ಹೈದರ ಗ್ರಾಮದ ರೈತ ಸಂಕಷ್ಟದಲ್ಲಿ| ಕಾರ್ಖಾನೆಯವರ ಬೇಜವಾಬ್ದಾರಿಗೆ ಒಣಗಿ ಹೋಯ್ತು ಕಬ್ಬು| ರೈತ ಶಾಂತವ್ವ, ಕೃಷ್ಣಪ್ಪ ಹೊಲದಲ್ಲಿನ ಕಬ್ಬು| ಸಕ್ಕರೆ ಕಾರ್ಖಾನೆ ಪ್ರತಿನಿಧಿಯ ಕಚೇರಿ ಎದುರು ಕುಟುಂಬ ಸಮೇತವಾಗಿ 21ರಂದು ಧರಣಿ ನಡೆಸಲು ನಿರ್ಧಾರ|
ಸೋಮರಡ್ಡಿ ಅಳವಂಡಿ
ಕೊಪ್ಪಳ(ಜ.20): ಮುಂಡರಗಿ ಸಕ್ಕರೆ ಕಾರ್ಖಾನೆಯವರು ಸಕಾಲದಲ್ಲಿ ಕಬ್ಬು ಕಟಾವು ಮಾಡದೆ ಪ್ರತಿ ವರ್ಷವೂ ರೈತರು ಲಕ್ಷಾಂತರ ರುಪಾಯಿ ನಷ್ಟ ಅನುಭವಿಸುತ್ತಾರೆ. ಇದೇ ಕಾರಣಕ್ಕಾಗಿ ಕಳೆದ ವರ್ಷ ತಿಗರಿ ಗ್ರಾಮದ ರೈತನೋರ್ವ ಸಕ್ಕರೆ ಕಾರ್ಖಾನೆಯ ಎದುರಲ್ಲೇ ಸಾವಿಗೀಡಾದ ಘಟನೆಯನ್ನು ಯಾರೂ ಮರೆತಿಲ್ಲ. ಈಗಲೂ ರೈತರ ಕಬ್ಬು ಕಟಾವು ಮಾಡದೆ ಸತಾಯಿಸುತ್ತಿರುವ ಅಂಶ ಬೆಳಕಿಗೆ ಬಂದಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕೊಪ್ಪಳ ತಾಲೂಕಿನ ಹೈದರನಗರ ಗ್ರಾಮದ ಶಾಂತವ್ವ ಹಾಗೂ ಪತಿ ಕೃಷ್ಣಪ್ಪ ಅವರ ಹೊಲದಲ್ಲಿ ಹಾಕಲಾಗಿರುವ 8 ಎಕರೆ ಕಬ್ಬನ್ನು ಸಕಾಲಕ್ಕೆ ಕಟಾವು ಮಾಡಲು ಬಾರದೆ ಇರುವುದರಿಂದ ಒಣಗಿ ಹೋಗಿದೆ. ಇದರಿಂದ ರೈತರಿಗೆ 10 ಲಕ್ಷ ಹಾನಿಯಾಗಿದೆ.
ಆಗಿದ್ದೇನು?
ಕಬ್ಬು ಕಟಾವಿಗೆ ಬಂದರೂ ಸಕ್ಕರೆ ಕಾರ್ಖಾನೆಯವರು ಕಟಾವಿಗೆ ಕಳುಹಿಸುವುದೇ ಇಲ್ಲ. ಇದಕ್ಕಾಗಿ ಕಬ್ಬು ಕಟಾವು ಉಸ್ತುವಾರಿ ನೋಡಿಕೊಳ್ಳುವವರ ದುಂಬಾಲು ಬೀಳಬೇಕು. ಇಲ್ಲದಿದ್ದರೆ ಸಕಾಲಕ್ಕೆ ಕಟಾವಿಗೆ ಬಾರದೆ ರೈತರಿಗೆ ಲಕ್ಷಾಂತರ ರುಪಾಯಿ ಹಾನಿ ಮಾಡಲಾಗುತ್ತದೆ. ಇದರ ವಿರುದ್ಧ ರೈತರು ಎಷ್ಟೇ ಧ್ವನಿ ಎತ್ತಿದರೂ ಸಕ್ಕರೆ ಕಾರ್ಖಾನೆಯವರು ಕಣ್ಣು ತೆರೆದು ನೋಡುವುದೇ ಇಲ್ಲ. ಕಬ್ಬು ಬೆಳೆದ ರೈತರ ಪಾಡು ದೇವರಿಗೆ ಪ್ರೀತಿ ಎನ್ನುವಂತೆ ಇದೆ.
ರೈತ ಮಹಿಳೆ ಶಾಂತವ್ವ ಹೆಸರಿನಲ್ಲಿ ಇರುವ ಮೂರು ಎಕರೆ ಹಾಗೂ ಪತಿ ಕೃಷ್ಣಪ್ಪ ಅವರ ಹೆಸರಿನಲ್ಲಿ ಇರುವ 5 ಎಕರೆ ಕಬ್ಬು ಕಟಾವಿಗೆ ಬಂದಿದೆ. ಕಟಾವು ಮಾಡುವುದಕ್ಕೆ ಅದರಲ್ಲಿ ಡ್ರಿಪ್ ಪೈಪ್‌ಗಳನ್ನು ತೆಗೆಯುವಂತೆ ಹೇಳಿದ್ದಾರೆ. ಅದರಂತೆ ರೈತರು ಕಬ್ಬು ಹೊಲದಲ್ಲಿದ್ದ ಡ್ರಿಪ್ ಪೈಪ್‌ಗಳನ್ನು ತೆಗೆದು ಹಾಕಿದ್ದಾರೆ.
