Davanagere: ಕಾರ್ಯಾಂಗ ತನ್ನ ಶಕ್ತಿ ಮರೆತಿದೆ: ನ್ಯಾ.ಸಂತೋಷ್ ಹೆಗ್ಡೆ

By Govindaraj S  |  First Published Dec 2, 2022, 11:05 PM IST

ಸಂವಿಧಾನದ ಪ್ರಕಾರ ದೇಶ ಆಳಬೇಕಾಗಿದ್ದು ಕಾರ್ಯಾಂಗದ ಅಧಿಕಾರಿಗಳು, ಕಾರ್ಯಾಂಗಕ್ಕೆ ತನ್ನ ಶಕ್ತಿ ಬಗ್ಗೆಯೇ ಗೊತ್ತಿಲ್ಲ ಎಂದು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ತಿಳಿಸಿದರು. 


ದಾವಣಗೆರೆ (ಡಿ.02): ಸಂವಿಧಾನದ ಪ್ರಕಾರ ದೇಶ ಆಳಬೇಕಾಗಿದ್ದು ಕಾರ್ಯಾಂಗದ ಅಧಿಕಾರಿಗಳು, ಕಾರ್ಯಾಂಗಕ್ಕೆ ತನ್ನ ಶಕ್ತಿ ಬಗ್ಗೆಯೇ ಗೊತ್ತಿಲ್ಲ ಎಂದು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ತಿಳಿಸಿದರು. ನಗರದ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ರಾಜ್ಯ ಸರ್ಕಾರಿ ನಕೌರರ ಸಂಘದ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ, 2023ನೇ ಸಾಲಿನ ದಿನದರ್ಶಿಕೆ ಬಿಡುಗಡೆ, ಪ್ರತಿಭಾ ಪುರಸ್ಕಾರ, ವಾರ್ಷಿಕ ಮಹಾಸಭೆ, ವಿಚಾರ ಸಂಕಿರಣದಲ್ಲಿ ಪ್ರಜಾಸ್ನೇಹಿ ಆಡಳಿತದಲ್ಲಿ ನೌಕರರ ಪಾತ್ರ ವಿಷಯವಾಗಿ ಮಾತನಾಡಿ, ಕಾರ್ಯಾಂಗವು ತನ್ನ ಶಕ್ತಿ ಮರೆತದ್ದರಿಂದ ಕೆಲವರಿಗೋಸ್ಕರ ಆಡಳಿತ ಎಂಬ ಸ್ಥಿತಿ ಬಂದೊದಗಿದೆ ಎಂದರು.

ಸಾಕಷ್ಟು ಬದಲಾವಣೆ ಆಗಬೇಕಿದೆ: ದೇಶದ ರಾಷ್ಟ್ರಪತಿಯಿಂದ ಮೊದಲ್ಗೊಂಡು ಜವಾನನವರೆಗೆ ಎಲ್ಲರೂ ದೇಶದ ಜನತಾ ಸೇವಕರೆ ಹೊರತು ಯಾರೂ ಸರ್ಕಾರಿ ನೌಕರರಲ್ಲ. ಇದನ್ನು ನಾವು ಮೊದಲು ಅರಿತು, ಕಾರ್ಯ ನಿರ್ವಹಿಸಬೇಕು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷ ಕಳೆದರೂ ಇಂದಿಗೂ ಸಂವಿಧಾನದ ಆಶಯಗಳಡಿ ಕೆಲಸ ಮಾಡುತ್ತಿದ್ದೇವೆಯೇ ಎಂಬ ಬಗ್ಗೆ ನಾವು ಚಿಂತಿಸಬೇಕಿದೆ. ಆಡಳಿತದಲ್ಲಿ ಎಲ್ಲಾ ನಿರ್ಧಾರ ಕೈಗೊಳ್ಳಬೇಕಾದ ಕಾರ್ಯಾಂಗ ವಿಫಲವಾಗಿದ್ದು, ಈ ಎಲ್ಲಾ ನಿರ್ಧಾರಗಳನ್ನೂ ಶಾಸಕಾಂಗ ತೆಗೆದುಕೊಳ್ಳುತ್ತಿದೆ. 

