ಮೆಕ್ಯಾನಿಕ್ ಮಗಳು 13 ಚಿನ್ನದ ಪದಕ ಮುಡಿಗೇರಿಸಿಕೊಂಡ ಚಿನ್ನದ ಹುಡುಗಿ. ಮಂಗಳೂರಿನ ಸೇಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿ, ಗಡಿನಾಡು ಕಾಸರಗೋಡು ಮೂಲದ ಮಹಿಮಾ ಎಸ್.ರಾವ್ 13 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಳ್ಳುವ ಮೂಲಕ ವಿಟಿಯುನ ಚಿನ್ನದ ಹುಡುಗಿಯಾಗಿ ಹೊರಹೊಮ್ಮಿದ್ದಾರೆ.
ಮಂಗಳೂರು(ಫೆ.09): ಮಂಗಳೂರಿನ ಸೇಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿ, ಗಡಿನಾಡು ಕಾಸರಗೋಡು ಮೂಲದ ಮಹಿಮಾ ಎಸ್.ರಾವ್ 13 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಳ್ಳುವ ಮೂಲಕ ವಿಟಿಯುನ ಚಿನ್ನದ ಹುಡುಗಿಯಾಗಿ ಹೊರಹೊಮ್ಮಿದ್ದಾರೆ.
ರಾಜ್ಯದ ಪ್ರತಿಷ್ಠಿತ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 19ನೇ ಘಟಿಕೋತ್ಸವ ಸಮಾರಂಭ ಶನಿವಾರ ನೆರವೇರಿತು. ಘಟಿಕೋತ್ಸವದಲ್ಲಿ ಒಟ್ಟು 58,825 ಬಿಇ., 744 ಬಿ.ಆರ್ಕ್, 4606 ಎಂಬಿಎ, 1260 ಎಂಸಿಎ, 1582 ಎಂ.ಟೆಕ್, 39 ಎಂ.ಆರ್ಕ್, 579 ಪಿಎಚ್‌ಡಿ. ಹಾಗೂ 21 ಎಂ.ಎಸ್ಸಿ ಎಂಜಿನಿಯರಿಂಗ್ ಸೇರಿದಂತೆ ವಿವಿಧ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪ್ರದಾನ ಮಾಡಲಾಯಿತು.
ಪಂಪ್‌ವೆಲ್ ಮೇಲ್ಸೇತುವೆಯಲ್ಲಿ ಭೀಕರ ಅಪಘಾತ: ಒಬ್ಬ ಸಾವು, ಐವರು ಗಂಭೀರ
ಬರೊಬ್ಬರಿ 13 ಚಿನ್ನದ ಪದಕಗಳನ್ನು ಗೆದ್ದಿರುವ ಮಹಿಮಾ ಎಸ್.ರಾವ್ ಗಡಿನಾಡು ಕಾಸರಗೋಡು ಮೂಲದ ಮೆಕ್ಯಾನಿಕ್ ಸತ್ಯಸಾಯಿ ರಾವ್ ಮತ್ತು ಶ್ರೀದೇವಿ ದಂಪತಿಯ ಪುತ್ರಿ. ಕಾಸರಗೋಡಿನ ಖಾಸಗಿ ಶಾಲೆಯಲ್ಲಿ 1ರಿಂದ 10ನೇ ತರಗತಿವರೆಗೆ ಓದಿದ್ದ ಈಕೆ ಮಂಗಳೂರು ಸೇಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನ ಮಹಿಮಾ ಎಸ್.ರಾವ್ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಹೆಮ್ಮೆಯ ವಿದ್ಯಾರ್ಥಿನಿ. ಪಠ್ಯೇತರ ಚಟುವಟಿಕೆಯಲ್ಲೂ ಎತ್ತಿದ ಕೈಯ್ಯಾಗಿರುವ ಈಕೆ ಯಕ್ಷಗಾನ ಹಾಗೂ ಭರತನಾಟ್ಯದಲ್ಲಿಯೂ ಪ್ರವೀಣೆ.
ವಿಶ್ವವಿದ್ಯಾನಿಲಯದ ‘ಜ್ಞಾನಸಂಗಮ‘ ಆವರಣದಲ್ಲಿರುವ ಡಾ.ಎಪಿಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯ ಅಧ್ಯಕ್ಷ ಡಾ.ಕೆ.ಶಿವನ್ ಅವರಿಗೆ ವಿಶ್ವವಿದ್ಯಾಲಯದ ವತಿಯಿಂದ ‘ಡಾಕ್ಟರ್ ಆಫ್ ಸೈನ್ಸ್’ ಗೌರವ ಪದವಿಯನ್ನು ಅವರ ಅನುಪಸ್ಥಿತಿಯಲ್ಲಿ ಪ್ರದಾನ ಮಾಡಲಾಯಿತು. ಘಟಿಕೋತ್ಸವ ಭಾಷಣ ಮಾಡಿದ ರಾಷ್ಟ್ರೀಯ ಮಾನ್ಯತಾ ಮಂಡಳಿ(ಎನ್‌ಬಿಎ) ಅಧ್ಯಕ್ಷ ಪ್ರೊ.ಕೆ.ಕೆ.ಅಗರವಾಲ್ ಭಾವನಾತ್ಮಕ ಬುದ್ಧಿಮತ್ತೆಯ ಅಗತ್ಯವನ್ನು ಒತ್ತಿ ಹೇಳಿದರು.