ಡ್ರಿಪ್ ಪೈಪ್ ತೆಗೆದ ಮೇಲೆ ವಾರದೊಳಗಾಗಿ ಕಬ್ಬು ಕಟಾವು ಮಾಡಬೇಕು. ಇಲ್ಲದಿದ್ದರೆ ನೀರು ಕಟ್ಟುವುದಕ್ಕೂ ಬಾರದಿರುವುದರಿಂದ ಕಬ್ಬು ಒಣಗಿ ಹೋಗುತ್ತದೆ. ಹೀಗಾಗಿ, ರೈತರು ದುಂಬಾಲು ಬಿದ್ದರೂ ತಿಂಗಳಾದರೂ ಕಬ್ಬು ಕಟಾವು ಮಾಡುವುದಕ್ಕೆ ಬಂದೇ ಇಲ್ಲ. ಡ್ರಿಪ್ ಪೈಪ್ ತೆಗೆಯದಿದ್ದರೆ ನೀರು ಕಟ್ಟಿದ್ದರೆ ಕಬ್ಬು ಇನ್ನು ಒಂದು ತಿಂಗಳ ಕಾಲ ಏನು ಆಗುತ್ತಲೇ ಇರಲಿಲ್ಲ. ಆದರೆ, ಈಗ ನೀರು ಕಟ್ಟಲು ಆಗದೆ, ಕಬ್ಬು ಕಟಾವು ಮಾಡುವುದಕ್ಕೂ ಬಾರದೆ ಕಬ್ಬು ಸಂಪೂರ್ಣ ಒಣಗಿ ಹೋಗಿದೆ. ಇದರಿಂದ ಹತ್ತು ಲಕ್ಷಕ್ಕೂ ಅಧಿಕ ಹಾನಿಯಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದೆ ರೈತನ ಗೋಳು.
ಡಿಸಿಗೆ ಪತ್ರ
ಈ ಕುರಿತು ಸಮಗ್ರ ವಿವರ ಮತ್ತು ಫೋಟೋಗಳೊಂದಿಗೆ ಗದಗ ಹಾಗೂ ಕೊಪ್ಪಳ ಜಿಲ್ಲಾಧಿಕಾರಿ, ಸಕ್ಕರೆ ಸಚಿವರಿಗೆ ರೈತ ಪತ್ರ ಬರೆದಿದ್ದಾರೆ. ಆದರೂ ಯಾವುದೇ ಪ್ರಯೋಜನವಾಗಲೇ ಇಲ್ಲ. ಕಬ್ಬು ಒಣಗುವ ಮುನ್ನ ಕಟಾವು ಮಾಡುವಂತೆ ರೈತ ಎಷ್ಟೇ ಗೋಗರಿದರೂ ಕಟಾವು ಮಾಡದೆ ಒಣಗಿ ಹೋಗಿಯೇ ಬಿಟ್ಟಿತು.
ಸತ್ಯಾಗ್ರಹ
ರೊಚ್ಚಿಗೆದ್ದಿರುವ ರೈತ, ನನ್ನದಲ್ಲದ ತಪ್ಪಿಗೆ ಹೊಲದಲ್ಲಿ ಬೆಳೆದಿದ್ದ ಕಬ್ಬು ಒಣಗಿ ಹೋಗಿದೆ. ಹೀಗಾಗಿ, ನನಗೆ ಆಗಿರುವ ಹಾನಿಯನ್ನು ಕಾರ್ಖಾನೆಯವರೇ ನೀಡಬೇಕು ಎಂದು ಆಗ್ರಹಿಸಿ ಸಕ್ಕರೆ ಕಾರ್ಖಾನೆ ಎದುರು ಅಥವಾ ಅಳವಂಡಿಯಲ್ಲಿರುವ ಸಕ್ಕರೆ ಕಾರ್ಖಾನೆ ಪ್ರತಿನಿಧಿಯ ಕಚೇರಿ ಎದುರು ಕುಟುಂಬ ಸಮೇತವಾಗಿ 21ರಂದು ಧರಣಿ ನಡೆಸಲು ನಿರ್ಧರಿಸಿದ್ದಾರೆ. ನ್ಯಾಯ ಸಿಗುವವರೆಗೂ ಹೋರಾಟ ಮುಂದುವರೆಸುತ್ತೇನೆ ಎಂದಿದ್ದಾರೆ.
ಸಕ್ಕರೆ ಕಾರ್ಖಾನೆಯವರ ಬೇಜವಾಬ್ದಾರಿಯಿಂದ ನಮ್ಮ 8 ಎಕರೆ ಕಬ್ಬು ಒಣಗಿ ಹೋಗಿದ್ದು, ಸುಮಾರು 10 ಲಕ್ಷ ಹಾನಿಯಾಗಿದೆ. ಇದನ್ನು ನೀಡುವವರೆಗೂ ಹೋರಾಟ ಮಾಡುತ್ತೇನೆ ಎಂದು ಹೈದರ ನಗರ ನಿವಾಸಿ ಕೃಷ್ಣಪ್ಪ ಶ್ಯಾಸಿ ಅವರು ಹೇಳಿದ್ದಾರೆ.