯಕತ್ವ ಮತ್ತು ಮಾರ್ಗದರ್ಶನದಲ್ಲಿ, ಮೇಡ್ ಇನ್ ಇಂಡಿಯಾ, ಮೇಕ್ ಇನ್ ಇಂಡಿಯಾ ಮತ್ತು ಸ್ವಾವಲಂಭಿ ಭಾರತ ಅಭಿಯಾನದ ದಿಕ್ಕಿನಲ್ಲಿ ಸಕ್ರಿಯ ಪ್ರಯತ್ನ ಮಾಡುತ್ತಿದೆ. ಈ ಪ್ರಯತ್ನ ಮತ್ತಷ್ಟು ಮುಂದುವರೆಯಲಿ ಎಂದು ಆಶಿಸುತ್ತೇನೆ ಎಂದು ಹೇಳಿದರು. ಕಾರ್ಯಕ್ರಮಕ್ಕೂ ಮುನ್ನ ಜೆಕೆ ಟೈರ್ ವಿಕ್ರಾಂತ್ ಪ್ಲಾಂಟ್‌ಗೆ ಭೇಟಿ ನೀಡಿ, ವಿವಿಧ ನೂತನ ಘಟಕಗಳನ್ನು ಉದ್ಘಾಟಿಸಿ, ತಯಾರಿಕೆ ವಿಧಾನ ವೀಕ್ಷಿಸಿದರು. ಸಂಸದ ಪ್ರತಾಪ ಸಿಂಹ, ಶಾಸಕ ಎಲ್. ನಾಗೇಂದ್ರ, ಜೆಕೆ ಟೈರ್ ಅಂಡ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಸಿಎಂಡಿ ಡಾ. ರಘುಪತಿ ಸಿಂಘಾನಿಯಾ, ಎಂಡಿ ಅಂಶುಮಾನ್ ಸಿಂಘಾನಿಯಾ ಮೊದಲಾದವರು ಇದ್ದರು.