ಬಸವಣ್ಣವರ ನಂತರ ಸಮಾಜಕ್ಕೆ ಸಮಾನತೆಗೆ ಕೊಡುಗೆ ನೀಡುವಲ್ಲಿ ಅವರ ಪಾತ್ರ ದೊಡ್ಡದು| ಮಹಾಯೋಗಿ ವೇಮನ ಜಯಂತಿಯಲ್ಲಿ ಮಾಜಿ ಸಚಿವ, ಶಾಸಕ ಎಚ್.ಕೆ. ಪಾಟೀಲ|ಸಮಾನತೆ ಎನ್ನುವುದು ಇಂದಿಗೂ ಭಾಷಣದ ವಸ್ತುವಾಗಿದೆ|
ಗದಗ(ಜ.20): ವೇಮನರು ಒಂದು ಜಾತಿ ಧರ್ಮಕ್ಕೆ ಸೀಮಿತರಲ್ಲ. ಬಸವಣ್ಣವರ ನಂತರ ಸಮಾಜಕ್ಕೆ ಸಮಾನತೆಗೆ ಕೊಡುಗೆ ನೀಡುವಲ್ಲಿ ಅವರ ಪಾತ್ರ ದೊಡ್ಡದು. ಸಾಮಾಜಿಕ ನ್ಯಾಯದ ಸಂದೇಶವನ್ನು ಅತ್ಯಂತ ಕಠೋರವಾಗಿ ಹೇಳುತ್ತಲೇ ಬಂದಿರುವ ವೇಮನರು ಎಲ್ಲರೂ ಒಂದು ಎನ್ನುವ ಮನಸ್ಸು ಸಾರಿ ಸಾರಿ ಹೇಳಿದ್ದರು ಎಂದು ಮಾಜಿ ಸಚಿವ, ಶಾಸಕ ಎಚ್.ಕೆ. ಪಾಟೀಲ ಹೇಳಿದ್ದಾರೆ.
ಭಾನುವಾರ ಗದಗ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಮಹಾಯೋಗಿ ವೇಮನ ಗದಗ ಜಿಲ್ಲಾ ರಡ್ಡಿ ಸಮಾಜ ಸಂಘ ಗದಗ ಇವರ ಸಹೋಗದಲ್ಲಿ ಆಯೊಜಿಸಲಾಗಿದ್ದ ಮಹಾಯೋಗಿ ವೇಮನ ಜಯಂತಿಯಲ್ಲಿ ಮಾತನಾಡಿದರು.
ಸಮಾನತೆ ಎನ್ನುವುದು ಇಂದಿಗೂ ಭಾಷಣದ ವಸ್ತುವಾಗಿದೆ. ಅದನ್ನು ಸಮರ್ಪಕವಾಗಿ ಜಾರಿಗೊಳಿಸಿದ್ದು ವೇಮನರು ಮಾತ್ರ. ಅವರ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡಾಗ ಮಾತ್ರ ನಾವು ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ. ದೇಶದಲ್ಲಿ ಇಂದು ವಿಷಮ ಪರಸ್ಥಿತಿ ನಿರ್ಮಾಣವಾಗಿದ್ದು, ಇದರಿಂದ ಹೊರ ಬರಲು ವೇಮನರ ತತ್ವ ಈಗ ಹೆಚ್ಚು ಪ್ರಸ್ತುತವಾಗಿದೆ. ವೇಮನರ ಜಯಂತಿಯನ್ನು ಸರ್ಕಾರದಿಂದ ಆಚರಿಸುವ ವ್ಯವಸ್ಥೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಎಲ್ಲ ರೀತಿಯ ಸಹಾಯ ಸಹಕಾರ ನೀಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಅಪರ ಜಿಲ್ಲಾಧಿಕಾರಿ ಸತೀಶಕುಮಾರ್ ಮಾತನಾಡಿ, ಸಾಮಾಜಿಕ ಸಮಸ್ಯೆ ಮತ್ತು ಪಿಡುಗುಗಳ ನಿವಾರಣೆಯಲ್ಲಿ ಹಲವಾರು ಶ್ರೇಷ್ಠ ದಾರ್ಶನಿಕರು, ಸಂತರು, ಶರಣರು ಬಹು ಮಹತ್ವದ ಪಾತ್ರವಹಿಸಿದ್ದು, ಅದರಲ್ಲಿ ವೇಮನರ ಕೊಡುಗೆ ಗಮನಾರ್ಹವಾಗಿದೆ. ಅವರ ಆಡುಭಾಷೆಯ ಪದ್ಯಗಳಲ್ಲಿನ ತತ್ವಗಳು ಮನಪರಿವರ್ತನೆಗೊಳಿಸುವ ಮಾರ್ಗದರ್ಶಿ ಸೂತ್ರಗಳನ್ನು ಹೊಂದಿವೆ. ಮುಂದಿನ ಮಾನವ ಪೀಳಿಗೆಗೆ ಅವರ ತತ್ವ ಸಿದ್ಧಾಂತಗಳನ್ನು ಪರಿಚಯಿಸಲು ಅವರ ಜಯಂತಿ ಆಚರಣೆ ಸಮಯೋಚಿತವಾಗಿದೆ ಎಂದರು.