Tap to resize

Latest Videos

ಗೆಲುವಿನ ಸ್ಫೂರ್ತಿಯಿಂದ ಕ್ರೀಡೆಯಲ್ಲಿ ಪಾಲ್ಗೊಳ್ಳಿ: ಸಿಎಂ ಬೊಮ್ಮಾಯಿ

ಸಂವಿಧಾನದಡಿ ರಚಿತ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳಲ್ಲಿ ಸಾಕಷ್ಟುಬದಲಾವಣೆ ಆಗಬೇಕಿದೆ. ಜನರಿಂದ ಜನರಿಗಾಗಿ, ಜನರಿಗೋಸ್ಕರ ಆಡಳಿತವೆಂದು ಸಂವಿಧಾನ ಹೇಳಿರುವುದು ಈಗ ತಿರುಗುಮುರುಗಾಗಿದೆ. ಅದರ ಬದಲಿಗೆ ಕೆಲವರಿಂದ ಕೆಲವರಿಗಾಗಿ, ಕೆಲವರಿಗೋಸ್ಕರ ಆಡಳಿತ ಎಂಬ ಸ್ಥಿತಿ ಬಂದಿದೆ ಎಂದು ವಿಷಾದಿಸಿದರು. ಕೇವಲ ಶ್ರೀಮಂತಿಕೆ, ಅಧಿಕಾರ ಇದ್ದವರಿಗೆ ಮಾತ್ರ ಮಾನ್ಯತೆ ನೀಡಲಾಗುತ್ತಿದ್ದು, ಜೈಲಿಗೆ ಹೋಗಿ ಬಂದವರನ್ನು ಪುರಸ್ಕರಿಸಲಾಗುತ್ತಿದೆ. ಇಂತಹ ವರ್ತನೆ ನಮ್ಮಲ್ಲಿ ಮೊದಲು ನಿಲ್ಲಬೇಕಿದೆ. ಈ ಬಗ್ಗೆ ಯುವ ಪೀಳಿಗೆಯೂ ಜಾಗೃತವಾಗಬೇಕಾದ ಅವಶ್ಯಕತೆ ಇದೆ ಎಂದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಪಾಲಾಕ್ಷಿ ಮಾತನಾಡಿ, ಯಾವುದೇ ಸಂಘಟನೆಯಾಗಲೀ ಅಲ್ಲಿನ ಸದಸ್ಯರ ಒಗ್ಗಟ್ಟು ಸಂಘಟನೆಗೆ ಶಕ್ತಿ ನೀಡುತ್ತದೆ. ಸರ್ಕಾರಿ ನೌಕರರು ಕೆಲಸ ಮಾಡಬೇಕಾದರೆ ನೌಕರರಿಗೆ ಸಿಗಬೇಕಾದ ಎಲ್ಲಾ ಸೌಲಭ್ಯಗಳೂ ಸಕಾಲಕ್ಕೆ ಸಿಕ್ಕಾಗ ಮಾತ್ರ ಶಾಂತಿ, ಸಮಾಧಾನದಿಂದ ನೌಕರರು ಒಳ್ಳೆಯ ಕೆಲಸ ಮಾಡಲು ಸಾಧ್ಯ ಎಂದರು. ಲೋಕಾಯುಕ್ತ ಪೊಲೀಸ್‌ ಅಧೀಕ್ಷಕ ಕೌಲ್ಹಾಪುರೆ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಸಿ.ಗುರುಮೂರ್ತಿ, ಬಿ.ಆರ್‌.ತಿಪ್ಪೇಸ್ವಾಮಿ, ಡಾ.ಎಸ್‌.ರಂಗನಾಥ ಇತರರಿದ್ದರು.

ಪ್ರಜಾಪ್ರಭುತ್ವ ಎಲ್ಲಿಗೆ ಹೋಗಿದೆಯೆಂಬ ಅನುಮಾನ: ಬೆಂಗಳೂರು ಸೇರಿ ರಾಜ್ಯದ ಬಹುತೇಕ ಕಡೆ ಮತದಾರರ ಪಟ್ಟಿಯಲ್ಲಿ ನಡೆಯುತ್ತಿರುವ ಅವ್ಯವಹಾರ ಸಂವಿಧಾನ ಮತ್ತು ಕಾನೂನಿಗೆ ವಿರುದ್ಧವಾಗಿದೆ ಎಂದು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಬೇಸರ ಹೊರ ಹಾಕಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಚುನಾವಣಾ ಆಯೋಗವೆಂದರೆ ಒಂದು ಸ್ವತಂತ್ರ ಸಂಸ್ಥೆ. ಆದರೆ, ಇಂತಹ ಆಯೋಗದಲ್ಲೇ ಮತದಾರರ ಪಟ್ಟಿಯಲ್ಲಿ ಅವ್ಯವಹಾರ ನಡೆಯುತ್ತಿರುವುದು ಪ್ರಜಾಪ್ರಭುತ್ವ ಎಲ್ಲಿಗೆ ಹೋಗಿದೆಯೆಂಬ ಅನುಮಾನ ಹುಟ್ಟು ಹಾಕುತ್ತದೆ ಎಂದರು. ರಾಜಕೀಯ ಕ್ಷೇತ್ರಕ್ಕೆ ಬರುವವರ ಸಂಖ್ಯೆ ಈಚೆಗೆ ಹೆಚ್ಚಾಗುತ್ತಿದೆ. ನಿವೃತ್ತ ನ್ಯಾಯಾಧೀಶರು, ಐಎಎಸ್‌ ಅಧಿಕಾರಿಗಳು, ಗೂಂಡಾಗಳೂ ರಾಜಕೀಯಕ್ಕೆ ಬರುತ್ತಿರುವುದು ರಾಜಕೀಯದಲ್ಲಿ ಇರುವಂತಹ ಸಂಪಾದನೆ ಬೇರೆ ಎಲ್ಲಿಯೂ ಇಲ್ಲವೆನಿಸುತ್ತದೆ. ಈ ಹಿನ್ನೆಲೆಯಲ್ಲಿ ರಾಜಕೀಯ ಕ್ಷೇತ್ರದಲ್ಲಿ ಕೆಲವೊಂದು ಸುಧಾರಣೆಗಳು ಆಗಬೇಕಾದ ಅವಶ್ಯಕತೆ, ಅನಿವಾರ್ಯತೆ ಇದೆ ಎಂದು ತಿಳಿಸಿದರು.

Kodagu: ಬಿಗ್ ತ್ರಿ ಇಂಪ್ಯಾಕ್ಟ್: ಸಂತ್ರಸ್ಥರಿಗೆ ಮನೆ ಹಸ್ತಾಂತರಿಸಿದ ಜಿಲ್ಲಾಡಳಿತ

ಭ್ರಷ್ಟಾಚಾರ ಎಂಬುದು ಎಲ್ಲೆಡೆ ಇಂದು ತಾಂಡವವಾಡುತ್ತಿದೆ. ದುರಾಸೆಯೆಂಬುದು ಅತಿಯಾಗಿದ್ದು, ಎಲ್ಲವೂ ತನಗೆ ಬೇಕೆಂಬುದಾಗಿ ಮನುಷ್ಯ ತನ್ನತನವನ್ನೇ ಕಳೆದುಕೊಂಡು, ಮೃಗದಂತೆ ವರ್ತಿಸುತ್ತಿದ್ದಾನೆ. ಶಾಂತಿ, ಸೌಹಾರ್ದತೆಯಿಂದ ಇದ್ದರೆ ಮಾತ್ರ ದೇಶದಲ್ಲಿ ಬದಲಾವಣೆ ತರಲು ಸಾಧ್ಯವೆಂಬ ಸತ್ಯ ಎಲ್ಲರೂ ಅರಿಯಬೇಕಿದೆ.
-ನ್ಯಾ.ಸಂತೋಷ ಹೆಗ್ಡೆ , ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ

click me!