ಮಹಾಯೋಗಿ ವೇಮನರ ಜೀವನ ಮತ್ತು ಸಂದೇಶ ಕುರಿತು ಡಾ. ಕೆ. ರವೀಂದ್ರನಾಥ ಉಪನ್ಯಾಸ ನೀಡಿ, ವರ್ಣ, ಲಿಂಗ, ಕೆಳ, ಮೇಲ್ವರ್ಗ ಎಂಬ ಬೇಧ ಭಾವವಿಲ್ಲದೇ ನಾಲ್ಕುಸಾಲಿನ ಮುಕ್ತಗಳ ಮೂಲಕ ದಾಕ್ಷಿಣ್ಯವಿಲ್ಲದೇ, ಸಮಾಜದಲ್ಲಿನ ಅನಿಷ್ಟಪರಂಪರೆ, ಪದ್ದತಿಗಳ ವಿರುದ್ದ ವೇಮನರು ಬಂಡಾಯ ಸಾರಿದ್ದರು. ಮೂಲತಃ ಜಗದ ಮಾನವರೆಲ್ಲ ಒಂದೇ ಎಂದು ವಿಶ್ವಧರ್ಮ ಪ್ರತಿಪಾದಿಸಿದ ವೇಮನ ಶ್ರೇಷ್ಠ ದಾರ್ಶನಿಕರು ಎಂದರು.
ಗದಗ ಜಿಪಂ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಗಳಖೋಡ ಅಬ್ಬಿಗೇರಿ ಶಾಖಾ ಮಠದ ಬಸವರೆಡ್ಡಿ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಗದಗ ತಾಪಂ ಅಧ್ಯಕ್ಷ ಎಸ್.ಎಸ್. ಪಾಟೀಲ, ನರಗುಂದ ತಾಪಂ ಅಧ್ಯಕ್ಷ ವಿಠ್ಠಲ ಗೋವಿಂದರಡ್ಡಿ ತಿಮ್ಮರಡ್ಡಿ, ಮಾಜಿ ಶಾಸಕ ಬಿ.ಆರ್. ಯಾವಗಲ್, ಡಾ. ಪ್ರವೀಣ ಸಾಲಿಗೌಡರ, ರವೀಂದ್ರನಾಥ ದೊಡ್ಡಮೇಟಿ, ವಿರೂಪಾಕ್ಷಪ್ಪ ಮೇಟಿ, ರಮೇಶಪ್ಪ ಭೂಮರಡ್ಡಿ, ಎನ್.ಬಿ. ಪಾಟೀಲ, ಎನ್.ಎನ್. ಗೋಕಾವಿ, ಎಸ್.ಜಿ. ಕೋನರಡ್ಡಿ, ಆರ್.ಎಸ್. ಪಾಟೀಲ, ಕೆ.ಬಿ. ಗಡಗಿ, ರಡ್ಡಿ ಸಮಾಜ ಸಂಘದ ಅಧ್ಯಕ್ಷ ರವೀಂದ್ರನಾಥ ಮೂಲಿಮನಿ, ಕರಬಸಪ್ಪ ಹಂಚಿನಾಳ, ಶೇಖರರಡ್ಡಿ, ಜಯಶ್ರೀ ಕೋಲ್ಕಾರ, ಶಿವನಗೌಡ ಹಳ್ಳೂರ ಸೇರಿದಂರೆ ಮುಂತಾದವರು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಸ್ವಾಗತಿಸಿದರು. ಜೇನುಗೂಡು ಕಲಾತಂಡದಿಂದ ನಾಡಗೀತೆ ಹಾಗೂ ವೀರೇಶ್ವರ ಪುಣ್ಯಾಶ್ರಮದ ಕಲಾವಿದರಿಂದ ಸಂಗೀತ ಸೇವೆ ಜರುಗಿತು.